Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, April 18, 2011

Bhagavad gita Kannada Chapter-04 Shloka 14-17


ನ ಮಾಮ್  ಕರ್ಮಾಣಿ ಲಿಂಪಂತಿ ನ ಮೇ ಕರ್ಮ ಫಲೇ ಸ್ಪೃಹಾ ।
ಇತಿ ಮಾಂ ಯೋSಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ       ॥೧೪॥

ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ
ಇತಿ ಮಾಮ್  ಯಃ ಅಭಿಜಾನಾತಿ ಕರ್ಮಭಿಃ ನ ಸಃ ಬಧ್ಯತೇ-ಕರ್ಮಗಳು ನನ್ನನ್ನು ಅಂಟುವುದಿಲ್ಲ. ನನಗೆ ಕರ್ಮಫಲದ ಬಯಕೆಯಿಲ್ಲ. ಹೀಗೆಂದು ನನ್ನನ್ನು ತಿಳಿದವನು ಕರ್ಮದ ಸೆರೆಯಲ್ಲಿ ಸಿಕ್ಕಿ ಬೀಳನು.

ಭಗವಂತ ಅವರವರ ಸ್ವಭಾವಕ್ಕೆ ತಕ್ಕಂತೆ, ಅವರವರ ಕರ್ಮಕ್ಕೆ ತಕ್ಕಂತೆ (ಗುಣಕರ್ಮ ವಿಭಾಗಶಃ) ಪ್ರಪಂಚವೆಂಬ ತೋಟವನ್ನು ನಿರ್ಮಿಸಿ, ನಾಲ್ಕು ವರ್ಣದ ಮೋಕ್ಷಯೋಗ್ಯ ಮಾನವರ ಸೃಷ್ಟಿಯನ್ನು ಈ ಭೂಮಿ ಮೇಲೆ ಮಾಡಿದ. "ಇದರಿಂದ ನನಗೆ ಯಾವ ಕರ್ಮವೂ ಅಂಟುವುದಿಲ್ಲ" ಎನ್ನುತ್ತಾನೆ ಕೃಷ್ಣ.  ಕರ್ಮ ಅಂಟುವುದು 'ಇದು ನನ್ನದು', 'ನಾನು ಮಾಡಿದ್ದು' ಎನ್ನುವ ಅಭಿಮಾನವಿದ್ದಾಗ ಮಾತ್ರ. ಭಗವಂತನಿಗೆ ಕರ್ಮದ ಅಂಟು ಅಥವಾ ನಂಟು ಇಲ್ಲ. ಕರ್ಮ ಫಲದ ಅಭಿಮಾನವಿಲ್ಲ. ಆತನಿಗೆ ಕರ್ಮದ ಪರಿಶ್ರಮ, ಆಯಾಸ ಪೂರ್ವಕ  ಕರ್ತೃತ್ವ, ಫಲದ ಬಯಕೆ ಇಲ್ಲ. ಈ ಸತ್ಯವನ್ನು ಅರಿತವ, ಅರಿತು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡವ, ಕರ್ಮ ಬಂಧದಲ್ಲಿ ಸಿಕ್ಕಿಬೀಳನು.  
  
ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ          ।
ಕುರು ಕರ್ಮೈವ ತಸ್ಮಾತ್  ತ್ವಂ ಪೂರ್ವೈಃ ಪೂರ್ವತರಂ ಕೃತಮ್ ॥೧೫॥

ಏವಮ್  ಜ್ಞಾತ್ವಾ ಕೃತಮ್  ಕರ್ಮ ಪೂರ್ವೈಃ ಅಪಿ ಮುಮುಕ್ಷುಭಿಃ
ಕುರು ಕರ್ಮ ಏವ ತಸ್ಮಾತ್  ತ್ವಮ್  ಪೂರ್ವೈಃ ಪೂರ್ವ ತರಮ್  ಕೃತಮ್-ಬಿಡುಗಡೆ ಬಯಸಿದ ಹಿಂದಿನವರು ಕೂಡಾ ಹೀಗೆ ತಿಳಿದು ಕರ್ಮ ಮಾಡಿದರು. ಅದರಿಂದ  ಹಿಂದಿನಿಂದಲು ಇದ್ದು ಹಿರಿಯರು ಮಾಡಿಕೊಂಡು ಬಂದ ಕರ್ಮವನ್ನೇ ನೀನು ಮಾಡು .

