Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, May 31, 2011

Bhagavad Gita Kannada Chapter-06 Shloka 33-36


ಅರ್ಜುನ ಉವಾಚ
ಯೋSಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್        ೩೩

ಅರ್ಜುನಃ  ಉವಾಚ-ಅರ್ಜುನ ಕೇಳಿದನು:
ಯಃ ಅಯಾಮ್  ಯೋಗಃ ತ್ವಯಾ  ಪ್ರೋಕ್ತಃ ಸಾಮ್ಯೇನ ಮಧು ಸೂದನ
ಏತಸ್ಯ ಅಹಮ್  ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಮ್  ಸ್ಥಿರಾಮ್-ಮಧುಸೂದನ, ನೀನು ಸಮದೃಷ್ಟಿಯ ಧ್ಯಾನ ಯೋಗವನ್ನು ಹೇಳಿದೆ. ನನಗನಿಸುತ್ತದೆ: ಮನಸ್ಸು ಚಂಚಲವಾದ್ದರಿಂದ ಇದರಲ್ಲಿ ಗಟ್ಟಿಯಾಗಿ ನಿಲ್ಲುವುದು ಸಾಧ್ಯವಿಲ್ಲ.

ಸಾತ್ವಿಕರಿಗೆ ಆನಂದವನ್ನು ಕೊಡುವ ‘ಓ ಮಧುಸೂದನ’ ಎಂದು ಅರ್ಜುನ ಶ್ರೀಕೃಷ್ಣನನ್ನು ಸಂಭೋದಿಸಿ ಹೇಳುತ್ತಾನೆ: “ನೀನು ಸಂಗ್ರಹವಾಗಿ ಹೇಳಿದ ಈ ಧ್ಯಾನ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಲು ಹೇಗೆ ಸಾಧ್ಯ?  ಧ್ಯಾನವೆಂಬುದು ಸಂಪೂರ್ಣ ಮಾನಸಿಕ ಪ್ರಕ್ರಿಯೆ. ಆದರೆ ನಮ್ಮ ಮನಸ್ಸು ಪ್ರಕ್ಷಬ್ಧ ಮತ್ತು ಚಂಚಲ. ಇಂತಹ ಮನಸ್ಸನ್ನು ಹಿಡಿತದಲ್ಲಿಟ್ಟು ನೀನು ಹೇಳಿದ ಸ್ಥಿರವಾದ ಈ ಧ್ಯಾನಯೋಗವನ್ನು ಸಾಧಿಸುವುದು ಸಾಧ್ಯವಿಲ್ಲ” ಎನ್ನುತ್ತಾನೆ ಅರ್ಜುನ.           

ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ ದೃಢಮ್
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ೩೪

ಚಂಚಲಂ ಹಿ ಮನಃ ಕೃಷ್ಣ ಪ್ರಮಾದಿ ಬಲ ವತ್  ದೃಢಮ್          
ತಸ್ಯ ಅಹಮ್  ನಿಗ್ರಹಮ್  ಮನ್ಯೇ ವಾಯೋಃ ಇವ ಸು ದುಷ್ಕರಮ್ –ಕೃಷ್ಣ ಬಗೆ ಚಂಚಲವಲ್ಲವೇ? ನಮ್ಮನ್ನು ಕಂಗೆಡಿಸಿಬಿಡುವಷ್ಟು ಗಟ್ಟಿ, ಬಲಶಾಲಿ. ಅದನ್ನು ಬಿಗಿ ಹಿಡಿಯುವುದೆಂದರೆ ಗಾಳಿಯನ್ನು ಬಿಗಿ ಹಿಡಿದಂತೆ ಎಂದು ನನ್ನ ಭಾವನೆ.

ಮನಸ್ಸು ತುಂಬಾ ಚಂಚಲ, ಅದು ವಿಷಯದಿಂದ ವಿಷಯಕ್ಕೆ ಹಾರುತ್ತಿರುತ್ತದೆ. ನನ್ನ ಮನಸ್ಸು ಸದಾ ನನ್ನನ್ನು ಮಣಿಸುತ್ತಿದೆ ಆದರೆ ನಾನು ಅದನ್ನು ಮಣಿಸಲಾಗುತ್ತಿಲ್ಲ. ತನಗೆ ಬೇಕಾದಂತೆ ಇನ್ನೊಬ್ಬರನ್ನು ಬಗ್ಗು ಬಡಿಯುವ ಸ್ವಭಾವ ಮನಸ್ಸಿನದು. ನಮ್ಮ ಭಗವದ್ ಸಂಕಲ್ಪವನ್ನು ಅದು ನುಚ್ಚು ನೂರುಮಾಡಿ ತನ್ನ ಸ್ವಾಧೀನ ಮಾಡಿಕೊಂಡು ಬಿಡುತ್ತದೆ. ಇಂತಹ ಮನಸ್ಸನ್ನು ಸಾಮಾನ್ಯ ಮನುಷ್ಯ ನಿಗ್ರಹ ಮಾಡುವುದು ಹೇಗೆ? ಬೀಸುವ ಗಾಳಿಯನ್ನು ಹೇಗೆ ಮುಷ್ಠಿಯಲ್ಲಿ ಹಿಡಿಯುವುದು ಅಸಾಧ್ಯವೋ ಹಾಗೆ ಮನಸ್ಸನ್ನು ನಿಗ್ರಹ ಮಾಡುವುದು ಅಸಾಧ್ಯ ಎನ್ನುವುದು ನನ್ನ ಭಾವನೆ ಎನ್ನುತ್ತಾನೆ ಅರ್ಜುನ.

ಅರ್ಜುನನ ಈ ಪ್ರಶ್ನೆ ಭಾಗಶಃ ನಮ್ಮ ಪ್ರತಿಯೊಬ್ಬ ಓದುಗರಿಗೂ ಈ ಅಧ್ಯಾಯದ ಇಲ್ಲಿಯ ತನಕದ ಭಾಗವನ್ನು ಓದುವಾಗ ಮನಸ್ಸಿಗೆ ಬಂದಿರುತ್ತದೆ. “ಇದೆಲ್ಲಾ ನಮ್ಮಂತವರಿಗಲ್ಲ” ಅಥವಾ “ಇದು  ನಮ್ಮಿಂದ ಸಾಧ್ಯವಿಲ್ಲ” ಎನ್ನುವುದು ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುವ ಮೊದಲ ವಿಚಾರ. ಈ ಕಾರಣವನ್ನು ತಿಳಿದೇ ಇಲ್ಲಿ ನಮ್ಮೆಲ್ಲರ ಪ್ರತಿನಿಧಿ ನರ ನಾರಾಯಣನನ್ನು ಈ ರೀತಿ ಪ್ರಶ್ನಿಸಿದ್ದಾನೆ. ಈಗ ನರನ ಈ ಪ್ರಶ್ನೆಗೆ ಕೃಷ್ಣ ಏನೆಂದು ಉತ್ತರಿಸುತ್ತಾನೆ ಎಂದು ತಿಳಿಯುವ ಕರ್ಣಕುತೂಹಲ ನಿಮಗೆಲ್ಲರಿಗೂ ಮೂಡಿರುತ್ತದೆ. ಏಕೆಂದರೆ ನಮಗೆ ಆ ನಮ್ಮ ಚಂಚಲ ಮನಸ್ಸನ್ನು ಮಣಿಸಬೇಕು, ಮಣಿಸಿ ಭಗವಂತನಲ್ಲಿ ನೆಲೆ ನಿಲ್ಲಿಸಬೇಕು ಎನ್ನುವ ಸಂಕಲ್ಪವಿದೆ. ಆದರೆ ಆ ಮನಸ್ಸು ಮಹಾ ಬಲಶಾಲಿ ಎನ್ನುವ ಭಯವಿದೆ!  ಬನ್ನಿ ಆ ಮಧುಸೂದನ ನಮ್ಮ ಪ್ರಶ್ನೆಗೆ ಏನೆಂದು ಉತ್ತರಿಸಿದ ಎಂದು  ಈ ಅಧ್ಯಾಯದ ಮುಂದಿನ ಭಾಗದಲ್ಲಿ  ನೋಡೋಣ.

ಭಗವಾನುವಾಚ
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ೩೫

ಭಗವಾನುವಾಚ-ಭಗವಂತ ಹೇಳಿದನು:
ಅಸಂಶಯಮ್ ಮಹಾಬಾಹೋ ಮನಃ  ದುರ್ನಿಗ್ರಹಮ್ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ –ಮಹಾವೀರ, ಖಂಡಿತ ಹೌದು;ಬಗೆ ಚಪಲವಾದದ್ದು, ಹಿಡಿತಕ್ಕೆ ಸಿಗದ್ದು. ಆದರೆ ಕೌಂತೇಯ, ಮರಳಿ ಮರಳಿ ಯತ್ನಿಸುವುದರಿಂದ ಮತ್ತು ವೈರಾಗ್ಯದಿಂದ ಅದನ್ನು ಬಿಗಿಹಿಡಿಯಬಹುದು.

ಕೃಷ್ಣ ಹೇಳುತ್ತಾನೆ “ನೀನು ಹೇಳುವುದರಲ್ಲಿ ಯಾವ ಸಂಶಯವೂ ಇಲ್ಲ. ಮನಸ್ಸನ್ನು ತಡೆ ಹಿಡಿಯುವುದು ಸುಲಭದ ಕೆಲಸವಲ್ಲ, ಆದರೆ ಅಭ್ಯಾಸ ಮತ್ತು ವೈರಾಗ್ಯದಿಂದ ಇದನ್ನು ಕ್ರಮೇಣವಾಗಿ ಸಾಧಿಸಬಹುದು” ಎಂದು. ನಾವು ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಪ್ರಯತ್ನ ಬೇಕು. ನಾವು ನಮ್ಮ ಮನಸ್ಸು ಹೇಳಿದಂತೆ ಕುಣಿಯುವ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಅದನ್ನು ಬಿಟ್ಟು  ನಾವು ಹೇಳಿದಂತೆ ಮನಸ್ಸು ಕೇಳುವಂತೆ ಮಾಡುವ ಪ್ರಯತ್ನವನ್ನು ನಾವೆಂದೂ ಮಾಡಿರುವುದಿಲ್ಲ. ಇಲ್ಲಿ ಕೃಷ್ಣ ವೈರಾಗ್ಯ ಮತ್ತು ಅಭ್ಯಾಸ  ಎನ್ನುವ ಎರಡು ವಿಚಾರವನ್ನು ಒತ್ತುಕೊಟ್ಟು ಹೇಳುತ್ತಾನೆ. ವೈರಾಗ್ಯ ಎಂದರೆ ಯಾವುದರ ಕಡೆ ಮನಸ್ಸು ಹರಿಯಬಾರದೋ ಅದನ್ನು ಮನಸ್ಸಿಗೆ ಉಣಿಸದೇ(Feed) ದೂರವಿಡುವುದು. ನಮಗೆ ದೇವರು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತಿಳಿದುಕೊಳ್ಳುವ ಬುದ್ಧಿ ಕೊಟ್ಟಿದ್ದಾನೆ. ಆ ಬುದ್ಧಿಯನ್ನು ಉಪಯೋಗಿಸಿ ನಮ್ಮ ಮನಸ್ಸನ್ನು ಕೆಟ್ಟದರಿಂದ ದೂರವಿರಿಸುವುದು. ಕೆಟ್ಟದ್ದನ್ನು ಮನಸ್ಸಿಗೆ ಪರಿಚಯ ಮಾಡಿಕೊಡದೇ ಇರುವುದು. ಹೀಗೆ ಯಾವುದು ನಮ್ಮ ಬೆಳವಣಿಗೆಗೆ ಬಾದಕವೋ ಅದನ್ನು ಮನಸ್ಸಿನಿಂದ ದೂರವಿಡುವುದು ವೈರಾಗ್ಯ. ಇದರ ಜೊತೆಗೆ ನಿರಂತರವಾಗಿ ಏಕಾಗ್ರತೆಗೆ ಬೇಕಾದ ಅಭ್ಯಾಸವನ್ನು ತಪ್ಪದೆ ಮಾಡುವುದು. ಇದರಿಂದ ನಾವು ಮನಸ್ಸನ್ನು ಖಂಡಿತವಾಗಿ ನಿಯಂತ್ರಿಸಬಹುದು ಎನ್ನುತ್ತಾನೆ ಕೃಷ್ಣ.
ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿಗೆ ಪ್ರತೀ ದಿನ ಬೇಡದ ತರಬೇತಿಯನ್ನೇ ಕೊಡುತ್ತೇವೆ. ಉದಾಹರಣೆಗೆ ನಮ್ಮ ಅಮೂಲ್ಯವಾದ ಸಮಯದಲ್ಲಿ ದೂರದರ್ಶನದಲ್ಲಿ ಬರುವ ಯಾವುದೋ ದೈನಂದಿನ ದಾರಾವಾಹಿ, ಸಿನಿಮ ಇತ್ಯಾದಿ ವಿಷಯದಲ್ಲಿ ನಮ್ಮ ಮನಸ್ಸನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತೇವೆ. ನಮಗೆ ಆಧ್ಯಾತ್ಮಿಕ ಗ್ರಂಥಗಳನ್ನು ಓದಲು ಸಮಯವೇ ಇರುವುದಿಲ್ಲ! ದೇವರ ಪೂಜೆ ಮಾಡುವಾಗ ಕೂಡಾ ನಮಗೆ ಆ ದಾರಾವಾಹಿಯ ಮುಂದಿನ ಭಾಗದ  ಚಿಂತೆ. ನಾವು ರಾತ್ರಿ ಮಲಗುವಾಗ ಯಾವುದೋ ಕೆಟ್ಟ ಪುಸ್ತಕವನ್ನು ಓದಿ, ಕೆಟ್ಟ  ದಾರಾವಾಹಿಯನ್ನು ನೋಡಿ ಮಲಗುವ ಬದಲು, ಒಳ್ಳೆಯ ಅಧ್ಯಾತ್ಮಿಕ ಗ್ರಂಥವನ್ನು ಓದುವ ಅಭ್ಯಾಸವನ್ನು ಮಾಡಿಕೊಂಡು ನಮಗೆ ಬೇಡವಾದ ವಿಷಯದತ್ತ ವೈರಾಗ್ಯ ಸಾಧಿಸಬೇಕು. ಇದು ಕೇವಲ ಒಂದು ಉದಾಹರಣೆಯಷ್ಟೇ, ನಾವು ನಮ್ಮ ದೈನಂದಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ.
ಮನಸ್ಸು ತನಗೆ ತಿಳಿಯದ ವಿಷಯದತ್ತ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಒಮ್ಮೆ ರುಚಿ ನೋಡಿದರೆ ಅದು ನಿಮ್ಮನ್ನು ಬಿಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಮಧ್ಯ ಸೇವನೆ. ಎಂದೂ ಮಧ್ಯ ಸೇವನೆ ಮಾಡದವನಿಗೆ ಅದು ಅಸಹ್ಯ, ಆದರೆ ಒಮ್ಮೆ ಒತ್ತಾಯದಿಂದ ಬೇಡದ ಮಧ್ಯವನ್ನು ಸೇವಿಸಿ ನಮ್ಮ ಮನಸ್ಸಿಗೆ ಅದರ ಪರಿಚಯ ಮಾಡಿಸಿದಾಗ ನಮ್ಮ ಮನಸ್ಸು “ಹೇಗೂ ಒಮ್ಮೆ ಕುಡಿದಿದ್ದೀಯ ಇನ್ನೊಮ್ಮೆ ಕುಡಿದರೆ ಏನೂ ಆಗುವುದಿಲ್ಲ-ಕುಡಿ” ಎಂದು ಹೇಳುತ್ತದೆ! ಇದರ ಪರಿಣಾಮ ಏನು ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ.
ನಮ್ಮ ಇನ್ನೊಂದು ಮಹಾ ತಪ್ಪು ಎಂದರೆ ಬೇಡದ ವಿಷಯದಲ್ಲಿ ತಲೆ ಹಾಕುವುದು. “ಯಾರೋ ಏನೋ ಮಾಡಿದರಂತೆ”-ಈ ರೀತಿ ಒಂದು ಮಾತು ನಮ್ಮ ಕಿವಿಗೆ ಬಿದ್ದಾಗ ನಾವು ನಮಗೆ ಆ ವಿಚಾರವನ್ನು ತಿಳಿಯುವುದರಿಂದ ಏನು ಉಪಯೋಗ ಎಂದು ಯೋಚಿಸದೆ ಆ ವಿಷಯಕ್ಕೆ ತಲೆ ಹಾಕುತ್ತೇವೆ. ಒಮ್ಮೆ ತಲೆ ಹಾಕಿದರೆ ಮತ್ತೆ ಮನಸ್ಸು ಅದನ್ನು ಬಿಡುವುದಿಲ್ಲ. ಎಲ್ಲವನ್ನೂ ಬಿಟ್ಟು ಆ ವಿಷಯದ ಬೆನ್ನು ಹತ್ತುತ್ತದೆ. ಆದ್ದರಿಂದ ಒಂದು ವಿಷಯಕ್ಕೆ ತಲೆ ಹಾಕುವ ಮೊದಲು ಆ ವಿಷಯದ ಬಗ್ಗೆ ಬುದ್ಧಿಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು ಮನಸ್ಸು ಇಲ್ಲ ಸಲ್ಲದ ವಿಚಾರದ ಹಿಂದೆ ಓಡದಂತೆ ತಡೆಹಿಡಿಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಗ್ರೀಕ್ ದೇಶದ ಸೋಕ್ರಾಟೆಸ್ ಎನ್ನುವ ವಿಚಾರವಾಧಿಯ ಮೂರು ಹಂತದ ಸೋಸುವಿಕೆ ಎನ್ನುವ ಕಥೆ(The Socrates Triple Filter Test). ಒಮ್ಮೆ ಸೋಕ್ರಾಟೆಸ್ ನ ಒಬ್ಬ ಪರಿಚಯದ ವ್ಯಕ್ತಿ ಬಂದು ಸೋಕ್ರಾಟೆಸ್ ನಲ್ಲಿ ಈ ರೀತಿ ಹೇಳುತ್ತಾನೆ “ನಾನು ನಿನ್ನ ಮಿತ್ರನ ಬಗ್ಗೆ ಏನು ಕೇಳಿದೆ ಗೊತ್ತಾ?( Do you know what I just heard about your friend?)” ಎಂದು. ತಕ್ಷಣ ಸೋಕ್ರಾಟೆಸ್ ಹೇಳುತ್ತಾನೆ “ಸ್ವಲ್ಪ ನಿಲ್ಲು (Hold on a minute); ನೀನು ನನ್ನ ಮಿತ್ರನ ಬಗ್ಗೆ ಏನನ್ನಾದರೂ ಹೇಳುವ ಮೊದಲು ನಾನು ಮೂರು ವಿಚಾರವನ್ನು ತಿಳಿಯ ಬಯಸುತ್ತೇನೆ. ಮೊದಲಿಗೆ ನೀನು ಹೇಳಲು ಹೊರಟಿರುವ ವಿಚಾರದ ಬಗ್ಗೆ ನಿನಗೆ ನೈಜ ಮಾಹಿತಿ ಇದೆಯೋ?(Have you made absolutely sure that what you are about to tell me is true?)”. ಆಗ ಆ ವ್ಯಕ್ತಿ ಹೇಳುತ್ತಾನೆ “ ಇಲ್ಲ.... ಆದರೆ ನಾನು ಈ ವಿಚಾರವನ್ನು ಕೇಳಿಸಿಕೊಂಡೆ...(“No, actually I just heard about it and…)” ಎಂದು. ಈಗ ಸೋಕ್ರಾಟೆಸ್ ಕೇಳುತ್ತಾನೆ “ ಅಂದರೆ ನಿನಗೆ ಆ ವಿಚಾರ ಸರಿಯಾಗಿ ತಿಳಿದಿಲ್ಲ(So you don’t really know if it’s true or not), ಇರಲಿ, ನೀನು ಹೇಳಬೇಕೆಂದಿರುವ ವಿಚಾರ ತುಂಬಾ ಒಳ್ಳೆಯ ವಿಚಾರವೋ?( Is what you are about to tell me about my friend something good?)”. ಆಗ ಆ ವ್ಯಕ್ತಿ ಹೇಳುತ್ತಾನೆ “ಅಲ್ಲ ಅದು ಒಳ್ಳೆಯ ವಿಚಾರವಲ್ಲ(No, on the contrary…)” ಎಂದು. ಕೊನೆಯದಾಗಿ ಸೋಕ್ರಾಟೆಸ್ ಕೇಳುತ್ತಾನೆ “ನೀನು ಹೇಳಲು ಹೊರಟಿರುವ ವಿಚಾರ ನನಗೆ ಉಪಯೋಗಕ್ಕೆ ಬರುವ ವಿಚಾರವೋ?( Is what you want to tell me about my friend going to be useful to me?)”. ಆಗ ಆ ವ್ಯಕ್ತಿ ಹೇಳುತ್ತಾನೆ “ಅಲ್ಲ (No, not really)” ಎಂದು. ಈಗ ಸೋಕ್ರಾಟೆಸ್ ಹೇಳುತ್ತಾನೆ “ನೀನು ಹೇಳಲು ಹೊರಟಿರುವ ವಿಚಾರ ನಿಜವಲ್ಲ, ಒಳ್ಳೆಯ ವಿಚಾರವಲ್ಲ, ಉಪಯೋಗಕ್ಕೆ ಬರುವ ವಿಚಾರವಲ್ಲ ಮತ್ತೆ ಏಕೆ ನನಗೆ ಹೇಳುತ್ತೀಯ?( if what you want to tell me is neither true nor good nor even useful, why tell it to me at all)”.
ಸ್ನೇಹಿತರೆ, ಇಲ್ಲಿ ನಾವು ಕಲಿಯಬೇಕಾದ ವಿಚಾರವೇನೆಂದರೆ ಮನಸ್ಸನ್ನು ಇಲ್ಲ ಸಲ್ಲದ ವಿಚಾರದಲ್ಲಿ ತೊಡಗಿಸುವ ಮೊದಲು ವಿಷಯವನ್ನು ಮೂರು ಬಾರಿ ಸೋಸುವುದನ್ನು ಕಲಿಯಿರಿ. ಬೇಡದ ವಿಚಾರದಲ್ಲಿ ವೈರಾಗ್ಯವನ್ನು ತಾಳಿ ಮತ್ತು ಮನಸ್ಸನ್ನು ಏಕಾಗ್ರಮಾಡುವ ಸಾಧನೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಿ. ಈ ಮಾರ್ಗದಲ್ಲಿ ಸಾಗಿದವರಿಗೆ ಧ್ಯಾನಯೋಗ ಎಂದೂ ಅಸಾಧ್ಯವಲ್ಲ. 

ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ
ವಶ್ಯಾತ್ಮನಾ ತು ಸತತಂ ಶಕ್ಯೋSವಾಪ್ತುಮಶೇಷತಃ ೩೬

ಅಸಂಯತ ಆತ್ಮನಾ ಯೋಗಃ  ದುಷ್ಪ್ರಾಪಃ  ಇತಿ ಮೇ ಮತಿಃ
ವಶ್ಯ ಆತ್ಮನಾ ತು ಸತತಂ ಶಕ್ಯಃ ಆವಾಪ್ತುಮ್ ಅಶೇಷತಃ –ಬಗೆ ಬಿಗಿಗೊಳಿಸದವನಿಗೆ ಸಮಾಧಿ ಸಿಗುವಂತದ್ದಲ್ಲ ಎಂದು ನನ್ನ ತೀರ್ಮಾನ.ಬಗೆಯನ್ನು ಸದಾ ಹಿಡಿತದಲ್ಲಿಟ್ಟವನು ಸಮಗ್ರವಾಗಿ ಸಮಾಧಿಯನ್ನು ಸಾಧಿಸಬಲ್ಲ.

ಯಾರು ತನ್ನ ಸೋಮಾರಿತನದಿಂದ, ಕೆಟ್ಟ ಲೌಕಿಕ ಅಭಿಲಾಷೆಯಿಂದ ಈ ರೀತಿ ಪ್ರಯತ್ನ ಮಾಡುವುದಿಲ್ಲವೋ ಅವನಿಗೆ ಸಮಾಧಿ ಎಂದೂ ದಕ್ಕುವುದಿಲ್ಲ. ವೈರಾಗ್ಯ ಮತ್ತು ಅಭ್ಯಾಸವೆಂಬ ಉಪಾಯದಿಂದ ಮನಸ್ಸನ್ನು ಮಣಿಸಿ ನಮಗೆ ಬೇಕಾದಂತೆ ಆ ಮನಸ್ಸಿನಿಂದ ಕೆಲಸವನ್ನೂ ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಸಮಾಧಿಯನ್ನು ಸಾಧಿಸಬಹುದು ಎನ್ನುವ ಭರವಸೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.

ಕೃಷ್ಣನ ಈ ಉತ್ತರದಲ್ಲಿ ನಮಗೆ ಧ್ಯಾನಕ್ಕೆ ಬೇಕಾದ ಉಪಾಯ ದೊರಕಿತು. ಆದರೆ ಈಗ ನಮ್ಮೆಲ್ಲರಿಗೆ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಅದೇನೆಂದರೆ ಸಂಸಾರದಲ್ಲಿರುವ ನಾವು ಒಂದು ವೇಳೆ ಸಾಧನೆಯ ಹಾದಿಯಲ್ಲಿ ಪೂರ್ಣ ಸಮಾಧಿಯನ್ನು ಸಾಧಿಸದೆ ಮಧ್ಯದಲ್ಲೇ ನಿಂತಿದ್ದರೆ ಅಥವಾ ಅರ್ಧ ಸಾಧನೆಯ ನಂತರ ನನ್ನ ಈ ಜನ್ಮ ಕೊನೆಗೊಡರೆ ಆಗ ನನ್ನ ಪಾಡೇನು? ಈ ಜನ್ಮದ ಸಾಧನೆ ವ್ಯರ್ಥವೋ? ನಾನು ಭಗವಂತನನ್ನು ಸೇರುವುದು ಅಸಾಧ್ಯವೋ? ನಮ್ಮ ಈ ಪ್ರಶ್ನೆಯನ್ನೇ ಮುಂದಿನ ಶ್ಲೋಕದಲ್ಲಿ  ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ.        

Sunday, May 29, 2011

Bhagavad Gita Chapter-06 Shloka 29-32

ಧ್ಯಾನ ಪ್ರಕ್ರಿಯೆಯನ್ನು ವಿವರಿಸಿದ ಕೃಷ್ಣ ಮುಂದಿನ ಶ್ಲೋಕದಲ್ಲಿ ಭಗವಂತನಲ್ಲಿ ಎಂತಹ ಗುಣದ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ದೇವರು ಎಂದರೆ ಎಲ್ಲೋ ಸತ್ಯಲೋಕದಿಂದಾಚೆಗಿನ ವೈಕುಂಠದಲ್ಲಿನ ಅಂತಃಪುರದ ಕೋಣೆಯಲ್ಲಿ ಕುಳಿತ ಒಬ್ಬ ವ್ಯಕ್ತಿ ಎಂದು ಅನುಸಂಧಾನ ಮಾಡುವುದಲ್ಲ. ದೇವರು ಎನ್ನುವ ಕಲ್ಪನೆ ಹಿಂದಿರುವ ನಿಜವಾದ ಅನುಸಂಧಾನ ಹೇಗಿರಬೇಕು  ಎನ್ನುವುದನ್ನು ಇಲ್ಲಿ ಕೃಷ್ಣ ವಿವರಿಸುತ್ತಾನೆ.

   ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾSತ್ಮನಿ
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ    ೨೯

ಸರ್ವ ಭೂತ ಸ್ಥಮ್ ಆತ್ಮಾನಮ್  ಸರ್ವ ಭೂತಾನಿ ಚ ಆತ್ಮನಿ
ಈಕ್ಷತೇ ಯೋಗ ಯುಕ್ತ ಆತ್ಮಾ ಸರ್ವತ್ರ ಸಮದರ್ಶನಃ –ಧ್ಯಾನಯೋಗಕ್ಕೆ ಬಗೆ ಸಜ್ಜುಗೊಂಡ ಸಾಧಕ ಎಲ್ಲ ಜೀವಿಗಳಲ್ಲು ಭಗವಂತನನ್ನು ಕಾಣುತ್ತಾನೆ ಮತ್ತು ಎಲ್ಲ ಜೀವಿಗಳನ್ನು ಭಗವಂತನಲ್ಲಿ ಕಾಣುತ್ತಾನೆ. ಎಲ್ಲೆಡೆ ಇರುವ ಭಗವಂತ ಏಕರೂಪನೆಂದು ಕಾಣುತ್ತಾನೆ.

ನಾವು ಭಗವಂತನನ್ನು ಬ್ರಹ್ಮ ಎನ್ನುತ್ತೇವೆ, ಪರಮಾತ್ಮ ಎನ್ನುತ್ತೇವೆ. ಏನು ಹಾಗೆಂದರೆ? ಎಲ್ಲ ಕಾಲದಲ್ಲೂ ಎಲ್ಲ ದೇಶದಲ್ಲೂ ತುಂಬಿರುವ ಬೃಹತ್ತಾದದ್ದು ಬ್ರಹ್ಮ. ಎಲ್ಲ ಕಡೆ ವ್ಯಾಪಿಸಿರುವ ಸರ್ವ ಗುಣಪೂರ್ಣನಾಗಿ ಕಾಲತಃ, ದೇಶತಃ, ಗುಣತಃ, ಶಕ್ತಿತಃ ಅನಂತವಾಗಿರುವವ ಪರಮಾತ್ಮ. ಇಲ್ಲಿ ಕೃಷ್ಣ ಹೇಳುತ್ತಾನೆ “ಸರ್ವಭೂತಸ್ಥಮಾತ್ಮಾನಂ”-ಅಂದರೆ ಸಮಸ್ತ ಜೀವಜಾತದೊಳಗೆ ಅಂತರ್ಯಾಮಿಯಾಗಿ ಬಿಂಬರೂಪಿ ಭಗವಂತನಿದ್ದಾನೆ. ಅಷ್ಟೇ ಅಲ್ಲ   “ಸರ್ವ ಭೂತಾನಿ ಚ ಆತ್ಮನಿ” ಅಂದರೆ ಸಮಸ್ತ ಜೀವಗಳೂ ಭಗವಂತನಲ್ಲಿವೆ. ಇದರ ಪೂರ್ಣ ಅರ್ಥ: ‘ಭಗವಂತ ನಮ್ಮ ಒಳಗೂ ಹೊರಗೂ ತುಂಬಿದ್ದಾನೆ’ ಎಂದು. ಇದು ನಾವು ಉಪಾಸನೆ ಮಾಡುವಾಗ ತಿಳಿದುಕೊಳ್ಳಬೇಕಾದ ಮುಖ್ಯವಾದ ಅಂಶ. ಒಬ್ಬ ಧ್ಯಾನಯೋಗದಲ್ಲಿರುವ ಸಾಧಕ ಭಗವಂತನ ಸರ್ವಗತತ್ವವನ್ನು ಕಾಣುವ ಬಗೆಯಿದು.
ಭಗವಂತ ಎಲ್ಲಾ ಜೀವದಲ್ಲೂ ತುಂಬಿದ್ದರೂ ಕೂಡಾ ಒಬ್ಬ ಸಾಧಕ ಆತನನ್ನು “ಸರ್ವತ್ರ ಸಮದರ್ಶನಃ”- ಅಂದರೆ ಏಕರೂಪದಲ್ಲಿ ಕಾಣುತ್ತಾನೆ. ಭಗವಂತನ ಅವತಾರ, ಆತನ ಆವೇಶ, ಸನ್ನಿಧಾನ, ಗುಣ, ಕೃತಿ, ರೂಪ ಎಲ್ಲವೂ ಅಖಂಡ. ಅದರಲ್ಲಿ ವೆತ್ಯಾಸವಿಲ್ಲ. ಎಲ್ಲವುದರ ಒಳಗೂ ಹೊರಗೂ ತುಂಬಿರುವ ಆತ ಏಕರೂಪನಾಗಿದ್ದಾನೆ. ಬೈಬಲ್ ನಲ್ಲಿ ಯಾರಾದರೂ ದೇವರ ಬಗ್ಗೆ ಹೇಳುವವರು ಏನು ಹೇಳುತ್ತಾರೆ ಎನ್ನುವಲ್ಲಿ ಹೀಗೆ ಹೇಳಿದ್ದಾರೆ “ If they say ‘the Kingdom is in the sky’ then the birds will precede you; if they say to you ‘It is in the sea’ then the fish will precede you. Rather ‘the Kingdom is inside of you and It is outside of you’. ಎಲ್ಲಾ ಗ್ರಂಥದ ತಾತ್ಪರ್ಯ ಒಂದೆ. ಹೀಗೆ ಭಗವಂತ ಸರ್ವಾಂತರ್ಯಾಮಿ ಮತ್ತು  ಸರ್ವಗತ ಎನ್ನುವ  ಅನುಸಂಧಾನ ನಮ್ಮ ನಿತ್ಯ  ಉಪಾಸನೆಯಲ್ಲಿರಬೇಕು.       
       
ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ           
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ       ೩೦

ಯಃ  ಮಾಮ್  ಪಶ್ಯತಿ ಸರ್ವತ್ರ ಸರ್ವಮ್  ಚ ಮಯಿ ಪಶ್ಯತಿ    
ತಸ್ಯ ಅಹಮ್  ನ ಪ್ರಣಶ್ಯಾಮಿ ಸಃ ಚ ಮೇ ನ ಪ್ರಣಶ್ಯತಿ –ಯಾರು ನನ್ನನ್ನು ಎಲ್ಲೆಡೆ ಕಾಣುತ್ತಾನೆ ಮತ್ತು ಎಲ್ಲವನ್ನು ನನ್ನಲ್ಲಿ ಕಾಣುತ್ತಾನೆ ಅವನಿಗೆ ನಾನು ಎರವಾಗಲಾರೆ; ಅವನೂ ನನಗೆ ಎರವಾಗಲಾರ.

