Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, April 3, 2011

Bhagavad Gita Kannada Chapter-03 Shloka 29-32


ಪ್ರಕೃತೇರ್ಗುಣ ಸಮ್ಮಾಢಾಃ ಸಜ್ಜಂತೇ  ಗುಣಕರ್ಮಸು    ।
ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್ ॥೨೯॥

ಪ್ರಕೃತೇಃ ಗುಣ ಸಮ್ಮಾಢಾಃ ಸಜ್ಜಂತೇ  ಗುಣಕರ್ಮಸು
ತಾನ್ ಅಕೃತ್ಸ್ನವಿದಃ ಮಂದಾನ್ ಕೃತ್ಸ್ನವಿತ್ ನ  ವಿಚಾಲಯೇತ್--ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಲ್ಲೇ ಮೈಮರೆತವರು ಇಂದ್ರಿಯಾದಿಗಳ ಕ್ರಿಯೆಯಲ್ಲೆ ಅಂಟಿಕೊಳ್ಳುತ್ತಾರೆ. ಪೂರ್ತಿ ನಿಜವನ್ನರಿಯದ ಅಂಥ ಮಂದಿಯನ್ನು ಪೂರ್ತಿ ಅರಿತವರು ಗೊಂದಲಗೆಡಿಸಬಾರದು.

ಪ್ರಕೃತಿಯ ಗುಣಭೂತವಾಗಿರುವ ಇಂದ್ರಿಯ ಸುಖದಲ್ಲಿ ಮುಳುಗಿದವರು, ಮೂಲ ಪ್ರಕೃತಿಯ ತ್ರಿಗುಣದ ಮೋಹಕ್ಕೊಳಗಾಗಿ, ಸತ್ಯವನ್ನರಿಯದೆ, ಜೀವ ಸ್ವಭಾವದ ಗುಣ ಮೋಹದಲ್ಲಿದ್ದು, ತಾನು ಭಗವಂತನ ಗುಣದ ಅಧೀನ ಎನ್ನುವ ಎಚ್ಚರ ಇಲ್ಲದೆ ಇರುವವರನ್ನು ಕೃಷ್ಣ   'ಪ್ರಕೃತೇರ್ಗುಣ ಸಮ್ಮಾಢಾಃ' ಎಂದು ಕರೆದಿದ್ದಾನೆ.  ಇಂತವರು ಭಗವಂತನ ಗುಣ ಕರ್ಮವನ್ನು ತಮ್ಮದೇ ಎಂದು ಭ್ರಮಿಸಿಕೊಂಡು, 'ನಾನೇ ಎಲ್ಲಾ ನನ್ನಿಂದಲೇ ಎಲ್ಲ' ಎಂದು ಬದುಕುತ್ತಿರುತ್ತಾರೆ. ಇಂತವರಿಗೆ ಸತ್ಯವನ್ನು ಅಥವಾ ಪೂರ್ಣವನ್ನು ಅರಿಯುವ ಯೋಗ್ಯತೆ ಇರುವುದಿಲ್ಲ. ಅಂಥವರನ್ನು 'ಪೂರ್ಣವನ್ನು ಅರಿತವರು'  ಗೊಂದಲಗೆಡಿಸಲು ಹೋಗಬಾರದು. ಅವರಲ್ಲಿ ಸತ್ಯವನ್ನು ತಿಳಿಯುವ ಯೋಗ್ಯತೆ ಇದ್ದರೆ ಅವರು ಆ ಸ್ಥಿತಿಯಿಂದಾಚೆಗೆ ಬರುತ್ತಾರೆ. ಇಲ್ಲದ ಯೋಗ್ಯತೆಯನ್ನು ಯಾರೂ ಅವರಲ್ಲಿ ತುಂಬಿಸಲಾರರು, ಇದ್ದ ಯೋಗ್ಯತೆಯನ್ನು ಯಾರೊಬ್ಬರೂ ಕಸಿಯಲಾರರು. ಯಾರಿಗೆ ಸತ್ಯವನ್ನು ತಿಳಿಯುವ ಅಪೇಕ್ಷೆ ಇದೆ ಅವರೊಂದಿಗೆ ಸೇರಿ ಅವರ ಸಹವಾಸ ಮಾಡಿ ಅವರಿಂದ ಕಲಿಯಬಹುದು ಅಥವಾ ಅವರಿಗೆ ತಿಳಿಹೇಳಬಹುದು. 

