Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, May 28, 2011

Bhagavad Gita Kannada Chapter-06 Shloka 24-28

ಸಂಕಲ್ಪಪ್ರಭವಾನ್ ಕಾಮಾಂಸ್ತ್ಯಕ್ತ್ವಾ ಸರ್ವಾನಶೇಷತಃ
ಮನಸೈವೇದ್ರಿಯಗ್ರಾಮಂ ವಿನಿಯಮ್ಯ ಸಮಂತತಃ ೨೪
ಶನೈಃ ಶನೈರುಪರಮೇದ್ ಬುದ್ಧ್ಯಾ ಧೃತಿಗೃಹೀತಯಾ
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ ೨೫

ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ
ಮನಸಾ ಏವ ಇಂದ್ರಿಯ ಗ್ರಾಮಮ್  ವಿನಿಯಮ್ಯ ಸಮಂತತಃ ||
ಶನೈಃ ಶನೈಃ  ಪರಮೇತ್  ಬುದ್ಧ್ಯಾ ಧೃತಿ ಗೃಹೀತಯಾ
ಆತ್ಮಸಂಸ್ಥಮ್  ಮನಃ ಕೃತ್ವಾ ನ ಕಿಂಚಿತ್ ಅಪಿ ಚಿಂತಯೇತ್ –ಬಗೆಯಲ್ಲಿ ಮೂಡಿಬರುವ ಎಲ್ಲ ಬಯಕೆಗಳನ್ನೂ ಪೂರ್ತಿಯಾಗಿ ತೊರೆದುಬಿಡಬೇಕು; ಇಂದ್ರಿಯಗಳ ಗಡಣವನ್ನು ಎಲ್ಲೆಡೆಯಿಂದಲು ಮನೋಬಲದಿಂದಲೆ ಹಿಡಿತದಲ್ಲಿಡಬೇಕು; ಅಳುಕದ ವಿವೇಕ ಪ್ರಜ್ಞೆಯಿಂದ ಮೆಲಮೆಲನೆ ಬಗೆಯನ್ನು ವಿಷಯಗಳಿಂದ ಹೊರಳಿಸಬೇಕು; ಭಗವಂತನಲ್ಲಿರಿಸಬೇಕು. ಇರಿಸಿ ಮತ್ತೇನನ್ನೂ ಚಿಂತಿಸಬಾರದು.

ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವ ವಿಧಾನವನ್ನು ಮತ್ತೆ ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ:  “ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ”   ಎಂದು. ಇದರ ಹಿನ್ನೆಲೆಯನ್ನು ಹಿಂದೆ ನಾವು ನೋಡಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳ ಮೂಲ ನಮ್ಮ ಸಂಕಲ್ಪಗಳು. ಸಂಕಲ್ಪಗಳು ಎಂದರೆ ಮನಸ್ಸಿನಲ್ಲಿ ಏನೇನು ಮಾಡಬೇಕು ಎನ್ನುವ ತೀರ್ಮಾನ. ನಾವು ಯಾವುದೇ ಒಂದು ಕೆಲಸವನ್ನೂ ಮಾಡುವ ಮೊದಲು ಅದನ್ನು ಮಾನಸಿಕವಾಗಿ ಮಾಡುತ್ತೇವೆ. ಇಂದು ಇಲ್ಲಿಗೆ ಹೋಗಬೇಕು, ಇಂತವರನ್ನು ಭೇಟಿಯಾಗಬೇಕು, ಅಲ್ಲಿ ಇಂತಹದ್ದನ್ನು ಪಡೆಯಬೇಕು, ಇತ್ಯಾದಿ ವೇಳಾಪಟ್ಟಿ ನಮ್ಮ ಮನಸ್ಸಿನಲ್ಲಿ ನೆಟ್ಟಿರುತ್ತದೆ. ಈ ರೀತಿ ಸಾವಿರ ಸಂಕಲ್ಪಗಳು, ಅದನ್ನು ಈಡೇರಿಸಿಕೊಳ್ಳುವುದಕ್ಕೆ ಸಾವಿರ ಬಯಕೆಗಳು. ‘ಹೀಗೆ ಮಾಡಬೇಕು ಅದರಿಂದ ಹೀಗೇ ಆಗಬೇಕು ಎನ್ನುವ ಆಸೆಗಳು’. ಬದುಕು ಎಂದರೆ ನಾವು ನಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಬದುಕಿನ ರೂಪುರೇಷೆಯನ್ನು ಬಾಹ್ಯ ಪ್ರಪಂಚದಲ್ಲಿ ಸಾಕಾರಗೊಳಿಸುವ ಪ್ರಯತ್ನ. ಹೀಗೆ ಸಾವಿರಾರು ಸಂಕಲ್ಪ ಮತ್ತು ಕಾಮನೆಯನ್ನು  ಮನಸ್ಸಿನಲ್ಲಿ ತುಂಬುತ್ತಾ ಹೋದರೆ ಮನಸ್ಸಿಗೆ ಅದರಿಂದಾಚೆಗೆ ಯೋಚಿಸಲು ಅವಕಾಶವೇ ಇಲ್ಲವಾಗುತ್ತದೆ. ಮನಸ್ಸು ಎಂದರೆ ಬರೀ ಸಂಕಲ್ಪ-ವಿಕಲ್ಪ. ಏನೇನೋ ಕನಸು ಕಟ್ಟುವುದು(ಸಂಕಲ್ಪ),  ಮಾಡಬೇಕೋ ಬೇಡವೋ, ಮಾಡಿದರೆ ಯಶಸ್ವಿ ಆದೀತೋ ಇಲ್ಲವೋ (ವಿಕಲ್ಪ) ಎಂದು ಯೋಚಿಸುತ್ತ ಅದರಿಂದ ಗೊಂದಲಕ್ಕೊಳಗಾಗುವುದು-ಇದರಿಂದಾಚೆಗೆ ಮನಸ್ಸು ಹೋಗುವುದೇ ಇಲ್ಲ. ಕೃಷ್ಣ ಹೇಳುತ್ತಾನೆ “ಮೊದಲು ನಿನ್ನ ಸಂಕಲ್ಪಗಳನ್ನು ಬಿಟ್ಟುಬಿಡು” ಎಂದು. ಈ ಸಂಕಲ್ಪಗಳು ತಿರುಕನ ಕನಸಿನಂತೆ. ಎಷ್ಟು ಹೆಚ್ಚು ಸಂಕಲ್ಪ ನಮ್ಮ ಮನಸ್ಸಿಗೆ ಬರುತ್ತದೆ ಅಷ್ಟೇ ಹತಾಶೆ ಹೆಚ್ಚಾಗುತ್ತದೆ, ಅದರಿಂದ ವ್ಯಾಕುಲತೆ. ನಂತರ ಏನನ್ನೂ ಯೋಚಿಸಲು ಆಗುವುದಿಲ್ಲ!
ಬಯಸುವುದು ಮನಸ್ಸಿನ ಸಹಜ ಗುಣ, ಬಯಸದೆ ಬದುಕಿಲ್ಲ. ಅದಕ್ಕಾಗಿ ಏನು ಬರುತ್ತದೋ ಅದು ಬರಲಿ ಎಂದು ಬಯಸುವುದನ್ನು ಕಲಿತು ನಮ್ಮ ಇತರ ಸಂಕಲ್ಪ ವಿಕಲ್ಪವನ್ನು ಬಿಟ್ಟುಬಿಡಬೇಕು- ಇದು ಯಶಸಿನ ಸೂತ್ರ. ಬಯಸಿದ್ದು ಸಿಗುವುದಿಲ್ಲ, ಬಯಸಿದಂತೆ ಆಗುವುದಿಲ್ಲ ಎಂದ ಮೇಲೆ ಅನಗತ್ಯ ಕನಸಿನ ಗೋಪುರ ಕಟ್ಟುವುದರಲ್ಲಿ ಯಾವ ಅರ್ಥವೂ ಇಲ್ಲ. ನಮ್ಮ ಸಂಕಲ್ಪ ಕೇವಲ ಒಂದೇ ಒಂದು ‘ಭಗವಂತನ ಸಂಕಲ್ಪ ಹೇಗೋ ಹಾಗೆ’. ದ್ವಾದಶ ಸ್ತೋತ್ರದಲ್ಲಿ ಶ್ರೀ ಮಧ್ವಾಚಾರ್ಯರು ಹೇಳುವಂತೆ:

ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದ ವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ ಪಿತೃಮಾತೃಗತಿಃ || ೩-೧ ||

ನಿನ್ನ ಪಾಲಿನ ಕರ್ಮ ಮಾಡು, ಬಂದುದನ್ನುಣ್ಣು. ಹರಿಯ ಚರಣದ ಅರಿವು ತಪ್ಪದಿರಲಿ. ನನ್ನದು ಎನ್ನುವ ಪ್ರತ್ಯೇಕ   ಸಂಕಲ್ಪ ಬೇಡ. ವೇದದಲ್ಲಿ ಹೇಳುವಂತೆ ‘ಭಗವಂತನ ಕಾಮನೆಯೇ ನನ್ನ ಕಾಮನೆಯಾಗಲಿ, ಆತನ ಇಚ್ಛೆಯೇ ನನ್ನ ಇಚ್ಛೆಯಾಗಲಿ, ಅದರಿಂದ ನನ್ನ ಕಾಮನೆ ಭಗವಂತನ ಕಾಮನೆಗೆ ಶ್ರುತಿಗೂಡಲಿ’. ಹೀಗೆ ಆದಾಗ ಅಪಸ್ವರ ಹೊರಡುವುದಿಲ್ಲ. ನಮ್ಮ ಬಯಕೆ ಭಗವಂತನ ಇಚ್ಛೆಗೆ ಅನುರಣನವಾದಾಗ(State of Resonance)   ಬಾಳಿನ ಸಂಗೀತದಲ್ಲಿ ಮಾಧುರ್ಯ ನಿರ್ಮಾಣವಾಗುತ್ತದೆ. ಕೃಷ್ಣ ಹೇಳುತ್ತಾನೆ “ಸರ್ವಾನ್ ಅಶೇಷತಃ” ಎಂದು. ಅಂದರೆ ನಿನ್ನೆಲ್ಲಾ ಸಂಕಲ್ಪವನ್ನು  ಪೂರ್ಣವಾಗಿ ಬಿಡು ಎಂದು. ಭಗವಂತನ ಇಚ್ಚೆಗೆ ವಿರುದ್ಧವಾದ ಒಂದೂ ಸಂಕಲ್ಪ ನಮ್ಮಲ್ಲಿರಬಾರದು. ‘ನೀನು(ಭಗವಂತ) ಏನು ಬಯಸಿದೆಯೋ ಅದೇ ನನ್ನ ಸಂಕಲ್ಪ’-ಇದು ಒಬ್ಬ ಯೋಗಿ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕಾದ ಏಕೈಕ ಸಂಕಲ್ಪ.
ಸಂಕಲ್ಪ ಎಲ್ಲಿ ಹುಟ್ಟುತ್ತದೋ ಅಲ್ಲೇ ಅದನ್ನು ತಡೆಯಬೇಕು. ಇದನ್ನು ತಡೆಯಬೇಕು ಎಲ್ಲಿಂದ ಎಂದರೆ ಮನಸ್ಸಿನಿಂದಲೇ! ನಾವು ನಮ್ಮ ಮನಸ್ಸಿಗೆ ನಿರಂತರ ಈ ರೀತಿ ಹೇಳಬೇಕು “ನೀನು ಹುಚ್ಚು ಸಂಕಲ್ಪ ಮಾಡಬೇಡ, ಮಾಡಿದರೆ ಅದು ನಿನಗೆ ಸಿಗುವುದಿಲ್ಲ. ನಂತರ ಸಿಗಲಿಲ್ಲ ಎಂದು ಚಡಪಡಿಸಬೇಕಾಗುತ್ತದೆ- ಆದ್ದರಿಂದ ಈ ಹುಚ್ಚು ಸಂಕಲ್ಪಗಳನ್ನು ಬಿಡು” ಎಂದು. ಈ ರೀತಿ ಮನಸ್ಸಿಗೆ ನಿರಂತರ ಹೇಳಿ (Auto Suggestion) ಅದನ್ನು ಪಳಗಿಸಬೇಕು. ಸಾಧಕನನ್ನು ದಾರಿ ತಪ್ಪಿಸುವುದೂ ಮನಸ್ಸು, ದಾರಿ ಹೆಚ್ಚಿಸುವುದೂ ಮನಸ್ಸು. ಆದ್ದರಿಂದ ಮನಸ್ಸಿಗೆ ನಿರಂತರ ಈ ರೀತಿ ಹೇಳುತ್ತಾ ಇದ್ದರೆ ಅದು ಕೊನೆಗೆ ಅದನ್ನು  ಒಪ್ಪಿಕೊಳ್ಳುತ್ತದೆ.
