Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, May 1, 2011

Bhagavad Gita Chapter-05 Shloka 14

ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ  
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ ೧೪

ನ ಕರ್ತೃತ್ವಮ್  ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ  
ನ ಕರ್ಮಫಲ ಸಂಯೋಗಮ್  ಸ್ವಭಾವಃ ತು ಪ್ರವರ್ತತೇ-ಜೀವ ಜಡದಂತಲ್ಲ; ಕ್ರಿಯೆ ಮಾಡಬಲ್ಲ. ಆದರೂ ಅವನು ಹೊಣೆಗಾರನಲ್ಲ- ಲೋಕದ ಯಾವ ಕ್ರಿಯೆಗೂ, ಪುಣ್ಯ-ಪಾಪಗಳಿಗೂ,ಅದರಿಂದೊದಗುವ ಫಲಕ್ಕೂ. [ಕ್ರಿಯೆಯ,ಪುಣ್ಯಪಾಪಗಳ, ಮತ್ತು ಕರ್ಮಫಲ ಪಡೆಯುವ ಒಡೆತನವನ್ನು ಜೀವ ಲೋಕಕ್ಕೆ ಭಗವಂತ ನೀಡಲಿಲ್ಲ. ಜೀವದ ಸ್ವಭಾವ ತನ್ನ ಕೆಲಸ ಮಾಡುತ್ತಿರುತ್ತದೆ.[ಭಗವಂತ ಈ ಎಲ್ಲವನ್ನೂ ಮಾಡುತ್ತಿರುತ್ತಾನೆ].

ಈ ಹಿಂದೆ ವಿಶ್ಲೇಷಿಸಿದ ಸಮಸ್ತ ಪ್ರಶ್ನೆಗಳಿಗೂ ಉತ್ತರ ಒಗಟಿನ ರೂಪದಲ್ಲಿ ಈ ಶ್ಲೋಕದಲ್ಲಗಿದೆ.  ಮೇಲ್ನೋಟಕ್ಕೆ ಇದು ತಿಳಿಯುವುದಿಲ್ಲ; ಶಾಸ್ತ್ರದ ಅನುಭಾವದಿಂದ ಒಂದೊಂದು  ಶಬ್ಧವನ್ನು ಮನನ ಮಾಡಿದಾಗ ಮಾತ್ರ ಅಲ್ಲಿ ಉತ್ತರ ಸಿಗುತ್ತದೆ.
ಜಡಲೋಕಕ್ಕೆ ಜೀವ ಪ್ರಭು, ಅದರಲ್ಲಿ ಇಚ್ಚಾಪೂರ್ವಕಕ್ರಿಯೆ ಇದೆ, ಆದರೆ ಅದು ಕರ್ತೃತ್ವವಲ್ಲ. ಜೀವವನ್ನು ಜಕ್ಕೆ ಹೋಲಿಸಿದಾಗ: ಜಡಕ್ಕೆ ಯೋಚನೆ ಮಾಡುವ ಶಕ್ತಿ ಇಲ್ಲ-ಆದರೆ ಜೀವಕ್ಕೆ ಯೋಚನೆ ಮಾಡುವ ಶಕ್ತಿ ಇದೆ; ಜಡಕ್ಕೆ ಬುದ್ಧಿ ಇಲ್ಲ-ಆದರೆ ಜೀವಕ್ಕಿದೆ; ಎರಡಕ್ಕೂ ಕರ್ತೃತ್ವವಿಲ್ಲ. ಕ್ರಿಯೆಯ,ಪುಣ್ಯಪಾಪಗಳ, ಮತ್ತು ಕರ್ಮಫಲ ಪಡೆಯುವ ಒಡೆತನವನ್ನು ಜೀವ ಲೋಕಕ್ಕೆ ಭಗವಂತ ನೀಡಿಲ್ಲ. ಜೀವನಿಗೆ ದತ್ತಸ್ವಾತಂತ್ರ್ಯ ಕೂಡಾ ಇಲ್ಲ. [ಉದಾಹರಣೆಗೆ: ಒಬ್ಬ ರಾಜ ತನ್ನ ಮಗನಿಗೆ ದೇಶದ ಒಂದು ಭಾಗವನ್ನು ಸ್ವತಂತ್ರವಾಗಿ ಆಳುವ ಅಧಿಕಾರ ಕೊಡುವುದು ದತ್ತಸ್ವಾತಂತ್ರ್ಯ]. ಕರ್ತೃತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಅದರ ಹಿಂದಿರುವ ಸ್ವಾರಸ್ಯವಾದ ಶಾಸ್ತ್ರೀಯ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕು. 

