Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, June 25, 2011

Bhagavad Geeta Chapter-07 Shloka 16-18


ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋSರ್ಜುನ  
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ          ೧೬

ಚತುರ್ವಿಧಾಃ ಭಜಂತೇ ಮಾಮ್  ಜನಾಃ ಸುಕೃತಿನಃ ಅರ್ಜುನ          
ಆರ್ತಃ ಜಿಜ್ಞಾಸುಃ ಅರ್ಥ ಅರ್ಥೀ ಜ್ಞಾನೀ ಚ ಭರತ ಋಷಭ-ಓ ಭರತ ವಂಶದ ವೀರ ಅರ್ಜುನ, ಪುಣ್ಯವಂತರಾದ ನಾಲ್ಕು ಬಗೆಯ ಜನರು ನನ್ನಲ್ಲಿ ಭಕ್ತಿ ಇಡುತ್ತಾರೆ: ಸಂಕಟದಲ್ಲಿರುವವರು, ಸಿರಿಯನ್ನು ಬಯಸುವವರು, ತಿಳಿಯ ಬಯಸುವವನು ಮತ್ತು ತಿಳಿದವನು.

ದುಷ್ಕೃತಿಗಳ ಬಗ್ಗೆ ಮೊದಲು ವಿವರಿಸಿದ ಕೃಷ್ಣ ಈ ಶ್ಲೋಕದಲ್ಲಿ ಸುಕೃತಿಗಳ ಬಗ್ಗೆ  ವಿವರಿಸುತ್ತಾನೆ. ಭಗವಂತನ ಕಡೆಗೆ ಸಾಗುವುದು ಒಂದು ಸರಳರೇಖೆಯ ದಾರಿ ಇದ್ದಂತೆ. ಅದು ಕವಲು ದಾರಿ ಅಲ್ಲ. ಈ ಸರಳರೇಖೆಯಲ್ಲಿ ಭಗವಂತನಿಗೆ ಬೆನ್ನು ಹಾಕಿ ಸಾಗುವವರು ಸ್ವಭಾವತಃ ದುಷ್ಕೃತಿಗಳು, ಭಗವಂತನಿಗೆ ಬೆನ್ನು ಹಾಕಿ ಸಾಗಿ, ನಂತರ ಅರಿವು ಮೂಡಿ ಪುನಃ ಭಗವಂತನತ್ತ ಮುಖ ಹಾಕುವವರು ದುಷ್ಕೃತಿಗಳಾಗಿದ್ದು ಸುಕೃತಿಗಳಾಗುವವರು, ಇನ್ನು ಭಗವಂತನತ್ತ ಮುಖ ಮಾಡಿ ಸಾಗುವವರು ಸ್ವಭಾವತಃ ಸುಕೃತಿಗಳು. ಇವರು ಭಗವಂತನನ್ನು ಭಜಿಸುವವರು. ಈ ಸುಕೃತಿಗಳಲ್ಲಿ ನಾಲ್ಕು ವಿಧ: (೧) ಆರ್ತಃ  (೨) ಜಿಜ್ಞಾಸುಃ (೩) ಅರ್ಥ ಅರ್ಥೀ (೪) ಜ್ಞಾನಿ.
ಕೃಷ್ಣ ಹೇಳುತ್ತಾನೆ “ನನ್ನನ್ನು ನಾಲ್ಕು ವಿಧದಲ್ಲಿ ಭಜಿಸುವ ಸುಕೃತ ಜನರಿದ್ದಾರೆ” ಎಂದು. ಇಲ್ಲಿ ಭಜಿಸುವುದು ಅಥವಾ ‘ಭಜನೆ’ ಅಂದರೆ ‘ಭಕ್ತಿಯಿಂದ ಭಗವಂತನನ್ನು ಆರಾದಿಸುವುದು’ ಎಂದರ್ಥ.  ಭಜ ಸೇವಾಯಾಂ ಧಾತು. ಭಗವಂತನನ್ನು ಎಲ್ಲವುದಕ್ಕಿಂತ ಹಿರಿದಾಗಿ ಮತ್ತು ಹೆಚ್ಚಾಗಿ ಪ್ರೀತಿಸಿ, ಆ ಪ್ರೀತಿಗೆ ತಕ್ಕಂತೆ ನಡೆದುಕೊಳ್ಳುವುದು ಭಜನೆ. ಈ ರೀತಿ ಭಜಿಸುವವರಲ್ಲಿ ಮೊದಲನೆಯವರು ಆರ್ತರು.
