Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Thursday, June 23, 2011

Bhagavad Geeta Chapter-07 Shloka-11


ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್
ಧರ್ಮಾವಿರುದ್ಧೋ ಭೂತೇಷು ಕಾಮೋSಸ್ಮಿ ಭರತರ್ಷಭ ೧೧

ಬಲಮ್  ಬಲವತಾಂ ಚ ಅಹಮ್ ಕಾಮ ರಾಗ ವಿವರ್ಜಿತಮ್
ಧರ್ಮವಿರುದ್ಧಃ  ಭೂತೇಷು ಕಾಮಃ ಅಸ್ಮಿ ಭರತ ಋಷ- ಬಲವಂತರ ಬಯಕೆ-ಒಲವುಗಳಿಲ್ಲದ ಬಲ ನನ್ನಿಂದ. [ಬಲವಂತರೊಳಗಿದ್ದು ಬಲ ನೀಡುವುದರಿಂದ ಮತ್ತು ಕಾಮನೆಯಿಲ್ಲದ, ಆಸ್ಥಾನದಲ್ಲಿ ಬಳಸದ ಬಲರೂಪನಾದ್ದರಿಂದ ‘ಕಾಮ ವಿವರ್ಜಿತ’ ಮತ್ತು ‘ಬಲ’ ನಾಮಕ.] ಭರತಶ್ರೇಷ್ಠ, ಜೀವಿಗಳಲ್ಲಿ ಧರ್ಮಕ್ಕೆ ಅನುಗುಣವಾದ ಬಯಕೆ ನನ್ನಿಂದ. [ಜೀವಿಗಳಲ್ಲಿದ್ದು ಧರ್ಮ ವೃದ್ಧಿಗೆ ನೆರವಾಗಿ ಎಲ್ಲರಿಂದಲೂ ಕಾಮಿತನಾದ್ದರಿಂದ ‘ಧರ್ಮಾವಿರುದ್ಧ’ ಮತ್ತು ‘ಕಾಮ’ನಾಮಕ.]

ವಿಭೂತಿಯ ಸಮಸ್ತ ಮುಖಗಳನ್ನು ಕ್ರೂಡೀಕರಿಸಿ ಸಮಷ್ಟಿಯಾಗಿ ಹೇಳಿದ ಕೃಷ್ಣ, ಇಲ್ಲಿ ಮೂಲಭೂತವಾಗಿ ಬದುಕಿನ ಎರಡು ಮುಖವನ್ನು ವಿವರಿಸುತ್ತಾನೆ. ಕೃಷ್ಣ ಚೇತನದಲ್ಲಿರುವ ಬಲವನ್ನು ಈ ಶ್ಲೋಕದಲ್ಲಿ ಉಲ್ಲೇಖಿಸುತ್ತಾನೆ. ಬಲದಲ್ಲಿ ಅನೇಕ ವಿಧ. ಮುಡಕೋಪನಿಷತ್ತಿನಲ್ಲಿ ಹೇಳುವಂತೆ:

ನಾಯಮಾತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ ।
ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ॥೩-೨-೩॥

ನಾಯಮಾತ್ಮಾ ಬಲಹೀನೇನ ಲಭ್ಯೋ ನ ಚ ಪ್ರಮಾದಾತ್ ತಪಸೋ ವಾಪ್ಯಲಿಙ್ಗಾತ್ ।
ಏತೈರುಪಾಯೈರ್ಯತತೇ ಯಸ್ತು ವಿದ್ವಾಂಸ್ತಸ್ಯೈಷ ಆತ್ಮಾ ವಿಶತೇ ಬ್ರಹ್ಮಧಾಮ ॥೩-೨-೪॥

“ನ ಅಯಂ ಆತ್ಮಾ ಬಲಹೀನೇನ ಲಭ್ಯಃ” ಅಂದರೆ ಭಗವಂತನನ್ನು ಪಡೆಯುವುದು ದುರ್ಬಲರಿಗೆ ಸಾಧ್ಯವಿಲ್ಲ ಎಂದರ್ಥ. ಇಲ್ಲಿ ಬಂದಿರುವ ಬಲ ದೇಹಬಲವಲ್ಲ. ಇದು ಭಗವಂತನ ಅನುಗ್ರಹದ ಬಲ, ಸ್ವರೂಪ ಯೋಗ್ಯತೆ ಮತ್ತು ಜೊತೆಗೆ ಮನೋಬಲ. ಈ ಶ್ಲೋಕದಲ್ಲಿ ಹೇಳುವಂತೆ-ಅಧ್ಯಯನದಿಂದ, ಶಾಸ್ತ್ರ ಶ್ರವಣದಿಂದ ‘ಮನೋಬಲ’ ವೃದ್ಧಿಯಾಗಬಹುದು, ಆದರೆ ಆತ್ಮಬಲವಿಲ್ಲದೆ  ಭಗವಂತನನ್ನು ಕಾಣಲು ಸಾಧ್ಯವಿಲ್ಲ.

"ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ|
ತಸ್ಮೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ" 

ಜ್ಞಾನದ ಬಲವಿದ್ದರೆ ಸಾಲದು,ಭಕ್ತಿಯ ಬಲಬೇಕು. ಭಗವಂತನ ಅನುಗ್ರಹಕ್ಕೆ ನಮ್ಮಲ್ಲಿ ಭಕ್ತಿಯನ್ನು ಜಾಗೃತಗೊಳಿಸುವ ಗುರು ಅನುಗ್ರಹದ ಬಲವೂ ಮುಖ್ಯ. ಹೀಗೆ ಆತ್ಮ ಯೋಗ್ಯತೆಯ ಬಲ, ಸಾಧನೆಯ ಬಲ, ಭಕ್ತಿಯ ಬಲ,ಶಾಸ್ತ್ರಾಧ್ಯಾಯನದ ಬಲ, ಗುರುಗಳ ಅನುಗ್ರಹದ ಬಲ, ಇವನ್ನೆಲ್ಲವನ್ನೂ ನಮಗೆ ಕೊಡುವವ ಆ ಭಗವಂತ. ಆತ  ಅನೇಕರೂಪದಲ್ಲಿ ‘ಬಲ’ ನಾಮಕನಾಗಿ  ನಿಂತು  ಜೀವ ಯೋಗ್ಯತೆಗನುಗುಣವಾಗಿ ವಿಶೇಷ ಬಲವನ್ನು ಅನುಗ್ರಹಿಸುತ್ತಾನೆ.
ಸಾಮಾನ್ಯವಾಗಿ ಬಲದ ಹಿಂದೆ ಒಂದು ದೋಷವಿರುತ್ತದೆ. ಬಲ ಬಂದಾಗ ನಮಗೆ ಕೆಟ್ಟ ಕಾಮನೆ ಹುಟ್ಟುತ್ತದೆ. ಆದರೆ ಭಗವಂತ  ಕಾಮ-ರಾಗ ವಿವರ್ಜಿತ  ಬಲ ಸ್ವರೂಪ. ನಮಗೆ ಕಾಮವರ್ಜಿತ ಬಲ ಕಲ್ಪನಾತೀತ. ಇಲ್ಲಿ ಕೃಷ್ಣ ‘ಕಾಮನೆ’ ಬೇಡ ಎಂದು ಹೇಳುತ್ತಿಲ್ಲ. ‘ಭಗವಂತನನ್ನು ತಿಳಿಯಬೇಕು’, ‘ಭಕ್ತಿಯಿಂದ  ಶಾಸ್ತ್ರಾಧ್ಯಾಯನ ಮಾಡಬೇಕು’ ಇತ್ಯಾದಿ ಕಾಮನೆಗಳು ನಮಗೆ ಅಗತ್ಯವಾಗಿ ಬೇಕು. ಯಾವ ಬಯಕೆ ನಮಗೆ ಧಾರಕ ಶಕ್ತಿಯಾಗಿ ನಿಲ್ಲುತ್ತದೋ ಅಲ್ಲಿ ‘ಕಾಮ ವಿವರ್ಜಿತನಾಗಿ’ ಭಗವಂತ ನಿಂತ. ಇಲ್ಲಿ ಕೃಷ್ಣ ಹೇಳುತ್ತಾನೆ “ಸಮಸ್ತ ಜೀವಜಾತದಲ್ಲಿ ಧರ್ಮಕ್ಕೆ ಅವಿರುದ್ಧವಾಗಿರುವ ಕಾಮನೆಯ ಹಿಂದೆ ನಾನಿದ್ದೇನೆ” ಎಂದು.
ಈ  ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು ‘ಭರತ ಋಷ’ ಎಂದು ಸಂಬೋಧಿಸುತ್ತಾನೆ.  ಜ್ಞಾನಾನಂದದಲ್ಲಿ ರಥನಾದವ ‘ಭರತರ್ಷಭ’;  ಭರತ(ವಾಯು) ಋಷಭ(ಅಣ್ಣ)ನಾಗಿ ಉಳ್ಳವ ಭರತರ್ಷಭ.
ಈ ಮೇಲಿನ ಶ್ಲೋಕದಲ್ಲಿ ಒಳ್ಳೆಯ ಅಂಶದಲ್ಲಿ ಇರತಕ್ಕಂತಹ ತನ್ನ ವಿಭೂತಿಯನ್ನು ಕೃಷ್ಣ ವಿವರಿಸಿದ. ಈ ಅನುಸಂಧಾನದಲ್ಲಿ ಗೀತೆಯನ್ನು ನೋಡಿದಾಗ, ಇಲ್ಲಿ ಕೆಲವರಿಗೆ ಒಂದು ಸಂಶಯ ಬರಬಹುದು. “ಒಳ್ಳೆಯದನ್ನು ಮಾಡಿಸುವವನು ದೇವರು, ಕೆಟ್ಟದ್ದನ್ನು ಮಾಡಿಸುವುದು ಯಾವುದೋ ದುಷ್ಟಶಕ್ತಿ” ಎಂದು. ಅಂದರೆ  ಎಲ್ಲವನ್ನೂ ಭಗವಂತ ಮಾಡಿಸುವುದಲ್ಲ ಎನ್ನುವ ಸಂಶಯ ನಮ್ಮನ್ನು ಕಾಡಬಹುದು. ಈ ನಮ್ಮ ಸಂಶಯಕ್ಕೆ  ಕೃಷ್ಣನ  ಉತ್ತರ ಮುಂದಿನ ಶ್ಲೋಕ.

No comments:

Post a Comment