ಪ್ರಪಂಚದಲ್ಲಿ ಮೂರು ತರಹದ  ಕರ್ತೃತ್ವವಿದೆ. ಕೇವಲ ಕ್ರಿಯೆ ಇರುವುದೂ ಒಂದು ವಿಧದ ಕರ್ತೃತ್ವ. ಇದು ಜಡಕ್ಕೂ ಇದೆ. ಉದಾಹರಣೆಗೆ 'ಕೆಚ್ಚಲು ಹಾಲು ಕೊಡುತ್ತದೆ'; ಇಲ್ಲಿ ಕೆಚ್ಚಲಿನಿಂದ ಹಾಲು ಸುರಿಯುವ ಕೃತಿ ಇದೆ ಆದರೆ ಅದು ಅತ್ಯಂತ ಅಮುಖ್ಯವಾದ ಕರ್ತೃತ್ವ. ಎರಡನೆಯದು ಬುದ್ಧಿ ಪೂರ್ವಕವಾದ ಕೃತಿ. ಸ್ವತಂತ್ರ್ಯವಲ್ಲದ ಇಚ್ಚಾಪೂರ್ವಕ ಕೃತಿ-ಇದು  ಜೀವರಿಗಿದೆ, ಆದರೆ ನಿಜವಾದ ಪ್ರಮುಖ ಕರ್ತೃತ್ವ ಇದಲ್ಲ. ಸ್ವತಂತ್ರವಾದ ಇಚ್ಛಾಪೂರ್ವಕ ಕ್ರಿಯೆ ನಿಜವಾದ ಕರ್ತೃತ್ವ. ಇದು ಇರುವುದು ಕೇವಲ ಭಗವಂತನಲ್ಲಿ ಮಾತ್ರ. ಜೀವನಿಗೆ ಕರ್ಮದಲ್ಲಿ ದತ್ತಸ್ವಾತಂತ್ರ್ಯ ಕೂಡಾ ಇಲ್ಲ. ಜೀವ  ಭಗವಂತನ ಪರಾಧೀನ ಆದ್ದರಿಂದ ಆತ ಕರ್ತಾ ಅಲ್ಲ.
ಉದಾಹರಣೆಗೆ ತೊಟ್ಟಿಲಲ್ಲಿರುವ ಮಗು, ಅದಕ್ಕೆ ಬುದ್ಧಿ ಇದೆ, ತಿನ್ನಬೇಕು ಎನ್ನುವ ಇಚ್ಛೆ ಇದೆ, ಆದರೆ ಸ್ವಾತಂತ್ರ್ಯವಿಲ್ಲ. ತಾಯಿ ಬಾಯಿಗಿಟ್ಟಿದ್ದನ್ನು ಅದು ತಿನ್ನುತ್ತದೆ. ಇದು ಇಚ್ಛಾಪೂರ್ಣ ಕ್ರಿಯೆ ಆದರೆ ಸ್ವತಂತ್ರ-ಇಚ್ಚಾಪೂರ್ಣ ಕ್ರಿಯೆ ಅಲ್ಲ. ಇನ್ನು ಫಲದ ಬಗ್ಗೆ ಇದೇ ದೃಷ್ಟಾಂತದೊಂದಿಗೆ  ನೋಡಿದಾಗ: ತಂದೆ-ತಾಯಿ ಮಗುವಿಗೆ 'ದೇವರಿಗೆ ನಮಸ್ಕಾರ ಮಾಡು' ಎಂದು ಹೇಳುತ್ತಾರೆ, ಆಗ ಆ ಮಗು ಮಾಡುವುದಿಲ್ಲ, ಇಂಥಹ ಸಂದರ್ಭದಲ್ಲಿ ತಂದೆ ತಾಯಿ, ಮಗುವನ್ನು ತಿದ್ದಿ-ತೀಡಿ ಅಥವಾ ಅಗತ್ಯಬಿದ್ದರೆ ಶಿಕ್ಷಿಸಿ ದೇವರಿಗೆ ನಮಸ್ಕರಿಸುವಂತೆ ಮಾಡುತ್ತಾರೆ, ಆಗ ಆ ಮಗು ಮಾಡುತ್ತದೆ.