ಮನುಷ್ಯ ಯಾವುದೋ ಒಂದು ತೊಂದರೆಗೆ ಸಿಕ್ಕಿಕೊಂಡಾಗ, ದುಃಖಕ್ಕೊಳಗಾದಾಗ, ಪರಿಹಾರ ಕೋರಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾನೆ. ಇದು ಆರ್ತಃ ಭಕ್ತಿ. ಈ ಭಕ್ತಿಯಲ್ಲಿ ಅತ್ಯಂತ ಕೆಳ ಮಟ್ಟದಿಂದ ಅತ್ಯಂತ ಶ್ರೇಷ್ಠ ಮಟ್ಟನ್ನು ಕಾಣಬಹುದು. ಕಷ್ಟ ಬಂದಾಗ ದೇವರನ್ನು ಆರ್ತನಾಗಿ ಭಜಿಸಿ ಸುಖ ಬಂದಾಗ ಸಂಪೂರ್ಣ ಮರೆತರೆ ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವಂತೆ ಅದು ಅತ್ಯಂತ ಕೆಳಮಟ್ಟದ ಆರ್ತಭಕ್ತಿಯಾಗುತ್ತದೆ. ಆರ್ತ ಭಕ್ತಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಭಕ್ತಿಗೆ ಉತ್ತಮ ದೃಷ್ಟಾಂತ ದ್ರೌಪದಿ. ಸಭೆಯಲ್ಲಿ ಆಕೆಯ ಮಾನಭಂಗ ಪ್ರಸಂಗ ಎದುರಾದಾಗ, ಆಕೆ ಕೃಷ್ಣನನ್ನು ಆರ್ತನಾದದಿಂದ ಕೂಗಿ ಭಜಿಸುತ್ತಾಳೆ.(ಇಲ್ಲಿ ದ್ರೌಪದಿ ಕೃಷ್ಣನನ್ನು ನಿರಂತರ ಭಜಿಸುತ್ತಿದ್ದಳು ಎನ್ನುವುದನ್ನು ನಾವು ಮರೆಯಬಾರದು). ಮೊಸಳೆ ತನ್ನ ಕಾಲನ್ನು ಕಚ್ಚಿ ಹಿಡಿದಾಗ ಗಜೇಂದ್ರ ಮಾಡಿದ್ದೂ ಕೂಡಾ ಆರ್ತ ಭಕ್ತಿ.