ಕರ್ಮದ ಬಂಧದಿಂದ ಬಿಡಿಸಿಕೊಳ್ಳಲು ನಿಷ್ಕ್ರೀಯತೆ ಸುಲಭೋಪಾಯ ಎಂದು ಕೆಲವರು ಯೋಚಿಸಬಹುದು. ಕೃಷ್ಣ ನಿಷ್ಕ್ರೀಯತೆಯನ್ನು ಉಗ್ರವಾಗಿ ವಿರೋಧಿಸುತ್ತಾನೆ. 'ನೂರು ವರುಷ ಬದುಕು ಆದರೆ ಕರ್ತವ್ಯಕರ್ಮ ಮಾಡಿಕೊಂಡು ಬದುಕು. ನಿಷ್ಕ್ರೀಯನಾಗಿ ಬದುಕಬೇಡ'. ಇದು ಕೃಷ್ಣನ ಸಿದ್ಧಾಂತ.  ಕರ್ಮ ಮಾಡುವುದು ಎಂದರೆ ಎನನ್ನಾದರೂ ಮಾಡುವುದಲ್ಲ. ನಮ್ಮ ಜೀವಸ್ವಭಾವ(ವರ್ಣ)ಕ್ಕೆ ತಕ್ಕಂತೆ ಕರ್ಮ ನಡೆಯುತ್ತಿರಬೇಕು. ಮಾಡುವ ಕರ್ಮವನ್ನು ಜ್ಞಾನಪೂರ್ವಕವಾಗಿ ತಿಳಿದು ಅಭಿಮಾನ-ಅಹಂಕಾರ-ಫಲಾಪೇಕ್ಷೆ ಇಲ್ಲದೆ ಮಾಡಬೇಕು. "ನಿನ್ನ ಹಿಂದಿನ ರಾಜರ್ಷಿಗಳು, ಋಷಿ-ಮುನಿಗಳು ಮಾಡಿದ್ದೂ ಇದನ್ನೇ.  ಕರ್ಮಯೋಗ ಮತ್ತು ಜ್ಞಾನಯೋಗವೆಂಬ ಉಭಯ ಯೋಗವಿಲ್ಲದೆ ಭಗವಂತನ ಸಂಯೋಗವಿಲ್ಲ" ಎನ್ನುತ್ತಾನೆ ಕೃಷ್ಣ. 

ಕಿಂ ಕರ್ಮ ಕಿಮಕರ್ಮೇತಿ ಕವಯೋSಪ್ಯತ್ರ ಮೋಹಿತಾಃ ।
ತತ್  ತೇ  ಕರ್ಮ ಪ್ರವಕ್ಷ್ಯಾಮಿ ಯಜ್ ಜ್ಞಾತ್ವಾ ಮೋಕ್ಷ್ಯಸೇSಶುಭಾತ್ ॥೧೬॥

ಕಿಮ್  ಕರ್ಮ ಕಿಮ್ ಅಕರ್ಮ ಇತಿ ಕವಯಃ ಅಪಿ ಅತ್ರ ಮೋಹಿತಾಃ
ತತ್  ತೇ  ಕರ್ಮ ಪ್ರವಕ್ಷ್ಯಾಮಿ ಯತ್  ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್-ಯಾವುದು ಕರ್ಮ, ಯಾವುದು ಅಕರ್ಮ ಎಂಬಲ್ಲಿ ಬಲ್ಲವರು ಗಲಿಬಿಲಿಗೊಳ್ಳುತ್ತಾರೆ. ಅಂಥ ಕರ್ಮವನ್ನು ನಿನಗೆ ತಿಳಿಹೇಳುತ್ತೇನೆ. ಅದನ್ನು ಅರಿತು ನೀನು ಕೇಡಿನಿಂದ  ಪಾರಾಗುವೆ.

ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ ।
ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ                        ॥೧೭॥

ಕರ್ಮಣಃ ಹಿ ಅಪಿ  ಬೋದ್ಧವ್ಯಮ್  ಬೋದ್ಧವ್ಯಮ್  ಚ ವಿಕರ್ಮಣಃ |
ಅಕರ್ಮಣಃ ಚ ಬೋದ್ಧವ್ಯಮ್  ಗಹನಾ ಕರ್ಮಣಃ ಗತಿಃ -- ಕರ್ಮದ ಬಗ್ಗೆಯೂ ತಿಳಿಯಬೇಕು. ವಿರುದ್ಧ ಕರ್ಮದ ಬಗೆಗೂ ತಿಳಿಯಬೇಕು, ಕರ್ಮ ತ್ಯಾಗದ ಬಗೆಗೂ ತಿಳಿಯಬೇಕು.[ಕರ್ಮವನ್ನು ನಮ್ಮಿಂದ ತಿಳಿಯಬೇಕು. ವಿಕರ್ಮವನ್ನು ನಮ್ಮಿಂದ ತಿಳಿಯಬೇಕು; ಆಕರ್ಮವನ್ನೂ ನಮ್ಮಿಂದ ತಿಳಿಯಬೇಕು.] ಕರ್ಮದ ನಡೆ ನಿಗೂಢವಾದದ್ದು.

