Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, July 17, 2011

Bhagavad geeta Kannada Chapter-08 Shloka 9-10


ಕವಿಂ ಪುರಾಣಮನುಶಾಸಿತಾರಮಣೋರಣೀಯಾಂಸಮನುಸ್ಮರೇದ್ ಯಃ 
ಸರ್ವಸ್ಯ ಧಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸಃ ಪರಸ್ತಾತ್

ಕವಿಮ್  ಪುರಾಣಮ್ ಅನುಶಾಸಿತಾರಮ್ ಅಣೋಃ ಅಣೀಯಾಂಸಮ್ ಅನುಸ್ಮರೇತ್  ಯಃ 
ಸರ್ವಸ್ಯ ಧಾತಾರಮ್ ಅಚಿಂತ್ಯ ರೂಪಮ್ ಆದಿತ್ಯ ವರ್ಣಮ್  ತಮಸಃ ಪರಸ್ತಾತ್ –ಎಲ್ಲವನ್ನು ಬಲ್ಲವನು, ಎಲ್ಲಕ್ಕಿಂತ ಮೊದಲಿದ್ದವನು, ಎಲ್ಲರ ಒಡೆಯ, ಅಣುವಿಗಿಂತ ಅಣು, ಎಲ್ಲವನ್ನು ಹೊತ್ತು ಸಲಹುವವನು, ಬಗೆಗೆ ನಿಲುಕದ ನಿಟ್ಟಿನವನು, ಸೂರ್ಯನಂತೆ ಬೆಳಗುವವನು,ಕತ್ತಲಿನಾಚೆಗಿರುವವನು[ಸಾವಿರದವನು]-ಹೀಗೆಂದು ಅವನನ್ನು ಸ್ಮರಿಸುವವನು[ಅವನನ್ನೆ ಸೇರುತ್ತಾನೆ].

ನಮ್ಮ ಅಂತರ್ಯಾಮಿ ಭಗವಂತನನ್ನು ಧ್ಯಾನ ಮಾಡುವಾಗ ‘ಅನುಸಂಧಾನ ಮಾಡಬೇಕಾದ ವಿಷಯಗಳನ್ನು’ ಕೃಷ್ಣ ಇಲ್ಲಿ ಬಿಡಿಸಿ ಬಿಡಿಸಿ ಹೇಳುತ್ತಾನೆ. ಕೃಷ್ಣ ಹೇಳುತ್ತಾನೆ “ಭಗವಂತನನ್ನು ಕವಿ ಎಂದು ಉಪಾಸನೆ ಮಾಡು” ಎಂದು. ಇಲ್ಲಿ ಕವಿ ಎಂದರೆ ಸರ್ವಜ್ಞ ಎಂದರ್ಥ. ನಮಗೆ ಮೊದಲು ಬೇಕಾಗಿರುವುದು ಜ್ಞಾನ. ಜ್ಞಾನವಿಲ್ಲದೆ ಆನಂದವಿಲ್ಲ. ಇದಕ್ಕಾಗಿ ಭಗವಂತನಲ್ಲಿ ಮೊದಲು ಅರಿವನ್ನು ಬೇಡಬೇಕು. ಎರಡನೆಯದಾಗಿ ಭಗವಂತನನ್ನು ಪುರಾಣಮ್ ಎಂದು ಉಪಾಸನೆ ಮಾಡು ಎನ್ನುತ್ತಾನೆ ಕೃಷ್ಣ. ಪುರಾಣ ಎಂದರೆ ಎಲ್ಲಕ್ಕಿಂತ ಮೊದಲಿದ್ದವ ಮತ್ತು ಸರ್ವ ಕಾಲದಲ್ಲೂ ಏಕಪ್ರಕಾರನಾಗಿರುವವ. ನಮ್ಮ ಪುರ(ದೇಹ)ದೊಳಗೆ  ಕೂತು ಪ್ರತಿಕ್ಷಣದಲ್ಲಿಯೂ ನಮ್ಮನ್ನು ನಿಯಂತ್ರಿಸುವವ ಎನ್ನುವ ಅನುಸಂಧಾನ.
ಮೂರನೆಯದಾಗಿ ಭಗವಂತ ‘ಅನುಶಾಸಿತಾರಮ್’. ಅಂದರೆ ಪ್ರತಿಯೊಂದನ್ನೂ ಕೂಡಾ ನಿಯಮನ(ಶಾಸನ) ಮಾಡುವವನು. ನನ್ನ ಇರವು, ಜಗತ್ತಿನ ಪ್ರತಿಯೊಂದು ವಸ್ತುವಿನ ಇರವು-ಅವನ ನಿಯಂತ್ರಣಕ್ಕೊಳಪಟ್ಟಿದೆ; ಭಗವಂತ ಪ್ರತಿಯೊಂದು ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಶಾಸನ ಮಾಡುತ್ತಾನೆ-ಎಂದು ಅರಿತು  ಅವನನ್ನು ಅನುಸಂಧಾನ ಮಾಡಬೇಕು.  ಸಮಸ್ತ ಬ್ರಹ್ಮಾಂಡದಲ್ಲಿ ತುಂಬಿದ ಆ ಭಗವಂತನೇ ಅಣುವಿಗಿಂತ ಅಣುವಾಗಿ  ಜೀವ ಸ್ವರೂಪದ ಒಳಗೂ ತುಂಬಿದ್ದಾನೆ. “ಎಲ್ಲವನ್ನು ಧರಿಸಿದ ಭಗವಂತನೇ ನಮ್ಮೊಳಗೆ ಕೂತು ಪೋಷಣೆ ಮಾಡುತ್ತಿದ್ದಾನೆ. ಆತ ಇಡೀ ವಿಶ್ವದ ಧಾರಣೆ-ಪೋಷಣೆ ಮಾಡುವ ಶಕ್ತಿ. ಆತ ಸರ್ವರಿಗೂ ಸರ್ವಾಭೀಷ್ಟವನ್ನು ಕೊಡುವವ” ಎಂದು ಅವನನ್ನು ಧ್ಯಾನ ಮಾಡಬೇಕು.
 ಭಗವಂತ ನಮ್ಮ ಕಲ್ಪನೆಗೆ ಎಟುಕದ ವಸ್ತು ಎಂದು ನಾವು ತಿಳಿದಿರಬೇಕು. ಆತನದು ನಮ್ಮ ಮಾತು ಮನಸ್ಸಿಗೆ ಮುಟ್ಟದ ರೂಪ. ಧ್ಯಾನದಲ್ಲಿ ಜೀವಸ್ವರೂಪದ ಕಣ್ಣಿನಿಂದ ಭಗವಂತನನ್ನು ನೋಡಿದರೆ ಆತ ಉದಿಸುವ ಸೂರ್ಯನಂತೆ ಕಾಣುತ್ತಾನೆ. ಆತನ ಬಣ್ಣ  ಪ್ರಕೃತಿ ನಿರ್ಮಿತವಾದ ಬಣ್ಣವಲ್ಲ, ಅದು ತ್ರಿಗುಣಾತೀತವಾದ ಎಂದೂ ಅಳಿವಿರದ ಅಪ್ರಾಕೃತ ಬಣ್ಣ.  ಹೀಗೆ ಭಗವಂತನನ್ನು ತಿಳಿದು ನಿರಂತರ ಚಿಂತನೆ ಮಾಡುವವ ತನ್ನ ದೇಹ ತ್ಯಾಗ ಮಾಡುವಾಗ ಭಗವಂತನನ್ನೇ ನೆನೆದು ಭಗವಂತನನ್ನು ಸೇರುತ್ತಾನೆ.