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ           ।
ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ ॥೩೦॥

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ ಅಧ್ಯಾತ್ಮ ಚೇತಸಾ          
ನಿರಾಶೀಃ ನಿರ್ಮಮಃ ಭೂತ್ವಾ ಯುಧ್ಯಸ್ವ ವಿಗತ ಜ್ವರಃ-ಎಲ್ಲ ಕರ್ಮಗಳನ್ನು ನನ್ನಲ್ಲಿ ಅರ್ಪಿಸಿ, ನನ್ನಲ್ಲೇ ಮನವಿಟ್ಟು, ಹಂಬಲ ತೊರೆದು, ಮಮಕಾರ ತೊರೆದು,ಚಳಿ ಬಿಟ್ಟು ಹೋರಾಡು.

ಕೃಷ್ಣ ಹೇಳುತ್ತಾನೆ "ನೀನು ಮಾಡುವ ಸರ್ವಕರ್ಮವನ್ನು ನನಗರ್ಪಿಸಿ ಕರ್ಮ ಮಾಡು" ಎಂದು.  ಇಲ್ಲಿ 'ಸಂನ್ಯಸ್ಯ' ಎನ್ನುವ ಪದ ಬಳಕೆಯಾಗಿದೆ. ನಾನು ಮಾಡಿದ್ದೆಲ್ಲವೂ ನಾನೇ ಮಾಡಿದ್ದಲ್ಲ. ಏನು ಕ್ರಿಯೆ ನನ್ನಿಂದಾಯಿತೋ ಅದು ನನ್ನ ಕೈಯಿಂದ ಭಗವಂತ ಮಾಡಿಸಿದ್ದು. ಏನು ನನ್ನ ಮೂಲಕ ನಡೆಯಿತು ಅದು ಭಗವಂತನ ಪೂಜೆ ಎನ್ನುವ  ಸಮರ್ಪಣಾ ಭಾವ ಸಂನ್ಯಾಸ. "ನಾಹಂ  ಕರ್ತಾ ಹರಿ ಕರ್ತಾ; ಹರಿ ಕರ್ತಾ ಹಿ ಕೇವಲಮ್" ; "ನನ್ನ ಬಾಯಿಯಿಂದ ಏನು ಬಂತೋ ಅದು ನಿನ್ನ ಸ್ತೋತ್ರವಾಗಲಿ. ನನ್ನ ಮನಸ್ಸಿನ ಮೂಲಕ ನಡೆಯುವುದೆಲ್ಲವೂ ನಿನ್ನ ಸ್ಮರಣೆಯಾಗಲಿ. ಎಲ್ಲವೂ ನಿನ್ನ ಪೂಜೆಯಾಗಲಿ ಅನ್ನುವ ಚಿಂತನೆ ಬೆಳೆಸಿಕೊ-ಯುದ್ಧ ಮಾಡುವಾಗಲೂ ಸಹ"  ಎನ್ನುತ್ತಾನೆ ಕೃಷ್ಣ.

ಇಲ್ಲಿ ಯುದ್ಧ ಸಮಷ್ಟಿಯಾಗಿ ತೀರ್ಮಾನವಾಗಿರುವುದು. ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮರಾಯ ರಾಜಸೂಯ ಯಾಗ ಮಾಡಿದಾಗ ಅಲ್ಲಿ   ಶಿಶುಪಾಲನ ತಲೆ ಉರುಳುತ್ತದೆ. ಆಗ ಧರ್ಮರಾಯನಿಗೆ ವ್ಯಾಸರು "ಇದು ಮುಂದೆ ಸುಮಾರು ಹದಿಮೂರು ವರ್ಷಗಳ ನಂತರ ನಡೆಯುವ ಮಹಾ ಯುದ್ಧದ ಮುನ್ಸೂಚನೆ" ಎಂದು ಹೇಳುತ್ತಾರೆ. ಅಂದರೆ ಈ ಯುದ್ಧ ವಿಧಿಲಿಖಿತ. ಇಲ್ಲಿ ಅರ್ಜುನ ಕೇವಲ ಉಪಕರಣ(Instrument) ಅಷ್ಟೇ. ಆದ್ದರಿಂದ “ಭಗವಂತನಲ್ಲಿ ಮನವನ್ನಿಟ್ಟು ಹಂಬಲ-ಮಮಕಾರ ತೊರೆದು ನಿಶ್ಚಿಂತೆಯಿಂದ ಹೋರಾಡು” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.

ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಏನು ಆಗಬೇಕೋ ಅದು ಆಗೇ ತೀರುತ್ತದೆ. ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಭಗವಂತ ನನಗೆ ವಹಿಸಿದ ಕೆಲಸವನ್ನು ಆತನೇ ನನ್ನ ಕೈಯಿಂದ ಮಾಡಿಸಿದ, ಇದು ಅವನಿಗರ್ಪಿತವಾಗಲಿ, ಅವನ ಪೂಜೆಯಾಗಲಿ. ಏನು ಫಲ ಬಂತೋ ಅದು ಭಗವಂತನ ಪ್ರಸಾದ. ಈ ಸಂಕಲ್ಪವನ್ನಿಟ್ಟು ಕಾರ್ಯ ನಿರ್ವಹಿಸಿದಾಗ ಏನೇ ಆದರೂ ಅದರ ಹೊಣೆಯನ್ನು ಭಗವಂತ ಹೊರುತ್ತಾನೆ. ಇದಕ್ಕಿಂತ ದೊಡ್ಡ ಪೂಜೆ ಯಾವುದೂ ಇಲ್ಲ. ಇದು ಗೀತೆ ಮೂಲಕ ಕೃಷ್ಣ ನಮಗೆ ಕೊಟ್ಟ ಜೀವನ ಸಂದೇಶ.  ಇದರ ಫಲಶ್ರುತಿ ಎಂಬಂತೆ ಮುಂದಿನ ಎರಡು ಶ್ಲೋಕಗಳಿವೆ.

ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ   ।
ಶ್ರದ್ಧಾವಂತೋsನಸೂಯಂತೋ  ಮುಚ್ಯಂತೇ ತೇsಪಿ ಕರ್ಮಭಿಃ           ॥೩೧॥


ಯೇ ಮೇ ಮತಮ್ ಇದಮ್  ನಿತ್ಯಮ್ ಅನುತಿಷ್ಠಂತಿ ಮಾನವಾಃ  
ಶ್ರದ್ಧಾವಂತಃ ಅನಸೂಯಂತಃ  ಮುಚ್ಯಂತೇ ತೇ ಅಪಿ ಕರ್ಮಭಿಃ -ಯಾವ ಮನುಷ್ಯರು ಕಿಚ್ಚು ಪಡದೆ ನನ್ನ ಈ ಸಿದ್ದಾಂತವನ್ನು ನಂಬಿ ನಡೆಯುವರೋ ಅವರು ಕರ್ಮಗಳಿಂದ ಪಾರಾಗುತ್ತಾರೆ.

"ಎಲ್ಲವನ್ನು ಭಗವಂತ ನನ್ನ ಕೈಯಿಂದ ಮಾಡಿಸುತ್ತಿದ್ದಾನೆ, ನಾನು ಮಾಡುವುದೆಲ್ಲವೂ ಅವನ ಪೂಜೆ, ನನಗೆ ಯಾವ ಫಲದಿಂದ ಒಳಿತು ಎನ್ನುವುದು ನನಗಿಂತ ಭಗವಂತನಿಗೆ ಚನ್ನಾಗಿ ತಿಳಿದಿದೆ. ಆದ್ದರಿಂದ ಫಲದಲ್ಲಿ ಅಧಿಕಾರ ಬಯಸದೇ ಬಂದಿದ್ದನ್ನು ಭಗವಂತನ ಪ್ರಸಾದ ಎಂದು ಸ್ವೀಕರಿಸಿ ಬದುಕುವುದು". ಇದು ನಮ್ಮ ಜೀವನದ ನಿತ್ಯಾನುಷ್ಠಾನದ ಪರಿಯಾಗಬೇಕು.  ಜೀವನದ ಪ್ರತಿ ಕ್ಷಣದಲ್ಲೂ ಈ ಅನುಸಂಧಾನವಿರುವ ಮಾನವರು(Human being, ಜ್ಞಾನಿಗಳು, ಮನುಷ್ಯತ್ವ ಉಳ್ಳವರು) ಅಶ್ರದ್ಧೆ(ರಾಜಸ) ಹಾಗು ಅಸೂಯೆ(ತಾಮಸ) ತೊರೆದು ನಿಷ್ಕಾಮಕರ್ಮ ಮಾಡಿದಾಗ, ಅವರ ಜ್ಞಾನ ವೃದ್ಧಿಯಾಗುತ್ತದೆ. ಅದರಿಂದ ಅವರು ಕರ್ಮ ಬಂಧನವನ್ನು ಕಳಚಿಕೊಂಡು ಮೋಕ್ಷಕ್ಕೆ ಹೋಗಲು ಅರ್ಹರಾಗುತ್ತಾರೆ. ನಿತ್ಯಾನುಷ್ಠಾನದಲ್ಲಿ  ಈ ಅನುಸಂದಾನವಿದ್ದಾಗ ನಮ್ಮ ಕರ್ಮವೇ ನಮ್ಮನ್ನು ಕರ್ಮ ಬಂಧನದಿಂದ ಕಳಚುವುದಕ್ಕೆ ಮೆಟ್ಟಿಲಾಗುತ್ತದೆ ಹಾಗು ಕರ್ಮ ಬಂಧನದಿಂದ ಪಾರು ಮಾಡುತ್ತದೆ.

ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ  ಮೇ ಮತಮ್।
ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿನಷ್ಟಾನಚೇತಸಃ       ॥೩೨॥

ಯೇ ತು ಏತತ್ ಅಭ್ಯಸೂಯಂತಃ ನ ಅನುತಿಷ್ಠಂತಿ  ಮೇ ಮತಮ್ ।
ಸರ್ವ ಜ್ಞಾನ ವಿಮೂಢಾನ್ ತಾನ್ ವಿದ್ಧಿ ನಷ್ಟಾನ್ ಅಚೇತಸಃ -ಯಾರು ಕಿಚ್ಚಿನಿಂದ ನನ್ನ ಸಿದ್ದಾಂತವನ್ನು ಆಚರಣೆಗೆ ತರುವುದಿಲ್ಲ ಅವರು ಎಲ್ಲ ತಿಳಿವಿಗೂ ಎರವಾದವರು. ವಿನಾಶದತ್ತ ಸರಿವ ತಿಳಿಗೇಡಿಗಳು-ಎಂದು ತಿಳಿ.

ಮೇಲೆ ಹೇಳಿದ ಅನುಷ್ಠಾನವನ್ನು ಅರಿಯದೆ, ಅಸೂಯೆ-ಅಸಹನೆಯಿಂದ, 'ನನ್ನ ಕೆಲಸಕ್ಕೆ ನಾನೊಬ್ಬನೇ ಜವಾಬ್ದಾರ, ನಾನು ಮಾಡುವುದು ನನ್ನ ಸ್ವಂತ ಹಿತಾಸಕ್ತಿಗಾಗಿ, ಅದರ ಫಲವನ್ನು ನಾನು ಪಡೆಯುತ್ತೇನೆ,  ನನ್ನ ಕೈಯಲ್ಲಿ ನನ್ನ ಅಸ್ತಿತ್ವವಿದೆ, ಯಾವ ದೇವರೂ ಅದಕ್ಕೆ ಹೊಣೆಗಾರನಲ್ಲ' ಎಂದು ಅಭಿಪ್ರಾಯ ತೋರಿ ಅಹಂಕಾರದಿಂದ ಬದುಕುವವರಿಗೆ ಎಂದೂ ಅರಿವಿನ ಬಾಗಿಲು ತೆರೆಯುವುದಿಲ್ಲ. ಆತ ಪ್ರಪಂಚದಲ್ಲಿ ವಿಮೂಢ(ಶ್ರೇಷ್ಠ ದಡ್ಡ)ಎನಿಸುತ್ತಾನೆ. ಆತನಿಗೆ 'ತನಗೆ ಏನೂ ಗೊತ್ತಿಲ್ಲ ಎನ್ನುವ ವಿಷಯವೂ ಗೊತ್ತಿರುವುದಿಲ್ಲ!' ಇಂತವರಿಗೆ ಸತ್ಯದ ಬಗ್ಗೆ ಚಿಂತನೆ ಮಾಡುವ ಅರ್ಹತೆ ಇರುವುದಿಲ್ಲ. ಅಂತವರು ವಿನಾಶದತ್ತ ನಡೆಯುವ ತಿಳಿಗೇಡಿಗಳು. ಅವರು ಕತ್ತಲಿನಿಂದ ಕತ್ತಲಿಗೆ ಹೋಗುತ್ತಾ ಅಧಃಪಾತವನ್ನು ತಲುಪಿ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಾರೆ.

ಕೃಷ್ಣನ ಈ ಮೇಲಿನ ಸಂದೇಶವನ್ನು ಕೇಳಿದಾಗ ನಮಗೊಂದು ಪ್ರಶ್ನೆ ಬರುತ್ತದೆ. ಜಗತ್ತಿನ ಮೂಲಭೂತವಾದ ಈ ಸತ್ಯವನ್ನು ಏಕೆ ಎಲ್ಲರೂ ಅನುಸರಿಸುವುದಿಲ್ಲ? ಎಂದು.  ಇದಕ್ಕೆ ತುಂಬಾ ರೋಚಕವಾದ ಉತ್ತರವನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ಕೊಡುತ್ತಾನೆ.

No comments:

Post a Comment