ಆರ್ತ ಭಕ್ತಿಯಲ್ಲಿ ಒಂದು ಸಮಸ್ಯೆ ಇದೆ. ಸಾಮಾನ್ಯವಾಗಿ ನಮಗೆ ಸುಖ ಬಂದಾಗ ನಾವು ಭಗವಂತನನ್ನು ಮರೆತುಬಿಡುತ್ತೇವೆ. ನಮ್ಮೆಲಾ ಐಶ್ವರ್ಯ-ಸಂಪತ್ತು ‘ನಮ್ಮ ದುಡಿಮೆಯ ಫಲ’ ಅಂದುಕೊಳ್ಳುತ್ತೇವೆ. ಆಗ ನಮಗೆ ದೇವರು ನನಪಿಗೆ ಬರುವುದೇ ಇಲ್ಲ. ಆದರೆ ಒಂದು ವೇಳೆ ಏನಾದರೂ ಸಮಸ್ಯೆ ಬಂದರೆ-ಮೊದಲು ನೆನಪಿಗೆ ಬರುವುದು ದೇವರು. ಎಂದೆಂದೂ ‘ದೇವರು ಸುಖವನ್ನೇಕೆ  ಕೊಟ್ಟ’ ಎಂದು ಯೋಚಿಸದ ನಾವು, ಕಷ್ಟ ಬಂದಾಗ  ‘ದೇವರು ನನಗೇಕೆ ಹೀಗೆ ಮಾಡಿದ’ ಎನ್ನಲಾರಭಿಸುತ್ತೇವೆ!   ಸಾಮಾನ್ಯವಾಗಿ ಜನರು ಸಂಕಟ ಬಂದಾಗ  ಮೊದಲು ಜೋತಿಷಿಗಳ ಬಳಿ ಹೋಗುತ್ತಾರೆ. ಜೋತಿಷಿಗಳು  ಒಂದು ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ. ನವಗ್ರಹ ಪೂಜೆ, ನಾಗಾರಾಧನೆ,ಗಣಪತಿ ಪೂಜೆ, ದೇವೀ ಆರಾದನೆ ಇತ್ಯಾದಿ. ಇಲ್ಲಿ  ಕೆಲವು ಶಾಸ್ತ್ರ ಜ್ಞಾನವಿಲ್ಲದ ಮತ್ತು ಅಧ್ಯಾತ್ಮದ ಅರಿವಿಲ್ಲದ ಸಾಮಾನ್ಯ ಜೋತಿಷಿಗಳು, ಜನರಿಗೆ ಸರಿಯಾದ ಮಾರ್ಗದರ್ಶನ ಮಾಡದೇ ತಪ್ಪು ಮಾರ್ಗ ತೋರಿಸುವ ಸಾಧ್ಯತೆ ಹೆಚ್ಚು. ಕೆಲವರು  “ನೀನು ವಿಷ್ಣು ಪೂಜೆ ಮಾಡಿದ್ದರಿಂದ ದೇವಿ ಕೊಪಗೊಂಡಿದ್ದಾಳೆ!!!” ಎಂಬಿತ್ಯಾದಿ  ಅಸಂಬದ್ಧ ಹೇಳಿಕೆ ಕೊಟ್ಟು,  ಜನರನ್ನು ದಾರಿತಪ್ಪಿಸುವ ಪ್ರಸಂಗವಿದೆ.   ಹೀಗಾದಾಗ ಸಾಮಾನ್ಯ ಜನರು ಎಲ್ಲಾ ದೇವತೆಗಳನ್ನು ಬೇರೆ ಬೇರೆಯಾಗಿ ಪೂಜಿಸಿ, ಏಕಭಕ್ತಿಯಿಂದ ದೂರ ಸರಿಯುತ್ತಾರೆ. ಇದರಿಂದಾಗಿ ಭಗವಂತನನ್ನು ಪ್ರೀತಿಸುವ ಬದಲು ಭಯದಿಂದ ‘ದೇವರಿಂದ ನನಗೆ ಯಾವ ತೊಂದರೆ ಆಗದಿರಲಿ’ ಎನ್ನುವಂತೆ ಭಕ್ತಿ ಮಾಡುವ ಸಾಧ್ಯತೆ ಇದೆ! ಈ ಎಲ್ಲ ಕಾರಣದಿಂದ ನಿರಂತರಭಕ್ತಿ ಮತ್ತು ಏಕಭಕ್ತಿ ಆರ್ತಭಕ್ತರಲ್ಲಿ ಇಲ್ಲದೇ ಇರುವ ಸಾಧ್ಯತೆ ಹೆಚ್ಚು.
ಆರ್ತರು ಕಷ್ಟವನ್ನು ನೀಗುವಂತೆ ಭಗವಂತನಲ್ಲಿ ಭಕ್ತಿ ಮಾಡಿದರೆ, ಜಿಜ್ಞಾಸುಗಳು ಜ್ಞಾನಕ್ಕಾಗಿ ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಅದೇ ರೀತಿ ಅರ್ಥಾರ್ಥಿಗಳು ಐಹಿಕ ಸಂಪತ್ತಿಗಾಗಿ,  ಐಶ್ವರ್ಯಕ್ಕಾಗಿ, ಏನನ್ನೋ ಪಡೆಯುವುದಕ್ಕಾಗಿ  ಭಗವಂತನನ್ನು ಪೂಜಿಸುತ್ತಾರೆ.
