Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, June 24, 2011

Bhagavad Geeta Kannada Chapter-07 Shloka 12-14


ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ    
ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ         ೧೨

ಯೇ ಚ ಏವ ಸಾತ್ತ್ವಿಕಾಃ ಭಾವಾ ರಾಜಸಾಃ ತಾಮಸಾಃ ಚ ಯೇ        
ಮತ್ತ ಮತ್ತಃ ಏವ ಇತಿ ತಾನ್ ವಿದ್ಧಿ  ನ ತು ಅಹಮ್ ತೇಷು ತೇ ಮಯಿ-ಯಾವ ವಸ್ತುಗಳು ಸತ್ವಗುಣದ ಪ್ರಭಾವಕ್ಕೆ ಒಳಗಾದವು ಮತ್ತು ಯಾವವು ರಜೋಗುಣ ಮತ್ತು ತಮೋಗುಣದ ಪ್ರಭಾವಕ್ಕೆ-ಅವೆಲ್ಲವೂ ನನ್ನಿಂದಾಗಿಯೇ ಆಗಿವೆ ಎಂದು ತಿಳಿ. ನಾನು ಅವುಗಳ ಹಂಗಿನಲ್ಲಿಲ್ಲ. ಅವು ನನ್ನ ಹಂಗಿನಲ್ಲಿವೆ.

