Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, July 21, 2011

Bhagavad Geeta Kannada Chapter-08 Shloka 23-28


ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ        
ಪ್ರಯಾತಾ ಯಾಂತಿ  ತಂ ಕಾಲಂ ವಕ್ಷ್ಯಾಮಿ ಭರತರ್ಷಭ     ೨೩

ಯತ್ರ ಕಾಲೇ ತು ಅನಾವೃತ್ತಿಮ್ ಆವೃತ್ತಿಮ್  ಚ ಏವ  ಯೋಗಿನಃ     
ಪ್ರಯಾತಾಃ  ಯಾಂತಿ  ಮ್  ಕಾಲಮ್  ವಕ್ಷ್ಯಾಮಿ ಭರತ ಋಷ –ಭರತ ಶ್ರೇಷ್ಠ, ಯಾವ ಕಾಲದೇವತೆಗಳ ದಾರಿಯಲ್ಲಿ ಹೋದ ಸಾಧಕರು ಮರಳುವುದಿಲ್ಲ ಮತ್ತು ಯಾವ ದಾರಿಯಲ್ಲಿ ಮರಳುತ್ತಾರೆ ಅಂಥ 'ಕಾಲ' ದೇವತೆಗಳನ್ನು ಹೇಳುತ್ತೇನೆ .

“ಶರೀರವನ್ನು ತ್ಯಾಗ ಮಾಡಿದ(ಕಾಲ ವಶನಾದ) ಜೀವನನ್ನು ಯಾವಯಾವ ದೇವತೆಗಳು  ನಿಯಮನ ಮಾಡಿ ಮುಂದೆ ಕರೆದುಕೊಂಡು ಹೋಗುತ್ತಾರೆ; ಯಾವ ದಾರಿಯಲ್ಲಿ ಹೋದವರು ಮರಳಿ ಭೂಮಿಯಲ್ಲಿ ಹುಟ್ಟುತ್ತಾರೆ ಮತ್ತು ಯಾರು ನೇರವಾಗಿ ಮೋಕ್ಷವನ್ನು ತಲುಪುತ್ತಾರೆ, ಆ ವಿಷಯವನ್ನು ನಿನಗೆ ಹೇಳುತ್ತೇನೆ” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೆಲವರು ಕಾಲ ಎನ್ನುವ ಪದವನ್ನೂ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಈ ಶ್ಲೋಕದಲ್ಲಿ  ಕೃಷ್ಣ ಹೇಳುವ  ಕಾಲ ಅಂದರೆ ಸಮಯವಲ್ಲ. ಶರೀರ ತ್ಯಾಗ ಮಾಡಿದ  ಜೀವನ ನಿಯಮನ ಮಾಡುವ ದೇವತೆಗಳ ಗಣ ‘ಕಾಲ’.

ಅಗ್ನಿರ್ಜೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್        
ತತ್ರ ಪ್ರಯಾತಾ ಗಚ್ಛಂತಿ  ಬ್ರಹ್ಮ ಬ್ರಹ್ಮವಿದೋ ಜನಾಃ ೨೪

ಅಗ್ನಿಃ ಜ್ಯೋತಿಃ ಅಹಃ ಶುಕ್ಲಃ ಷಟ್ ಮಾಸಾಃ ಉತ್ತರಮ್       
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದಃ  ಜನಾಃ –ಅಗ್ನಿ ಮತ್ತು ಜ್ಯೋತಿ [ಎಂಬಿಬ್ಬರು ವಹ್ನಿಯ ಮಕ್ಕಳು].[ಮಧ್ಯಾಹ್ನದ ದೇವತೆಯ ಜತೆ] ಹಗಲಿನ ದೇವತೆ, [ಹುಣ್ಣಿಮೆಯ ದೇವತೆ ಜತೆ] ಶುಕ್ಲಪಕ್ಷದ ದೇವತೆ , ಉತ್ತರಾಯಣದ ಆರು ತಿಂಗಳ ದೇವತೆಗಳು, [ಸಂಕ್ರಾಂತಿಯ ದೇವತೆಯ ಜತೆ] ಉತ್ತರಾಯಣದ ದೇವತೆ- ಈ ದಾರಿಯಲ್ಲಿ ಹೋದವರು ಭಗವಂತನನ್ನು ಬಲ್ಲವರು ಭಗವಂತನನ್ನು ಸೇರುತ್ತಾರೆ; ಮತ್ತೆ ಮರಳುವುದಿಲ್ಲ.