ಈ ಮೂರು ಭಕ್ತರಿಗಿಂತ ಭಿನ್ನ ನಾಲ್ಕನೇ ವಿಧದ ಭಕ್ತ. ಆತ ಜ್ಞಾನಿ. ಆತ ಏನೋ ಬೇಕು ಅಥವ ಬೇಡ ಎಂದು ಭಗವಂತನನ್ನು ಪೂಜಿಸುವುದಿಲ್ಲ; ಬದಲಿಗೆ ಭಗವಂತನ ಮಹಿಮೆಯನ್ನು ಸಂಪೂರ್ಣ ತಿಳಿದ ಆತ ಸಹಜವಾಗಿ ಭಗವಂತನನ್ನು ಅನನ್ಯವಾಗಿ ಪ್ರೀತಿಸುತ್ತಿರುತ್ತಾನೆ. ಈತನಲ್ಲಿ ಏಕಭಕ್ತಿ ಮತ್ತು ನಿರಂತರ ಭಕ್ತಿ ಇರುತ್ತದೆ. ಯಾವುದೇ ಐಹಿಕ ಫಲಾಪೇಕ್ಷೆಯಿಂದ ಈತ ಭಗವಂತನನ್ನು ಭಜಿಸುವುದಿಲ್ಲ.
ಮುಂದಿನ ಶ್ಲೋಕಕ್ಕೆ ಹೋಗುವ ಮೊದಲು ಇಲ್ಲಿ ನಾವು ಏಕಭಕ್ತಿ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿರಬೇಕು. ಏಕಭಕ್ತಿ ಎಂದರೆ ಎಲ್ಲಾ ದೇವತೆಗಳನ್ನು, ಗುರು-ಹಿರಿಯರನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು ಪೂಜಿಸುವುದಲ್ಲ. ಒಂದು ವೇಳೆ ನಾವು ಹೀಗೆ ಮಾಡಿದರೆ ಅದು ಭಗವಂತನನ್ನು ಅವಮಾನ ಮಾಡಿದಂತೆ. ಉದಾಹರಣೆಗೆ ನಮಗೆ ಯಾವುದೋ ತೊಂದರೆ ಬಂದಾಗ  ಜೋತಿಷಿಯೊಬ್ಬರು ‘ನವಗ್ರಹ ಶಾಂತಿ’ ಮಾಡಿಸಿ ಪರಿಹಾರವಾಗುತ್ತದೆ  ಎಂದು ಹೇಳುತ್ತಾರೆ. ಹೀಗೆ ಹೇಳಿದಾಗ ನಾವು ಅದನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು ಮಾತ್ರ ನಾನು ಭಜಿಸುತ್ತೇನೆ, ಭಗವಂತನ ಅಧೀನ ದೇವತೆಯ ಪೂಜೆಯ ಅಗತ್ಯವೇನು ಎಂದು ತಿಳಿದುಕೊಂಡರೆ ಅದು ತಪ್ಪಾಗುತ್ತದೆ. ನವಗ್ರಹಗಳ ಪರಿವಾರ ಸಹಿತನಾಗಿ ಕೂತ ಭಗವಂತನಿಗೆ ಮಾಡುವ ಪೂಜೆ ‘ನವಗ್ರಹ ಪೂಜೆ’. ಇದು ಯಾವುದರಿಂದ ಸಮಸ್ಯೆ ಬಂತೋ ಅದರ ಮುಖಂಡನಾಗಿ ಕುಳಿತ ಭಗವಂತನ ಪೂಜೆ. ಭಗವಂತನ ಸಮಸ್ತ ಪರಿವಾರದ ವೈಭವನ್ನು ನೆನೆಸಿಕೊಂಡು ಯಾವುದೇ ಪೂಜೆ ಮಾಡಿದರೂ ಅದು