ಯಾವುದು ಕರ್ಮ, ಯಾವುದು ಅಕರ್ಮ ಎನ್ನುವುದು ಜ್ಞಾನಿಗಳಿಗೂ ಕೂಡಾ ಗೊಂದಲದ ವಿಷಯ. ನಾವು ಮಾಡುವುದನ್ನು ತಿಳಿದು ಮಾಡಬೇಕು. ನಮ್ಮ ಕರ್ಮ ಜ್ಞಾನಪೂರ್ವಕವಾಗಿರಬೇಕು. ಆದ್ದರಿಂದ ಕರ್ಮ ಎಂದರೆ ಏನು ಎನ್ನುವುದನ್ನು ಮೊದಲು ನಿನಗೆ ಹೇಳುತ್ತೇನೆ. ಇದರಿಂದ ನೀನು ಕೇಡಿನಿಂದ ಪಾರಾಗುವೆ ಎನ್ನುತ್ತಾನೆ. ಕೃಷ್ಣ.
ಕರ್ಮದ ಬಗ್ಗೆ ತಿಳಿಯುವುದು ಅಷ್ಟು ಸುಲಭವಲ್ಲ. ಆದರೆ ಇದನ್ನು ತಿಳಿಯಲೇಬೇಕು. ಕರ್ಮದ ನಡೆ ಅತ್ಯಂತ ರಹಸ್ಯವಾದದ್ದು. ಯಾವುದು ಕರ್ಮ ಯಾವುದು ಅಕರ್ಮ ಎಂದು ತಿಳಿಯುವುದು ಬಹಳ ಕಷ್ಟ. ದೊಡ್ಡದೊಡ್ಡ ಜ್ಞಾನಿಗಳಿಗೂ ಇದು ತಿಳಿಯುವುದಿಲ್ಲ. ಇತಿಹಾಸದಲ್ಲಿನ ಕೆಲವು ವಿಷಯವನ್ನು ನೋಡಿದರೆ  ನಮಗೆ ಗೊಂದಲವಾಗುತ್ತದೆ. ಉದಾಹರಣೆಗೆ ವೇದವ್ಯಾಸರು. ಇವರು ಮದುವೆ ಆಗದ ಒಬ್ಬ ಬೆಸ್ತರ ಹುಡುಗಿಯಿಂದ ಹುಟ್ಟಿದ ಕನ್ಯಾಪುತ್ರ(ಕಾನೀನ); ವೇದವ್ಯಾಸರ ಮಕ್ಕಳು ಪಾಂಡು ಮತ್ತು ಧೃತರಾಷ್ಟ್ರ ವಿದವೆಯರಿಗೆ ಹುಟ್ಟಿದ ಮಕ್ಕಳುಪಾಂಡವರು-ಗಂಡ ಇರುವಾಗ ಪರಪುರುಷರಿಗೆ  ಹುಟ್ಟಿದವರು!  ಯಾವುದು ಧರ್ಮ? ಪಾಂಡವರನ್ನು ಸಮರ್ಥಿಸುವುದು ಎಷ್ಟು ಸರಿ? ವೇದವ್ಯಾಸರನ್ನು ಮಹಾಜ್ಞಾನಿ ಬ್ರಾಹ್ಮಣ ಎಂದು ಒಪ್ಪುವುದು ಸಾಧ್ಯವೇ? ಈ ಉದಾಹರಣೆಯನ್ನು ನೋಡಿದಾಗ ಯಾವುದು ಧರ್ಮ, ಯಾವುದು ಅಧರ್ಮ, ಯಾವುದು ಸರಿ, ಯಾವುದು ತಪ್ಪು, ಎನ್ನುವಲ್ಲಿ ನಮಗೆ  ಗೊಂದಲವಾಗುತ್ತದೆ.
ನಮ್ಮಲ್ಲಿ ನೆಡೆಯತಕ್ಕ ಕರ್ಮ, ಅಕರ್ಮ, ವಿಕರ್ಮದ ಹಿಂದೆ ಅನಂತವಾದ ಭಗವದ್ ಶಕ್ತಿ ಕೆಲಸ ಮಾಡುತ್ತಿರುತ್ತದೆ ಎನ್ನುವ ಎಚ್ಚರ ನಮಗಿರಬೇಕು. ಈ ಜ್ಞಾನವಿಲ್ಲದೆ ಕರ್ಮದ ಮರ್ಮವನ್ನು ಅರಿಯಲು ಸಾಧ್ಯವಿಲ್ಲ. ಒಂದು ದೇಹದಲ್ಲಿ ಭಗವಂತ ಅನೇಕ ರೂಪದಲ್ಲಿದ್ದು(ವಿಕರ್ಮಣಃ) ಕರ್ಮ ಮಾಡಿಸುತ್ತಾನೆ. ಕರ್ಮ ಎನ್ನುವುದು ತುಂಬಾ ಕ್ಲಿಷ್ಟವಾದ ವಿಷಯ. ಅದನ್ನು ನಾವು ಭಗವಂತನಿಂದಲೇ ತಿಳಿಯಬೇಕು. ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಕರ್ಮದ ಮರ್ಮವನ್ನು ವಿವರಿಸುತ್ತಾನೆ.

No comments:

Post a Comment