ಇಲ್ಲಿ ನಮಸ್ಕಾರ ಮಾಡಿಸಿದ್ದು ತಂದೆ-ತಾಯಿಯಾದರೂ ಸಹ ಫಲ ಮಗುವಿಗೆ. ಇದೇ ರೀತಿ ಜೀವನೊಳಗೆ ಕುಳಿತ  ಕಣ್ಣಿಗೆ ಕಾಣದ ಭಗವಂತ 'ಜೀವನ' ಕ್ರಿಯೆಯನ್ನು ನಿಯಂತ್ರಿಸುತ್ತಾನೆ. ನಮ್ಮ ಮೂಲಕ ಕರ್ಮ ಮಾಡಿಸುವವನು ಭಗವಂತನಾದರೂ ಕೂಡಾ ಕರ್ಮದ ಫಲ ನಮಗೇ ಹೊರತು ಭಗವಂತನಿಗಲ್ಲ.
ಈ  ದೃಷ್ಟಾಂತದೊಂದಿಗೆ ಮುಂದುವರಿದಾಗ ನಮಗೆ ಇನ್ನೊಂದು ಪ್ರಶ್ನೆ ಕಾಡುತ್ತದೆ. ಭಗವಂತ ನಮ್ಮ ಮುಖೇನ ಏಕೆ ಕೆಟ್ಟ ಕೆಲಸ ಮಾಡಿಸುತ್ತಾನೆ? ತಂದೆ-ತಾಯಿ ಎಂದೂ ಮಗುವಿನಲ್ಲಿ ಕೆಟ್ಟ ಕೆಲಸ ಮಾಡಿಸುವುದಿಲ್ಲ, ಅದೇ ರೀತಿ ಏಕೆ ಭಗವಂತ ನಮ್ಮಲ್ಲಿ ಕೇವಲ ಒಳ್ಳೆಯ ಕೆಲಸ ಮಾಡಿಸಬಾರದು? ಇದು ಲೋಕದಲ್ಲಿರುವುದಕ್ಕಿಂತ ವಿಲಕ್ಷಣವಾಗಿ ಕಾಣುವ ಕ್ರಿಯೆ. ಉದಾಹರಣೆಗೆ ಒಬ್ಬ ಉಪಾಧ್ಯಾಯ, ಆತ ತನ್ನ ಪಾಠ ಪ್ರವಚನವನ್ನು ಎಲ್ಲಾ ಮಕ್ಕಳಿಗೂ ಒಂದೇ ರೀತಿಯಾಗಿ, ಭೇದ ಭಾವವಿಲ್ಲದೆ  ಕಲಿಸುತ್ತಾನೆ. ಆದರೆ ಒಬ್ಬ ಪಾಠವನ್ನು ಬಹುಬೇಗ ಅರ್ಥ ಮಾಡಿಕೊಂಡರೆ ಇನ್ನೊಬ್ಬ ಅರ್ಥವಾಗದೆ ತಳಮಳಿಸಬಹುದು; ಮತ್ತೊಬ್ಬ ಅಪಾರ್ಥ ಮಾಡಿಕೊಳ್ಳಬಹುದು. ಇದಕ್ಕೆ ಉಪಾಧ್ಯಾಯರು ಕಾರಣರಲ್ಲ, ಇದು ವಿಧ್ಯಾರ್ಥಿಯ ಸ್ವಭಾವಕ್ಕೆ ಸಂಭಂದಪಟ್ಟ ವಿಚಾರ. ಕೃಷ್ಣ ಹೇಳುತ್ತಾನೆ "ಸ್ವಭಾವಸ್ತು ಪ್ರವರ್ತತೇ" ಎಂದು. ಇದು ಅಪೂರ್ವವಾದ ಸಂಗತಿ. ಹಿಂದೆ ಹೇಳಿದಂತೆ ಜೀವ ಅನಾಧಿನಿತ್ಯ ಅದನ್ನು ಭಗವಂತ ಸೃಷ್ಠಿ ಮಾಡಿಲ್ಲ. ಈ ಅನಾಧಿನಿತ್ಯವಾದ ಜೀವಕ್ಕೆ ಅನಾಧಿನಿತ್ಯವಾದ ಒಂದು ಅಸಾಧಾರಣ ಸ್ವಭಾವವಿದೆ(Exclusive Quality), ಆ ಸ್ವಭಾವದಂತೆ ಆ ಜೀವ ನಡೆದುಕೊಳ್ಳುತ್ತದೆ.