ಈ ಪ್ರಪಂಚ ಎಂದರೆ ಅಂತರಂಗ ಮತ್ತು ಬಹಿರಂಗ. ಅಂತರಂಗ ಪ್ರಪಂಚದಲ್ಲಿ  ತ್ರೈಗುಣ್ಯದ ಭಾವನೆಗಳು, ಬಾಹ್ಯ ಪ್ರಪಂಚದಲ್ಲಿ ತ್ರೈಗುಣ್ಯ ಪದಾರ್ಥಗಳು. ಸತ್ವ, ರಜಸ್ಸು ಮತ್ತು ತಮಸ್ಸು ಈ ಮೂರರ ಸಮಾವೇಶವೇ ಈ ಪ್ರಪಂಚ. ಮಣ್ಣು ತಮೋಗುಣದ, ನೀರು ರಜೋಗುಣದ ಮತ್ತು ಬೆಂಕಿ ಸತ್ವ ಗುಣದ ಸಂಕೇತ. ಆದ್ದರಿಂದ ಈ ಪ್ರಪಂಚದಲ್ಲಿ ನಮಗೆ ಕಾಣುವ ಪ್ರತಿಯೊಂದು ವಸ್ತುವೂ ಕೂಡಾ ಈ ಮೂರರ ಸಮಾವೇಶ. ನಮ್ಮ ಅಂತರಂಗದ ಭಾವನೆಗಳೂ ಕೂಡಾ ಈ ಮೂರು ಗುಣದ ಸಮಾವೇಶ. ನಮ್ಮಲ್ಲಿರುವ ವರ್ಣ ಪದ್ಧತಿ ಕೂಡಾ ತ್ರೈಗುಣ್ಯ ಆಧಾರಿತ. ಎಲ್ಲರಲ್ಲಿಯೂ ಕೂಡಾ ಈ ಮೂರು ಗುಣಗಳಿವೆ. ಆದರೆ ಸತ್ವದ ಅಂಶ ಹೆಚ್ಚಾಗಿದ್ದು, ರಜಸ್ಸು ಮತ್ತು ತಮಸ್ಸು ಕಡಿಮೆ ಇರುವವ ಬ್ರಾಹ್ಮಣ ವರ್ಣ; ರಜಸ್ಸಿನ ಅಂಶ ಹೆಚ್ಚಾಗಿದ್ದು ಅದರ ನಂತರ ಸತ್ವ ಮತ್ತು ತಮಸ್ಸು ಇರುವವ ಕ್ಷತ್ರಿಯ; ರಜಸ್ಸು ಹೆಚ್ಚಾಗಿದ್ದು ಅದರ ನಂತರ ತಮಸ್ಸು ಮತ್ತು ಸತ್ವ ಗುಣ ಉಳ್ಳವ ವೈಶ್ಯ; ತಮೋಗುಣ ಹೆಚ್ಚಾಗಿದ್ದು, ಅದರ ನಂತರ ರಜಸ್ಸು ಮತ್ತು ಸತ್ವ ಗುಣ ಉಳ್ಳವ ಶೂದ್ರ. ಈ ಎಲ್ಲಾ ವರ್ಣದವರೂ ಮೋಕ್ಷ ಯೋಗ್ಯರೆ. ಸೃಷ್ಟಿಯ ಆದಿಯಲ್ಲಿ ಈ ಮೂರು ಗುಣಗಳ ಮಿಶ್ರಣವಾಗಿಯೇ ಸೃಷ್ಟಿ ಪ್ರಾರಂಭವಾಯಿತು. ಇಲ್ಲಿ ಶುದ್ಧ ಸತ್ವ ಅನ್ನುವುದೊಂದಿಲ್ಲ. (ಗಣಿತಬದ್ಧವಾಗಿ ಹೇಗೆ ತ್ರೈಗುಣ್ಯದಿಂದ ಈ ಪ್ರಪಂಚ ನಿರ್ಮಾಣವಾಯಿತು ಎನ್ನುವುದನ್ನು ಮಧ್ವಾಚಾರ್ಯರು ತಮ್ಮ ಭಾಗವತ ತಾತ್ಪರ್ಯನಿರ್ಣಯ ಗ್ರಂಥದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಇದೊಂದು ಸೃಷ್ಟಿಯ ಪ್ರಮೇಯ).
ಹೀಗೆ ಪ್ರತಿಯೊಂದು ಪದಾರ್ಥದಲ್ಲಿ ಮೂರು ಅಂಶಗಳಿವೆ ಮತ್ತು ನಮ್ಮ ಭಾವದಲ್ಲಿಯೂ ಮೂರು ಅಂಶಗಳಿವೆ. ಈ ಮೂರು ಗುಣಗಳ ಸಂಕೀರ್ಣ ಪ್ರಪಂಚ ಬಹಳ ವಿಚಿತ್ರ. ಇವು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಮನುಷ್ಯ ತೀರ್ಮಾನ ಮಾಡಲಾಗದಷ್ಟು ಗೊಂದಲಗೆಡಿಸುತ್ತವೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ತ್ರೈಗುಣ್ಯ ವರ್ಜಿತನಾಗಿ ಈ ಮೂರು ಗುಣಗಳನ್ನುಕೊಡುತ್ತಿರುವವನು ನಾನು” ಎಂದು! ಪ್ರತಿಯೊಂದು ಜೀವದ ಜೀವ ಸ್ವಭಾವಕ್ಕನುಗುಣವಾಗಿ, ಅದಕ್ಕೆ ಬೇಕಾದ ಗುಣ ಪ್ರವೃತ್ತಿಯನ್ನು ಕೊಡುವವ ಆ  ಭಗವಂತ. ಯಾರಲ್ಲೂ ಯಾವ ಕ್ರಿಯೆಯೂ ಭಗವಂತನ ಪ್ರೇರಣೆ ಇಲ್ಲದೆ ಆಗುವುದಿಲ್ಲ. ಹಿಂದೆ ವಿವರಿಸಿದಂತೆ ಜೀವನಿಗೆ ಸ್ವತಂತ್ರ ಇಚ್ಛಾಪೂರ್ವಕ ಕ್ರಿಯೆ ಇಲ್ಲ. “ನಹಿ ಪ್ರತಿಬಿಂಬಸ್ಯ ಕ್ರಿಯಾ | ಸ ಹಿ ಬಿಂಬ ಕ್ರಿಯೈವ ಕ್ರಿಯಾವಾನ್ ||”. ಬಿಂಬದಲ್ಲಿ ಕ್ರಿಯೆ ಇಲ್ಲದೆ ಪ್ರತಿಬಿಂಬದಲ್ಲಿ ಕ್ರಿಯೆ ಇಲ್ಲ. ಭಗವಂತನ ಅಧೀನವಾಗಿ ಈ ಮೂರು ಗುಣಗಳು ಈ ಪ್ರಪಂಚದಲ್ಲಿ ತುಂಬಿಕೊಂಡಿವೆ. ಇದು ನಮ್ಮ ಜೀವ ಪಕ್ವವಾಗಿ ಮೋಕ್ಷವನ್ನು ಸೇರಲು ಭಗವಂತ ನಿರ್ಮಿಸಿರುವ ಪಾಠಶಾಲೆ.
ಭಗವಂತ ತ್ರೈಗುಣ್ಯ ವರ್ಜಿತ. ಆತ ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿಲ್ಲ.  ಅದಕ್ಕಾಗಿ ಭಗವಂತನನ್ನು “ತ್ರಿಗುಣಾತೀತ ವಿದಾರಕ-ಪರಿತೋ ತೇಹಿಸುಭಕ್ತಿಂ- ಕರುಣಾಪೂರ್ಣ ಪರಪ್ರದ-ಚರಿತಂ ಜ್ಞಾಪಯಮೇತೇ”  ಎಂದು ಸ್ತುತಿಸುತ್ತಾರೆ. ಇಡೀ ಜಗತ್ತು ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿದೆ ಆದರೆ ಭಗವಂತ ತ್ರಿಗುಣಾತೀತ.