ಪ್ರಯಾಣಕಾಲೇ ಮನಸಾSಚಲೇನ ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್   ತಂ ಪರಂ ಪುರುಷಮುಪೈತಿ ದಿವ್ಯಮ್ ೧೦

ಪ್ರಯಾಣ ಕಾಲೇ ಮನಸಾ ಚಲೇನ ಭಕ್ತ್ಯಾ ಯುಕ್ತಃ   ಯೋಗಬಲೇನ ಚ ಏವ
ಭ್ರುವೋಃ ಮಧ್ಯೇ ಪ್ರಾಣಮ್ ಆವೇಶ್ಯ ಸಮ್ಯಕ್  ಸಃ  ಮ್  ಪರಮ್  ಪುರುಷಮ್ ಉಪೈತಿ ದಿವ್ಯಮ್ –ಕೊನೆಯ ಕಾಲದಲ್ಲಿ ಭಗವಂತನಲ್ಲಿ ಭಕ್ತಿಯಿಟ್ಟು, ಬಿಗಿಯಾದ ಬಗೆಯಿಂದ , ಹುಬ್ಬುಗಳ ನಡುವೆ ಪ್ರಾಣವಾಯುವನ್ನು ಕದಲದಂತೆ ಇರಗೊಳಿಸಿ, ಪ್ರಾಣಾಯಾಮದ ಯೋಗದ ಮೂಲಕ ಕೂಡ ಲೀಲಾಲೋಲನಾದ  ಆ ಪರಮಪುರುಷನನ್ನು ಪಡೆಯಬಹುದು.

ಭಗವಂತನನ್ನು ಸೇರುವ ಇನ್ನೊಂದು ಮಾರ್ಗ ಹಠಯೋಗ. ಈ ಮಾರ್ಗ ಕಠಿಣವಾದದ್ದು.ಇದು ಯಮನಿಯಮನ-ಪ್ರಾಣಾಯಾಮ-ಪ್ರತ್ಯಾಹಾರಗಳಿಂದ ಭಗವಂತನನ್ನು ಸೇರುವ ಬಗೆ. ಈ ಮಾರ್ಗದಲ್ಲಿ ಸಾಧನೆ ಮಾಡುವವರು ತಮ್ಮ ಸಾವಿನ ಕಾಲದಲ್ಲಿ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸುತ್ತಾನೆ. ಆಸನ ಪ್ರಾಣಾಯಾಮ ಮಾಡಿ ಸ್ಥಿರವಾದ ದೇಹ, ಸ್ಥಿರವಾದ ಪ್ರಾಣಮಯ ಕೊಶವನ್ನು ಸಾಧಿಸಿದ ಮೇಲೆ, ಪ್ರತ್ಯಾಹಾರದ ಮೂಲಕ ತನ್ನೊಳಗೆ ತುಂಬಿದ ಕೆಟ್ಟ ಸಂಗತಿಗಳನ್ನು  ಹೊರ ಹಾಕಿ, ಕೆಟ್ಟ ವಿಚಾರ ಒಳಬಾರದಂತೆ ತಡೆದು, ಏಕಾಗ್ರತೆ ಸಾಧಿಸುವುದು. ಇದು ತುಂಬಾ ಧೀರ್ಘವಾದ ಕಠಿಣ ಸಾಧನೆ. ಇಂತವರು ತಮ್ಮ ಹೃತ್ಕಮಲ ಮಧ್ಯ(ಅನಾಹತ ಚಕ್ರ) ದಲ್ಲಿ  ಪ್ರಾಣಶಕ್ತಿಯೊಂದಿಗಿರುವ ಜೀವವನ್ನು ಅಲ್ಲಿಂದ ಊರ್ಧ್ವ ಮುಖವಾಗಿ ವಿಶುದ್ಧಿಚಕ್ರದ ಮೂಲಕ  ಭ್ರು ಮಧ್ಯ (ಎರಡು ಹುಬ್ಬುಗಳ ನಡುವೆ ಇರುವ ಆಜ್ಞಾ ಚಕ್ರ) ತಂದು ನಿಲ್ಲಿಸಬೇಕು. ಈ ಪ್ರಕ್ರಿಯೆ ಅತ್ಯಂತ ಕಠಿಣ. ಈ ಸಂಪೂರ್ಣ ಕ್ರಿಯೆಯಲ್ಲಿ ಅನನ್ಯ ಭಕ್ತಿ ಬಹಳ ಮುಖ್ಯ. ಈ ರೀತಿ ಭ್ರು ಮಧ್ಯದಿಂದ ಸಹಸ್ರಾರದ ಬ್ರಹ್ಮರಂದ್ರದ ಮೂಲಕ ಜೀವ ಹೊರ ಹೋದರೆ ಅವರು ನೇರವಾಗಿ ಭಗವಂತನನ್ನು ಸೇರುತ್ತಾರೆ.
ಈ ರೀತಿಯ ಹಠಯೋಗ ಕಠಿಣ ಸಾಧನವಾಗಿರುವುದರಿಂದ ಪ್ರಾಚೀನರು ಅದಕ್ಕೆ ಪೂರಕವಾದ ಅತ್ಯಂತ ಸರಳ ವಿಧಾನವನ್ನು ತಮ್ಮ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೆ ಉತ್ತಮ ಉದಾಹರಣೆ ಊರ್ಧ್ವಪುಂಡ್ರ.  ಇದು ಜೀವದ ಊರ್ಧ್ವಮುಖ ಗತಿಗೆ ಸಂಬಂಧಪಟ್ಟಿದ್ದು. ಇದು ಪೂರ್ಣ ಪ್ರಮಾಣದಲ್ಲಿ ದೇಹದಲ್ಲಿರುವ ಶಕ್ತಿ ಕೇಂದ್ರಗಳನ್ನು ಜಾಗೃತಿಗೊಳಿಸುವ ಒಂದು ಸರಳ ವಿಧಾನ. [ಆದರೆ ಇಂದು ನಾವು ಏಕೆ ನಾಮ ಹಾಕಿ ಕೊಳ್ಳುತ್ತೇವೆ ಎನ್ನುವುದೇ ನಮಗೆ ತಿಳಿದಿಲ್ಲ].
ಹಠಯೋಗವನ್ನು ಸರಿಯಾದ ಮಾರ್ಗದರ್ಶನ ಇಲ್ಲದೆ ಮಾಡುವುದು ಅಪಾಯಕಾರಿ. ಭಾಗವತದ ದ್ವಿತೀಯ ಸ್ಕಂದದಲ್ಲಿ ಜೀವವನ್ನು ಮೇಲಕ್ಕೆ ಕೊಂಡೊಯ್ಯುವ ಹಂತವನ್ನು ಒಂದು ಅಧ್ಯಾಯದಲ್ಲಿ ವಿವರವಾಗಿ ವಿವರಿಸಿದ್ದಾರೆ. ಹೀಗೆ ಯೋಗದ ಮೂಲಕ ಹಠಮಾಡಿ ಭಗವಂತನನ್ನು ಸೇರಬಹುದು, ಅಥವಾ ತಾಯಿಯಲ್ಲಿ ಮಗು ಹಠಮಾಡಿದಂತೆ ಭಗವಂತನಲ್ಲಿ ಭಕ್ತ ಸದಾ ಭಕ್ತಿಯೆಂಬ ಹಠಮಾಡಿ ಆತನನ್ನು ಸೇರಬಹುದು.     

No comments:

Post a Comment