ಮುಂದುವರಿದು ಕೃಷ್ಣ ಹೇಳುತ್ತಾನೆ: “ಯಾರು ಹೀಗೆ ನನ್ನನ್ನು ಎಲ್ಲರಲ್ಲಿಯೂ ಮತ್ತು ಎಲ್ಲರನ್ನು ನನ್ನಲ್ಲಿ ಕಾಣುತ್ತಾನೋ ಅವನಿಗೆ ನಾನೆಂದೂ ಇಲ್ಲವಾಗುವುದಿಲ್ಲ. ಸದಾ ಆತನ ಯೋಗ ಕ್ಷೇಮದ ಹೊಣೆ ನನ್ನದು. ಅದೇ ರೀತಿ ನಾನು ಆತನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ ಎನ್ನುವ ಎಚ್ಚರ ಸದಾ ಆತನಲ್ಲಿರುತ್ತದೆ” ಎಂದು. ಹೀಗೆ ಭಗವಂತನ ಅನ್ಯೋನ್ಯ ಸಂಬಂಧ, ದೇವರು ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ ಎನ್ನುವ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರುತ್ತದೆ. ಹಿಂದೆ ಹೇಳಿದಂತೆ ಭಗವಂತ ನಾವು ಆತನನ್ನು ಹೇಗೆ ನೋಡುತ್ತೆವೋ ಹಾಗೆ. ಈ ಕಾರಣದಿಂದ ನಮ್ಮಲ್ಲಿನ ಈ ಎಚ್ಚರದಿಂದ ಯಾವತ್ತೂ ಜೀವನದಲ್ಲಿ ಬಗೆಹರಿಯದಂತಹ ಸಮಸ್ಯೆ ನಮಗೆ ಬರುವುದಿಲ್ಲ. ಪ್ರರಾಬ್ಧಕರ್ಮದಿಂದ ಬಂದರೂ ಕೂಡಾ ಕಾಣದ ಕೈ ನಮ್ಮನ್ನು ಕೈ ಹಿಡಿದು ನಡೆಸುತ್ತಿರುವ ಅನುಭವವಾಗುತ್ತದೆ. ‘ನನ್ನನ್ನು ಕಾಪಾಡುವವನಿದ್ದಾನೆ  ಅವನು ನನ್ನ ಯೋಗ-ಕ್ಷೇಮವನ್ನು ನೋಡಿಕೊಳ್ಳುತ್ತಾನೆ, ನಾನೇಕೆ ಹೆದರಬೇಕು’ ಎನ್ನುವ ದೈರ್ಯ ಬರುತ್ತದೆ. ಕೆಟ್ಟ ಯೋಚನೆ ದೂರವಾಗುತ್ತದೆ. ಸಾಮಾಜಿಕ ಪ್ರತಿಕ್ರೀಯೆಗಳಿಗೆ, ಟೀಕೆ-ಟಿಪ್ಪಣಿಗಳಿಗೆ, ಅಪವಾದಗಳಿಗೆ, ನಿಂದನೆಗಳಿಗೆ, ಯಾವುದಕ್ಕೂ ವಿಚಲಿತನಾಗುವುದಿಲ್ಲ. ಭಗವಂತ ಕೈಬಿಟ್ಟ ಎನ್ನುವ ಸ್ಥಿತಿ ಭಕ್ತನಿಗೆ ಎಂದೂ ಬರುವುದಿಲ್ಲ. ಭಗವಂತ ಎಂದೂ ತನ್ನ ಆತ್ಮೀಯ ಭಕ್ತನಿಂದ ದೂರವಾಗುವುದಿಲ್ಲ. ಇದಕ್ಕಾಗಿ ಭಗವಂತನನ್ನು ‘ಭಕ್ತಪರಾಧೀನ’ ಎನ್ನುವುದು. ಈ ಕುರಿತು ಇನ್ನಷ್ಟು ವಿವರವಾಗಿ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.              

ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ
ಸರ್ವಥಾ ವರ್ತಮಾನೋSಪಿ ಸ ಯೋಗೀ ಮಯಿ ವರ್ತತೇ       ೩೧

ಸರ್ವಭೂತಸ್ಥಿತಂ ಯಃ  ಮಾಮ್  ಭಜತಿ ಏಕತ್ವಮ್ ಆಸ್ಥಿತಃ     
ಸರ್ವಥಾ ವರ್ತಮಾನಃ ಅಪಿ ಸಃ  ಯೋಗೀ ಮಯಿ ವರ್ತತೇ-ಎಲ್ಲಾ ಜೀವಿಗಳಲ್ಲಿರುವ ನನ್ನನ್ನು ಏಕರೀತಿಯಿಂದ ತಿಳಿದು ಪೂಜಿಸುವವನು ಯಾವ ಸ್ಥಿತಿಯಲ್ಲಿದ್ದರೂ ನನ್ನಲ್ಲಿ ಇರುತ್ತಾನೆ.

ಕೃಷ್ಣ ಹೇಳುತ್ತಾನೆ “ಸರ್ವಗತನಾದ ಭಗವಂತ ಎಲ್ಲ ಕಡೆ ಏಕರೂಪವಾಗಿದ್ದಾನೆ ಎನ್ನುವ ಅನುಸಂಧಾನ ಮತ್ತು ನಿರಂತರ ಭಕ್ತಿ ಇರುವ ಸಾಧಕ, ಆತ  ಹೇಗೇ ಇರಲಿ, ಅವನು ನನ್ನನ್ನು ಸೇರುವುದು ನಿಶ್ಚಿತ” ಎಂದು. ಅಪರೋಕ್ಷ ಜ್ಞಾನ ಪಡೆದವ ಭಗವಂತನಿಂದ ಎಂದೂ ದೂರ ಸರಿಯುವುದಿಲ್ಲ.  ಆತ ಮೋಕ್ಷವನ್ನು ಪಡೆದು ಭಗವಂತನಲ್ಲಿ  ನೆಲೆಸುತ್ತಾನೆ.

ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋSರ್ಜುನ           
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ     ೩೨

ಆತ್ಮಔಪಮ್ಯೇನ ಸರ್ವತ್ರ ಸಮಮ್  ಪಶ್ಯತಿ ಯಃ ಅರ್ಜುನ       
ಸುಖಮ್  ವಾ ಯದಿ ವಾ ದುಃಖಮ್  ಸಃ ಯೋಗೀ ಪರಮಃ ಮತಃ –ಸುಖವಿರಲಿ, ದುಃಖವಿರಲಿ, ಎಲ್ಲರ ಬೇಕು-ಬೇಡಗಳನ್ನು ತನ್ನ ಹಾಗೆಯೇ ಸಮಾನತೆಯಿಂದ ಕಾಣುವವನು, ಓ ಅರ್ಜುನ, ಬಹಳ ದೊಡ್ಡ ಸಾಧಕ ಎನ್ನುವುದು ತೀರ್ಮಾನ.

ಕೃಷ್ಣ ನಮಗೆ ಸಮದೃಷ್ಟಿ ಬಗ್ಗೆ ಹಿಂದೆ ಕೂಡಾ ಹೇಳಿದ್ದ. ಇಲ್ಲಿ ಮುಖ್ಯವಾಗಿ ಸಾತ್ವಿಕರೊಂದಿಗೆ, ಭಗವದ್ಭಕ್ತರೊಂದಿಗೆ ಒಬ್ಬ ಸಾಧಕ ಯಾವ ರೀತಿ ಸಮದರ್ಶನ ಬೆಳೆಸಿಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಿದ್ದಾನೆ. ಯೋಗಿಗಳಲ್ಲಿ ಶ್ರೇಷ್ಠನಾದವನು ತನ್ನಂತೆಯೇ ಇನ್ನೊಬ್ಬರು ಎಂದು ತಿಳಿದಿರುತ್ತಾನೆ. ನಮಗೆ ಯಾವುದು ದುಃಖವಾಗುತ್ತದೋ ಅದು ಇನ್ನೊಬ್ಬರಿಗೂ ದುಃಖವನ್ನು ಕೊಡುತ್ತದೆ ಎನ್ನುವ ಸತ್ಯವನ್ನು ಆತ ಅರಿತಿರುತ್ತಾನೆ.  ಎಲ್ಲರಿಗೂ ಸುಖ-ದುಃಖಗಳಿವೆ, ನನ್ನನಂತೆಯೇ ಅವರು ದುಃಖವನ್ನು ಇಷ್ಟಪಡುವುದಿಲ್ಲ ಎನ್ನುವ ಎಚ್ಚರದಿಂದ ಸಾಧಕ ವ್ಯವಹರಿಸುತ್ತಾನೆ. ಯಾರು ಇನ್ನೊಬ್ಬರ ನೋವನ್ನು ತನ್ನ ನೋವಿನಷ್ಟೇ ನೋವಿನಿಂದ ಕಾಣುತ್ತಾನೋ, ಯಾರು ಇನ್ನೊಬ್ಬರ ಸಂತೋಷವನ್ನು- ಯಶಸ್ಸನ್ನು ತನ್ನ ಯಶಸ್ಸೆಂದು ತಿಳಿದು ಖುಷಿ ಪಡುತ್ತಾನೋ- ಅವನು ಬಹಳ ದೊಡ್ಡ ಯೋಗ ಸಾಧಕ. 
ಭಗವದ್ಭಕ್ತರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ಆದ್ದರಿಂದ ಅವರ ಸುಖ-ದುಃಖಕ್ಕೆ ನಾವು  ಸ್ಪಂದಿಸಿದಾಗ ಅದು ಅವರೊಳಗಿನ ಭಗವಂತನ ಪೂಜೆಯಾಗುತ್ತದೆ.

ಈ ಅಧ್ಯಾಯದಲ್ಲಿ ಇಲ್ಲಿಯವರೆಗೆ ಧ್ಯಾನದ ಬಗ್ಗೆ ಕೃಷ್ಣ ವಿಸ್ತಾರವಾಗಿ ಹೇಳಿದ. ಕೃಷ್ಣನ ಈ ವಿವರಣೆಯಲ್ಲಿ ಎಲ್ಲರಿಗೂ ಕಾಣುವ ಒಂದೇ ಒಂದು ಸರ್ವೇ ಸಾಮಾನ್ಯ ಕಷ್ಟದ ವಿಷಯವೆಂದರೆ ‘ಚಂಚಲ ಮನಸ್ಸನ್ನು ಹೊಂದಿದ ನಾವು ಅದನ್ನು ನಿಯಂತ್ರಿಸಿ ಸಮದೃಷ್ಟಿ ಬೆಳೆಸಿಕೊಳ್ಳುವುದು’. ಇದು ನಿಜವಾಗಲೂ ಸಾಧ್ಯವೇ? ಮುಂದಿನ ಶ್ಲೋಕದಲ್ಲಿ ಅರ್ಜುನ ನಮ್ಮೆಲ್ಲರ ಪರ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಮಂಡಿಸುತ್ತಾನೆ.     

Saturday, May 28, 2011

Bhagavad Gita Kannada Chapter-06 Shloka 24-28

ಸಂಕಲ್ಪಪ್ರಭವಾನ್ ಕಾಮಾಂಸ್ತ್ಯಕ್ತ್ವಾ ಸರ್ವಾನಶೇಷತಃ
ಮನಸೈವೇದ್ರಿಯಗ್ರಾಮಂ ವಿನಿಯಮ್ಯ ಸಮಂತತಃ ೨೪
ಶನೈಃ ಶನೈರುಪರಮೇದ್ ಬುದ್ಧ್ಯಾ ಧೃತಿಗೃಹೀತಯಾ
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ ೨೫

ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ
ಮನಸಾ ಏವ ಇಂದ್ರಿಯ ಗ್ರಾಮಮ್  ವಿನಿಯಮ್ಯ ಸಮಂತತಃ ||
ಶನೈಃ ಶನೈಃ  ಪರಮೇತ್  ಬುದ್ಧ್ಯಾ ಧೃತಿ ಗೃಹೀತಯಾ
ಆತ್ಮಸಂಸ್ಥಮ್  ಮನಃ ಕೃತ್ವಾ ನ ಕಿಂಚಿತ್ ಅಪಿ ಚಿಂತಯೇತ್ –ಬಗೆಯಲ್ಲಿ ಮೂಡಿಬರುವ ಎಲ್ಲ ಬಯಕೆಗಳನ್ನೂ ಪೂರ್ತಿಯಾಗಿ ತೊರೆದುಬಿಡಬೇಕು; ಇಂದ್ರಿಯಗಳ ಗಡಣವನ್ನು ಎಲ್ಲೆಡೆಯಿಂದಲು ಮನೋಬಲದಿಂದಲೆ ಹಿಡಿತದಲ್ಲಿಡಬೇಕು; ಅಳುಕದ ವಿವೇಕ ಪ್ರಜ್ಞೆಯಿಂದ ಮೆಲಮೆಲನೆ ಬಗೆಯನ್ನು ವಿಷಯಗಳಿಂದ ಹೊರಳಿಸಬೇಕು; ಭಗವಂತನಲ್ಲಿರಿಸಬೇಕು. ಇರಿಸಿ ಮತ್ತೇನನ್ನೂ ಚಿಂತಿಸಬಾರದು.

ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವ ವಿಧಾನವನ್ನು ಮತ್ತೆ ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ:  “ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ”   ಎಂದು. ಇದರ ಹಿನ್ನೆಲೆಯನ್ನು ಹಿಂದೆ ನಾವು ನೋಡಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳ ಮೂಲ ನಮ್ಮ ಸಂಕಲ್ಪಗಳು. ಸಂಕಲ್ಪಗಳು ಎಂದರೆ ಮನಸ್ಸಿನಲ್ಲಿ ಏನೇನು ಮಾಡಬೇಕು ಎನ್ನುವ ತೀರ್ಮಾನ. ನಾವು ಯಾವುದೇ ಒಂದು ಕೆಲಸವನ್ನೂ ಮಾಡುವ ಮೊದಲು ಅದನ್ನು ಮಾನಸಿಕವಾಗಿ ಮಾಡುತ್ತೇವೆ. ಇಂದು ಇಲ್ಲಿಗೆ ಹೋಗಬೇಕು, ಇಂತವರನ್ನು ಭೇಟಿಯಾಗಬೇಕು, ಅಲ್ಲಿ ಇಂತಹದ್ದನ್ನು ಪಡೆಯಬೇಕು, ಇತ್ಯಾದಿ ವೇಳಾಪಟ್ಟಿ ನಮ್ಮ ಮನಸ್ಸಿನಲ್ಲಿ ನೆಟ್ಟಿರುತ್ತದೆ. ಈ ರೀತಿ ಸಾವಿರ ಸಂಕಲ್ಪಗಳು, ಅದನ್ನು ಈಡೇರಿಸಿಕೊಳ್ಳುವುದಕ್ಕೆ ಸಾವಿರ ಬಯಕೆಗಳು. ‘ಹೀಗೆ ಮಾಡಬೇಕು ಅದರಿಂದ ಹೀಗೇ ಆಗಬೇಕು ಎನ್ನುವ ಆಸೆಗಳು’. ಬದುಕು ಎಂದರೆ ನಾವು ನಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಬದುಕಿನ ರೂಪುರೇಷೆಯನ್ನು ಬಾಹ್ಯ ಪ್ರಪಂಚದಲ್ಲಿ ಸಾಕಾರಗೊಳಿಸುವ ಪ್ರಯತ್ನ. ಹೀಗೆ ಸಾವಿರಾರು ಸಂಕಲ್ಪ ಮತ್ತು ಕಾಮನೆಯನ್ನು  ಮನಸ್ಸಿನಲ್ಲಿ ತುಂಬುತ್ತಾ ಹೋದರೆ ಮನಸ್ಸಿಗೆ ಅದರಿಂದಾಚೆಗೆ ಯೋಚಿಸಲು ಅವಕಾಶವೇ ಇಲ್ಲವಾಗುತ್ತದೆ. ಮನಸ್ಸು ಎಂದರೆ ಬರೀ ಸಂಕಲ್ಪ-ವಿಕಲ್ಪ. ಏನೇನೋ ಕನಸು ಕಟ್ಟುವುದು(ಸಂಕಲ್ಪ),  ಮಾಡಬೇಕೋ ಬೇಡವೋ, ಮಾಡಿದರೆ ಯಶಸ್ವಿ ಆದೀತೋ ಇಲ್ಲವೋ (ವಿಕಲ್ಪ) ಎಂದು ಯೋಚಿಸುತ್ತ ಅದರಿಂದ ಗೊಂದಲಕ್ಕೊಳಗಾಗುವುದು-ಇದರಿಂದಾಚೆಗೆ ಮನಸ್ಸು ಹೋಗುವುದೇ ಇಲ್ಲ. ಕೃಷ್ಣ ಹೇಳುತ್ತಾನೆ “ಮೊದಲು ನಿನ್ನ ಸಂಕಲ್ಪಗಳನ್ನು ಬಿಟ್ಟುಬಿಡು” ಎಂದು. ಈ ಸಂಕಲ್ಪಗಳು ತಿರುಕನ ಕನಸಿನಂತೆ. ಎಷ್ಟು ಹೆಚ್ಚು ಸಂಕಲ್ಪ ನಮ್ಮ ಮನಸ್ಸಿಗೆ ಬರುತ್ತದೆ ಅಷ್ಟೇ ಹತಾಶೆ ಹೆಚ್ಚಾಗುತ್ತದೆ, ಅದರಿಂದ ವ್ಯಾಕುಲತೆ. ನಂತರ ಏನನ್ನೂ ಯೋಚಿಸಲು ಆಗುವುದಿಲ್ಲ!
ಬಯಸುವುದು ಮನಸ್ಸಿನ ಸಹಜ ಗುಣ, ಬಯಸದೆ ಬದುಕಿಲ್ಲ. ಅದಕ್ಕಾಗಿ ಏನು ಬರುತ್ತದೋ ಅದು ಬರಲಿ ಎಂದು ಬಯಸುವುದನ್ನು ಕಲಿತು ನಮ್ಮ ಇತರ ಸಂಕಲ್ಪ ವಿಕಲ್ಪವನ್ನು ಬಿಟ್ಟುಬಿಡಬೇಕು- ಇದು ಯಶಸಿನ ಸೂತ್ರ. ಬಯಸಿದ್ದು ಸಿಗುವುದಿಲ್ಲ, ಬಯಸಿದಂತೆ ಆಗುವುದಿಲ್ಲ ಎಂದ ಮೇಲೆ ಅನಗತ್ಯ ಕನಸಿನ ಗೋಪುರ ಕಟ್ಟುವುದರಲ್ಲಿ ಯಾವ ಅರ್ಥವೂ ಇಲ್ಲ. ನಮ್ಮ ಸಂಕಲ್ಪ ಕೇವಲ ಒಂದೇ ಒಂದು ‘ಭಗವಂತನ ಸಂಕಲ್ಪ ಹೇಗೋ ಹಾಗೆ’. ದ್ವಾದಶ ಸ್ತೋತ್ರದಲ್ಲಿ ಶ್ರೀ ಮಧ್ವಾಚಾರ್ಯರು ಹೇಳುವಂತೆ:

ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದ ವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ ಪಿತೃಮಾತೃಗತಿಃ || ೩-೧ ||

ನಿನ್ನ ಪಾಲಿನ ಕರ್ಮ ಮಾಡು, ಬಂದುದನ್ನುಣ್ಣು. ಹರಿಯ ಚರಣದ ಅರಿವು ತಪ್ಪದಿರಲಿ. ನನ್ನದು ಎನ್ನುವ ಪ್ರತ್ಯೇಕ   ಸಂಕಲ್ಪ ಬೇಡ. ವೇದದಲ್ಲಿ ಹೇಳುವಂತೆ ‘ಭಗವಂತನ ಕಾಮನೆಯೇ ನನ್ನ ಕಾಮನೆಯಾಗಲಿ, ಆತನ ಇಚ್ಛೆಯೇ ನನ್ನ ಇಚ್ಛೆಯಾಗಲಿ, ಅದರಿಂದ ನನ್ನ ಕಾಮನೆ ಭಗವಂತನ ಕಾಮನೆಗೆ ಶ್ರುತಿಗೂಡಲಿ’. ಹೀಗೆ ಆದಾಗ ಅಪಸ್ವರ ಹೊರಡುವುದಿಲ್ಲ. ನಮ್ಮ ಬಯಕೆ ಭಗವಂತನ ಇಚ್ಛೆಗೆ ಅನುರಣನವಾದಾಗ(State of Resonance)   ಬಾಳಿನ ಸಂಗೀತದಲ್ಲಿ ಮಾಧುರ್ಯ ನಿರ್ಮಾಣವಾಗುತ್ತದೆ. ಕೃಷ್ಣ ಹೇಳುತ್ತಾನೆ “ಸರ್ವಾನ್ ಅಶೇಷತಃ” ಎಂದು. ಅಂದರೆ ನಿನ್ನೆಲ್ಲಾ ಸಂಕಲ್ಪವನ್ನು  ಪೂರ್ಣವಾಗಿ ಬಿಡು ಎಂದು. ಭಗವಂತನ ಇಚ್ಚೆಗೆ ವಿರುದ್ಧವಾದ ಒಂದೂ ಸಂಕಲ್ಪ ನಮ್ಮಲ್ಲಿರಬಾರದು. ‘ನೀನು(ಭಗವಂತ) ಏನು ಬಯಸಿದೆಯೋ ಅದೇ ನನ್ನ ಸಂಕಲ್ಪ’-ಇದು ಒಬ್ಬ ಯೋಗಿ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕಾದ ಏಕೈಕ ಸಂಕಲ್ಪ.
ಸಂಕಲ್ಪ ಎಲ್ಲಿ ಹುಟ್ಟುತ್ತದೋ ಅಲ್ಲೇ ಅದನ್ನು ತಡೆಯಬೇಕು. ಇದನ್ನು ತಡೆಯಬೇಕು ಎಲ್ಲಿಂದ ಎಂದರೆ ಮನಸ್ಸಿನಿಂದಲೇ! ನಾವು ನಮ್ಮ ಮನಸ್ಸಿಗೆ ನಿರಂತರ ಈ ರೀತಿ ಹೇಳಬೇಕು “ನೀನು ಹುಚ್ಚು ಸಂಕಲ್ಪ ಮಾಡಬೇಡ, ಮಾಡಿದರೆ ಅದು ನಿನಗೆ ಸಿಗುವುದಿಲ್ಲ. ನಂತರ ಸಿಗಲಿಲ್ಲ ಎಂದು ಚಡಪಡಿಸಬೇಕಾಗುತ್ತದೆ- ಆದ್ದರಿಂದ ಈ ಹುಚ್ಚು ಸಂಕಲ್ಪಗಳನ್ನು ಬಿಡು” ಎಂದು. ಈ ರೀತಿ ಮನಸ್ಸಿಗೆ ನಿರಂತರ ಹೇಳಿ (Auto Suggestion) ಅದನ್ನು ಪಳಗಿಸಬೇಕು. ಸಾಧಕನನ್ನು ದಾರಿ ತಪ್ಪಿಸುವುದೂ ಮನಸ್ಸು, ದಾರಿ ಹೆಚ್ಚಿಸುವುದೂ ಮನಸ್ಸು. ಆದ್ದರಿಂದ ಮನಸ್ಸಿಗೆ ನಿರಂತರ ಈ ರೀತಿ ಹೇಳುತ್ತಾ ಇದ್ದರೆ ಅದು ಕೊನೆಗೆ ಅದನ್ನು  ಒಪ್ಪಿಕೊಳ್ಳುತ್ತದೆ.
ನಾವು ನಮ್ಮ ಹುಚ್ಚು ಸಂಕಲ್ಪವನ್ನು ಬಿಡಬೇಕಾದರೆ ಮೊದಲು ನಮ್ಮ ಇಂದ್ರಿಯ ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನಾವು ನಮ್ಮಲ್ಲಿ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಹಿಂದೆ ಚಿಕ್ಕ ಮಕ್ಕಳಿಗೆ ಅನೇಕ ಅಧ್ಯಾತ್ಮಿಕ ಸಂಸ್ಕಾರವನ್ನು ಹೇಳಿಕೊಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಮನಸ್ಸು ಹಸಿ ಮಣ್ಣಿನಂತೆ, ಏನು ಹೇಳಿದರೂ ಅದರ ಯಥಾರ್ಥ ಗ್ರಹಣವಾಗುತ್ತದೆ. ಮನಸ್ಸಿನ ಗುಣವೆಂದರೆ ಅದನ್ನು ನಾವು ಒಂದು ಕಡೆ ನಿರ್ಬಂಧ ಮಾಡಿದಾಗ ಅದು ಇನ್ನೊಂದು ಕಡೆ ಜಾರಿ ನುಣುಚಿಕೊಳ್ಳುತ್ತದೆ. ಕೃಷ್ಣ ಹೇಳುತ್ತಾನೆ “ಮನಸ್ಸನ್ನು ಜಾರಲು ಬಿಡಬೇಡ, ಎಲ್ಲ ಸಂಕಲ್ಪವನ್ನು ತ್ಯಾಗ ಮಾಡಿ ಭಗವಂತ ಒದಗಿಸಿಕೊಟ್ಟಿದ್ದನ್ನು ಭಗವದ್ ಪ್ರಸಾದವೆಂದು ಸ್ವೀಕರಿಸು, ಸಂತೋಷವಾಗಿ ಅದನ್ನು ಭೋಗಿಸು-ಅನುಭವಿಸು, ಇಲ್ಲದ್ದನ್ನು ಬೇಕು ಎಂದು ಬಯಸಿ ಕೊರಗಬೇಡ” ಎಂದು.
ಈ ಹಿಂದೆ ಹೇಳಿದಂತೆ ಮನಸ್ಸನ್ನು ಒಮ್ಮೆಗೆ ತಿರುಗಿಸಲು ಬರುವುದಿಲ್ಲ. ಅದನ್ನು ಬಹಳ ನಿದಾನವಾಗಿ ತಿರುಗಿಸಬೇಕು. ಮೆಲ್ಲ-ಮೆಲ್ಲನೆ ಆ ಉತ್ಕೃಷ್ಟ ಆನಂದಕ್ಕೆ ಮನಸ್ಸನ್ನು ತಿರುಗಿಸಬೇಕು. ಇದಕ್ಕಾಗಿ “ನಿನ್ನ ವಿಶ್ಲೇಷಕ ಬುದ್ಧಿಯನ್ನು ಬಳಸು” ಎನ್ನುತ್ತಾನೆ ಕೃಷ್ಣ. ಇದಕ್ಕೆ ಛಲ ಬೇಕು ಧೈರ್ಯ ಬೇಕು. ಗುರಿ ಮುಟ್ಟುವ ತನಕ ನಾನು ವಿಚಲಿತನಾಗಲಾರೆ ಎನ್ನುವ ಬುದ್ಧಿ(conviction), ಧೃತಿ(courage) ಬಹಳ ಮುಖ್ಯ. ಹೀಗೆ ತರ್ಕವನ್ನು ಮೀರಿ ತರ್ಕಾತೀತ ಭಗವಂತನತ್ತ ಮನಸ್ಸನ್ನು ತಿರುಗಿಸಬೇಕು.ಮನಸ್ಸು ಮೊದಲು ನಮ್ಮ  ಸ್ವರೂಪವನ್ನು ಗುರುತಿಸಿ ಅಲ್ಲಿ ನೆಲೆನಿಂತು ಆ ನಂತರ ಸ್ವರೂಪದಲ್ಲಿರುವ ಭಗವಂತನಲ್ಲಿ ನೆಲೆ ನಿಲ್ಲಬೇಕು. ಒಮ್ಮೆ ನೆಲೆ ನಿಂತ ಮನಸ್ಸನ್ನು ಬೇರೆ ಯಾವುದೇ ಚಿಂತೆಗೆ ಒಡ್ಡದೆ ಅದನ್ನು ಅಲ್ಲೇ ನೆಲೆಗೊಳಿಸಬೇಕು.                        

ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ೨೬

ಯತಃ ಯತಃ ನಿಶ್ಚರತಿ ಮನಃ ಚಂಚಲಮ್ ಅಸ್ಥಿರಮ್
ತತಃ ತತಃ  ನಿಯಮ್ಯ ಏತತ್ ಆತ್ಮನಿ ಏವ ವಶಮ್  ನಯೇತ್ –ಗಟ್ಟಿಗೊಳ್ಳದೆ ಎತ್ತೆತ್ತ ಸರಿಯುವ ಬಗೆ ಯಾವೆಡೆಯೆಲ್ಲ ಹರಿಯಿತು ಆಯಾ ಕಡೆಯಿಂದ ಮತ್ತೆ ಹೊರಳಿಸಿ ಭಗವಂತನಲ್ಲೆ ನಿಲ್ಲುವಂತೆ ಹಿಡಿತಕ್ಕೆ ತರಬೇಕು.

ನಮ್ಮ ಮನಸ್ಸು ಬಹಳ ಚಂಚಲ. ಈ ಕಾರಣದಿಂದ ಅದು ಎಲ್ಲೆಡೆ ಹರಿಯುತ್ತಿರುತ್ತದೆ. ಅದು ಎಲ್ಲಿ ಎಲ್ಲಿ ಜಾರುತ್ತದೋ ಅಲ್ಲಿ ಅಲ್ಲಿ ಭಗವಂತನೆಂಬ ಒಡ್ಡು ಹಾಕಿ ಅದನ್ನು ಭಗವಂತನಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಇದಕ್ಕೆ ನಿರಂತರ ಪ್ರಯತ್ನ ಅಗತ್ಯ.

ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್      
ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್ ೨೭

ಪ್ರಶಾಂತ ಮನಸಮ್ ಹಿ ಎನಮ್  ಯೋಗಿನಮ್  ಸುಖಮ್ ಉತ್ತಮಮ್ 
ಉಪೈತಿ ಶಾಂತರಜಸಮ್  ಬ್ರಹ್ಮಭೂತಮ್ ಅಕಲ್ಮಷಮ್ –ವಿಷಯಗಳತ್ತ ಹರಿಯದೆ ಹಾಯಾದ ಬಗೆಯವನನ್ನು, ರಜೋಗುಣದ ಬಿಸಿಯಳಿದು ತಿಳಿಯಾದವನನ್ನು, ಭಗವಂತನಲ್ಲೆ ನೆಲೆನಿಂತ ಇಂಥ ಯೋಗಿಯನ್ನು ಸುಖದ ಸುಗ್ಗಿ ನುಗ್ಗಿ ಬರುತ್ತದೆ.

ಒಮ್ಮೆ ನಮ್ಮ ಮನಸ್ಸು ಭಗವಂತನಲ್ಲಿ ನೆಲೆ ನಿಂತಿತೆಂದರೆ ಗೊಂದಲದ ಗೂಡಾದ ಮನಸ್ಸು ಪ್ರಶಾಂತವಾಗುತ್ತದೆ. ಇದನ್ನು ಸಾಧಿಸಿದ ವ್ಯಕ್ತಿ ಎಂತಹ ಸನ್ನಿವೇಶದಲ್ಲೂ ಉದ್ವೇಗಕ್ಕೊಳಗಾಗುವುದಿಲ್ಲ. ಜೀವನದಲ್ಲಿ ನಾವು ಅನುಭವಿಸಬೇಕಾದ ನಿಜವಾದ ಶ್ರೇಷ್ಠ ಸುಖ ಏನು ಎನ್ನುವುದು ಈ ಸ್ಥಿತಿಯಲ್ಲಿ ತಿಳಿಯುತ್ತದೆ. ಮನಸ್ಸು ಸಾಮಾನ್ಯವಾಗಿ ಬಯಸುವ ರಾಜಸ ಸುಖದಲ್ಲಿ ಇರುವ ನಿರಾಶೆ ಇಲ್ಲಿ ಎಂದೂ ಇರದು. ಈ ಸ್ಥಿತಿಯಲ್ಲಿ ನಾವು ಸ್ವಚ್ಚವಾಗುತ್ತೇವೆ. ಇದು ನಿಜವಾದ ಮಡಿ. ಮನಸ್ಸಿನ ಸ್ವಚ್ಚತೆಯನ್ನು ಸಾಧಿಸದೆ ಬಾಹ್ಯ ಮಡಿ ಮಾಡುವುದರಿಂದ ಯಾವ ಉಪಯೋಗವೂ ಇಲ್ಲ.ಶುದ್ಧವಾದ ಮನಸ್ಸಿಗೆ ಯಾವುದೂ ಮೈಲಿಗೆ ಅಲ್ಲ! ಮನಸ್ಸು ಮಡಿಯಾದರೆ ಅವನು ಮೈಲಿಗೆಯಾಗುವ ಸಾಧ್ಯತೆ ಇಲ್ಲ. ಇದು ಮಾನವ ತನ್ನ ಜೀವಮಾನದಲ್ಲಿ ಪಡೆಯಬಹುದಾದ ಪರಮಾನಂದದ ಸ್ಥಿತಿ.

ಯುಂಜನ್ ಏವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಮತ್ಯಂತಂ ಸುಖಮಶ್ನುತೇ    ॥೨೮॥

ಯುಂಜನ್ ಏವಮ್  ಸದಾ ಆತ್ಮಾನಮ್  ಯೋಗೀ ವಿಗತ ಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಮ್ ಅತ್ಯಂತಮ್  ಸುಖಮಶ್ನುತೇ-ಹೀಗೆ ಕೊಳೆಯಳಿದು ಸದಾ ಭಗವಂತನನ್ನು ಧ್ಯಾನಿಸುವ ಸಾಧಕನು ಹಾಯಾಗಿ ಭಗವದನುಭವದ ಪರಮ ಸುಖವನ್ನು ಉಣ್ಣುತ್ತಾನೆ.

ಭಗವದ್ ಅನುಭೂತಿ ಆದಾಗ ಆಗುವ ಅಂತರಂಗದ ಆನಂದವನ್ನು ಇನ್ನೊಂದು ರೀತಿಯಲ್ಲಿ ಕೃಷ್ಣ ಇಲ್ಲಿ  ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ “ಯುಂಜನ್ ಏವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ” ಎಂದು. ಕೃಷ್ಣನ ಈ ನುಡಿಯನ್ನು ಎರಡು ರೂಪದಲ್ಲಿ ಕಾಣಬಹುದು. ಮೊದಲನೆಯದಾಗಿ  “ವಿಗತಕಲ್ಮಷ ಸನ್ ಆತ್ಮಾನಂ ಯುಂಜನ್” ಹಾಗು ಎರಡನೆಯದಾಗಿ “ಆತ್ಮಾನಂ ಯುಂಜನ್ ಸನ್  ವಿಗತಕಲ್ಮಷಃ”. ನಾವು ಮೊದಲು ವಿಗತಕಲ್ಮಶವಾದ ಮನಸ್ಸಿನಿಂದ ಭಗವಂತನನ್ನು ಕಾಣಬೇಕು, ನಂತರ ಭಗವಂತನನ್ನು ಧ್ಯಾನ ಮಾಡುತ್ತಾ ವಿಗತಕಲ್ಮಷರಾಗಬೇಕು. ಭಗವಂತನ ಧ್ಯಾನಕ್ಕೊಸ್ಕರ ಮನಸ್ಸನ್ನು ಸ್ವಚ್ಛಗೊಳಿಸಿ ಒಮ್ಮೆ ಭಗವಂತನನ್ನು ಕಾಣಬಹುದು ಆದರೆ ಭಗವಂತನ ಅನುಭವದಿಂದ ಕೆಳಗಿಳಿದ ತಕ್ಷಣ ತಾಮಸ ಆವೇಶ ನಮ್ಮ ಮನಸ್ಸನ್ನು ಕೆಡಿಸಬಹುದು. ಅದಕ್ಕಾಗಿ ಸದಾ ಭಗವದ್ ಅನುಭೂತಿಯಲ್ಲೇ ನೆಲೆಗೊಳ್ಳಬೇಕು. ಇದರರ್ಥ ದಿನದ ಇಪತ್ನಾಲ್ಕು ಗಂಟೆ ಧ್ಯಾನದಲ್ಲೇ ಇರಬೇಕು ಎಂದಲ್ಲ, ಬದಲಾಗಿ ಸದಾ  ಭಗವಂತನ ಗುಂಗಿನಲ್ಲಿರುವುದು. ಹೀಗಿದ್ದಾಗ ಮನಸ್ಸು ನಿರಂತರ ಸ್ವಚ್ಛವಾಗಿರುತ್ತದೆ. ಹೀಗೆ ಭಗವದ್ಪ್ರಜ್ಞೆ ಗಟ್ಟಿಗೊಂಡಾಗ ಸಾಧಕ ಅನಾಯಾಸವಾಗಿ ಭಗವಂತನನ್ನು ನೇರವಾಗಿ ಕಾಣುವ ಅತ್ಯಂತ ಸುಖಾನುಭವವನ್ನು ಪಡೆಯತ್ತಾನೆ.

