Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, June 12, 2011

Bhagavad Gita Kannada Chapter-07 Shloka-08


ರಸೋSಹಮಪ್ಸು ಕೌಂತೇಯ ಪ್ರಭಾSಸ್ಮಿ ಶಶಿಸೂರ್ಯಯೋಃ          
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು

ಸಃ ಅಹಮ್ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋಃ |
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಮ್  ನೃಷು ಕೌಂತೇಯ ನೀರಿನಲ್ಲಿ ರಸವಿರುವುದು ನನ್ನಿಂದ[ನೀರಿನಲ್ಲಿದ್ದು ರಸದ ಸವಿಯನ್ನುಣ್ಣಿಸುವುದರಿಂದ ‘ರಸ’ ನಾಮಕ.] ಚಂದ್ರ-ಸೂರ್ಯರಲ್ಲಿ ಬೆಳಕಿರುವುದು ನನ್ನಿಂದ [ಚಂದ್ರ –ಸೂರ್ಯರಲ್ಲಿದ್ದು ಬೆಳಗಿಸುವುದರಿಂದ ‘ಪ್ರಭಾ’ ನಾಮಕ.]ಎಲ್ಲ ವೇದಗಳಲ್ಲಿ ‘ಓಂಕಾರ’ ಸಾರವಾದದ್ದು ನನ್ನಿಂದ.[ಎಲ್ಲ ವೇದಗಳಲ್ಲಿದ್ದು ನಾನೇ ಸ್ತುತಿಸುವುದರಿಂದ ‘ಪ್ರಣವ’ ನಾಮಕ] ಆಗಸದಲ್ಲಿ ಸದ್ದು ಮೂಡುವುದು ನನ್ನಿಂದ [ಆಗಸದಲ್ಲಿ ಸದ್ದು ಹೊರಡಿಸುವುದರಿಂದ ‘ಶಬ್ದ’ ನಾಮಕ.] ಗಂಡಸರಲ್ಲಿ ಬೀರ ನನ್ನಿಂದ[ಗಂಡಸರಲ್ಲಿದ್ದು ಬೀರವನ್ನಿತ್ತುದರಿಂದ ‘ಪೌರುಷ’ ನಾಮಕ].

ಭಗವಂತ ಈ ಪ್ರಪಂಚವನ್ನು ಸೃಷ್ಟಿ ಮಾಡಿದ, ಆನಂತರ ಪ್ರಪಂಚದೊಳಗೆ ಪ್ರವೇಶ ಮಾಡಿದ ಎನ್ನುವುದನ್ನು ಶಾಸ್ತ್ರಗಳು ಹೇಳುತ್ತವೆ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. “ಭಗವಂತ ಸರ್ವವ್ಯಾಪ್ತ , ಆತ ಪ್ರವೇಶ ಮಾಡುವುದು ಅಂದರೇನು?” ಇದು ನಮ್ಮ ಪ್ರಶ್ನೆ. ಇದು ಅರ್ಥವಾಗಬೇಕಾದರೆ ಸರ್ವವ್ಯಾಪ್ತ ಭಗವಂತನಿಗೆ ಅನಂತ ರೂಪ ಎನ್ನುವ ವಿಚಾರವೂ ನಮಗೆ ತಿಳಿದಿರಬೇಕು. ಆತ ವ್ಯಾಪ್ತವಾದ ಒಂದು ರೂಪದಲ್ಲಿ ಸರ್ವತ್ರ ಇದ್ದಾನೆ ಮತ್ತು ಒಂದೊಂದು ವಸ್ತುವಿನಲ್ಲೂ  ವಿಶೇಷ ಶಕ್ತಿಪ್ರದನಾಗಿ, ವಿಶೇಷ ಶಕ್ತಿ ಅಭಿವ್ಯಂಜಕನಾದ ಒಂದು ವಿಭೂತಿ ರೂಪದಲ್ಲಿ ಅಲ್ಲಿ ಪ್ರವೇಶ ಮಾಡುತ್ತಾನೆ. ಹೀಗೆ ಒಂದು ವಸ್ತುವಿನಲ್ಲೇ ಭಗವಂತನ ಅನೇಕ ರೂಪಗಳಿರಬಹುದು. ಒಂದು ವಸ್ತುವಿಗೆ ಆ ಶಕ್ತಿವಿಶೇಷವನ್ನು ಕೊಟ್ಟ ಭಗವಂತನ ರೂಪವನ್ನು ಆತನ ವಿಭೂತಿ ರೂಪ ಎನ್ನುತ್ತಾರೆ, ಇದು ಅವನ ಲೀಲೆ. ಭಗವಂತ  ವಿಭೂತಿ ರೂಪದಲ್ಲಿ ಒಂದು ವಸ್ತುವಿನೊಳಗೆ ಪ್ರವೇಶಿಸಿ, ಆ ವಸ್ತುವಿನಲ್ಲಿ ಒಂದು ಶಕ್ತಿವಿಶೇಷವನ್ನು ಅಭಿವ್ಯಕ್ತಗೊಳಿಸುತ್ತಾನೆ-ಇದು ವಿಭೂತಿ ವಿಜ್ಞಾನ.
ಈ ಶ್ಲೋಕದ ಪ್ರಾರಂಭದಲ್ಲಿ ಕೃಷ್ಣ ಪಂಚಭೂತಗಳಲ್ಲಿ ಬಹಳ ಮುಖ್ಯವಾದ ನೀರಿನಲ್ಲಿನ ತನ್ನ ವಿಭೂತಿಯನ್ನು ವಿವರಿಸುತ್ತಾನೆ.  ನಮ್ಮ ಉಪಾಸನೆಯಲ್ಲಿ ಭಗವಂತನನ್ನು ಜಲದಲ್ಲಿ ಉಪಾಸನೆ ಮಾಡುವುದು ಬಹಳ ವಿಶೇಷ. ಎಲ್ಲಾ ಅನುಷ್ಠಾನಕ್ಕೂ(ಸ್ನಾನ, ಅರ್ಗ್ಯ, ತರ್ಪಣ ಇತ್ಯಾದಿ) ಕೂಡಾ ಬೇಕಾಗಿರುವುದು ನೀರು. ಅರ್ಘ್ಯಂ ಸಮರ್ಪಯಾಮಿ। ಗಂದಾಕ್ಷತಂ ಸಮರ್ಪಯಾಮಿ। ಪುಷ್ಪಂ ಸಮರ್ಪಯಾಮಿ। ನೈವೇದ್ಯಂ ಸಮರ್ಪಯಾಮಿ। ತಾಂಬೂಲಂ ಸಮರ್ಪಯಾಮಿ।  ಎಂದು ಸಮರ್ಪಣೆ ಮಾಡುವುದು ಒಂದು ಉದ್ಧರಣೆ ನೀರು! ಹೀಗೆ ಏನೂ ಇಲ್ಲದಾಗ ಎಲ್ಲವುದಕ್ಕೂ ಪ್ರತಿನಿಧಿಯಾಗಿ ನೀರನ್ನು ಅರ್ಪಿಸುತ್ತೇವೆ. ಏಕೆಂದರೆ ಭಗವಂತನ ಸೃಷ್ಟಿಯ ವಿಸ್ತಾರಕ್ಕೆ ನೀರು ಮೂಲದ್ರವ್ಯ. ಅದನ್ನು ಭಕ್ತಿಯಿಂದ ಅರ್ಪಿಸಿದರೆ ಎಲ್ಲವನ್ನು  ಅರ್ಪಿಸಿದಂತೆ.