ದೇಹದಿಂದ ಹೊರಬಂದ ಮೋಕ್ಷ ಯೋಗ್ಯ ಜೀವವನ್ನು ಮೊದಲು ಸ್ವಾಗತಿಸುವವರು ವೈಶ್ವಾನರ(ಪ್ರಧಾನ ಅಗ್ನಿ)ನ ಮಕ್ಕಳಾದ ಅಗ್ನಿ ಮತ್ತು ಜ್ಯೋತಿ. ಈ ದೇವತೆಗಳು ಜೀವನನ್ನು ಸತ್ಕರಿಸಿ ಮುಂದಕ್ಕೆ ಕಳುಹಿಸುತ್ತಾರೆ. ಮುಂದೆ ಜೀವನನ್ನು ಬೆಳಕಿನ ಮತ್ತು ಮಧ್ಯಾಹ್ನದ ದೇವತೆಗಳು ಸ್ವಾಗತಿಸುತ್ತಾರೆ. ಈ ನಿಜವಾದ ಬೆಳಕಿನ ಅನುಭವದೊಂದಿಗೆ ಜೀವ ಮುಂದೆ ಸಾಗಿ ಶುಕ್ಲಪಕ್ಷದ ಮತ್ತು ಹುಣ್ಣಿಮೆಯ ದೇವತೆಯನ್ನು ತಲುಪುತ್ತಾನೆ. ಆ ನಂತರ ಸಂಕ್ರಮಣದ, ಉತ್ತರಾಯಣದ ದೇವತೆ ಜೊತೆಗೆ ಉತ್ತರಾಯಣದ ಆರು ತಿಂಗಳ ದೇವತೆಗಳು ಜೀವನನ್ನು ಭಗವಂತನೆಡೆಗೆ ಕಳುಹಿಸುತ್ತಾರೆ. ಹೀಗೆ ಯಾರು ಈ ದಾರಿಯಲ್ಲಿ ಸಾಗುತ್ತಾರೆ ಅವರು ಎಂದೂ ಮರಳಿ ಬರುವುದಿಲ್ಲ-ನಿತ್ಯ ಸತ್ಯವಾದ ಭಗವಂತನನ್ನು ಸೇರುತ್ತಾರೆ.   

ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್     
ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ   ೨೫

ಧೂಮಃ  ರಾತ್ರಿಃ ತದಾ  ಕೃಷ್ಣಃ ಷಟ್ ಮಾಸಾ ದಕ್ಷಿಣಾಯನಮ್         
ತತ್ರ ಚಾಂದ್ರಮಸಮ್  ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ –ಹೊಗೆಯ ದೇವತೆ, ಇರುಳ ದೇವತೆ, ಕೃಷ್ಣಪಕ್ಷದ ದೇವತೆ, ದಕ್ಷಿಣಾಯನದ ಆರು ತಿಂಗಳ ದೇವತೆಗಳು, ಮತ್ತು ದಕ್ಷಿಣಾಯನದ ದೇವತೆ-ಈ ದಾರಿಯಲ್ಲಿ ಸಾಗಿದ ಸಾಧಕ ಚಂದ್ರನ ಬೆಳಕಿನ ಲೋಕವನ್ನು ಸೇರಿ ಮರಳಿ ಬರುತ್ತಾನೆ.

ಮೋಕ್ಷ ಯೋಗ್ಯವಲ್ಲದ ಜೀವ ದೇಹದಿಂದ ಹೊರ ಬಂದಾಗ ಆತನನ್ನು ಸ್ವಾಗತಿಸುವ ದೇವತೆ ಹೊಗೆಯ ಮತ್ತು ಕತ್ತಲಿನ ದೇವತೆ. ಆ ನಂತರ ಕೃಷ್ಣಪಕ್ಷದ ದೇವತೆ; ನಂತರ  ದಕ್ಷಿಣಾಯನದ ಮತ್ತು ‘ದಕ್ಷಿಣಾಯನದ ಆರು ತಿಂಗಳ’ ದೇವತೆಗಳು ಜೀವನನ್ನು ಸೋಮಲೋಕಕ್ಕೆ ತಲುಪಿಸುತ್ತಾರೆ. ಜೀವ ಇಲ್ಲಿ ತನ್ನ  ಪುಣ್ಯ ಕ್ಷಯವಾಗುವ ತನಕ ಸುಖವನ್ನು ಅನುಭವಿಸಿ, ಮರಳಿ ಮೋಡದಲ್ಲಿ ಸೇರಿ, ಮಳೆಯ ಮೂಲಕ ಭೂಮಿಯನ್ನು ತಲುಪಿ, ಒಂದು ಗಂಡಿನ ದೇಹದ ಮೂಲಕ ಹೆಣ್ಣಿನ ಗರ್ಭವನ್ನು ಪ್ರವೇಶಿಸಿ, ಮರಳಿ  ಭೂಮಿಯಲ್ಲಿ ಹುಟ್ಟುತ್ತದೆ.  

ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ   
ಏಕಯಾ ಯಾತ್ಯನಾವೃತ್ತಿಮನ್ಯಯಾSSವರ್ತತೇ ಪುನಃ      ೨೬

ಶುಕ್ಲ ಕೃಷ್ಣೇ ಗತೀ ಹಿ ಏತೇ ಜಗತಃ ಶಾಶ್ವತೇ ಮತೇ  
ಏಕಯಾ ಯಾತಿ ಅನಾವೃತ್ತಿಮ್ ಅನ್ಯಯಾವರ್ತತೇ ಪುನಃ –ಇವು ಜಗದ ಬಿಳಿ ಮತ್ತು ಕಪ್ಪು ದಾರಿಗಳು. ಅನುಗಾಲ ಇರುವಂಥವು ಎಂದು ಶಾಸ್ತ್ರದ ತೀರ್ಮಾನ. ಒಂದರಿಂದ ಮರಳಿ ಬರುವುದಿಲ್ಲ. ಇನ್ನೊಂದರಿಂದ ಮತ್ತೆ ಮರಳುತ್ತಾನೆ.

ಹೀಗೆ ಒಂದು ಮೋಕ್ಷಕ್ಕೆ ಹೋಗುವ ಬೆಳಕಿನ ಬಿಳಿಯ ದಾರಿ ಮತ್ತು ಇನ್ನೊಂದು ಮರಳಿ ಸಂಸಾರಕ್ಕೆ ಬರುವ ಕತ್ತಲಿನ ಕಪ್ಪು ದಾರಿ. ಈ ಎರಡೂ ದಾರಿಗಳೂ ಅನಾದಿ ಅನಂತ ಕಾಲದಲ್ಲಿ ಎಲ್ಲ ಜೀವಗಳಿಗೆ ಸಮನಾಗಿ ಇರತಕ್ಕಂತಹ ವ್ಯವಸ್ಥೆ. ಬೆಳಕಿನ ದಾರಿಯಲ್ಲಿ ಹೋದವ ಮರಳಿ ಬರುವುದಿಲ್ಲ, ಕತ್ತಲೆಯ ದಾರಿಯಲ್ಲಿ ಹೋದವ ಮರಳಿ ಬರುತ್ತಾನೆ.

ನೈತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ     
ತಸ್ಮಾತ್ ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ೨೭

ನ ಏತೇ  ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ 
ತಸ್ಮಾತ್ ಸರ್ವೇಷು ಕಾಲೇಷು ಯೋಗಯುಕ್ತಃ  ಭವರ್ಜುನ- ಪಾರ್ಥ, ಈ ದಾರಿಗಳನ್ನರಿತ ಯಾವ ಸಾಧಕನೂ ದಾರಿ ತಪ್ಪುವುದಿಲ್ಲ. ಅದರಿಂದ, ಓ ಅರ್ಜುನ, ಎಲ್ಲ ಕಾಲಗಳಲ್ಲು ಉಪಾಯವನ್ನರಿತು ನಡೆ.

ಈ ಎರಡೂ ದಾರಿಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದು, ನೀನು ಹೋಗಬೇಕಾದ ದಾರಿ ಯಾವುದು ಎಂದು ತಿಳಿದು, ಆಯಾ ಅಭಿಮಾನಿ ದೇವತೆಗಳ ಜೊತೆಗೆ ಮುಂದಕ್ಕೆ ಸಾಗಬೇಕು. ಆಯಾ ಅಭಿಮಾನಿ ದೇವತೆಗಳು ಬೇರೆಬೇರೆ ಮೆಟ್ಟಲಿನಲ್ಲಿ ಬಂದು ಜೀವನನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಕಾರಣದಿಂದ ಅಂತ್ಯ ಕಾಲದ ಸ್ಮರಣೆಯಲ್ಲಿ ಮಾರ್ಗ ಮತ್ತು ಅಭಿಮಾನಿ ದೇವತೆಗಳ ಚಿಂತನೆ ಅತ್ಯಗತ್ಯ. ಇದನ್ನು ತಿಳಿದು ಅನುಸಂಧಾನ ಮಾಡಿಕೊಂಡು ಅನುಷ್ಠಾನ ಮಾಡಿದರೆ ಯಾವ ಸಾಧಕನಿಗೂ ಗೊಂದಲವಿಲ್ಲ. ಆದ್ದರಿಂದ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ – “ಎಲ್ಲ ಕಾಲದಲ್ಲೂ ಈ ಉಪಾಯವನ್ನರಿತು ನಡೆ” ಎಂದು.    