Thursday, May 26, 2011

Bhagavad Gita Kannada Chapter-06, Shloka -20-23


ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ ।
ಯತ್ರ ಚೈವಾSತ್ಮನಾSSತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ     ॥೨೦॥

ಯತ್ರ ಉಪರಮತೇ ಚಿತ್ತಮ್ ನಿರುದ್ಧಮ್ ಯೋಗ ಸೇವಯಾ।
ಯತ್ರ ಚ ಏವ ಆತ್ಮನಾ ಆತ್ಮಾನಮ್  ಪಶ್ಯನ್ ಆತ್ಮನಿ ತುಷ್ಯತಿ ||

ಸುಖಮ್ಮಾತ್ಯಂತಿಕಂ ಯತ್ತದ್ ಬುದ್ಧಿ ಗ್ರಾಹ್ಯಮತೀಂದ್ರಿಯಮ್ ।
ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ                 ॥೨೧॥

ಸುಖಮ್ ಆತ್ಯನ್ತಿಕಮ್  ಯತ್ ತತ್  ಬುದ್ಧಿ ಗ್ರಾಹ್ಯಮ್ ಅತೀಂದ್ರಿಯಮ್ ।
ವೇತ್ತಿ ಯತ್ರ ನ ಚ ಏವ ಅಯಮ್  ಸ್ಥಿತಃ  ಚಲತಿ  ತತ್ತ್ವತಃ ||

ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ।
ಯಸ್ಮಿನ್ ಸ್ಥಿತೋ  ನ ದುಃಖೇನ ಗುರುಣಾSಪಿ ವಿಚಾಲ್ಯತೇ    ॥೨೨॥

ಯಮ್  ಲಬ್ಧ್ವಾ ಚ ಅಪರಮ್  ಲಾಭಮ್  ಮನ್ಯತೇ ನ ಅಧಿಕಮ್  ತತಃ ।
ಯಸ್ಮಿನ್ ಸ್ಥಿತಃ ನ ದುಃಖೇನ ಗುರುಣಾ ಅಪಿ ವಿಚಾಲ್ಯತೇ  ||

ತಂ ವಿದ್ಯಾದ್ ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್ ।
ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣಚೇತಸಾ      ॥೨೩॥

ತಮ್  ವಿದ್ಯಾತ್ ದುಃಖಸಂಯೋಗ ವಿಯೋಗಮ್  ಯೋಗಸಂಜ್ಞಿತಮ್ ।
ಸಃ ನಿಶ್ಚಯೇನ ಯೋಕ್ತವ್ಯಃ ಯೋಗಃ ಅನಿರ್ವಿಣ್ಣಚೇತಸಾ ||

ಧ್ಯಾನ ಸಾಧನೆಯಿಂದ ಬಿಗಿಗೊಂಡ ಒಳಬಗೆ ಈ ಸ್ಥಿತಿಯಲ್ಲಿ ಹೊರಗಣ ವಿಷಯಗಳತ್ತ ಹರಿಯದು. ಇಲ್ಲಿ ತನ್ನೊಳಗೆಯೆ ಬಗೆಯಿಂದ[ಭಗವಂತನ ಹಸಾದದಿಂದ] ಭಗವಂತನನ್ನು ಕಾಣುತ್ತ ಸಂತಸಗೊಳ್ಳುತ್ತಾನೆ.ಇಲ್ಲಿ ಇಂದ್ರಿಯಗಳಿಂದ ದೊರಕದ, ಒಳಬಗೆಯಲ್ಲಿ ಅರಳುವ ಅತಿಶಯವಾದ ಆನಂದವನ್ನು ಅನುಭವಿಸುತ್ತಾನೆ. ಈ ಸ್ಥಿತಿಯಲ್ಲಿ ನಿಂತವನು ಎಂದೂ ಭಗವಂತನಿಂದ ಕದಲುವುದಿಲ್ಲ. ಇದನ್ನು ಪಡೆದ ಮೇಲೆ ಇನ್ನಾವ ಗಳಿಕೆಯೂ ಇದಕ್ಕಿಂತ ಮಿಗಿಲೆನಿಸುವುದಿಲ್ಲ. ಇಲ್ಲಿ ನಿಂತವನು ಎಂಥ ಹಿರಿಯ ದುಗುಡದಿಂದಲೂ ಕಂಗೆಡುವುದಿಲ್ಲ. ಇದೇ ಎಲ್ಲ ದುಗುಡಗಳಿಂದ ಬಿಡುಗಡೆಗೊಳಿಸುವ ಯೋಗವೆಂದರಿಯಬೇಕು. ವಿಷಯಗಳಿಂದ ಬೇಸತ್ತು ಬೆನ್ನು ತಿರುಗಿಸಿದವನು ಅವಶ್ಯವಾಗಿ ಈ ಯೋಗದಲ್ಲಿ ಪಳಗಬೇಕು.

ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡು ಮನಸ್ಸು ಭಗವಂತನಲ್ಲಿ ನೆಲೆಸಿದಾಗ ಏನಾಗುತ್ತದೆ ಎಂದರೆ- ಕೃಷ್ಣ ಹೇಳುತ್ತಾನೆ: ಉಪರಮತೇ ಚಿತ್ತಮ್ಅಂದರೆ ಉತ್ಕೃಷ್ಟವಾದ ಆ ಆನಂದದಲ್ಲೇ ಮನಸ್ಸು  ನಿಂತುಬಿಡುತ್ತದೆ. ಆ ಆನಂದದ ಸೆಲೆಯಿಂದ ಬೇರೆಯಾಗುವುದು ಬೇಡ ಎನ್ನುವ ಭಾವನೆ ಬಂದುಬಿಡುತ್ತದೆ. ಸಾಮಾನ್ಯವಾಗಿ ತಕ್ಷಣ ಈ ಸ್ಥಿತಿಗೆ ಮನಸ್ಸು ಹೋಗುವುದಿಲ್ಲ. ಅದಕ್ಕೆ ಬಹಳ ಪ್ರಯತ್ನ ಬೇಕು. ಪ್ರಯತ್ನ ಒಂದು ಜನ್ಮದಲ್ಲ ಅನೇಕ ಜನ್ಮದ ಪ್ರಯತ್ನವಿಲ್ಲದೆ ಒಮ್ಮೆಗೆ ಈ ಸ್ಥಿತಿಯನ್ನು ತಲುಪುವುದು ಅಸಾಧ್ಯ. ನಿರಂತರ ಯೋಗಾಭ್ಯಾಸದ ಸಾಧನೆಯಿಂದ ಚಿತ್ತ ವೃತ್ತಿಯನ್ನು ನಿರೋಧ ಮಾಡಬೇಕು. ಅಂದರೆ ನಮ್ಮ  ಮನಸ್ಸನ್ನು ತಡೆಹಿಡಿಯಬೇಕು. ಅದು ಎಲ್ಲಿಯೂ ಹರಿಯದಂತೆ ಒಡ್ಡುಹಾಕಿ ಅದು ಭಗವಂತನಲ್ಲೇ ನೆಲೆನಿಲ್ಲುವಂತೆ ಮಾಡಬೇಕು.
ನಮಗೆ ಆತ್ಮಸಾಕ್ಷಾತ್ಕಾರವಾದಾಗ ಎಂದೂ ಆಗದ ಅಪೂರ್ವ ಆನಂದವಾಗುತ್ತದೆ. ಇದು ಅತ್ಯಂತ ಶ್ರೇಷ್ಠವಾದ ಆನಂದದ ಅನುಭವ.  ಭಗವಂತನ ಬಗ್ಗೆ ಭಕ್ತನ ಭಕ್ತಿ ಹಾಗು ಭಕ್ತನ ಮೇಲೆ ಭಗವಂತನ ವಾತ್ಸಲ್ಯ ಇವೆರಡೂ ಮೇಳವಿಸಿದಾಗ  ನಿರ್ಭಯ’.  ಒಳಗಣ್ಣಿನಿಂದ  ಧ್ಯಾನದ ಸ್ಥಿತಿಯಲ್ಲಿ ಅಂತರ್ಯಾಮಿಯಾದ ಭಗವಂತನನ್ನು ಕಾಣುವುದು ಧ್ಯಾನದಲ್ಲಿ  ಬರುವ ಅನುಭವ. ಇಲ್ಲಿ ನಮಗೆ ಕಾಣುವುದು ಮನಸ್ಸು ಕಡೆದ ಆ ಭಗವಂತನ ಭವ್ಯ ರೂಪ. ಇದು ಕೇವಲ ಭಗವಂತನ ಪ್ರತೀಕ. ನಾವು ಭಗವಂತನನ್ನು ನಿಜವಾಗಿ ಕಾಣಬೇಕಾದರೆ ಅವನು ನಮ್ಮನ್ನು ಪ್ರೀತಿಸಬೇಕು. ಭಗವದ್ ಅನುಗ್ರಹವಾದಾಗ ನಮ್ಮ ಸ್ವರೂಪ ಭಗವಂತನನ್ನು ಕಾಣುತ್ತದೆ. ಇದು ಬಹಳ ಉತ್ಕಟವಾದ ಸ್ಥಿತಿ. ಈ ಸ್ಥಿತಿಯಲ್ಲಿ ಮನಸ್ಸು ಸಂಪೂರ್ಣ ಸ್ತಬ್ಧವಾಗಿ ನೇರವಾಗಿ ಆತ್ಮಸ್ವರೂಪ ತನ್ನ ಆತ್ಮಸ್ವರೂಪದ ಕಣ್ಣಿನಿಂದ ಭಗವಂತನನ್ನು ಕಾಣುತ್ತದೆ. ಈ ಸ್ಥಿತಿ ಸಂಪೂರ್ಣ ತೃಪ್ತಿಯನ್ನು ಕೊಡಬಲ್ಲದು. ಇಂದ್ರಿಯಗಳಿಂದ ಸಿಗುವ ಆನಂದ ಸಾಪೇಕ್ಷ  ಎನ್ನುವ ನಿಜ ಆ ಹಂತದಲ್ಲಿ ತಿಳಿಯುತ್ತದೆ. ಈ ಉತ್ಕಟವಾದ ಆನಂದವನ್ನು ಅನುಭವಿಸಿದ ಮೇಲೆ ಮತ್ತೆ ಮೇಲೇರಬೇಕು ಅಥವಾ ಕೆಳಗಿಳಿಯಬೇಕು ಎನ್ನುವ ಬಯಕೆ ಇಲ್ಲ. ಭಗವಂತನ ಪೂರ್ಣ ಅನುಭವ ಬಂದಾತ ಯಾವ ಪ್ರಾಪಂಚಿಕ ದುಃಖದಲ್ಲೂ  ಎಂದೂ ವಿಚಲಿತನಾಗುವುದಿಲ್ಲ. ಇದು ಮಾನವ ಜೀವನದಲ್ಲಿ ಪಡೆಯಬಹುದಾದ ಅತೀ ಎತ್ತರದ ಸ್ಥಿತಿ. ನಾವು ನಿಜವಾದ ಆನಂದವನ್ನು ಕಾಣಬೇಕಾದರೆ ಈ ಉತ್ಕಟವಾದ ಸ್ಥಿತಿಯನ್ನು ತಲುಪಬೇಕು.
ಮೇಲೆ ಹೇಳಿದ ವಿಚಾರವನ್ನು ಕೇಳಿ ಕೆಲವರು ಭ್ರಮೆಗೊಳಗಾಗಿ ಒಮ್ಮೆಗೆ ಎಲ್ಲವನ್ನೂ ಬಿಟ್ಟು ಈ ಸ್ಥಿತಿಯನ್ನು ತಲುಪುವ ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ ಹಾಗೆ ಮಾಡಿದರೆ ಎಂದೂ ಯಶಸ್ಸು ಸಿಗದು. ಕೇವಲ ನಿರಂತರ ಸಾಧನೆಯಿಂದ ಮಾತ್ರ ಈ ಆನಂದವನ್ನು ಪಡೆಯಲು ಸಾಧ್ಯ. ಜೀವನದ ಸುಖವನ್ನು ಅನುಭವಿಸಿ, ಪ್ರಾಪಂಚಿಕ ಸುಖ ಸಾಕು ಎಂದು ಕಾಣಿಸಿದಾಗ ಅಧ್ಯಾತ್ಮದ ಆಳಕ್ಕಿಳಿಯುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಅಪಾಯ.

Monday, May 23, 2011

Bhagavad Gita Kannada Chapter-06 Shloka 16-19

ಸಮಾಧಿಯನ್ನು ಅಭ್ಯಾಸ ಮಾಡುವವರ ಜೀವನಕ್ರಮ ಹೇಗಿರಬೇಕು ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ. ಈ ಜೀವನಕ್ರಮ ಕೇವಲ ಧ್ಯಾನಕ್ಕೆ  ಮಾತ್ರ ಪೂರಕವಲ್ಲ. ನಮ್ಮ ಅಧ್ಯಯನಕ್ಕೆ, ನಮ್ಮ ಆರೋಗ್ಯ ಜೀವನಕ್ಕೆ  ಈ ಶಿಸ್ತು ಬಹಳ ಮುಖ್ಯ. ನಮ್ಮ ಪ್ರತಿಯೊಂದು ಅನುಷ್ಠಾನವನ್ನು ಶಾಸ್ತ್ರಕಾರರು ಇದಕ್ಕನುಗುಣವಾಗಿ   ವಿನ್ಯಾಸ ಮಾಡಿದ್ದಾರೆ. ಆದರೆ ಇಂದು ನಮಗೆ ಈ ಎಚ್ಚರವಿಲ್ಲ. ಏಕಾದಶಿ ಉಪವಾಸವಿರಲಿ, ಇನ್ಯಾವುದೇ ಅನುಷ್ಠಾನವಿರಲಿ,ಅದನ್ನು ಧ್ಯಾನಕ್ಕೆ ಪೂರಕವಾಗಿ ಪಾಲಿಸಬೇಕು. ಈ ಜ್ಞಾನವಿಲ್ಲದೆ ಕೇವಲ ಯಾಂತ್ರಿಕವಾಗಿ ಪಾಲಿಸುವ ಯಾವ ಅನುಷ್ಠಾನವೂ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು.

ನಾತ್ಯಶ್ನತಸ್ತು ಯೋಗೋSಸ್ತಿ ನ ಚಾತ್ಯಂತಮನಶ್ನತಃ
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ೧೬

ನ ಅತಿ  ಅಶ್ನತಃ ತು ಯೋಗಃ ಅಸ್ತಿ ನ ಚಾತ್ಯಂತಮ್ ಅನಶ್ನತಃ
ನ ಚ ಅತಿ ಸ್ವಪ್ನ ಶೀಲಸ್ಯ ಜಾಗ್ರತಃ ನ ಏವ ಚ ಅರ್ಜುನ- ಹೇ ಅರ್ಜುನ, ಹೊಟ್ಟೆಬಾಕನಿಗೆ ಧ್ಯಾನಯೋಗ ಸಾಧ್ಯವಿಲ್ಲ. ತೀರ ತಿನ್ನದವನಿಗೂ ಇಲ್ಲ. ತುಂಬಾ ತೂಕಡಿಸುವವನಿಗೂ ಇಲ್ಲ. ನಿದ್ದೆಗೇಡಿಗೂ ಇಲ್ಲ.

ಅತಿಯಾಗಿ ತಿನ್ನುವವನಿಗೆ ಧ್ಯಾನ ಸಾಧ್ಯವಿಲ್ಲ. ಹೊಟ್ಟೆಗೆ ಹೆಚ್ಚು ಆಹಾರ ಹೋದಾಗ ಮನಸ್ಸು ನಿಸ್ತೇಜವಾಗುತ್ತದೆ. ಆದ್ದರಿಂದ ಮನನಶೀಲ ಹೊಟ್ಟೆಬಾಕನಾಗಿರಬಾರದು. ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಈ ಕಾರಣಕ್ಕಾಗಿ ಅತಿಥಿ ಸತ್ಕಾರದಲ್ಲಿ ಒತ್ತಾಯ ಮಾಡಿ ಬಡಿಸುವುದು ತಪ್ಪು. ಅದೇ ರೀತಿ ಯಾವಾಗಲೂ ಸರಿಯಾಗಿ ತಿನ್ನದೆ ಇದ್ದರೆ  ಅದರಿಂದ ದೇಹ ಪೋಷಣೆ ಇಲ್ಲವಾಗಿ ದೇಹ ಕುಸಿಯುತ್ತದೆ. ಭಗವಂತನ ಸಾಕ್ಷಾತ್ಕಾರವಾಗುವುದು ಈ ದೇಹದ ಮೂಲಕವೇ. ಆದ್ದರಿಂದ ನಾವು ನಿಯತವಾದ ಆಹಾರವನ್ನು ನಿಯತ ಕಾಲದಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಆಹಾರದ ಜೊತೆಗೆ ನಮ್ಮ ನಿದ್ದೆ ಮಾಡುವ ಅಭ್ಯಾಸ ನಿಯತವಾಗಿರಬೇಕು. ನಾವು ಹೇಗೆ ಅಭ್ಯಾಸ ಮಾಡಿಕೊಂಡೆವೋ ಹಾಗೆ ನಮ್ಮ  ಮನಸ್ಸು. ಎಂದೂ ಅತಿ ನಿದ್ದೆ ಒಳ್ಳೆಯದಲ್ಲ, ಅದೇ ರೀತಿ ನಿದ್ದೆಗೆಟ್ಟರೆ ಖಂಡಿತ ಧ್ಯಾನ ಸಾಧ್ಯವಿಲ್ಲ. ಆಹಾರ ನಿದ್ದೆ ನಿಯತವಾಗಿದ್ದರೆ ಅದು ನಮ್ಮ ಆರೋಗ್ಯಕ್ಕೂ ಪೂರಕ ಹಾಗು ಧ್ಯಾನಕ್ಕೆ ಇದು ಅತ್ಯಗತ್ಯ.