ಇಲ್ಲಿ ಕೃಷ್ಣ ಹೇಳುತ್ತಾನೆ “ಸಃ ಅಹಮ್ ಅಪ್ಸು ಕೌಂತೇಯ” ಎಂದು. ಅಂದರೆ  “ರಸ ನಾಮಕನಾಗಿ ನೀರಿನಲ್ಲಿ ನಾನು ರಸವಾಗಿದ್ದೇನೆ” ಎಂದು. ಸಂಸ್ಕೃತದಲ್ಲಿ ರಸ ಅಂದರೆ ಸಾರಭೂತವಾದದ್ದು, ಹರಿಯುವಿಕೆ, ಇತ್ಯಾದಿ ಅನೇಕ ಅರ್ಥಗಳಿವೆ. ಹರಿಯುವ ಶಕ್ತಿ ನೀರಿನ ವಿಶಿಷ್ಟ ಗುಣ(exclusive quality). ಹರಿಯುವ ಶಕ್ತಿಯಾಗಿ ‘ಹರಿ’ ನೀರಿನಲ್ಲಿ ಕುಳಿತಿರುವುದರಿಂದ ನೀರಿಗೆ ಆ ಶಕ್ತಿ ಬಂತು. ಉಪಾಸನೆಯಲ್ಲಿ ಈ ಜ್ಞಾನ ಬಹಳ ಮುಖ್ಯ. ಶಾಸ್ತ್ರೀಯವಾಗಿ ಗುಹ್ಯ ಭಾಷೆಯಲ್ಲಿ ನೀರಿಗೆ ‘ವಿಷ್ಣುಃ’ ಎನ್ನುತ್ತಾರೆ. ‘ವಿಷಂತಿ ಅತ್ರ ಇತಿ ವಿಷ್ಣುಃ’- ಅಂದರೆ ಯಾವುದರ ಒಳಗೆ ಹೋಗಿ ಹೊರಗೆ ಬರಲು ಸಾಧ್ಯವೋ ಅದು ವಿಷ್ಣುಃ.
ಭಗವಂತ ನೀರಿನಲ್ಲಿ ರಸವಾಗಿ(ರುಚಿಯಾಗಿ) ಕುಳಿತ. ನಮಗೆ ರುಚಿಯ ಅನುಭವವನ್ನು ಕೊಟ್ಟು ಅವನು ನೀರಿನಲ್ಲಿ ರಸವಾಗಿ ಕೂರದೇ ಇದ್ದಿದ್ದರೆ ನಮಗೆ ನಾಲಿಗೆ ಇದ್ದೂ ಏನೂ ಉಪಯೋಗವಾಗುತ್ತಿರಲಿಲ್ಲ. ಪ್ರತಿಯೊಂದರಲ್ಲೂ ಸಾರಭೂತವಾದ ಇಂತಹ ಅಸಾಧಾರಣ ಶಕ್ತಿ ಏನಿದೆ-ಅದು ಆ ಭಗವಂತನ ವಿಭೂತಿ. ಆತ ರಸಃ-‘ರ’ ಎಂದರೆ ಆನಂದ ; ‘ಸ’ ಎಂದರೆ ಜ್ಞಾನ-ಆದ್ದರಿಂದ ರಸಃ ನಾಮಕ ಭಗವಂತ ಜ್ಞಾನಾನಂದಪೂರ್ಣ.