ವೇದೇಷು ಯಜ್ಞೇಷು ತಪಸ್ಸು  ಚೈವ ದಾನೇಷು ಯತ್ ಪುಣ್ಯಫಲಂ ಪ್ರದಿಷ್ಟಮ್
ಅತ್ಯೇತಿ ತತ್ ಸರ್ವಮಿದಂ ವಿದಿತ್ವಾಯೋಗೀ ಪರಂ ಸ್ಥಾನಮುಪೈತಿ ಚಾSದ್ಯಮ್ ೨೮

ವೇದೇಷು ಯಜ್ಞೇಷು ತಪಸ್ಸು  ಚ ಏವ ದಾನೇಷು ಯತ್ ಪುಣ್ಯಫಲಮ್  ಪ್ರದಿಷ್ಟಮ್
ಅತ್ಯೇತಿ ತತ್ ಸರ್ವಮ್ ಇಮ್  ವಿದಿತ್ವಾ ಯೋಗೀ ಪರಮ್  ಸ್ಥಾನಮ್ ಉಪೈತಿ ಚ ಆದ್ಯಮ್ –ವೇದವನ್ನು ಓದಿದರೆ, ಯಜ್ಞಗಳನ್ನು ಮಾಡಿದರೆ, ತಪಗಳನ್ನು ಆಚರಿಸಿದರೆ, ದಾನಗಳನ್ನು ನೀಡಿದರೆ ಏನು ಪುಣ್ಯಫಲ ಹೇಳಲಾಗಿದೆ ಅದನ್ನೆಲ್ಲ ಮೀರಿ ನಿಲ್ಲುತ್ತಾನೆ ಇದನ್ನು ಬಲ್ಲ ಸಾಧಕ; ಎಲ್ಲಕ್ಕೂ ಮೊದಲ ಹಿರಿಯ ತಾಣವನ್ನು ಸೇರುತ್ತಾನೆ.

 ಉಪಸಂಹಾರ ಮಾಡುತ್ತಾ ಕೃಷ್ಣ ಹೇಳುತ್ತಾನೆ-ಎಲ್ಲಕ್ಕಿಂತ ಮಿಗಿಲಾದ ತಿಳಿವು ಅಂದರೆ ಈ ಅಂತ್ಯ ಕಾಲದ ಅರಿವು ಎಂದು . ಸಮಸ್ತ ಶಾಸ್ತ್ರದಲ್ಲಿ ಯಜ್ಞ-ದಾನ-ತಪಸ್ಸುಗಳ ಮೂಲಕ ಏನು ಪುಣ್ಯ ಹೇಳಿದ್ದಾರೆ, ಈ ಅಂತ್ಯ ಕಾಲದ ಸಾವಿನ ರಹಸ್ಯದ ಅರಿವು  ಈ ಎಲ್ಲಾ ಪುಣ್ಯ ಫಲವನ್ನು ಮೀರಿ ನಿಲ್ಲುತ್ತದೆ. ಆದ್ದರಿಂದ ಎಲ್ಲಕ್ಕಿಂತ ದೊಡ್ಡ ಸಾಧನೆ ಅಂತ್ಯ ಕಾಲದ ಚಿಂತನೆ.  ಈ ಕಾರಣದಿಂದ ಬದುಕಿಗಿಂತ ಸಾವಿನ ಬಗ್ಗೆ ಹೆಚ್ಚು ಚಿಂತನೆಯ ಅಗತ್ಯವಿದೆ.
ಸಾವು ಅಮಂಗಳವಲ್ಲ. ಸಾವು ದುಃಖದ ಅನುಭವ ಎನ್ನುವುದು ನಮ್ಮ ಭ್ರಮೆ. ದೇಹದ ಒಳಗಿರುವಾಗ ಬೌತಿಕ ಶರೀರದ ಎಲ್ಲಾ ಯಾತನೆ ಜೀವಕ್ಕೆ ಅಂಟಿಕೊಂಡಿರುತ್ತದೆ. ಸಾವು ಎಂದರೆ ಈ ಸ್ಥೂಲ ಶರೀರದಿಂದ ಬಿಡುಗಡೆ. ಆದ್ದರಿಂದ ಸೂಕ್ಷ್ಮ ಶರೀರದಲ್ಲಿರುವ ಜೀವ ಪಂಜರದಿಂದ ಹೊರ ಬಂದು ಮುಕ್ತವಾಗಿ ಆಕಾಶದಲ್ಲಿ ಹಾರಾಡುವ ಪಕ್ಷಿಯಂತೆ. ಈ ಕಾರಣದಿಂದ ಸಾವಿನ ಭಯ ಬಿಟ್ಟು ಕೊನೇ ಕ್ಷಣದಲ್ಲಿ ಮಾಂಗಲಿಕವಾಗಿ ಎತ್ತರಕ್ಕೇರುವ ದೇವತಾ ಅನುಸಂಧಾನ ನಿರಂತರವಾಗಿ ನಮ್ಮ ಬದುಕಿನಲ್ಲಿರಬೇಕು.
      
ಇತಿ ಅಷ್ಟಮೋಧ್ಯಾಯಃ 
ಎಂಟನೆಯ ಅಧ್ಯಾಯ ಮುಗಿಯಿತು 
*******  

No comments:

Post a Comment