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ೧೭

ಯುಕ್ತ ಆಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು
ಯುಕ್ತ ಸ್ವಪ್ನ ಅವಬೋಧಸ್ಯ ಯೋಗಃ  ಭವತಿ ದುಃಖ ಹಾ-ತಕ್ಕ ತಿನಿಸು-ತಿರುಗಾಟ, ತಕ್ಕಷ್ಟೆ ಕಾಯಕ, ತಕ್ಕಂತೆ ನಿದ್ದೆ-ಎಚ್ಚರ ಸಾಧಿಸಿದವನಿಗೆ ಧ್ಯಾನಯೋಗದಿಂದ ದುಗುಡದೂರ.

ಯೋಗಾಭ್ಯಾಸ ಮಾಡುವಾಗ ನಮ್ಮ ಜೀವನಕ್ರಮ ಶಿಸ್ತುಬದ್ಧವಾಗಿರಬೇಕು. ನಿಯಮಿತವಾದ ಹಾಗು ಯೋಗ್ಯವಾದ ಆಹಾರ ಸೇವನೆ ಬಹಳ ಮುಖ್ಯ. ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸುವ ಸಾತ್ವಿಕ ಆಹಾರ ಸೇವನೆ ಧ್ಯಾನಕ್ಕೆ ಪೂರಕ. ಕೆಲವು ಆಹಾರ ನಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉದಾಹರಣೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ. ಇವುಗಳಲ್ಲಿ ಔಷಧೀಯ ಗುಣವಿದ್ದರೂ ಕೂಡ ಇದು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವ ಆಹಾರ. ನಾವು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದ ದಿನ ನಮಗೆ ಕೆಟ್ಟ ಕನಸು ಬೀಳುವುದು ಈ ಆಹಾರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಪುರಾವೆ. ವೇದಾಧ್ಯಾಯನ ಮಾಡುವವರು ಇಂತಹ ಮನಸ್ಸನ್ನು ಕೆಡಿಸುವ  ಆಹಾರವನ್ನು ಸೇವಿಸಬಾರದು. ನಮ್ಮ ದೇಹದ ಪೋಷಣೆಯ ಜೊತೆಗೆ ನಮ್ಮ ಮನಸ್ಸಿಗೆ ಸಾತ್ವಿಕ ಪೋಷಣೆ ಕೊಡುವ ಆಹಾರವನ್ನು ಇಲ್ಲಿ ಕೃಷ್ಣ  “ಯುಕ್ತಾಹಾರ” ಎಂದು ಕರೆದಿದ್ದಾನೆ.
ನಮ್ಮ ಮನಸ್ಸಿಗೆ ನಾವು ಎಷ್ಟು ಬೇಕೋ ಅಷ್ಟು ವಿರಾಮ ಕೊಡುವುದು ಬಹಳ ಮುಖ್ಯ. ಆದರೆ ಈ ವಿರಾಮ ಸೋಮಾರಿತನವಾಗಿ ರೂಪುಗೊಳ್ಳಬಾರದು. ಮನಸ್ಸಿಗೆ ವಿರಾಮ ಕೊಡುವಾಗ ಯಾವ ಚಿಂತನೆ ಕೂಡ ಮಾಡದೆ ಸಂಪೂರ್ಣ ವಿಶ್ರಾಂತಿಯನ್ನು ಕೊಡಬೇಕು. ಆಗ ಮನಸ್ಸು ಧ್ಯಾನಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. “ಯುಕ್ತಚೇಷ್ಟಸ್ಯ ಕರ್ಮಸು” ನಾವು ಮಾಡಬೇಕಾದ ಕೆಲಸ ಕಾರ್ಯವನ್ನು ಕ್ರಮಬದ್ಧವಾಗಿ ಪ್ರಮಾಣಬದ್ಧವಾಗಿ ನಾವೇ ಮಾಡಬೇಕು. ಮಾಡಬೇಕಾದ ಕೆಲಸದಲ್ಲಿ ಸೋಮಾರಿತನವಿರಬಾರದು.
ಹೀಗೆ ಶಾಸ್ತ್ರೀಯವಾದ ಶುದ್ಧವಾದ ಕ್ರಮಬದ್ದವಾದ ಆಹಾರ ಸೇವನೆ, ತಕ್ಕ ಕಾಲದಲ್ಲಿ ತಕ್ಕಷ್ಟು ನಿದ್ದೆ ಹಾಗು ಎಚ್ಚರ, ಕ್ರಮಬದ್ಧವಾದ ಪರಿಶ್ರಮ ಮತ್ತು ವಿರಾಮ- ಹೀಗೆ ಇದ್ದಾಗ “ಯೋಗೋ ಭವತಿ ದುಃಖಹಾ”- ದುಃಖ ರಹಿತ ಆನಂದಮಯ ಜೀವನ ಸಾಧ್ಯ.
ಧ್ಯಾನಯೋಗದಿಂದ ಮನಸ್ಸು ಒಂದು ಹದಕ್ಕೆ ಬರುತ್ತದೆ. ಮನಸ್ಸು ಹದವಾದಾಗ ಹೊರಪ್ರಪಂಚದಲ್ಲಿ ನಾವು ಅನುಭವಿಸುವ ಸುಖ ದುಃಖಗಳು ನಿರ್ಲಿಪ್ತವಾಗಿ ನೋಡಲು ಅಭ್ಯಾಸವಾಗುತ್ತದೆ. ಇದರಿಂದ ಸುಖ ಬಂದಾಗ ಹಾರಾಟವಿಲ್ಲ, ದುಃಖ ಬಂದಾಗ ಪಾತಾಳಕ್ಕೆ ಕುಸಿಯುವುದೂ ಇಲ್ಲ. ಸುಖ-ದುಃಖ, ಸೋಲು-ಗೆಲುವಿನ ದ್ವಂದ್ವವೇ ಜೀವನ ಎನ್ನುವ ಸಮದೃಷ್ಟಿ ಧ್ಯಾನಯೋಗದಿಂದ ಬಂದುಬಿಡುತ್ತದೆ.

ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ
ನಿಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ  ೧೮

ಯದಾ ವಿನಿಯತಮ್  ಚಿತ್ತಮ್ ಆತ್ಮನಿ ಏವ ಅವತಿಷ್ಠತೇ
ನಿಸ್ಪೃಹಃ ಸರ್ವ ಕಾಮೇಭ್ಯಃ  ಯುಕ್ತಃ ಇತಿ ಉಚ್ಯತೇ  ತದಾ-ಚನ್ನಾಗಿ ಹದಗೊಂಡ ಒಳಬಗೆ ಭಗವಂತನಲ್ಲೆ ನೆಲೆಗೊಂಡಾಗ, ಎಲ್ಲ ಕಾಮಗಳ ಆಸೆ ಅಳಿದಾಗ ‘ಧ್ಯಾನಯೋಗಿ’ ಎನ್ನಿಸಿಕೊಳ್ಳುತ್ತಾನೆ.

ಯೋಗಾಭ್ಯಾಸದಿಂದ ಯೋಗಿಯ ಸ್ಥುಪ್ತಪ್ರಜ್ಞೆ ನಿಯಂತ್ರಣವಾಗುತ್ತದೆ. ಸಾಮಾನ್ಯವಾಗಿ ನಮ್ಮ ಚಿತ್ತದಲ್ಲಿರುವ ಹಿಂದಿನ ಕೆಟ್ಟ ನೆನಪುಗಳು ಸದಾ ನಮ್ಮನ್ನು ಕಾಡುತ್ತಿರುತ್ತವೆ. ಯಾವುದೋ ಹಗೆ, ಯಾವುದೋ ಪ್ರೀತಿ ಇವೆಲ್ಲವನ್ನೂ ಬದಿಗೊತ್ತಿ ಯೋಗಿ ತನ್ನ ಅಂತರಂಗದ ಪೀಠದಲ್ಲಿ ಕೇವಲ ಭಗವಂತನನ್ನು ಕೂರಿಸಬಲ್ಲ. ಹೀಗೆ ಮಾಡಿದಾಗ ಸದಾ ಅಂತರಂಗದಲ್ಲಿ ಭಗವಂತನ ದರ್ಶನವಾಗುತ್ತದೆ. ಆ ಭಗವಂತನನ್ನು ಕಂಡಮೇಲೆ ಇನ್ನೇನೂ ಬೇಕು ಎನ್ನಿಸುವುದಿಲ್ಲ. ಏಕೆಂದರೆ ಭಗವಂತ  ನಾವು ಬಯಸುವ ಸಂಗತಿಗಳಲ್ಲೇ ಅತ್ಯಂತ ಶ್ರೇಷ್ಠ ವಾದ ಸಂಗತಿ. ಅಂತರಂಗದ ಆನಂದದ ಚಿಲುಮೆ ತೆರೆದುಕೊಂಡಾಗ ಕ್ಷುದ್ರವಾದ ಬಾಹ್ಯ ಕಾಮನೆಗಳು ಅಳಿದುಹೋಗಿ ಆತ ಧ್ಯಾನಯೋಗಿ ಎನ್ನಿಸಿಕೊಳ್ಳುತ್ತಾನೆ.     

ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಮತಾ
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ      ೧೯

ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಮತಾ
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ –ಗಾಳಿಯಿಲ್ಲದ ತಾಣದಲ್ಲಿರುವ ದೀಪ ಹಂದುವುದಿಲ್ಲ ಹೇಗೆ ಹಾಗೆ ಇದು: ಒಳಬಗೆಯನ್ನು ಹದಗೊಳಿಸಿ ಭಗವಂತನನ್ನು ನೆನೆಯುವ ಧ್ಯಾನಯೋಗಿಗೆ ಇದು ಉಪಮಾನ.

ಗಾಳಿ ಬೀಸದ ಸ್ಥಳದಲ್ಲಿ ಉರಿಯುವ ಬೆಂಕಿಯ ಶಿಖೆಯಂತೆ ಬಗೆಯನ್ನು ಹದಗೊಳಿಸಿದ ಯೋಗಿಯ ಮನಸ್ಸಿನಲ್ಲಿ ‘ಭಗವಂತನ ಕುರಿತಾದ ಮನಸ್ಸಿನ ಯೋಗ(ಆತ್ಮಯೋಗ)’ ನಿಶ್ಚಲವಾಗಿರುತ್ತದೆ. ಅದು ಚಲಿಸುವುದಿಲ್ಲ.      

Sunday, May 22, 2011

Bhagavad Gita Kannada Chapter-06 Shloka-15

ಮುಂದಿನ ಶ್ಲೋಕವನ್ನು ವಿಶ್ಲೇಷಿಸುವ ಮೊದಲು ಇಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಒಂದು ಸರ್ವೇಸಾಮಾನ್ಯ ಪ್ರಶ್ನೆಯನ್ನು ವಿಶ್ಲೇಷಿಸೋಣ. ಯುದ್ಧರಂಗದಲ್ಲಿ ನಿಂತ ಅರ್ಜುನನಿಗೆ ಕೃಷ್ಣ ಭಗವದ್ಗೀತೆ ಉಪದೇಶ ಮಾಡಿದ. ಹೀಗಿರುವಾಗ ಆತ ಧ್ಯಾನದ ಬಗ್ಗೆ, ಧ್ಯಾನ ಸಮಾಧಿಯಬಗ್ಗೆ, ಧ್ಯಾನಕ್ಕೆ ಕುಳಿತುಕೊಳ್ಳುವ ವಿಧಾನದ ಬಗ್ಗೆ ಏಕೆ ಪ್ರಸ್ತಾಪಿಸಿದ? ಇದರ ಅಗತ್ಯವೇನಿತ್ತು? ಇದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ.  ನಿಜವಾಗಿ ನೋಡಿದರೆ ಅರ್ಜುನನಿಗೆ ಈ ಪ್ರಶ್ನೆಗಳಿರಲಿಲ್ಲ, ಅರ್ಜುನನ ಪ್ರಶ್ನೆಯೇ ಬೇರೆ. ಆ ಪ್ರಶ್ನೆಗೆ ಉತ್ತರ ಕೊಡುವಾಗ ಧ್ಯಾನದ ಪ್ರಶ್ನೆ ಸಾಮಾನ್ಯವಾಗಿ ಬಂದಾಗ, ಕೃಷ್ಣ ಇಡೀ ನರಸಮುದಾಯಕ್ಕೆ ಸಹಾಯವಾಗುವಂತೆ ಸಂಪೂರ್ಣ ಧ್ಯಾನದ ಪ್ರಕ್ರೀಯೆಯನ್ನು ವಿವರಿಸಿದ. ಕೃಷ್ಣ ಯುದ್ಧರಂಗದಲ್ಲಿ ಅದೆಷ್ಟು ಸೂಕ್ಷ್ಮವಾಗಿ ಅರ್ಜುನನಿಗೆ ಈ ಭೋದನೆ ಮಾಡಿದ್ದನೋ ನಮಗೆ ತಿಳಿಯದು, ಆದರೆ ವ್ಯಾಸ ಮಹರ್ಷಿಗಳು ಇದನ್ನು ಎಳೆ ಎಳೆಯಾಗಿ ಬಿಡಿಸಿ ಒಂದು ಅಧ್ಯಾಯ ರೂಪದಲ್ಲಿ ನಮಗೆ ಉಣಬಡಿಸಿದ್ದಾರೆ. ಭಗವದ್ಗೀತೆಯನ್ನು ಅರ್ಜುನನಿಗೆ ಉಪದೇಶ ಮಾಡುವಾಗ  ಕೃಷ್ಣನ ಮುಂದಿದ್ದದ್ದು ಕೇವಲ ಅರ್ಜುನ ಮಾತ್ರವಲ್ಲ; ಸಮಸ್ತ ಸಾತ್ವಿಕ ನರ ಸಮುದಾಯ. ಸರ್ವ ಸಾತ್ವಿಕರಿಗೂ  ಸತ್ಯದ ದಾರಿಯನ್ನು ತೋರಿಸುವ ಉದ್ದೇಶದಿಂದ ಗೀತೆಯ ಉಪದೇಶವಾಯಿತು. ಇದೇ ಮೂಲ ಉದ್ದೇಶದಿಂದ ಶ್ರೀಕೃಷ್ಣ ಗೀತೆಯನ್ನು ಇನ್ನೊಮ್ಮೆ ಉದ್ದವನಿಗೆ ಉಪದೇಶ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಯುಂಜನ್ನೇವಂ ಸದಾSSತ್ಮಾನಂ ಯೋಗೀ ನಿಯತಮಾನಸಃ  
ಶಾಂತಿಂ ನಿರ್ಬಾಣ ಪರಮಾಂ ಮತ್ ಸಂಸ್ಥಾಮಧಿಗಚ್ಛತಿ          ೧೫

ಯುಂಜನ್ ಏವಮ್ ಸದಾ ಆತ್ಮಾನಮ್  ಯೋಗೀ ನಿಯತ ಮಾನಸಃ     
ಶಾಂತಿಮ್  ನಿರ್ಬಾಣ ಪರಮಾಮ್  ಮತ್ ಸಂಸ್ಥಾಮ್ ಅಧಿಗಚ್ಛತಿ-ಹೀಗೆ ಭಗವಂತನನ್ನು ಸದಾ ಧ್ಯಾನಿಸುತ್ತ, ಬಗೆಯನ್ನು ಬಿಗಿ ಹಿಡಿದ ಸಾಧಕನು ದೇಹ ತೊರೆದ ಮೇಲೆ ನನ್ನಲ್ಲೇ ನೆಲೆಸುವಂಥ ಸುಖವನ್ನು ಅನುಭವಿಸುತ್ತಾನೆ.