ನೀರಿನ ನಂತರ ಕೃಷ್ಣ ಸೂರ್ಯ ಮತ್ತು ಚಂದ್ರನ ಉದಾಹರಣೆಯನ್ನು ತೆಗೆದುಕೊಳ್ಳುತ್ತಾನೆ. ಕೃಷ್ಣ ಹೇಳುತ್ತಾನೆ-“ಪ್ರಭಾಸ್ಮಿ ಶಶಿ ಸೂರ್ಯಯೋಃ” ಎಂದು. ಅಂದರೆ “ಸೂರ್ಯ ಚಂದ್ರರೊಳಗೆ ಪ್ರಭಾ ನಾಮಕನಾಗಿದ್ದು ಬೆಳಗಿಸುವವ ನಾನು”. ನಮಗೆ ಪ್ರಾಣಶಕ್ತಿ ಹರಿದು ಬರುವುದು ಸೂರ್ಯ ಮತ್ತು ಚಂದ್ರನಿಂದ. ಮನುಷ್ಯನ ಜೀವನಕ್ಕೆ ವಿಶೇಷವಾಗಿ ಸೌರ ಶಕ್ತಿ ಕಾರಣವಾದರೂ ಕೂಡಾ  ಸಮಸ್ತ ವನಸ್ಪತಿಗಳಿಗೆ ಚಂದ್ರನ ವಿಶೇಷ ಸಂಬಂಧವಿದೆ. ಈ ಕಾರಣಕ್ಕಾಗಿ ವನಸ್ಪತಿ ತಜ್ಞರು ಯಾವ ಯಾವ ಮರದಲ್ಲಿ ಎಂತೆಂಥಾ ಶಕ್ತಿ ಬೆಳದಿಂಗಳಿಂದ ನಿಷ್ಪನ್ನವಾಗುತ್ತದೆ ಎನ್ನುವುದನ್ನು ಅಧ್ಯಯನ ಮಾಡಿ ಚಂದ್ರನ ಗತಿಗನುಗುಣವಾಗಿ ವನಸ್ಪತಿಗಳನ್ನು ಕತ್ತರಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಮನೆ ಕಟ್ಟಲು ಬಳಸುವ ಮರವನ್ನು ಚಂದ್ರನ ಗತಿಗನುಗುಣವಾಗಿ ಅಧ್ಯಯನ ಮಾಡಿ ಕತ್ತರಿಸುತ್ತಿದ್ದರು. ಇದನ್ನು ತಿಳಿಯದೇ ಮರವನ್ನು ಕತ್ತರಿಸಿದರೆ ಆ ಮರ ಬಾಳಿಕೆ ಬಾರದು.  ಭಗವಂತ  ಚಂದ್ರ ಸೂರ್ಯರಿಂದ ನಿರಂತರ ಶಕ್ತಿ ಹರಿಸುವುದರಿಂದ ಈ ಜೀವಲೋಕ ಬದುಕಿದೆ. ಸೂರ್ಯ ಚಂದ್ರರ ಶಕ್ತಿಪಾತವಾಗದೇ ಇದ್ದರೆ ನಮಗೆ ಬದುಕೇ ಇಲ್ಲ. ಇದಕ್ಕಾಗಿ ಭಗವಂತನನ್ನು ‘ಕೇಶವ’ ಎನ್ನುತ್ತಾರೆ. ಸೂರ್ಯ ಚಂದ್ರರ ಕಿರಣದಲ್ಲಿದ್ದು, ಆ ಪ್ರಕಾಶದ ಮೂಲಕ, ಬಿಸಿಲು ಮತ್ತು ಬೆಳದಿಂಗಳ ಮೂಲಕ ನಮಗೆ ಬದುಕನ್ನು ಕೊಡುವವ ಕೇಶವ. ಚಂದ್ರನ ಬೆಳಕಿನಲ್ಲಿ, ಸೂರ್ಯನ ಬೆಳಕಿನಲ್ಲಿ ಆ ಬೆಳಗುವ ಶಕ್ತಿಯನ್ನು ಕೊಟ್ಟು, ಆ ಬೆಳಕಿನಲ್ಲಿ ಬೆಳಕಾಗಿ ‘ಪ್ರಭಾ’ ಶಬ್ದವಾಚ್ಯ ಭಗವಂತ ಕೂತಿದ್ದಾನೆ. ‘ಪ್ರ’ ಎಂದರೆ ಪ್ರಕೃಷ್ಟವಾದ, ‘ಭ’ ಎಂದರೆ  ಜ್ಞಾನಾನಂದಮಯವಾದ. ಭಗವಂತ ಜ್ಞಾನಾನಂದಮಯವಾದ ಬೆಳಕಾಗಿ ಸೂರ್ಯ ಚಂದ್ರರಲ್ಲಿದ್ದು ಜೀವಜಾತಕ್ಕೆ ನಿರಂತರ ಪ್ರಾಣಶಕ್ತಿಯನ್ನು ಹರಿಸುತ್ತಿದ್ದಾನೆ.