ತ್ರಿಭಿರ್ಗುಣಮಯೈರ್ಭಾವೈರೇಭಿಃ ಸರ್ವಮಿದಂ ಜಗತ್        
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ೧೩

ತ್ರಿಭಿಃ ಗುಣ ಮಯೈಃ ಭಾವೈಃಭಿಃ ಸರ್ವಮ್ ಇದಮ್ ಜಗತ್         
ಮೋಹಿತಮ್ ನ ಅಭಿಜಾನಾತಿ ಮಾಮ್ ಏಭ್ಯಃ ಪರಮ್ ಅವ್ಯಯಮ್-ತ್ರಿಗುಣಾತ್ಮಕವಾದ ಈ ಸೋತ್ತುಗಳಿಂದ ಮೋಹಗೊಂಡ ಈ ಎಲ್ಲ ಜೀವಜಾತ ಇವುಗಳಿಂದಾಚೆಗಿರುವ, ಅಳಿವಿರದ ನನ್ನನ್ನು ತಿಳಿಯದಾಗಿದೆ.

ಇಡೀ ಜಗತ್ತು ತ್ರಿಗುಣಗಳಿಂದ ಮೋಹಿತವಾಗಿರುವುದರಿಂದ ಮತ್ತು ಈ ಮೂರು ಗುಣಗಳು ಎಲ್ಲಾ ಕಡೆ ತುಂಬಿರುವುದರಿಂದ ನಮಗೆ ತ್ರಿಗುಣಾತೀತವಾದ ಯೋಚನೆ ಅಸಾಧ್ಯ. ಈ ಕಾರಣದಿಂದ ತ್ರಿಗುಣಾತೀತನೂ ಅವ್ಯಯನೂ ಆದ  ಆ ಭಗವಂತನನ್ನು ಪೂರ್ಣ ಗ್ರಹಿಸಲು ಜೀವನಿಗೆ ಸಾಧ್ಯವಿಲ್ಲ.  ಭಗವಂತನನ್ನು ಅರಿಯಬೇಕಾದರೆ ನಾವು ಈ ತ್ರಿಗುಣದ ಚಕ್ರದಿಂದ ಹೊರಕ್ಕೆ ಬರಬೇಕು. ಆದರೆ ಹೊರ ಬರುವ ಮಾರ್ಗ ಎಂತು? ಉತ್ತರ ಮುಂದಿನ ಶ್ಲೋಕ.    

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ
ಮಾಮೇವ ಯೇ ಪ್ರಪದ್ಯಂತೇ  ಮಾಯಾಮೇತಾಂ ತರಂತಿ ತೇ ೧೪

ದೈವೀ ಹಿ ಏಷಾ  ಗುಣಮಯೀ ಮಮ ಮಾಯಾ ದುರತ್ಯಯಾ
ಮಾಮ್ ಏವ ಯೇ ಪ್ರಪದ್ಯಂತೇ  ಮಾಯಾಮ್ ಎತಾಮ್ ರಂತಿ ತೇ-ಗುಣಮಯವಾದ ನನ್ನ ಮಾಯೆ ತುಂಬಾ ಶಕ್ತಿಶಾಲಿ. ಅದನ್ನು ದಾಟುವುದು ಸುಲಭವಲ್ಲ. ಯಾರು ನನ್ನಲ್ಲಿ ಮೊರೆ ಹೋಗುತ್ತಾರೆ ಅವರು ಈ ಮಾಯೆಯನ್ನು ದಾಟುತ್ತಾರೆ.

