Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, April 24, 2011

Bhagavad Gita Kannada Chapter-04 Shloka 39-42


ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ  ಸಂಯತೇಂದ್ರಿಯಃ  ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ             ॥೩೯॥

ಶ್ರದ್ಧಾವಾನ್ ಲಭತೇ ಜ್ಞಾನಮ್ ತತ್  ಪರಃ  ಸಂಯತ ಇಂದ್ರಿಯಃ  ।
ಜ್ಞಾನಮ್  ಲಬ್ಧ್ವಾ ಪರಾಮ್  ಶಾಂತಿಮ ಆಚಿರೇಣ ಅಧಿಗಚ್ಛತಿ-ಇಂದ್ರಿಯಗಳನ್ನು ಹದ್ದಿನಲ್ಲಿಟ್ಟು, ಶ್ರದ್ಧೆಯಿಂದ ನನ್ನನ್ನೇ ಪರದೈವವೆಂದು  ನಂಬಿದವನು ತಿಳಿವನ್ನುಗಳಿಸಿ ಶೀಘ್ರವಾಗಿ  ಸಂತಸದ ಸೆಲೆಯಾದ ಮುಕ್ತಿಯನ್ನು ಪಡೆಯುತ್ತಾನೆ.

ನಮ್ಮಲ್ಲಿ ಅರಿವು ಮೂಡಬೇಕೆಂದರೆ ಬರಿಯ ಅಧ್ಯಯನ ಸಾಲದು. ಒಂದು ವಿಷಯ ನಮಗೆ ಮನವರಿಕೆಯಾಗಬೇಕಾದರೆ ಮೊದಲು ನಮಗೆ ಶ್ರದ್ಧೆ ಬೇಕು. ಇಲ್ಲಿ ಸಮರ್ಪಣಾ ಭಾವನೆ ಅತೀ ಮುಖ್ಯ.  ನಾನು ತಿಳಿದಿದ್ದೇ ದೊಡ್ಡದು ಅದಕ್ಕಿಂತ ದೊಡ್ಡದು  ಯಾವುದೂ ಇಲ್ಲ ಅನ್ನುವ ಅಹಂಕಾರವನ್ನು ಮೊದಲು ಬಿಡಬೇಕು. ನನಗೆ ಯಾವುದು ತಿಳಿದಿಲ್ಲವೋ ಅದು ಸತ್ಯವಾಗಿರಲು ಸಾಧ್ಯ ಎನ್ನುವ ಶ್ರದ್ಧೆ ಬೇಕು. ಪ್ರಪಂಚದ ಸತ್ಯ ನಮ್ಮ ನಂಬಿಕೆಯ ಮೇಲೆ ನಿಂತಿಲ್ಲ.  ಈ ಪ್ರಪಂಚದಲ್ಲಿ ನಮಗೆ ತಿಳಿದಿರುವುದು ಕೇವಲ ಅತೀ ಚಿಕ್ಕ ಅಂಶ. ನಮಗೆ ಗೊತ್ತಿಲ್ಲದೇ ಇರುವ ಸತ್ಯ ಇದೆ ಎಂದು ತಿಳಿಯುವುದೇ ಶ್ರದ್ಧೆ. ನಮ್ಮ ಬದುಕಿನ ಗುರಿ ಜ್ಞಾನ ಮತ್ತು  ಸತ್ಯದ ತಿಳುವಳಿಕೆಯಾಗಬೇಕು. ಜ್ಞಾನದ ತೃಷೆ ಜೊತೆಗೆ ಇಂದ್ರಿಯಗಳ ಚಾಪಲ್ಯಕ್ಕೆ ಹಿಡಿತ. ಹೀಗೆ ಇದ್ದಾಗ ಅದರಿಂದ ಮಾನಸ ಸಾಕ್ಷಾತ್ಕಾರ, ಆತ್ಮ ಸಾಕ್ಷಾತ್ಕಾರ-ಕೊನೆಗೆ ಪರಮಾತ್ಮನ ಸಾಕ್ಷಾತ್ಕಾರ. ಈ ನಡೆಯಿಂದ ಅಪರೋಕ್ಷ ಜ್ಞಾನ ಸಿದ್ಧಿಯಾಗುತ್ತದೆ  ಮತ್ತು ಇದರಿಂದ  ಸದಾ ಜ್ಞಾನಾನಂದಪೂರ್ಣನಾದ ಭಗವಂತನನ್ನು(ಮೋಕ್ಷವನ್ನು) ಪಡೆಯಲು ಸಾಧ್ಯ.                 

ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ           ।
ನಾಯಂ ಲೋಕೋSಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ॥೪೦॥

ಅಜ್ಞಃ ಚ ಅಶ್ರದ್ದಧಾನಃ ಚ  ಸಂಶಯ ಆತ್ಮಾ ವಿನಶ್ಯತಿ
ನ ಅಯಮ್  ಲೋಕಃ ಅಸ್ತಿ  ನ ಪರಃ ನ ಸುಖಮ್  ಸಂಶಯ ಆತ್ಮನಃ -ಅರಿವಿರದ, ನಂಬಿಕೆ ಕಳೆದುಕೊಂಡ ಇಬ್ಬಂದಿ ವಿನಾಶದತ್ತ ಸಾಗುತ್ತಾನೆ. ಇಬ್ಬಂದಿಗೆ ಇಹವಿಲ್ಲ; ಪರವಿಲ್ಲ; ನೆಮ್ಮದಿಯೂ ಇಲ್ಲ.

ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ.  ಜ್ಞಾನ ಮತ್ತು ಶ್ರದ್ಧೆ ಇಲ್ಲದಾಗ ಅಲ್ಲಿ ಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ.  ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಅಂತವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿ ಇಲ್ಲ.      

ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್           ।
ಆತ್ಮವಂತಂ ನ ಕರ್ಮಾಣಿ  ನಿಬಧ್ನಂತಿ  ಧನಂಜಯ             ॥೪೧॥

ಯೋಗ ಸಂನ್ಯಸ್ತ ಕರ್ಮಾಣಮ್  ಜ್ಞಾನ ಸಂಛಿನ್ನ ಸಂಶಯಮ್
ಆತ್ಮವಂತಮ್  ನ ಕರ್ಮಾಣಿ  ನಿಬಧ್ನಂತಿ  ಧನಂಜಯ- ಧನಂಜಯ, ಸಾಧನೆಯಿಂದ ಕರ್ಮಫಲದ ನಂಟು ತೊರೆದ, ಅರಿವಿನಿಂದ ಶಂಕೆಗಳನ್ನು ಕಳೆದುಕೊಂಡ ಭಗವದ್ಭಕ್ತನನ್ನು ಕರ್ಮಗಳು ಕಟ್ಟಿ ಹಾಕುವುದಿಲ್ಲ.

ಜೀವನದಲ್ಲಿ ಕರ್ಮ ಮಾಡು, ಕರ್ಮ ಮಾಡುತ್ತಾ ಕರ್ಮ ಸನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇಲ್ಲಿ ಕರ್ಮ ಸನ್ಯಾಸ ಅಂದರೆ ಕರ್ಮ ತ್ಯಾಗವಲ್ಲ. 'ಈ ಕರ್ಮ ಭಗವಂತನಿಗೆ ಸೇರಿದ್ದು ಎಂದು ಭಗವಂತನಲ್ಲಿ ಕರ್ಮವನ್ನು ಅರ್ಪಿಸುವುದು'- ಕರ್ಮ ಸನ್ಯಾಸ(ಈ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಹೆಚ್ಚಿನ ವಿವರಣೆಯನ್ನು ಕಾಣಬಹುದು). ಕರ್ಮಫಲದ ಬಗ್ಗೆ ಆಸೆ ಆಕಾಕ್ಷೆಗಳನ್ನು  ಬಿಟ್ಟು ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತಾ, ನಿರ್ವೀಕಾರನಾಗಿ ನಿರಂತರ ಕರ್ಮ ಮಾಡುವುದು ಕರ್ಮಸನ್ಯಾಸ. ಕರ್ಮವನ್ನು ಭಗವಂತನಲ್ಲಿ ಅರ್ಪಿಸಿ, ಜ್ಞಾನದಿಂದ ಸಂಶಯವನ್ನು ಪರಿಹರಿಸಿಕೊಂಡು, ವಿವೇಕಿಯಾಗಿ ಚಿತ್ತವನ್ನು ಜಾಗೃತಿಗೊಳಿಸಿ, ಆತ್ಮವಂತನಾಗಿ ಬದುಕುವುದನ್ನು ಕಲಿತಾಗ ಯಾವ ಕರ್ಮವೂ ಎಂದೂ ನಮಗೆ  ಬಂಧಕವಾಗುವುದಿಲ್ಲ. "ಯುದ್ಧದಲ್ಲಿ ಶತ್ರುಗಳನ್ನು ಗೆದ್ದು ಧನವನ್ನು ಗೆದ್ದ ನೀನುಜ್ಞಾನಧನವನ್ನು ಗೆದ್ದ ಧನಂಜಯ, ನಿನ್ನನ್ನು ಕರ್ಮ ಬಂಧಿಸದು" ಎನ್ನುತ್ತಾನೆ ಕೃಷ್ಣ.

ತಸ್ಮಾದಜ್ಞಾನಸಂಭೂತಂ ಹೃತ್ ಸ್ಥಂ ಜ್ಞಾನಾಸಿನಾSSತ್ಮನಃ ।
ಛಿತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ         ॥೪೨॥

ತಸ್ಮಾತ್ ಅಜ್ಞಾನ ಸಂಭೂತಮ್  ಹೃತ್ ಸ್ಥಮ್   ಜ್ಞಾನ ಅಸಿನಾ ಆತ್ಮನಃ ।
ಛಿತ್ವೈನಮ್  ಸಂಶಯಮ್  ಯೋಗಮ್ ಆತಿಷ್ಠ ಉತ್ತಿಷ್ಠ ಭಾರತ-ಆದ್ದರಿಂದ, ಓ ಭಾರತ, ಅಜ್ಞಾನದಿಂದ ಹುಟ್ಟಿ ಬಗೆಯೊಳಹೊಕ್ಕು ನಿಂತ ನಿನ್ನ ಈ ಸಂದೇಹವನ್ನು ತಿಳಿವಿನ ಕತ್ತಿಯಿಂದ ಕತ್ತರಿಸಿ ಜ್ಞಾನದ ದಾರಿಯಲ್ಲಿ ನಡೆ; ಎದ್ದು ನಿಲ್ಲು.

"ಆದ್ದರಿಂದ ಎದ್ದು ನಿಲ್ಲು, ಭರತ ಚಕ್ರವರ್ತಿಯಂತಹ ಮಹಾ ಪುರುಷರು ಹುಟ್ಟಿ ಬಂದ ವಂಶದವನಾದ ನೀನು ಜ್ಞಾನ ಸ್ವರೂಪನಾದ ಭಗವಂತನ ಭಕ್ತಿಯಲ್ಲಿ ನಿರತನಾದ ಜ್ಞಾನಿ(ಭಾರತ)ನಿನ್ನ ಮನಸ್ಸಿನಲ್ಲಿ ಕುಳಿತಿರುವ ಸಂಶಯವನ್ನು ಭಗವಂತನೆನ್ನುವ  ಜ್ಞಾನ ಕತ್ತಿಯಿಂದ ಕಡಿದು ಹಾಕು. ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ ಎನ್ನುವ ಧೀಕ್ಷೆ ತೊಟ್ಟು, ಸತ್ಯದ, ಪ್ರಾಮಾಣಿಕತೆಯ ಬದುಕನ್ನು ಬದುಕುವುದಕ್ಕೊಸ್ಕರ ಪುಣ್ಯದ ಸಾಧನೆಯಲ್ಲಿ ತೊಡಗು"  ಎನ್ನುತ್ತಾನೆ ಕೃಷ್ಣ.               

ಇತಿ ಚತುರ್ಥೋSಧ್ಯಾಯಃ
ನಾಲ್ಕನೆಯ ಅಧ್ಯಾಯ ಮುಗಿಯಿತು.

*******

No comments:

Post a Comment