ಜೀವಸ್ವಭಾವದಂತೆ ಜೀವ ನಡೆದುಕೊಳ್ಳುವುದು ಅಂದರೆ: ಉದಾಹರಣೆಗೆ ಮಾವಿನ ಬೀಜ, ಅದು ಮರವಾಗಿ ಮಾವಿನ ಹಣ್ಣನ್ನೆ  ಕೊಡುತ್ತದೆ ಹೊರತು ಹಲಸಿನ ಹಣ್ಣನ್ನಲ್ಲ, ಇದು ಆ ಬೀಜದ ಸ್ವಭಾವ.  ಜೀವ ಎನ್ನುವುದು ಶರೀರ ಎನ್ನುವ ವೃಕ್ಷದ ಬೀಜ. ಆ ಶರೀರದ ಮೂಲಕ ವ್ಯಕ್ತವಾಗುವುದು ಆ ಬೀಜದ ಮೂಲ ಗುಣವೇ ಹೊರತು ಇನ್ನೇನೂ ಅಲ್ಲ. ಜೀವ ಮೊದಲನೆಯದಾಗಿ ತನ್ನ ಸ್ವಭಾವಕ್ಕೆ ಅಧೀನ. ನಾವು ನಮಗೆ ತೋಚಿದಂತೆ ಮಾಡಲು ಸಾಧ್ಯವಿಲ್ಲ, ನಮ್ಮ  ಸ್ವಭಾವ ಎಂತೋ ಅಂತೆಯೇ ನಮ್ಮ ತೀರ್ಮಾನ. ಮೂಲತಃ ನಿಜವಾದ ಸ್ವಭಾವದಂತೆ ನಮ್ಮ ಅನಿಸಿಕೆ; ಅದಕ್ಕೆ ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ. ಈ ಕಾರಣದಿಂದ ಸ್ವಭಾವತಃ ಸಾತ್ವಿಕನಾದರೆ ಆತನ ವಿಚಾರಧಾರೆಗಳೆಲ್ಲವೂ ಸಾತ್ವಿಕ ಗುಣದ ಪ್ರಭಾವದಲ್ಲೇ ಇರುತ್ತದೆ, ರಾಜಸನಾದವನ ವಿಚಾರಧಾರೆ ರಾಜಸ ಗುಣದ ಪ್ರಭಾವದಲ್ಲಿರುತ್ತದೆ. ಸ್ವಭಾವದ ಜೊತೆಗೆ ಹುಟ್ಟಿ ಬೆಳೆದ ಸಮಾಜದ ಪ್ರಭಾವವಿದ್ದರೂ ಸಹ ಅದರ ಅಭಿವ್ಯಕ್ತತೆ ಕ್ಷಣಿಕ ಅದು ಹೆಚ್ಚೆಂದರೆ ಒಂದು ಜನ್ಮಕ್ಕೆ ಸೀಮಿತ, ಆದರೆ ಕೊನೆಗೆ ಉಳಿಯುವುದು ಜೀವಸ್ವಭಾವ ಮಾತ್ರ.