ಈ ಅಧ್ಯಾಯದಲ್ಲಿ ಈವರೆಗೆ ಕೃಷ್ಣ ವಿವರಿಸಿದ್ದು ಮನಸ್ಸಿನಿಂದ ಮಾಡುವ ಧ್ಯಾನ. ಬಾಹ್ಯ ಇಂದ್ರಿಯವನ್ನು ಸ್ಥಬ್ಧಗೊಳಿಸಿ, ಚಿತ್ತ ಮತ್ತು ಮನಸ್ಸನ್ನು ನಿಯಂತ್ರಿಸಿ ಮಾಡುವುದು ಧ್ಯಾನ. ಇದರಿಂದಾಚೆಗಿರುವುದು ‘ತುರಿಯಾವಸ್ಥೆ’. ನಮ್ಮ ಮನಸ್ಸನ್ನು ಸಂಪೂರ್ಣ ಸ್ಥಬ್ಧಗೊಳಿಸಿ ಆತ್ಮಸ್ವರೂಪಭೂತವಾದ ಜೀವ ನೇರವಾಗಿ ಭಗವಂತನನ್ನು ನೋಡುವ ಸ್ಥಿತಿ ತುರಿಯಾವಸ್ಥೆ. ಈ ಶ್ಲೋಕದಲ್ಲಿ ಕೃಷ್ಣ ತುರಿಯಾವಸ್ಥೆಯ ಸುಳಿವು ಕೊಡುತ್ತಾನೆ. ಈ ವಿಚಾರ ಇಲ್ಲಿ ನಿಗೂಢವಾಗಿ ಅಡಗಿದೆ.
ಧ್ಯಾನದಲ್ಲಿ ನಾವು ಕಾಣುವುದು ನೇರ ಭಗವಂತನನ್ನಲ್ಲ ಬದಲಿಗೆ ಭಗವಂತನ ಪ್ರತೀಕವನ್ನು. ಏಕೆಂದರೆ ಮನಸ್ಸು ನೇರವಾಗಿ ಜ್ಞಾನಾನಂದಸ್ವರೂಪಭೂತನಾದ ಭಗವಂತನನ್ನು ಗ್ರಹಿಸಲಾರದು. ಭಗವಂತನ ನೇರ ದರ್ಶನವಾಗಬೇಕಾದರೆ, ಧ್ಯಾನದಿಂದಾಚೆಗಿನ  ತುರಿಯಾವಸ್ಥೆಗೆ ಹೋಗಬೇಕು. ಜೀವ ಸ್ವರೂಪದ ಕಣ್ಣಿನಿಂದ ಭಗವಂತನನ್ನು ಕಾಣಬೇಕು. ಮನಸ್ಸನ್ನು ನಿರಂತರವಾಗಿ ಭಗವಂತನಲ್ಲಿ ನೆಲೆಗೊಳಿಸಿ; ಮನಸ್ಸಿನ ಮೂಲಕ ಧ್ಯಾನದಲ್ಲಿ ಭಗವಂತನ ಮಾನಸ ರೂಪ ಗೋಚರವಾದ ಮೇಲೆ ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಆಗ  ತುರಿಯಾವಸ್ಥೆ  ಜಾಗೃತವಾಗುತ್ತದೆ. ಈ ಹಂತದಲ್ಲಿ ಆತ್ಮ ಸ್ವರೂಪಕ್ಕೆ ಭಗವಂತನ ಸಂಯೋಗವಾಗುತ್ತದೆ ಹಾಗು ಆಗ ಅದು  ನೇರವಾಗಿ ಭಗವಂತನನ್ನು ಕಾಣಬಲ್ಲದು. ಈ ಸ್ಥಿತಿಯನ್ನು ತಲುಪಿದ ಧ್ಯಾನಯೋಗಿ ನಿಜವಾದ ಯೋಗಿ ಎನಿಸುತ್ತಾನೆ.
ಭಗವಂತನ ಸಾಕ್ಷಾತ್ಕಾರ ಒಂದು ಜೀವ ತನ್ನ ಸಾಧನೆಯ ಹಾದಿಯಲ್ಲಿ ಪಡೆಯಬಹುದಾದ ಅತ್ಯಂತ ಮಹತ್ತರವಾದ ಆನಂದದ ಪರಾಕಾಷ್ಠೆ. ಇದಕ್ಕಿಂತ ಮಿಗಿಲಾದ ಅರಿವು, ಆನಂದದ  ದರ್ಶನ ಇನ್ನೊಂದಿಲ್ಲ. ಈ ರೀತಿ ಭಗವಂತನ ಸಾಕ್ಷಾತ್ಕಾರವಾದವನು ಮುಂದೆಂದೂ ಈ ಸಂಸಾರ ಬಂಧದಲ್ಲಿ ಸಿಲುಕುವುದಿಲ್ಲ, ಆತ ಭಗವಂತನಲ್ಲೇ ನೆಲೆಸಿ  ಮೋಕ್ಷವನ್ನು ಪಡೆಯುತ್ತಾನೆ. 

Bhagavad Gita Kannada Chapter-06 Shloka 10-14

ಹೀಗೆ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ವಿವರಿಸಿದ ಕೃಷ್ಣ ಮುಂದೆ ನೇರವಾಗಿ  ಧ್ಯಾನಕ್ಕೆ ಕೂರುವ ವಿಧಾನವನ್ನು ವಿವರಿಸುತ್ತಾನೆ.  

ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ೧೦

ಯೋಗೀ ಯುಂಜೀತ ಸತತಮ್ ಆತ್ಮಾನಮ್  ರಹಸಿ ಸ್ಥಿತಃ
ಏಕಾಕೀ ಯತ ಚಿತ್ತ ಆತ್ಮಾ ನಿರಾಶೀಃ ಅಪರಿಗ್ರಹಃ –ಯೋಗ ಸಾಧಕನು ಒಬ್ಬನೆ ಏಕಾಂತದಲ್ಲಿ ಕುಳಿತು, ಮೈಮನಗಳನ್ನು ಹದಗೊಳಿಸಿ, ಆಸೆಪಡದೆ, ಏತಕ್ಕೂ ಕೈಯೊಡ್ಡದೆ, ಬಗೆಯನ್ನು ಸದಾ ಸಮಾಧಿಗೆ ಅಣಿಗೊಳಿಸಬೇಕು.

“ಸತತಮ್ ಆತ್ಮಾನಮ್”-ಧ್ಯಾನ ಮಾರ್ಗದಲ್ಲಿ ಸಾಧನೆ ಮಾಡತಕ್ಕಂತಹ ವ್ಯಕ್ತಿ ಮನಸ್ಸನ್ನು ನಿರಂತರ ಧ್ಯಾನ ಯೋಗದಲ್ಲಿ ತೊಡಗಿಸಲು ಹಾಗು  ಏಕಾಗ್ರಗೊಳಿಸಲು  ಪ್ರಯತ್ನಪಡಬೇಕು;  “ರಹಸಿ ಸ್ಥಿತಃ”- ಜನಜಂಗುಳಿ ಇದ್ದಲ್ಲಿ ಧ್ಯಾನ ಅಭ್ಯಾಸ ಮಾಡಲು ಅಸಾಧ್ಯ. ಈ ಕಾರಣಕ್ಕಾಗಿ ಹಿಂದಿನವರು ಧ್ಯಾನಕ್ಕಾಗಿ ಬೆಳಗಿನ ಜಾವದ ಅರುಣೋದಯ ಕಾಲವನ್ನು ಮೀಸಲಿಡುತ್ತಿದ್ದರು. ಬೆಳಗಿನಜಾವ ಸೂರ್ಯೋದಯಕ್ಕಿಂತ ತೊಂಬತ್ತಾರು ನಿಮಿಷ ಮೊದಲು ಧ್ಯಾನಕ್ಕೆ ಕುಳಿತರೆ ಆಗ ಇಡೀ ಪ್ರಕೃತಿ ಪ್ರಶಾಂತವಾಗಿರುತ್ತದೆ. ಈ ಕಾಲ ಮನಸ್ಸನ್ನು ಏಕಾಗ್ರತೆಗೆ ಕೊಂಡೊಯ್ಯಲು ಅತ್ಯಂತ ಪೂರಕ ಕಾಲ. ಇದನ್ನು ‘ಬ್ರಹ್ಮಮಹೂರ್ತ’ ಎನ್ನುತ್ತಾರೆ(ಸೂರ್ಯೋದಯಕ್ಕಿಂತ ತೊಬತ್ತಾರು ನಿಮಿಷ(ನಾಲ್ಕು ಘಳಿಗೆ) ಮೊದಲು ಪ್ರಾರಂಭವಾಗಿ ನಲವತ್ತೆಂಟು ನಿಮಿಷಗಳ ಕಾಲ(ಎರಡು ಘಳಿಗೆ) ಬ್ರಹ್ಮಮಹೂರ್ತ-ಉದಾಹರಣೆಗೆ ಸೂರ್ಯೋದಯ 5:44ಕ್ಕೆ  ಆದರೆ 4:08 ರಿಂದ 4:56 ರ ತನಕ ಬ್ರಹ್ಮಮಹೂರ್ತ). ಈ ಮಹೂರ್ತದ ದೇವತೆ ಚತುರ್ಮುಖ ಬ್ರಹ್ಮ. ಈತನೇ ನಮ್ಮ ಚಿತ್ತದ ದೇವತೆ. ಆದ್ದರಿಂದ ಈ ಕಾಲ ಜಪ ಸ್ಮರಣೆ ಮತ್ತು ಧ್ಯಾನಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ. ಧ್ಯಾನ  ಎನ್ನುವುದು ಅತ್ಯಂತ ಅಂತರಂಗದ ಕ್ರಿಯೆ. ಇಲ್ಲಿ ಕೇವಲ ಭಗವಂತ ಮತ್ತು ಸಾಧಕ ಜೀವ ಮಾತ್ರ ಇರಬೇಕು, ಮೂರನೆ ಸಂಗಾತಿ ಬಂದರೆ ತೊಂದರೆಯಾಗುತ್ತದೆ. ಒಬ್ಬ ಕಲುಷಿತ ಮನಸ್ಸಿನ(polluted mind) ವ್ಯಕ್ತಿಯಿಂದ ಆತನ ಸುತ್ತಲಿನ ವಾತಾವರಣ ಕೆಡುತ್ತದೆ. ಅದಕ್ಕಾಗಿ ಧ್ಯಾನ ಅಭ್ಯಾಸ ಮಾಡುವಾಗ ಯಾವಾಗಲೂ ಏಕಾಂತವಾಗಿ ಅಭ್ಯಾಸ ಮಾಡಬೇಕು. ನಮ್ಮ ಚಿತ್ತ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟು, ಯಾವುದೇ ಆಸೆ ಆಕಾಂಕ್ಷೆ ಮನಸ್ಸಿಗೆ ಸುಳಿಯದಂತೆ, ತೃಪ್ತ ಮನಸ್ಸಿನಿಂದ ಧ್ಯಾನಕ್ಕೆ ಅಣಿಯಾಗಬೇಕು.

ಮುಂದಿನ ಶ್ಲೋಕದಲ್ಲಿ ಧ್ಯಾನಕ್ಕೆ ಕೂರುವ ಸ್ಥಳ ಹೇಗಿರಬೇಕು ಮತ್ತು ಹೇಗೆ ಕುಳಿತುಕೊಳ್ಳಬೇಕು  ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ.                

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ
ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್            ೧೧

ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಾಃ
ಉಪವಿಶ್ಯಾSಸನೇ ಯುಂಜ್ಯಾದ್ ಯೋಗ ಮಾತ್ಮವಿಶುದ್ಧಯೇ   ೧೨

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮ್ ಆಸನಮ್ ಆತ್ಮನಃ
ನ ಅತಿ ಉಚ್ಛ್ರಿತಮ್ ನ ಅತಿ ನೀಚಮ್  ಚೇಲ ಅಜಿನ ಕುಶ ಉತ್ತರಮ್     
ತತ್ರ ಏಕ ಅಗ್ರಮ್  ಮನಃ ಕೃತ್ವಾ ಯತಚಿತ್ತ ಇಂದ್ರಿಯ ಕ್ರಿಯಃ
ಉಪವಿಶ್ಯ ಆಸನೇ ಯುಂಜ್ಯಾದ್ ಯೋಗಮ್ ಆತ್ಮ ವಿಶುದ್ಧಯೇ –ನಿರ್ಮಲವಾದ ತಾಣದಲ್ಲಿ, ಹುಲ್ಲ(ದರ್ಬೆ) ಚಾಪೆ-ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬ ಎತ್ತರವೂ ಅಲ್ಲದ, ತೀರ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಬೇಕು. ಅದರಲ್ಲಿ ಕುಳಿತು, ಬಗೆಯನ್ನು ನೆಟ್ಟ ಗುರಿಯಲ್ಲಿರಿಸಿ, ಇಂದ್ರಿಯಗಳ ಮತ್ತು  ಒಳಬಗೆಯ ಚೆಲ್ಲಾಟವನ್ನು ನಿಲ್ಲಿಸಿ, ಆತ್ಮ ಶುದ್ಧಿಗಾಗಿ ಸಮಾಧಿಯನ್ನು ಸಾಧಿಸಬೇಕು.