ಶ್ರೇಷ್ಠ ಪೂಜೆ ಎನಿಸುತ್ತದೆ. ಸಮಸ್ತ ದೇವತೆಗಳ ಸಹಿತನಾದ ಭಗವಂತನ ಉಪಾಸನೆಯೇ ಏಕಭಕ್ತಿ. ಭಗವಂತ ಏಕಾಕಿ ಅಲ್ಲ. ಆತ ಅನಂತ ಪ್ರಜಾಪತಿ. ಆದ್ದರಿಂದ ಭಗವಂತನನ್ನು ಪ್ರಧಾನವಾಗಿಟ್ಟುಕೊಂಡು ಇತರ ದೇವತೆಗಳನ್ನು ಭಗವಂತನ ಪರಿವಾರವಾಗಿ ತಿಳಿದು ನಿಷ್ಠೆಯಿಂದ ಪೂಜಿಸಬೇಕು. ಇದು ದೇವರನ್ನು ಸೇರಲು ನಮಗೆ ಮಾರ್ಗದರ್ಶನ ಮಾಡುವ ದೇವತೆಗಳೂ ಇಷ್ಟಪಡುವ ಅತಿಶ್ರೇಷ್ಠ ಭಕ್ತಿ. ಒಂದು ವೇಳೆ ನಾವು ಭಗವಂತನನ್ನು ಮರೆತು ಕೇವಲ ಒಂದು ದೇವತೆಯನ್ನು ಪೂಜಿಸಿದರೆ ಆ ದೇವತೆ ನಮ್ಮ ಪೂಜೆಯನ್ನು ಸ್ವೀಕರಿಸುವುದಿಲ್ಲ. ಪೂಜೆ ಪರಿಪೂರ್ಣವಾಗಬೇಕಾದರೆ ನಾವು ಏಕಭಕ್ತಿಯನ್ನು ಭಗವಂತನಲ್ಲಿ ತೋರಬೇಕು.
ಗುರುಭಕ್ತಿ ಕೂಡಾ ಇದೇ ರೀತಿ. ಗುರುಭಕ್ತಿಯಲ್ಲಿ ನಾವು ಕಾಣಬೇಕಾಗಿರುವುದು ಗುರುವಿನ  ಅಂತರಂಗದೊಳಗಿರುವ ಭಗವಂತನನ್ನು. ಜ್ಞಾನಿ ಎಲ್ಲವುದರಲ್ಲೂ ಅದರ ಅಂತರ್ಯಾಮಿಯಾದ ಭಗವಂತನನ್ನು ಕಾಣುತ್ತಾ, ಐಹಿಕ ಫಲಾಪೇಕ್ಷೆ ಇಲ್ಲದ ಏಕಭಕ್ತಿ ಮತ್ತು ನಿರಂತರ ಭಕ್ತಿಯನ್ನು ರೂಢಿಸಿಕೊಂಡಿರುತ್ತಾನೆ.                        
    
ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ
ಪ್ರಿಯೋ ಹಿ ಜ್ಞಾನಿನೋSತ್ಯರ್ಥಮಹಂ ಸ ಚ ಮಮ ಪ್ರಿಯಃ   ೧೭

ತೇಷಾಮ್  ಜ್ಞಾನೀ ನಿತ್ಯಯುಕ್ತಃ  ಏಕಭಕ್ತಿಃ ವಿಶಿಷ್ಯತೇ
ಪ್ರಿಯಃ ಹಿ ಜ್ಞಾನಿನಃ ಅತ್ಯರ್ಥಮ್ ಅಮ್  ಸಃ ಚ ಮಮ ಪ್ರಿಯಃ ಅವರಲ್ಲಿ ತಿಳಿದವನು ಮಿಗಿಲಾದವನು ; ನನ್ನಲ್ಲೇ ಭಕ್ತಿಯನ್ನಿಟ್ಟು, ನನ್ನನೇ ಸದಾ ನೆನೆಯುವವನು. ತಿಳಿದವನಿಗೆ ನಾನೆಂದರೆ ತುಂಬಾ ಇಷ್ಟ, ಅವನೆಂದರೆ ನನಗೂ ತುಂಬಾ ಇಷ್ಟ.