ನಾವು ನಮ್ಮ ಹುಚ್ಚು ಸಂಕಲ್ಪವನ್ನು ಬಿಡಬೇಕಾದರೆ ಮೊದಲು ನಮ್ಮ ಇಂದ್ರಿಯ ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನಾವು ನಮ್ಮಲ್ಲಿ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಹಿಂದೆ ಚಿಕ್ಕ ಮಕ್ಕಳಿಗೆ ಅನೇಕ ಅಧ್ಯಾತ್ಮಿಕ ಸಂಸ್ಕಾರವನ್ನು ಹೇಳಿಕೊಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಮನಸ್ಸು ಹಸಿ ಮಣ್ಣಿನಂತೆ, ಏನು ಹೇಳಿದರೂ ಅದರ ಯಥಾರ್ಥ ಗ್ರಹಣವಾಗುತ್ತದೆ. ಮನಸ್ಸಿನ ಗುಣವೆಂದರೆ ಅದನ್ನು ನಾವು ಒಂದು ಕಡೆ ನಿರ್ಬಂಧ ಮಾಡಿದಾಗ ಅದು ಇನ್ನೊಂದು ಕಡೆ ಜಾರಿ ನುಣುಚಿಕೊಳ್ಳುತ್ತದೆ. ಕೃಷ್ಣ ಹೇಳುತ್ತಾನೆ “ಮನಸ್ಸನ್ನು ಜಾರಲು ಬಿಡಬೇಡ, ಎಲ್ಲ ಸಂಕಲ್ಪವನ್ನು ತ್ಯಾಗ ಮಾಡಿ ಭಗವಂತ ಒದಗಿಸಿಕೊಟ್ಟಿದ್ದನ್ನು ಭಗವದ್ ಪ್ರಸಾದವೆಂದು ಸ್ವೀಕರಿಸು, ಸಂತೋಷವಾಗಿ ಅದನ್ನು ಭೋಗಿಸು-ಅನುಭವಿಸು, ಇಲ್ಲದ್ದನ್ನು ಬೇಕು ಎಂದು ಬಯಸಿ ಕೊರಗಬೇಡ” ಎಂದು.
ಈ ಹಿಂದೆ ಹೇಳಿದಂತೆ ಮನಸ್ಸನ್ನು ಒಮ್ಮೆಗೆ ತಿರುಗಿಸಲು ಬರುವುದಿಲ್ಲ. ಅದನ್ನು ಬಹಳ ನಿದಾನವಾಗಿ ತಿರುಗಿಸಬೇಕು. ಮೆಲ್ಲ-ಮೆಲ್ಲನೆ ಆ ಉತ್ಕೃಷ್ಟ ಆನಂದಕ್ಕೆ ಮನಸ್ಸನ್ನು ತಿರುಗಿಸಬೇಕು. ಇದಕ್ಕಾಗಿ “ನಿನ್ನ ವಿಶ್ಲೇಷಕ ಬುದ್ಧಿಯನ್ನು ಬಳಸು” ಎನ್ನುತ್ತಾನೆ ಕೃಷ್ಣ. ಇದಕ್ಕೆ ಛಲ ಬೇಕು ಧೈರ್ಯ ಬೇಕು. ಗುರಿ ಮುಟ್ಟುವ ತನಕ ನಾನು ವಿಚಲಿತನಾಗಲಾರೆ ಎನ್ನುವ ಬುದ್ಧಿ(conviction), ಧೃತಿ(courage) ಬಹಳ ಮುಖ್ಯ. ಹೀಗೆ ತರ್ಕವನ್ನು ಮೀರಿ ತರ್ಕಾತೀತ ಭಗವಂತನತ್ತ ಮನಸ್ಸನ್ನು ತಿರುಗಿಸಬೇಕು.ಮನಸ್ಸು ಮೊದಲು ನಮ್ಮ  ಸ್ವರೂಪವನ್ನು ಗುರುತಿಸಿ ಅಲ್ಲಿ ನೆಲೆನಿಂತು ಆ ನಂತರ ಸ್ವರೂಪದಲ್ಲಿರುವ ಭಗವಂತನಲ್ಲಿ ನೆಲೆ ನಿಲ್ಲಬೇಕು. ಒಮ್ಮೆ ನೆಲೆ ನಿಂತ ಮನಸ್ಸನ್ನು ಬೇರೆ ಯಾವುದೇ ಚಿಂತೆಗೆ ಒಡ್ಡದೆ ಅದನ್ನು ಅಲ್ಲೇ ನೆಲೆಗೊಳಿಸಬೇಕು.                        

ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ೨೬

ಯತಃ ಯತಃ ನಿಶ್ಚರತಿ ಮನಃ ಚಂಚಲಮ್ ಅಸ್ಥಿರಮ್
ತತಃ ತತಃ  ನಿಯಮ್ಯ ಏತತ್ ಆತ್ಮನಿ ಏವ ವಶಮ್  ನಯೇತ್ –ಗಟ್ಟಿಗೊಳ್ಳದೆ ಎತ್ತೆತ್ತ ಸರಿಯುವ ಬಗೆ ಯಾವೆಡೆಯೆಲ್ಲ ಹರಿಯಿತು ಆಯಾ ಕಡೆಯಿಂದ ಮತ್ತೆ ಹೊರಳಿಸಿ ಭಗವಂತನಲ್ಲೆ ನಿಲ್ಲುವಂತೆ ಹಿಡಿತಕ್ಕೆ ತರಬೇಕು.

ನಮ್ಮ ಮನಸ್ಸು ಬಹಳ ಚಂಚಲ. ಈ ಕಾರಣದಿಂದ ಅದು ಎಲ್ಲೆಡೆ ಹರಿಯುತ್ತಿರುತ್ತದೆ. ಅದು ಎಲ್ಲಿ ಎಲ್ಲಿ ಜಾರುತ್ತದೋ ಅಲ್ಲಿ ಅಲ್ಲಿ ಭಗವಂತನೆಂಬ ಒಡ್ಡು ಹಾಕಿ ಅದನ್ನು ಭಗವಂತನಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಇದಕ್ಕೆ ನಿರಂತರ ಪ್ರಯತ್ನ ಅಗತ್ಯ.

ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್      
ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್ ೨೭

ಪ್ರಶಾಂತ ಮನಸಮ್ ಹಿ ಎನಮ್  ಯೋಗಿನಮ್  ಸುಖಮ್ ಉತ್ತಮಮ್ 
ಉಪೈತಿ ಶಾಂತರಜಸಮ್  ಬ್ರಹ್ಮಭೂತಮ್ ಅಕಲ್ಮಷಮ್ –ವಿಷಯಗಳತ್ತ ಹರಿಯದೆ ಹಾಯಾದ ಬಗೆಯವನನ್ನು, ರಜೋಗುಣದ ಬಿಸಿಯಳಿದು ತಿಳಿಯಾದವನನ್ನು, ಭಗವಂತನಲ್ಲೆ ನೆಲೆನಿಂತ ಇಂಥ ಯೋಗಿಯನ್ನು ಸುಖದ ಸುಗ್ಗಿ ನುಗ್ಗಿ ಬರುತ್ತದೆ.

ಒಮ್ಮೆ ನಮ್ಮ ಮನಸ್ಸು ಭಗವಂತನಲ್ಲಿ ನೆಲೆ ನಿಂತಿತೆಂದರೆ ಗೊಂದಲದ ಗೂಡಾದ ಮನಸ್ಸು ಪ್ರಶಾಂತವಾಗುತ್ತದೆ. ಇದನ್ನು ಸಾಧಿಸಿದ ವ್ಯಕ್ತಿ ಎಂತಹ ಸನ್ನಿವೇಶದಲ್ಲೂ ಉದ್ವೇಗಕ್ಕೊಳಗಾಗುವುದಿಲ್ಲ. ಜೀವನದಲ್ಲಿ ನಾವು ಅನುಭವಿಸಬೇಕಾದ ನಿಜವಾದ ಶ್ರೇಷ್ಠ ಸುಖ ಏನು ಎನ್ನುವುದು ಈ ಸ್ಥಿತಿಯಲ್ಲಿ ತಿಳಿಯುತ್ತದೆ. ಮನಸ್ಸು ಸಾಮಾನ್ಯವಾಗಿ ಬಯಸುವ ರಾಜಸ ಸುಖದಲ್ಲಿ ಇರುವ ನಿರಾಶೆ ಇಲ್ಲಿ ಎಂದೂ ಇರದು. ಈ ಸ್ಥಿತಿಯಲ್ಲಿ ನಾವು ಸ್ವಚ್ಚವಾಗುತ್ತೇವೆ. ಇದು ನಿಜವಾದ ಮಡಿ. ಮನಸ್ಸಿನ ಸ್ವಚ್ಚತೆಯನ್ನು ಸಾಧಿಸದೆ ಬಾಹ್ಯ ಮಡಿ ಮಾಡುವುದರಿಂದ ಯಾವ ಉಪಯೋಗವೂ ಇಲ್ಲ.ಶುದ್ಧವಾದ ಮನಸ್ಸಿಗೆ ಯಾವುದೂ ಮೈಲಿಗೆ ಅಲ್ಲ! ಮನಸ್ಸು ಮಡಿಯಾದರೆ ಅವನು ಮೈಲಿಗೆಯಾಗುವ ಸಾಧ್ಯತೆ ಇಲ್ಲ. ಇದು ಮಾನವ ತನ್ನ ಜೀವಮಾನದಲ್ಲಿ ಪಡೆಯಬಹುದಾದ ಪರಮಾನಂದದ ಸ್ಥಿತಿ.