ಕೃಷ್ಣ ಮುಂದುವರಿದು ಹೇಳುತ್ತಾನೆ “ಎಲ್ಲಾ ವೇದಗಳಲ್ಲೂ, ವೇದ ಶಬ್ದ ವಾಚ್ಯನಾಗಿ ನಾನು ತುಂಬಿದ್ದೇನೆ” ಎಂದು. ‘ವೇದ’ ಎಂದರೆ 'ಅರಿವು ಕೊಡುವಂತಹದ್ದು' ಎಂದರ್ಥ. ಎಲ್ಲರಿಗೂ ಅರಿವು ಕೊಡುವವ ಭಗವಂತ. ಸ್ವಯಂ ಪೂರ್ಣನಾಗಿ ಸರ್ವರಿಗೂ  ಜ್ಞಾನಪ್ರದನಾಗಿ, ಸರ್ವಶಬ್ದವಾಚ್ಯನಾಗಿ, ಸರ್ವ ವೇದಗಳಲ್ಲಿ ಭಗವಂತ ನೆಲೆಸಿದ್ದಾನೆ. ವೇದದ ಅರ್ಥ ತಿಳಿದವನ ಬದುಕು ಸದಾ  ಮಂಗಳಮಯ. ಅಂತಹ ವೇದದ ಸಾರ 'ಓಂಕಾರ'-ಅದೇ  ಪ್ರಣವಃ.
ಇಲ್ಲಿ ನಾವು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಓಂಕಾರ ಸರ್ವ ವೇದಗಳ ಸಾರ ಎನ್ನುತ್ತಾರೆ. ಅದು ಹೇಗೆ ಎಂದು.  ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ. ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ ಮೂಲತಃ ವೇದದಲ್ಲಿ ಪ್ರಮುಖವಾಗಿ ಮೂರು ವಿಭಾಗವಿದೆ. ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು  ಗಾನರೂಪ(ಸಾಮವೇದ). ಈ ಮೂರು ವೇದಗಳ ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ. “ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎನ್ನುತ್ತಾನೆ ಕೃಷ್ಣ. ಇದು ಬಹಳ ವಿಚಾರಗರ್ಭಿತ ಸಂಗತಿ. ಪ್ರಾಚೀನರು ಮೂರು ವೇದಗಳನ್ನು ಭಟ್ಟಿಇಳಿಸಿ ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು. ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ ಮೂರು ಪಾದಗಳ ಗಾಯತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು,  ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ರಿ ಮಂತ್ರವನ್ನು ‘ವೇದಮಾತ’ ಎನ್ನುತ್ತಾರೆ. ಈ ಗಾಯತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ  “ಭೂಃ ಭುವಃ ಸ್ವಃ”; ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.  
ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |..."  ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ ” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ.