ಮೇಲೆ ಹೇಳಿದ ನಾಲ್ಕು ರೀತಿಯ ಭಕ್ತರಲ್ಲಿ ಜ್ಞಾನಿ ಎಲ್ಲರಿಗಿಂತ ಶ್ರೇಷ್ಠ. ಆತ ಜ್ಞಾನಪೂರ್ವಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಭಗವಂತನನ್ನು ತಿಳಿದು ಸಹಜವಾಗಿ  ಪ್ರೀತಿಸುತ್ತಾನೆ. ಹಿಂದಿನ ಅಧ್ಯಾಯಗಳಲ್ಲಿ ನೋಡಿದಂತೆ ನಾವು ಏನನ್ನು ಮಾಡುತ್ತೇವೋ ಅದನ್ನೇ ಪಡೆಯುತ್ತೇವೆ. ಭಗವಂತನನ್ನು ಹೇಗೆ ಕಾಣುತ್ತೇವೋ ಹಾಗೇ ಭಗವಂತ ನಮ್ಮನ್ನು ಕಾಣುತ್ತಾನೆ. ಈ ಕಾರಣದಿಂದ ಜ್ಞಾನಪೂರ್ವಕವಾದ, ಫಲಾಪೇಕ್ಷೆ ಇಲ್ಲದ, ಏಕಭಕ್ತಿಯುಳ್ಳ ಜ್ಞಾನಿ ಭಗವಂತನಿಗೆ ಬಹಳ ಹತ್ತಿರದಲ್ಲಿರುತ್ತಾನೆ.

ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್
ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ೧೮

ಉದಾರಾಃ  ಸರ್ವೇವ ಏತೇ  ಜ್ಞಾನೀ ತು ಆತ್ಮಾ ಏವ  ಮೇ ಮತಮ್
ಆಸ್ಥಿತಃ ಸಃ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ –ಇವರೆಲ್ಲರೂ ದೊಡ್ದವರೇ. ತಿಳಿದವನಂತು ತೀರ ನನ್ನವನು ಎಂದು ನನ್ನ ತೀರ್ಮಾನ. ಏಕೆಂದರೆ ಅವನು ಹಿರಿಯ ನೆಲೆಯಾದ ನನ್ನಲ್ಲೆ ಬಗೆ ನೆಟ್ಟು ನನ್ನಲ್ಲೆ ನೆಲೆಗೊಂಡವನು.

ಕೃಷ್ಣ ಹೇಳುತ್ತಾನೆ “ಭಕ್ತಿ ಮಾರ್ಗದಲ್ಲಿ ನಡೆಯುವ ಈ ಎಲ್ಲಾ ರೀತಿಯ ಸುಕೃತಿಗಳೂ ಉತ್ತಮರೆ ; ಆದರೆ ಜ್ಞಾನಿ ಮಾತ್ರ ನನಗೆ ತುಂಬಾ ಹತ್ತಿರದವನು ಮತ್ತು ಆತ್ಮೀಯ” ಎಂದು. ಏಕೆಂದರೆ ನಮಗೆ ತಿಳಿದಂತೆ ಜ್ಞಾನವಿಲ್ಲದ ಭಕ್ತಿ ಪೂರ್ಣಭಕ್ತಿ ಆಗುವುದಿಲ್ಲ. ಜ್ಞಾನಪೂರ್ವಕವಾಗಿ ಭಕ್ತಿ ಮಾಡುವವ ನೇರವಾಗಿ ಭಗವಂತನನ್ನು ಹೋಗಿ ಸೇರುತ್ತಾನೆ. ಆದ್ದರಿಂದ ಅದು ಶ್ರೇಷ್ಠವಾದ ಭಕ್ತಿ.