ಯುಂಜನ್ ಏವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಮತ್ಯಂತಂ ಸುಖಮಶ್ನುತೇ    ॥೨೮॥

ಯುಂಜನ್ ಏವಮ್  ಸದಾ ಆತ್ಮಾನಮ್  ಯೋಗೀ ವಿಗತ ಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಮ್ ಅತ್ಯಂತಮ್  ಸುಖಮಶ್ನುತೇ-ಹೀಗೆ ಕೊಳೆಯಳಿದು ಸದಾ ಭಗವಂತನನ್ನು ಧ್ಯಾನಿಸುವ ಸಾಧಕನು ಹಾಯಾಗಿ ಭಗವದನುಭವದ ಪರಮ ಸುಖವನ್ನು ಉಣ್ಣುತ್ತಾನೆ.

ಭಗವದ್ ಅನುಭೂತಿ ಆದಾಗ ಆಗುವ ಅಂತರಂಗದ ಆನಂದವನ್ನು ಇನ್ನೊಂದು ರೀತಿಯಲ್ಲಿ ಕೃಷ್ಣ ಇಲ್ಲಿ  ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ “ಯುಂಜನ್ ಏವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ” ಎಂದು. ಕೃಷ್ಣನ ಈ ನುಡಿಯನ್ನು ಎರಡು ರೂಪದಲ್ಲಿ ಕಾಣಬಹುದು. ಮೊದಲನೆಯದಾಗಿ  “ವಿಗತಕಲ್ಮಷ ಸನ್ ಆತ್ಮಾನಂ ಯುಂಜನ್” ಹಾಗು ಎರಡನೆಯದಾಗಿ “ಆತ್ಮಾನಂ ಯುಂಜನ್ ಸನ್  ವಿಗತಕಲ್ಮಷಃ”. ನಾವು ಮೊದಲು ವಿಗತಕಲ್ಮಶವಾದ ಮನಸ್ಸಿನಿಂದ ಭಗವಂತನನ್ನು ಕಾಣಬೇಕು, ನಂತರ ಭಗವಂತನನ್ನು ಧ್ಯಾನ ಮಾಡುತ್ತಾ ವಿಗತಕಲ್ಮಷರಾಗಬೇಕು. ಭಗವಂತನ ಧ್ಯಾನಕ್ಕೊಸ್ಕರ ಮನಸ್ಸನ್ನು ಸ್ವಚ್ಛಗೊಳಿಸಿ ಒಮ್ಮೆ ಭಗವಂತನನ್ನು ಕಾಣಬಹುದು ಆದರೆ ಭಗವಂತನ ಅನುಭವದಿಂದ ಕೆಳಗಿಳಿದ ತಕ್ಷಣ ತಾಮಸ ಆವೇಶ ನಮ್ಮ ಮನಸ್ಸನ್ನು ಕೆಡಿಸಬಹುದು. ಅದಕ್ಕಾಗಿ ಸದಾ ಭಗವದ್ ಅನುಭೂತಿಯಲ್ಲೇ ನೆಲೆಗೊಳ್ಳಬೇಕು. ಇದರರ್ಥ ದಿನದ ಇಪತ್ನಾಲ್ಕು ಗಂಟೆ ಧ್ಯಾನದಲ್ಲೇ ಇರಬೇಕು ಎಂದಲ್ಲ, ಬದಲಾಗಿ ಸದಾ  ಭಗವಂತನ ಗುಂಗಿನಲ್ಲಿರುವುದು. ಹೀಗಿದ್ದಾಗ ಮನಸ್ಸು ನಿರಂತರ ಸ್ವಚ್ಛವಾಗಿರುತ್ತದೆ. ಹೀಗೆ ಭಗವದ್ಪ್ರಜ್ಞೆ ಗಟ್ಟಿಗೊಂಡಾಗ ಸಾಧಕ ಅನಾಯಾಸವಾಗಿ ಭಗವಂತನನ್ನು ನೇರವಾಗಿ ಕಾಣುವ ಅತ್ಯಂತ ಸುಖಾನುಭವವನ್ನು ಪಡೆಯತ್ತಾನೆ.

No comments:

Post a Comment