ತ್ರಿಗುಣಾತ್ಮಕವಾದ ಈ ಮೂರು ಭಾವಗಳಲ್ಲಿ ಇನ್ನೊಂದು ಮುಖವಿದೆ. ತ್ರಿಗುಣದ ಮಾನಿನಿ(ಶ್ರೀ ಲಕ್ಷ್ಮಿ)ಯೂ ಕೂಡಾ ಮೂರು ಮುಖದವಳು. ಶ್ರೀ-ಭೂ-ದುರ್ಗ-ಇವು ತ್ರಿಗುಣವನ್ನು ನಿಯಂತ್ರಿಸುವ ಮೂರು ರೂಪಗಳು. ಈ ಗುಣಮಯೀ ತಾಯಿ ಮಾಯೆಯಾಗಿ ಜಗತ್ತಿನಲ್ಲಿ ತುಂಬಿದ್ದಾಳೆ. ಇಡೀ ಜಗತ್ತನ್ನು ನಿಯಂತ್ರಿಸಬಲ್ಲ  ಮಹಾ  ಶಕ್ತಿ ಸ್ವರೂಪ ಆ ಮಾಯೆ ಭಗವಂತನ ಅಧೀನ. ನಾವು ಭಗವಂತನನ್ನು ಕಾಣಬೇಕಾದರೆ ಈ ಮಾಯಾ ಪರದೆಯನ್ನು ಸರಿಸಿ ಕಾಣಬೇಕು. ಆದರೆ ನಮ್ಮಿಂದ ಅದು ಅಸಂಭವ. ಈ ಕಾರಣದಿಂದ ಭಗವಂತನನ್ನು ಸೇರುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ. ಆತ ಈ ಮಾಯಾ ಪರದೆಯನ್ನು ಸರಿಸಿ ದರ್ಶನ ಕೊಡಬಲ್ಲ. ಈ ಹಿಂದೆ ಹೇಳಿದಂತೆ ಸಂಸಾರದ ಮೋಹ ಪಾಶದಿಂದ ದೂರ ಸರಿದು ನಾರಾಯಣನಲ್ಲಿ  ಶರಣಾದಲ್ಲಿ ಆತ ನಮ್ಮನ್ನು ಈ ಮಾಯಾ ಪರದೆಯಿಂದ ದಾಟಿಸುತ್ತಾನೆ. 
ಭಗವಂತನಲ್ಲದೆ  ನನಗೆ ಬೇರೆ ಅಸ್ತಿತ್ವವಿಲ್ಲ ಎನ್ನುವ ಎಚ್ಚರದಿಂದ ನಾವು ನಮ್ಮನ್ನು ಆತನಿಗೆ ಅರ್ಪಿಸಿಕೊಳ್ಳಬೇಕು. ನವವಿಧ ಭಕ್ತಿಯಲ್ಲಿ ಇದು ಶ್ರೇಷ್ಠವಾದ ಭಕ್ತಿ. ಇದನ್ನು ಆತ್ಮನಿವೇದನ ಎನ್ನುತ್ತಾರೆ.ಮೊದಲು ನಮ್ಮೊಳಗಿರುವ ಭಗವಂತನನ್ನು ಅರಿತು, ಅಹಂಕಾರ ಮಮಕಾರವನ್ನು ತೊರೆದು ನಮ್ಮನ್ನು ಸಂಪೂರ್ಣವಾಗಿ ಭಗವಂತನಲ್ಲಿ ಅರ್ಪಿಸಿಕೊಂಡಾಗ ಭಗವದ್ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಏಕ ಭಕ್ತಿ ಮತ್ತು ಏಕ ಶರಣಾಗತಿ. ಕೃಷ್ಣ ಹೇಳುತ್ತಾನೆ "ಯಾರು ನನಗೇ ಶರಣಾಗುತ್ತಾರೋ ಅವರು ಪಾರಾಗಿಯೇ  ಆಗುತ್ತಾರೆ" ಎಂದು. ಕೃಷ್ಣನ ಈ ಮಾತನ್ನು ಕೇಳಿದಾಗ ನಮ್ಮನ್ನು ಕೆಲವು ಪ್ರಶ್ನೆಗಳು  ಕಾಡಬಹುದು. "ಎಲ್ಲರೂ ಏಕೆ ಭಗವಂತನಲ್ಲಿ ಶರಣಾಗುವುದಿಲ್ಲ? ಕೆಟ್ಟತನ  ಜನರಲ್ಲಿ ಹೇಗೆ ಬರುತ್ತದೆ?" ಇತ್ಯಾದಿ. ಬನ್ನಿ ನಮ್ಮ ಪ್ರಶ್ನೆಗೆ ಉತ್ತರವನ್ನು ಮುಂದಿನ ಶ್ಲೋಕದಲ್ಲಿ ಹುಡುಕೋಣ.        

No comments:

Post a Comment