ಜೀವಕ್ಕೆ ಅನಾಧಿನಿತ್ಯವಾಗಿ ಅಂಟಿದ ಸ್ವಭಾವ ಸಾತ್ವಿಕ ರಾಜಸ ಮತ್ತು ತಾಮಸಗಳ ಸಮ್ಮಿಶ್ರಣ. ಸಾತ್ವಿಕರು ಎಂದರೆ ಅವರಲ್ಲಿ ಸಾತ್ವಿಕ ಗುಣ ಪ್ರಮಾಣ ಹೆಚ್ಚು. ಯಾರಲ್ಲಿ ಯಾವ ಗುಣ ಪ್ರಧಾನವೋ ಆತ ಆ ಗುಂಪಿಗೆ ಸೇರುತ್ತಾನೆ. ಈ ಮೂರು ವಿಧವಾದ ಜೀವಜಾತ ತನ್ನ ಸ್ವಭಾವಕ್ಕೆ ಅಧೀನವಾಗಿ ನಡೆದುಕೊಳ್ಳುತ್ತದೆ ಹೊರತು ತಾನು ಹೇಗೆ ಮಾಡಬೇಕು ಎಂದು ತೀರ್ಮಾನ ಮಾಡಿ ತನ್ನನ್ನು ರೂಪಿಸಿಕೊಳ್ಳುವ ಸ್ವತಂತ್ರ ಕರ್ತೃತ್ವ ಅದಕ್ಕಿರುವುದಿಲ್ಲ.
ಸ್ವಭಾವ ನಮ್ಮ ಅಧೀನ ಅಲ್ಲ, ಅಂದಮೇಲೆ ಆ ಸ್ವಭಾವದ ಅಭಿವ್ಯಕ್ತಿ ನನ್ನ ಸ್ವಾತಂತ್ರ್ಯದಲ್ಲಿಲ್ಲ. ಮತ್ತೆ ಆ ಸ್ವಭಾವದ ಅಭಿವ್ಯಕ್ತಿ ಹೇಗೆ? ಸ್ವಭಾವಕ್ಕೆ ತಕ್ಕಂತೆ ಬೆಳೆಯುವುದು ಯಾರ ಅಧೀನವಾಗಿ? ಸ್ವಭಾವಕ್ಕೆ ಆ ಶಕ್ತಿ ಎಲ್ಲಿಂದ ಬಂತು? ಈ ಎಲ್ಲಾ ಪ್ರಶ್ನೆಗೆ ಇದೇ ಶ್ಲೋಕದಲ್ಲಿ ಉತ್ತರವಿದೆ.  ಅದಕ್ಕಾಗಿ ನಾವು ಈ ಶ್ಲೋಕದಲ್ಲಿ ಅಡಗಿರುವ ಇನ್ನೊಂದು ಅರ್ಥವನ್ನು ನೋಡಬೇಕು. ನಮಗೆ ಕರ್ತೃತ್ವವಿಲ್ಲ ಹಾಗು ಕರ್ಮದಲ್ಲಿ ಇಂತದ್ದೇ ಫಲ ಬರಬೇಕು ಎನ್ನುವ ಸ್ವಾತಂತ್ರ್ಯವಿಲ್ಲ.  ತಾನೇ ತಾನಾಗಿ ತನ್ನನ್ನು ಬಿತ್ತಿಕೊಂಡು ತಾನೇ ಮರವಾಗಿ ಬೆಳೆದು ಹಣ್ಣನ್ನು ಕೊಡುವ ಶಕ್ತಿ  ಜೀವಕ್ಕಿಲ್ಲ. ಸ್ವತಂತ್ರನಾದ ಭಗವಂತ  ಸೃಷ್ಠಿ ಎನ್ನುವ ತೋಟ ನಿರ್ಮಿಸಿ, ಅಲ್ಲಿ ಒಬ್ಬ ತೋಟಗರನಂತೆ, ಜೀವ ಎನ್ನುವ ಬೀಜವನ್ನು  ಬಿತ್ತಿ ಬೆಳೆಸುತ್ತಾನೆ. ಅದರಿಂದ ನಮಗೆ ದೇಹ ಎನ್ನುವ ಮರ ಬೆಳೆಯುತ್ತದೆ ಮತ್ತು ಅದರಿಂದ ಕಹಿಯಾದ, ಹುಳಿಯಾದ  ಅಥವಾ ಸಿಹಿಯಾದ ಹಣ್ಣು ಜೀವ ಸ್ವಭಾವದಂತೆ ಅಭಿವ್ಯಕ್ತವಾಯಿತು. ಆದ್ದರಿಂದ ಕೆಟ್ಟಕೆಲಸ(ಕಹಿ) ಒಳ್ಳೆಯಕೆಲಸ(ಸಿಹಿ) ಎನ್ನುವುದು