ಜ್ಞಾನಿಗಳು ಆರ್ತರಾಗಿರಬಹುದು, ಜಿಜ್ಞಾಸುಗಳಾಗಿರಬಹುದು ಅಥವಾ ಅರ್ಥಾರ್ಥಿಗಳಾಗಿರಬಹುದು(ಉದಾಹರಣೆಗೆ ಅರ್ಜುನ). ಆದರೆ ಎಲ್ಲಾ ಆರ್ತರು, ಜಿಜ್ಞಾಸುಗಳು ಮತ್ತು ಅರ್ಥಾರ್ಥಿಗಳು ಜ್ಞಾನಿಗಳಾಗಿರಬೇಕೆಂದೇನಿಲ್ಲ. ಜ್ಞಾನಿಗೆ ಸದೃಶವಾದ ಭಕ್ತಿ ಇನ್ನೊಂದಿಲ್ಲ. ಜ್ಞಾನಿಯ ಮನಸ್ಸು ಸದಾ ಭಗವಂತನಲ್ಲಿ ನೆಟ್ಟಿರುತ್ತದೆ. ಭಕ್ತಿಯ ಮಾರ್ಗದಲ್ಲಿ ಸಾಗುವ ಎಲ್ಲರೂ ದೊಡ್ಡವರಾದರೂ ಕೂಡಾ, ಜ್ಞಾನಿ ಮಾತ್ರ ಭಗವಂತನಿಗೆ ಅತೀ ಆತ್ಮೀಯ.
ಮೇಲೆ ಹೇಳಿದಂತೆ ಜ್ಞಾನಿ ಅರ್ಥಾರ್ಥಿಯಾಗಿರಬಹುದು. ಈ ವಿಚಾರ  ನಿಮಗೆ ಸ್ವಲ್ಪ ಗೊಂದಲವೆನಿಸಬಹುದು. ಪ್ರಹ್ಲಾದನ ಜೀವನದ ಒಂದು ಘಟನೆಯನ್ನು ನೋಡಿದರೆ ಈ ವಿಚಾರ ನಮಗೆ ಅರ್ಥವಾಗುತ್ತದೆ. ಪ್ರಹ್ಲಾದನ ಕಥೆ ನಮಗೆಲ್ಲರಿಗೂ ತಿಳಿದಿದೆ. ಆತ ಮಹಾನ್ ಜ್ಞಾನಿ. ಇಂತಹ ಪ್ರಹ್ಲಾದ ತನ್ನ ತಂದೆ ಹಿರಣ್ಯಾಕ್ಷನನ್ನು ಕೊಂದ ನರಸಿಂಹ ರೂಪಿ ಭಗವಂತನಲ್ಲಿ ಒಂದು ಪ್ರಾರ್ಥನೆ ಮಾಡುತ್ತಾನೆ. “ನನ್ನ ತಂದೆ ತಿಳುವಳಿಕೆ ಇಲ್ಲದೆ, ನಿನ್ನ ಮಹತ್ವ ಗೊತ್ತಿಲ್ಲದೆ, ನಿನ್ನನ್ನು ನಿಂದೆ ಮಾಡಿದ. ಆ ದೋಷಕ್ಕೆ ಎಂದೂ ಪರಿಹಾರ ಇಲ್ಲ ಎನ್ನುವುದು ನನಗೆ ತಿಳಿದಿದೆ. ಆದರೂ ಅಜ್ಞಾನದಿಂದ ಆತ ಮಾಡಿದ ತಪ್ಪನ್ನು ಕ್ಷಮಿಸು” ಎಂದು. ಇಲ್ಲಿ ಯಾವುದೇ ಸ್ವಾರ್ಥ ನಮಗೆ ಕಾಣುವುದಿಲ್ಲ. ಆದ್ದರಿಂದ ಇದು ಜ್ಞಾನಿ ಅರ್ಥಾರ್ಥಿ ಹೇಗೆ ಆಗುತ್ತಾನೆ ಎನ್ನುವುದಕ್ಕೆ ಉತ್ತಮ ನಿದರ್ಶನ.

No comments:

Post a Comment