ಧ್ಯಾನಕ್ಕೆ ಕೂರುವ ಪ್ರದೇಶ ಸ್ವಚ್ಛವಾಗಿರಬೇಕು. ಮನೆಯಲ್ಲಿ ಸಾತ್ವಿಕ ಕಂಪನ(Vibration)ವಿರುವ ಸ್ಥಳವನ್ನು ಧ್ಯಾನಕ್ಕೆ  ಆರಿಸಿಕೊಳ್ಳಬೇಕು. ಹಿಂದೆ  ಮನೆಯಲ್ಲಿ ಹೆಚ್ಚು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿ ಅಲ್ಲಿ ದೇವರಮನೆಯನ್ನು ನಿರ್ಮಿಸುತ್ತಿದ್ದರು. ದುರಾದೃಷ್ಟಾವಶಾತ್ ಇಂದು ಮನೆ ಕಟ್ಟುವಾಗ  ಎಲ್ಲಿ ಜಾಗ ಉಳಿದಿದೆ ಅದನ್ನು ದೇವರಮನೆಯಾಗಿ ಪರಿವರ್ತಿಸುತ್ತಿದ್ದೇವೆ. ನಾವು   ಮನೆಯಲ್ಲಿ ಯಾವ ಭಾಗದಲ್ಲಿ ಕುಳಿತಾಗ ನಮಗೆ ಮನಸ್ಸು ಪ್ರಸನ್ನವಾಗಿ ದೇವರ ಧ್ಯಾನಕ್ಕೆ ಪೂರಕವಾಗಿರುತ್ತದೋ ಅಲ್ಲಿ ಸಾತ್ವಿಕ ಕಂಪನ ಹೆಚ್ಚಾಗಿದೆ ಎಂದು ನಾವು ಸುಲಭವಾಗಿ ಕಂಡು ಹಿಡಿಯಬಹುದು. ಇದನ್ನೇ ಇಲ್ಲಿ “ಶುಚಿ ದೇಶ” ಎಂದಿದ್ದಾರೆ.
ನಾವು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿದರೆ ಸಾಲದು; ಅಲ್ಲಿ ಎಷ್ಟು ಒಳ್ಳೆಯ ಸಾತ್ವಿಕ ಕಂಪನವಿದ್ದರೂ ನಾವು ನೆಲದಲ್ಲಿ ಕುಳಿತರೆ ನೆಲದಲ್ಲಿರುವ ಕೆಟ್ಟ ಕಂಪನ ನಮ್ಮ ದೇಹವನ್ನು ಪ್ರವೇಶಿಸಬಹುದು. ಅದಕ್ಕಾಗಿ ನಾವು ಕುಳಿತುಕೊಳ್ಳುವ ಆಸನ ವ್ಯವಸ್ಥೆ ಸರಿಯಾಗಿರಬೇಕು. ಸ್ಥಿರವಾದ ಆಸನ ಅತೀ ಮುಖ್ಯ. ಇದಕ್ಕಾಗಿ ಸೋಫಾದಂತಹ ಕುಶನ್ ಇರುವ ಆಸನವನ್ನು ಉಪಯೋಗಿಸಬಾರದು. ಇಲ್ಲಿ ಕೃಷ್ಣ ಯಾವ ರೀತಿಯ ಆಸನ ಯೋಗ್ಯ ಎನ್ನುವುದನ್ನು ವಿವರಿಸಿದ್ದಾನೆ. ನಾವು ಕುಳಿತು ಕೊಳ್ಳುವ ಆಸನ ಬಹಳ ತಗ್ಗಾಗಿ ಇರಬಾರದು ಬಹಳ ಎತ್ತರದಲ್ಲಿಯೂ ಇರಬಾರದು. ಕುಳಿತುಕೊಳ್ಳುವ ಸ್ಥಳದಲ್ಲಿ ಮೊದಲು ದರ್ಬೆಯ ಚಾಪೆಯನ್ನು ಹಾಸಬೇಕು. ಅದರ ಮೇಲೆ ಕೃಷ್ಣಾಜಿನವನ್ನು(ಸಂಸಾರಿಗಳು) ಅಥವಾ ವ್ಯಾಗ್ರಾಜಿನ(ಸಂಸಾರವನ್ನು ತ್ಯಜಿಸಿದ-ನೈಷ್ಠಿಕ ಬ್ರಹ್ಮಚಾರಿಗಳು)ವನ್ನು ಹಾಸಬೇಕು. ಅದರ ಮೇಲೆ ಬಟ್ಟೆ (ರೇಷ್ಮೆಯ ಪಟ್ಟೆ ಅಥವಾ ದಾವಳಿ). ಇದು ಧ್ಯಾನಕ್ಕೆ ಅತ್ಯಂತ ಶ್ರೇಷ್ಠ ಆಸನ.
ಇಲ್ಲಿ ದರ್ಬೆಯ ಚಾಪೆಯನ್ನು ಉಪಯೋಗಿಸಲು ಹೇಳಿದ್ದಾರೆ. ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು  ಇಡುತ್ತಾರೆ. ಧ್ಯಾನ ಕಾಲದಲ್ಲಿ ಯಾವ ದುಷ್ಟಶಕ್ತಿ ನಮಗೆ ತೊಂದರೆ ಕೊಡದಂತೆ ಇಲ್ಲಿ ದರ್ಬೆಯ ಚಾಪೆ ನಮಗೆ ಸಹಾಯ ಮಾಡುತ್ತದೆ. ಕೃಷ್ಣಾಜಿನ ಹಾಗು ಪಟ್ಟೆ ಮಹತ್ತಾದ ಸಾತ್ವಿಕ ಕಂಪನವನ್ನು ನಮಗೊದಗಿಸುತ್ತದೆ. ಇದು ನೆಲದಿಂದ ನಮ್ಮ ದೇಹಕ್ಕೆ ಕೆಟ್ಟ ಕಂಪನ ಪ್ರವೇಶಿಸದಂತೆ ತಡೆಯುತ್ತದೆ. ನಮ್ಮಲ್ಲಿ ಕೆಲವರು ಮರದ ಮಣೆಯನ್ನು ಉಪಯೋಗಿಸುತ್ತಾರೆ. ಆದರೆ ಮಣೆಯಲ್ಲಿ ಕುಳಿತಾಗ ನಮ್ಮ ದೇಹದ ಕೆಲವು ಭಾಗ ನೆಲವನ್ನು ಸ್ಪರ್ಶಿಸುವ ಸಾಧ್ಯತೆ ಇದೆ. ಅದಕ್ಕಾಗಿ ಕೃಷ್ಣ ಹೇಳಿದ ಈ ಮೇಲಿನ  ಆಸನ ಬಹಳ ಸೂಕ್ತ. ಈ ರೀತಿಯ ಆಸನವನ್ನು ತಯಾರಿಸಿಕೊಂಡು ನಮಗೆ ಸಾಧ್ಯವಾದ ಭಂಗಿ(Posture)ಯಲ್ಲಿ ನೆಟ್ಟಗೆ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗದ ಆಸನದಲ್ಲಿ ಬಲವಂತವಾಗಿ ಕೂರುವುದು ಧ್ಯಾನಕ್ಕೆ ಪೂರಕವಲ್ಲ. ಸಾಮಾನ್ಯವಾಗಿ ವಜ್ರಾಸನ ಬಹಳ ಪ್ರಸಿದ್ಧ. ಈ ಆಸನದಲ್ಲಿ ನಮ್ಮ ದೇಹ ನೆಟ್ಟಗಿರುತ್ತದೆ ಹಾಗು ಇದು ಧ್ಯಾನಕ್ಕೆ ಪೂರಕ. ಈ ಬಗ್ಗೆ ಮುಂದೆ ವಿವರವಾಗಿ ಹದಿಮೂರನೇ ಶ್ಲೋಕದಲ್ಲಿ  ಕೃಷ್ಣ ವಿವರಿಸುತ್ತಾನೆ.
ಮೇಲೆ ಹೇಳಿದ ರೀತಿ ಆಸನವನ್ನು ಸಿದ್ಧ ಪಡಿಸಿಕೊಂಡು ಕುಳಿತ ತಕ್ಷಣ ಧ್ಯಾನ ಸಾಧ್ಯವಾಗುವುದಿಲ್ಲ. ಆಸನದ ಮೇಲೆ ಸೂಕ್ತ ಭಂಗಿಯಲ್ಲಿ ಕೂತು ಮನಸ್ಸನ್ನು ಭಗವಂತನ ಕಡೆಗೆ ಏಕಾಗ್ರ ಮಾಡಬೇಕು. ‘ಏಕಾಗ್ರ’ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಏಕ+ಅಗ್ರ-ಬಾಣದಂತೆ ಒಂದೇ ಗುರಿ. ಯಾವುದಕ್ಕೆ ಗುರಿ ಇಡುವುದು ಎಂದರೆ ಅದಕ್ಕೆ ಇದೇ ಪದದಲ್ಲಿ ಉತ್ತರವಿದೆ.  ‘ಏಷ ಏವ ಕರೋತೀತಿ ಏಕಾಗ್ರಹಃ’ ಯಾರೊಬ್ಬನು ಎಲ್ಲ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನಾಜ್ಞಾನ-ಬಂಧ-ಮೊಕ್ಷಗಳಿಗೆ ಕಾರಣನೋ ಅವನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಏಕಾಗ್ರ.  ಬಾಲ್ಯದಿಂದ ಬೆಳೆಸಿಕೊಂಡು ಬಂದ ಅಭ್ಯಾಸವನ್ನು ಬಿಟ್ಟು ಹೊಸ ಅಭ್ಯಾಸಕ್ಕೆ ತನ್ನನ್ನು ತಾನು ಅಣಿಗೊಳಿಸಬೇಕಾದರೆ ಮನಸ್ಸಿಗೆ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ಧ್ಯಾನಕ್ಕೆ ಕೂತ ತಕ್ಷಣ ಮನಸ್ಸು ಏಕಾಗ್ರವಾಗಲಿಲ್ಲ ಎಂದು ಯಾರೂ ಗಾಬರಿಯಾಗುವುದು ಬೇಡ. ನಿರಂತರ ಪ್ರಯತ್ನವನ್ನು ಎಂದೂ ಕೈಬಿಡದೆ ಛಲದಿಂದ ಸಾಧನೆ ಮಾಡಿದಾಗ ಏಕಾಗ್ರತೆ ಸಾಧ್ಯ.
ಮನಸ್ಸು ಏಕಾಗ್ರವಾದ ನಂತರ ‘ಯತಚಿತ್ತ ಇಂದ್ರಿಯ ಕ್ರಿಯಃ’ – ಎಲ್ಲ ಬಾಹ್ಯಇಂದ್ರಿಯ ಕ್ರಿಯೆಯನ್ನು ಸಂಪೂರ್ಣ ಸ್ಥಬ್ಧಗೊಳಿಸಬೇಕು. ಅಂದರೆ ಈ ಸ್ಥಿತಿಯಲ್ಲಿ ಹೊರಗಿನ ಶಬ್ದ ನಮಗೆ ಕೇಳಿಸದು, ಬಾಹ್ಯ ಕಂಪು ಮೂಗಿಗೆ ಬಡಿಯದು. ಒಂದು ವೇಳೆ ಒಂದು ಸೊಳ್ಳೆ ಕಚ್ಚಿದರೂ ಆ ನೋವಿನ ಅರಿವು ನಮಗಾಗುವುದಿಲ್ಲ. ಇದು ನಿದ್ದೆಯಂತೆ; ನಿದ್ದೆಯಲ್ಲಿ ನಮಗೆ ಅಂತರಂಗ ಪ್ರಪಂಚ ಎಚ್ಚರವಿರುವುದಿಲ್ಲ, ಆದರೆ ಧ್ಯಾನದಲ್ಲಿ ಅಂತರಂಗ ಪ್ರಪಂಚ ಎಚ್ಚರವಿರುತ್ತದೆ. ಹೀಗೆ ಬಾಹ್ಯೇಂದ್ರಿಯ ಕ್ರಿಯೆಯನ್ನು ಸ್ಥಬ್ಧಗೊಳಿಸಿ ನಂತರ ಚಿತ್ತವನ್ನು ನಿಯಂತ್ರಿಸಬೇಕು. ನಮ್ಮ ಚಿತ್ತದಲ್ಲಿ ಅದೆಷ್ಟು ವಿಚಾರ ಸಂಗ್ರಹವಾಗಿರುತ್ತದೆ. ಆದರೆ ಹಿಂದೆ ದಾಖಲಿಸಿರುವ ಎಲ್ಲ ವಿಷಯವನ್ನೂ ಬಿಟ್ಟು ಕೇವಲ ಭಗವಂತನ ಗುಣದ ಅಂಶವನ್ನು ಮಾತ್ರ ಧ್ಯಾನ ಮಾಡಬೇಕು.
ಹೀಗೆ ನಮ್ಮ ಮನಸ್ಸು ಚಿತ್ತವನ್ನು ನಿಯಂತ್ರಿಸಲು ಜನ್ಮ ಜನ್ಮಾಂತರದ ಸಾಧನೆ ಬೇಕು. ಕೆಲವರು ಈ ಸಾಧನೆಯಲ್ಲಿ ನಿರಂತರ ಪ್ರಯತ್ನ ಮಾಡಿ ಯಾವುದೇ ಸಿದ್ಧಿಫಲಿಸದೇ ನಿರಾಶರಾಗುವುದಿದೆ. ಆದರೆ ಹಿಂದೆ ಹೇಳಿದಂತೆ ನಾವು ಅಧ್ಯಾತ್ಮದಲ್ಲಿ ಇಡುವ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ. ಈ ಜನ್ಮದಲ್ಲಿ ಸಿದ್ಧಿ ಸಾಧ್ಯವಾಗದೇ ಇದ್ದರೆ ಖಂಡಿತ ಮುಂದಿನ ಜನ್ಮದಲ್ಲಿ ನಮ್ಮ ಸಾಧನೆ ನಾವು ಈ ಜನ್ಮದಲ್ಲಿ ಎಲ್ಲಿ ನಿಂತಿದ್ದೆವೋ ಅಲ್ಲಿಂದ ಆರಂಭವಾಗುತ್ತದೆ. ಆದ್ದರಿಂದ ಎಂದೂ ನಿರಾಶೆ ಬೇಡ, ಪ್ರಯತ್ನ ಮಾತ್ರ ನಿರಂತರವಾಗಿರಲಿ.
ಹೀಗೆ ನಮ್ಮ ಮನಸ್ಸು ಮತ್ತು ಚಿತ್ತ ನಿಯಂತ್ರಣಕ್ಕೆ ಬಂದ ಮೇಲೆ ನಾವು ಅದನ್ನು ಅದೇ ಸ್ಥಿತಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು(ಯುಂಜ್ಯಾದ್ ಯೋಗಮ್). ಈ ಸ್ಥಿತಿಯಲ್ಲಿ ನಮ್ಮ ಜ್ಞಾನಾನಂದಮಯವಾದ ಆತ್ಮಕ್ಕೆ ಹಿಡಿದ ಕೊಳೆ ತೊಳೆದುಹೋಗಿ ಆತ್ಮಶುದ್ಧಿಯಾಗುತ್ತದೆ. ಇಂತಹ ಶುದ್ಧವಾದ ಆತ್ಮದಿಂದ ಪವಿತ್ರನಾದ ಭಗವಂತನನ್ನು ಕಾಣಲು ಸಾಧ್ಯ.
ಮುಂದಿನ ಶ್ಲೋಕದಲ್ಲಿ ಕೃಷ್ಣ ಧ್ಯಾನ ಭಂಗಿ(ಕುಳಿತುಕೊಳ್ಳುವ ರೀತಿ)ಯ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣವನ್ನು ಕೊಡುತ್ತಾನೆ.

ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್            ೧೩

ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ೧೪


ಸಮಮ್  ಕಾಯ ಶಿರಃ ಗ್ರೀವಮ್  ಧಾರಯನ್ ಅಚಲಮ್  ಸ್ಥಿರಃ 
ಸಂಪ್ರೇಕ್ಷ್ಯ ನಾಸಿಕಾ ಅಗ್ರಮ್  ಸ್ವಮ್  ದಿಶಃ ಚ ಅನವಲೋಕಯನ್ ||

ಪ್ರಶಾಂತ ಆತ್ಮಾ ವಿಗತ ಭೀಃ ಬ್ರಹ್ಮಚಾರಿವ್ರತೇ ಸ್ಥಿತಃ
ಮನಃ ಸಂಯಮ್ಯ ಮತ್ ಚಿತ್ತಃ ಯುಕ್ತಃ  ಆಸೀತ ಮತ್ ಪರಃ -- ಬೆನ್ನು-ತಲೆ-ಕತ್ತುಗಳನ್ನು ನೆಟ್ಟಗೆ ನಿಲ್ಲಿಸಿ, ನಲುಗದೆ ಗಟ್ಟಿಯಾಗಿ ಕುಳಿತು, ಅತ್ತಿತ್ತ ನೋಡದೆ ತನ್ನ ಮೂಗಿನ ತುದಿಯಲ್ಲೆ ನೋಟವಿಟ್ಟು, ಬಗೆಯನ್ನು ವಿಷಯಗಳತ್ತ ಹರಿಯಗೊಡದೆ ಹದಗೊಳಿಸಿ, ಅಂಜದೆ, ಬ್ರಹ್ಮಚರ್ಯದಲ್ಲಿದ್ದು, ನನ್ನನ್ನೇ ಪರದೈವವೆಂದು ನಂಬಿ, ನನ್ನನ್ನೆ ನೆನೆಯುತ್ತ ಸಮಾಧಿಯನ್ನು ಸಾಧಿಸಬೇಕು.

ಧ್ಯಾನಕ್ಕೆ ಕುಳಿತಾಗ ಸೊಂಟದಿಂದ ಮೇಲಿನ ನಮ್ಮ ಶರೀರ ನೆಟ್ಟಗೆ ಸರಳರೇಖೆಯಲ್ಲಿರಬೇಕು. ಬೆನ್ನು ಬಗ್ಗಿರಕೂಡದು,  ಕುತ್ತಿಗೆ, ತಲೆ ವಾಲಿರಬಾರದು. ದೇಹವನ್ನು ನಿಶ್ಚಲಗೊಳಿಸಬೇಕು. ಸ್ವಲ್ಪವೂ ಅಲ್ಲಡಿಸಬಾರದು. ಈ ರೀತಿ ಕುಳಿತುಕೊಳ್ಳದೆ ಮನಸ್ಸಿನ ಸ್ಥಿರತೆ ಅಸಾಧ್ಯ. ಮನಸ್ಸು ಈ ದೇಹವೆಂಬ ಪಾತ್ರೆಯೊಳಗಿನ ನೀರಿನಂತೆ. ಪಾತ್ರೆ ಅಲ್ಲಾಡಿದರೆ ಮನಸ್ಸೆಂಬ ನೀರಿನಲ್ಲಿ ಅಲೆಗಳು ಮೂಡುತ್ತವೆ, ಇದರಿಂದ ಏಕಾಗ್ರತೆಗೆ ಭಂಗವಾಗುತ್ತದೆ.
ದೇಹದಲ್ಲಿ ಇನ್ನೊಂದು ಪ್ರಮುಖ ಅಂಗ ಕಣ್ಣು. ದೇಹವನ್ನು ಸ್ಥಿರಗೊಳಿಸಿದ ಮೇಲೆ ಕಣ್ಣನ್ನು ಸ್ಥಿರಗೊಳಿಸಬೇಕು. ಮೂಗಿನ ತುದಿಯಲ್ಲಿ ದೃಷ್ಟಿಯನ್ನು ನೆಟ್ಟು ಯಾವ ದಿಕ್ಕಿನ ಯಾವ ಆಕೃತಿಯೂ ಕಾಣದಂತೆ ನೇರವಾಗಿ ಒಂದೇ ಕಡೆ ದೃಷ್ಟಿ ಸ್ಥಿರಗೊಳಿಸಬೇಕು.(ಕಣ್ಣನ್ನು ಮುಚ್ಚಿ ಧ್ಯಾನ ಮಾಡಬಹುದು, ಆದರೆ ಕಣ್ಣನ್ನು ಮುಚ್ಚಿದರೆ ನಿದ್ದೆ ಮಾಡುವ ಸಾಧ್ಯತೆ ಹೆಚ್ಚು).
ಈ ರೀತಿ ಧ್ಯಾನದ ಸ್ಥಿತಿಯನ್ನು ತಲುಪಿದಾಗ ಮನಸ್ಸು ಪ್ರಶಾಂತವಾಗುತ್ತದೆ. ಯಾವ ಗೊಂದಲವೂ ಇಲ್ಲದ ಹೇಳಲಾಗದ ವಿಚಿತ್ರ ಆನಂದದಸ್ಥಿತಿಯನ್ನು ನಾವು ಈ ಸ್ಥಿತಿಯಲ್ಲಿ  ಅನುಭವಿಸುತ್ತೇವೆ. ಇದರಿಂದ ನಮಗೆ ಎಲ್ಲಾ ಭಯವೂ ಹೊರಟು ಹೋಗುತ್ತದೆ. ಧ್ಯಾನಕ್ಕೆ ಅತಿ ಮುಖ್ಯವಾಗಿ ಬೇಕಾದ  ಇನ್ನೊಂದು ಅಂಶ ಬ್ರಹ್ಮಚರ್ಯ ಪಾಲನೆ. ಇಲ್ಲಿ ಬ್ರಹ್ಮಚರ್ಯ ಎನ್ನುವ ಪದಕ್ಕೆ ಮೂರು ಅರ್ಥವಿದೆ. ಪರಬ್ರಹ್ಮನ ಕಡೆಗೆ ಹೋಗುವ ಧೀಕ್ಷೆ-ಬ್ರಹ್ಮಚರ್ಯ; ನಿರಂತರ ವೇದಾಧ್ಯಯನ-ಬ್ರಹ್ಮಚರ್ಯ; ಸಂಸಾರಿಗಳಾದವರು ನಿಯಮಿತ ಲೈಂಗಿಕತೆ ಪಾಲಿಸುವುದು(ಅತಿ ಸುಲಭವಾಗಿ ಲೈಂಗಿಕತೆಯಿಂದ ದೂರ ಸರಿದು ನಿಲ್ಲುವ ಕ್ಷಮತೆ ಹಾಗು ಬೇಕೆನಿಸಿದಾಗ ನಿಯಮಿತ ಲೈಂಗಿಕತೆ) ಹಾಗು ವಿರಕ್ತಿಗಳ(ನೈಷ್ಠಿಕ ಬ್ರಹ್ಮಚಾರಿ) ಲೈಂಗಿಕ ಮುಕ್ತ ಜೀವನ-ಬ್ರಹ್ಮಚರ್ಯ.
ಭಗವಂತನೇ ಸರ್ವೋತ್ತಮ ಎನ್ನುವ ಅಚಲವಾದ ಭಕ್ತಿಯಿಂದ, ಭಗವಂತನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟು ಸದಾ ಭಗವಂತನನ್ನು ನೆನೆಯುತ್ತ, ಎಂದೂ ಎದೆಗುಂದದೆ ಸಮಾಧಿಯನ್ನು ಸಾಧಿಸಬೇಕು.
ಧ್ಯಾನದ  ಪರಿಣಾಮವೇನು? ನಾವು ಏಕೆ ಧ್ಯಾನ ಮಾಡಬೇಕು? ಉತ್ತರ ಮುಂದಿನ ಶ್ಲೋಕ!