ಒಂದು ಮಂತ್ರದ ಕೊನೆಯಲ್ಲಿ ಹೇಳುವ ಓಂಕಾರಕ್ಕೆ ವ್ಯಾಕರಣದ ಪರಿಭಾಷೆಯಲ್ಲಿ ‘ಪ್ರಣವಃ’ ಎನ್ನುತ್ತಾರೆ. ಆದಿಯಿಂದ ಅಂತದ ತನಕ ಸಮಸ್ತ ನಾಮ ಪ್ರತಿಪಾದ್ಯ ‘ಭಗವಂತ’ ಎಂದು ತೋರಿಸುವುದಕ್ಕೆ ಓಂಕಾರವನ್ನು ಆದಿ-ಅಂತದಲ್ಲಿ ಉಚ್ಛಾರ ಮಾಡುತ್ತಾರೆ. ಈ ಕಾರಣಕ್ಕಾಗಿ ಮಂತ್ರದ ಆದಿಯಲ್ಲಿ ಮತ್ತು ಅಂತದಲ್ಲಿ ಬಳಸುವ ಓಂಕಾರವನ್ನು ಎಂದೂ ಪ್ರತ್ಯೇಕವಾಗಿ ಹೇಳಬಾರದು. ಉದಾಹರಣೆಗೆ ವಿಷ್ಣು ಸಹಸ್ರನಾಮದ ಕೊನೆಯಲ್ಲಿ “ಸರ್ವಪ್ರಹರಣಾಯುಧಃ ಓಂ ನಮ ಇತಿ” ಎಂದು ಹೇಳದೆ  “ಸರ್ವಪ್ರಹರಣಾಯುಧೋಂ ನಮ ಇತಿ” ಎಂದು ಹೇಳಬೇಕು. ಆಯುಧಃ ಎನ್ನುವಲ್ಲಿನ ವಿಸರ್ಗ(ಃ)ವನ್ನು ತೆಗೆದು ಅಲ್ಲಿ ‘ಓಂ’ ಸೇರಿಸಿ ಅದನ್ನು ಸಮಸ್ತವಾಗಿ ಹೇಳಬೇಕು.
“ವೇದದ ಸಾರಭೂತವಾದ ‘ಪ್ರಣವಃ’  ನಾನು” ಎನ್ನುತ್ತಾನೆ ಕೃಷ್ಣ. ಪ್ರಣವಃ ವಿಸ್ತೃತಯಾದಾಗ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರಿ, ಗಾಯತ್ರಿ ವಿಸ್ತಾರವಾಗಿ ಕುರುಡ ಸೂಕ್ತ,  ನಂತರ ಮೂರು ವೇದಗಳು, ಅಲ್ಲಿಂದ ಸಮಸ್ತ ವೇದಗಳು. ಹೀಗೆ ಪ್ರಣವದಲ್ಲಿ, ವ್ಯಾಹೃತಿಯಲ್ಲಿ, ಪುರುಷ ಸೂಕ್ತದಲ್ಲಿ, ಸಮಸ್ತವೇದಗಳಲ್ಲಿ ಭಗವಂತ ನೆಲೆಸಿದ್ದಾನೆ.
ವೇದದ ಶಬ್ದಗಳಿಂದಲೇ ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ದದಲ್ಲೂ, ಎಲ್ಲಾ ಲೌಕಿಕ ನಾದದಲ್ಲೂ  ತುಂಬಿದ ಭಗವಂತ, ಆಕಾಶದಲ್ಲಿ ಅನಂತ ಶಬ್ದಗಳನ್ನೂ, ಅನಂತ ನಾದಗಳನ್ನು ಸೃಷ್ಟಿ ಮಾಡಿದ. ನಮಗೆ ಶಬ್ದದಿಂದ ಅನಂತ ಅನುಭವವನ್ನು ಕೊಟ್ಟು, ಆ ಶಬ್ದವನ್ನು ಗ್ರಹಿಸುವ ಮತ್ತು ಗ್ರಹಿಸಿ ಪುನರುಚ್ಛರಿಸುವ ವಿಶೇಷ ಶಕ್ತಿಯನ್ನು ಕರುಣಿಸಿದ. ಜ್ಞಾನದ ಮೂಲಕ ಈ ಶಬ್ದ ನಾಮಕ ಭಗವಂತನನ್ನು ತಿಳಿಯುವ ವಿಶೇಷ ಶಕ್ತಿ ಮಾನವನಿಗೆ ಭಗವಂತನ ವಿಶೇಷ ಕೊಡುಗೆ. ಜೀವಲೋಕಕ್ಕೆ ನಾನಾ ವಿಧದ ಪೌರುಷವನ್ನು ಕೊಟ್ಟ ಭಗವಂತ, ‘ಪುರುಷ’ ಶಬ್ದ ವಾಚ್ಯನಾಗಿ ಮಾನವರ ಬಹುವಿಧ ಪೌರುಷದಲ್ಲಿ ತುಂಬಿದ.

No comments:

Post a Comment