ನಮ್ಮ ಸ್ವಭಾವವನ್ನವಲಂಬಿಸಿದೆ ಹೊರತು ಭಗವಂತನನ್ನಲ್ಲ. ತೋಟಗಾರ ಎಂದೂ ಮೆಣಸಿನ ಗಿಡಕ್ಕೆ ಖಾರವಾದ ನೀರನ್ನು ಹರಿಸುವುದಿಲ್ಲ. ಎಲ್ಲಾ ಗಿಡದಂತೆ ಆ ಗಿಡವನ್ನೂ ಪೋಷಿಸಿ ಬೆಳೆಸುತ್ತಾನೆ. ಆದರೆ ಅದು ಖಾರವಾದ ಹಣ್ಣನ್ನು ತನ್ನ ಸ್ವಭಾವದಂತೆ ಕೊಡುತ್ತದೆ ಹಾಗೇ ಭಗವಂತ ಅನಾಧಿನಿತ್ಯವಾದ ಜೀವದ ಸ್ವಭಾವಕ್ಕೆ ತಕ್ಕಂತೆ ಕ್ರಿಯೆ ಮಾಡಿಸಿದ ಹಾಗೆ ಕ್ರಿಯೆ ನಡೆಯಿತು.
ಕೆಲವೊಮ್ಮೆ ನಾವು ಯೋಚಿಸಿದ್ದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತೇವೆ. ಏಕೆಂದರೆ  ನಮ್ಮ  ಮನಸ್ಸು ಮತ್ತು  ಬುದ್ಧಿಯ ವಿಚಾರ ಸರಣಿ(Intellectual approach) ಬೇರೆ, ನಾವು ಮಾಡುವುದು ಬೇರೆ. ಈ ಕಾರಣಕ್ಕಾಗಿ ಕೆಲವರು ಹೊರಗಿನಿಂದ ಒಂದು ಮಾತನಾಡಿ ಒಳಗಿನಿಂದ ಅದಕ್ಕೆ ವ್ಯತಿರಿಕ್ತವಾದುದ್ದನ್ನು ಮಾಡುತ್ತಾರೆ. ದುರ್ಯೋಧನ  ಕೂಡಾ "ನಾನು ಮಾಡುತ್ತಾ ಇರುವುದು ತಪ್ಪು ಎನ್ನುವುದು ನನಗೆ ತಿಳಿದಿದೆ" ಎಂದು ಹೇಳಿರುವುದನ್ನು ಇಲ್ಲಿ ನಾವು ಗಮನಿಸಬೇಕು. ಆತನಿಗೆ ಧರ್ಮ ಯಾವುದು ಎಂದು ತಿಳಿದಿತ್ತು.  ಆದರೂ ಆತ  ತನ್ನ ಸ್ವಭಾವದಂತೆ ನಡೆದ. ಆದ್ದರಿಂದ ನಮ್ಮ ತಿಳುವಳಿಕೆ ಬೇರೆ, ನಮ್ಮ ಕ್ರಿಯೆ ಬೇರೆ. ನಮ್ಮ ಸ್ವಭಾವ ನಮ್ಮೆಲ್ಲ ಅಧ್ಯಯನ, ಬುದ್ಧಿ, ವಿಚಾರವಾದವನ್ನು ಬದಿಗೊತ್ತಿ ನಮ್ಮಿಂದ ಸ್ವಭಾವಕ್ಕನುಗುಣವಾದ ಕೆಲಸವನ್ನು ಮಾಡಿಸಿ ಬಿಡುತ್ತದೆ. ಇದನ್ನೇ ಕೃಷ್ಣ ಇಲ್ಲಿ " ಸ್ವಭಾವಸ್ತು ಪ್ರವರ್ತತೇ" ಎಂದಿರುವುದು. ನಿನ್ನ ಸ್ವಭಾವ ಎಂಥದ್ದೋ ಅಂತದ್ದೇ ನಿನ್ನ ಪ್ರವೃತ್ತಿ. ಅದಕ್ಕನುಗುಣವಾಗಿ ಭಗವಂತ ನಿನ್ನನ್ನು ಬೆಳೆಸುತ್ತಾನೆ. ಯಾರಲ್ಲಿ ಯಾವ ಸ್ವಭಾವವಿದೆಯೋ ಅದೇ ರೀತಿ ಅವರಿರಬೇಕೇ ಹೊರತು ಇನ್ನೊಬ್ಬರಂತಲ್ಲ. ಮಾವಿನ ಹಣ್ಣು ಹುಳಿಯಾದರೆ ಅದು ಕೆಟ್ಟ ಹಣ್ಣು, ಅದೇ ಹುಣಸೆ ಹಣ್ಣು ಹೆಚ್ಚು ಹುಳಿಯಾದಂತೆ ಹೆಚ್ಚು ಉತ್ತಮ. ಆದ್ದರಿಂದ ತಾಮಸರು ತಾಮಸರಂತಿರುವುದು  ಅವರ ಸಹಜ ಧರ್ಮ. ಯಾರ್ಯಾರ ಸಹಜ ಸ್ವಭಾವ ಎಂಥದ್ದೋ ಅಂತೆಯೇ ಸಹಜ ಸ್ವಭಾವದಲ್ಲಿ ಬೆಳೆಸುವ ಕ್ರಿಯೆಯನ್ನು ಸ್ವತಂತ್ರನಾದ ಭಗವಂತ ಮಾಡಿದ. ಎಲ್ಲವುದರ ಫಲವನ್ನು ಕೊಡುವವನೂ ಅವನೆ. ಅವನಿಗೆ ಎಂದೂ ಬಂದನವಿಲ್ಲ.
ಹೀಗೆ ಈ ಶ್ಲೋಕ ನಮ್ಮೆಲ್ಲ ಸಂಶಯಗಳಿಗೆ ಉತ್ತರರೂಪದಲ್ಲಿದೆ. ನಮ್ಮ  ಸಂಶಯ ಅತ್ಯಂತ ಗಾಢ. ಮನಸ್ಸಿಗೆ ಬರುವ ಸಂಶಯವನ್ನು ನಿವಾರಿಸಬಹುದು ಆದರೆ ಬುದ್ಧಿಗೆ ಬರುವ ಸಂಶಯ (Intellectual doubt)ವನ್ನು ನಿವಾರಿಸುವುದು ಕಷ್ಟ. ಪ್ರಾಚೀನ ಶಾಸ್ತ್ರಕಾರರು ಮನಃಶಾಸ್ತ್ರದ ಪ್ರಕಾರ ಇದನ್ನು  'ಸ್ಥಿರಸಂಶಯ' ಎಂದು ಕರೆದರು. ನಮ್ಮಲ್ಲಿರುವ ಬೌದ್ಧಿಕ ಕೊಳೆ ಜಗತ್ತಿನಲ್ಲಿ 'ಎಲ್ಲರಿಗಿಂತ ನಾನು ಬುದ್ಧಿವಂತ' ಎಂದು ತಿಳಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ನಾವು ಸತ್ಯದ ಕಡೆಗೆ ಮನಸ್ಸನ್ನು ಒಗ್ಗಿಸಿಕೊಳ್ಳುವುದಿಲ್ಲ ಹಾಗು ಅದರಿಂದ ನಮಗೆ ನಂಬಿಕೆ ಬರುವುದಿಲ್ಲ. ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ತಿಳಿದು-ನಂಬಿ ಮಾಡಬೇಕು, ಅದಕ್ಕೋಸ್ಕರ ಪ್ರತೀ ಹೆಜ್ಜೆಯಲ್ಲೂ ಶಾಸ್ತ್ರೀಯ ಅನುಭಾವ ಮುಖ್ಯ.  ನಾನು ಅಂದರೇನು, ಸ್ವಭಾವ ಅಂದರೇನು, ನನ್ನ ಸ್ವಭಾವವನ್ನು ನಿಯಂತ್ರಿಸುವ ಆ ಶಕ್ತಿ ಯಾವುದು, ಕೈಹಿಡಿದು ನಡೆಸುವವ ಮತ್ತು ಫಲ ಕೊಡುವವ ಯಾರು, ಇತ್ಯಾದಿ  ವಿಚಾರ ತಿಳಿದಾಗ ಅಲ್ಲಿ ಅಹಂಕಾರಕ್ಕೆ ಎಡೆಯಿಲ್ಲ.
ಇಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಭಗವಂತ  ನಮಗೆ ಶಿಕ್ಷೆ ಏಕೆ ಕೊಡುತ್ತಾನೆ ಎಂದು. ದೇವರು ನಮಗೆ ಶಿಕ್ಷೆ ಕೊಡುವುದು ದ್ವೇಷದಿಂದಲ್ಲ, ಅದರ ಹಿಂದಿರುವುದು ಅಪಾರ-ಅನಂತವಾದ ಕಾರುಣ್ಯ. ತಾಯಿ ಮಗುವಿಗೆ ಶಿಕ್ಷೆ ಕೊಡುವ ಹಿಂದಿರುವ ಕಾರುಣ್ಯ ಹೇಗೋ ಹಾಗೆ. ಜೀವನದಲ್ಲಿ ಬರುವ ದುಃಖ ದುರಿತಗಳಿಂದ ಜೀವ ಪಾಕವಾಗುತ್ತದೆ. ಜೀವನದಲ್ಲಿ  ನಮಗೆ ಬರುವ ತಾಪತ್ರಯಗಳ ತಾಪಕ್ಕೆ ನಾವು ಬೇಯಬೇಕು, ಬೆಂದು ಪಕ್ವವಾಗಬೇಕು. ಜೀವನದಲ್ಲಿ ಕಷ್ಟವನ್ನು ನೋಡದವನು ಎಂದೂ ಬೆಳೆಯುವುದಿಲ್ಲ.ಅವರಿಗೆ ಇನ್ನೊಬ್ಬರ ಸುಖ-ದುಃಖ ಅರ್ಥವಾಗುವುದಿಲ್ಲ.ಜೀವ ಪಕ್ವವಾಗುವುದೇ ಕಷ್ಟಗಳು ಬಂದಾಗ. ಇದು ಭಗವಂತ ನಮಗೆ ಕೊಡುವ ಶಿಕ್ಷೆಯ ಹಿಂದಿರುವ ಕಾರುಣ್ಯ.  ನಮ್ಮ ಪತನದ ಹಿಂದೆ ಒಂದು ಉದ್ಧಾರದ ಬೀಜವಿರುತ್ತದೆ. ದುಃಖದ ಹಿಂದೆ ಸುಖದ ಬೀಜವಿರುತ್ತದೆ. ಹೀಗೆ ಶಾಸ್ತ್ರೀಯವಾಗಿ ನೋಡಿದಾಗ ಇಡೀ ಪ್ರಪಂಚದ ಹಿಂದೆ ಇರುವ ವಿಶ್ವಶಕ್ತಿ, ಮಹಾ ಕಾರುಣ್ಯಮೂರ್ತಿಯಾಗಿ ನಮ್ಮನ್ನು ರಕ್ಷಿಸುತ್ತಿದೆ  ಎನ್ನುವ ಎಚ್ಚರ ಬರುತ್ತದೆ.  ಏಳಲು ಬಲವಿಲ್ಲದ ಮಗುವನ್ನು ತಾಯಿ ಹೇಗೆ ನೋಡಿಕೊಳ್ಳುತ್ತಾಳೆ, ಹಾಗೆ ಭಗವಂತ ನಮ್ಮನ್ನು ಪ್ರತಿಕ್ಷಣ ರಕ್ಷಿಸುತ್ತಿದ್ದಾನೆ. ಇದು ಆಧ್ಯಾತ್ಮ ಮಾರ್ಗದಲ್ಲಿ ನಿರಂತರ ಇರಬೇಕಾದ ಅಂತಃಪ್ರಜ್ಞೆ.

No comments:

Post a Comment