Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, April 16, 2011

Bhagavad Gita Kannada Chapter-04 Shloka 10-12


ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ          ।
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ                       ॥೧೦॥

ವೀತ ರಾಗ ಭಯ ಕ್ರೋಧಾಃ  ಮತ್ ಮಯಾ ಮಾಮ್ ಉಪಾಶ್ರಿತಾಃ |
ಬಹವಃ  ಜ್ಞಾನ ತಪಸಾ ಪೂತಾಃ  ಮತ್ ಭಾವಮ್ ಆಗತಾಃ -- ರಾಗ-ಭಯ-ಕ್ರೋಧವನ್ನು ತೊರೆದವರು, ಎಲ್ಲೆಲ್ಲೂ ನನ್ನನ್ನೇ ಕಾಣುವವರು(ನನ್ನ ಹಿರಿಮೆಯನ್ನು ಅರಿತವರು) ನನಗೆ ಶರಣು ಬಂದವರು ಬಹಳ ಮಂದಿ ತಿಳಿವಿನ ತಪಸ್ಸಿನಿಂದ ತಿಳಿಗೊಂಡು ನನ್ನನ್ನು ಸೇರಿದ್ದಾರೆ.

 ಮೂರನೇ ಅಧ್ಯಾಯದ ಕೊನೆಯಲ್ಲಿ(ಶ್ಲೋಕ-39) ಕೃಷ್ಣ ಹೇಳಿದಂತೆ ರಾಗ ದ್ವೇಷಾದಿಗಳು ನಮ್ಮ ಪರಮ ಶತ್ರುಗಳು. ನಾವು ನಮ್ಮ ಜೀವನದ ಸರ್ವ ಸಮಸ್ಯೆಗಳಿಗೆ ಕಾರಣವಾದ ಒಲವು(ಆಸೆ,ರಾಗ, Attachment),  ಅಂಜಿಕೆ (ಭಯ) ಮತ್ತು ಕೋಪ(ಸಿಟ್ಟು)ವನ್ನು ತೊರೆದು, ಏನು ಇದೆಯೋ ಅದರಲ್ಲಿ ಸಂತೋಷಪಡುವುದನ್ನು ಮತ್ತು ಏನು ಬಂತೋ ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡು, ಮನ್ಮಯರಾಗಬೇಕು. 'ಮನ್ಮಯ' ಅಂದರೆ ಜೀವನದ ಎಲ್ಲಾ ನಡೆಗಳಲ್ಲಿ ಭಗವಂತನನ್ನು ತುಂಬಿಸಿಕೊಳ್ಳುವುದು ಮತ್ತು ಲೌಕಿಕ ಪ್ರಜ್ಞೆಯನ್ನು ಕಡಿಮೆ ಮಾಡಿಕೊಳ್ಳುವುದು. ಒಮ್ಮೆ ನಾವು ಭಗವಂತನ ಚಿಂತನೆಯಲ್ಲಿ ತೊಡಗಿದಾಗ ಈ ರಾಗ-ದ್ವೇಷಗಳು ಕ್ಷುಲ್ಲಕವಾಗಿ ಕಾಣಲಾರಭಿಸುತ್ತವೆ. ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು, ನಮ್ಮ ರಕ್ಷಣೆಗೆ ಸದಾ ಆತನಿದ್ದಾನೆ ಎಂದು ತಿಳಿದು, ದುರಾಭಿಮಾನವನ್ನು ಕಿತ್ತೆಸೆದು, ಆ ಭಗವಂತನಲ್ಲಿ ಶರಣಾದವರು ಮೋಕ್ಷ ಮಾರ್ಗವನ್ನು ಕಾಣುತ್ತಾರೆ. ನಮ್ಮ ಜೀವನದ ಪ್ರತಿಯೊಂದು ಕರ್ಮದಲ್ಲಿ ಈ ರೀತಿಯ ಭಾವನೆಯನ್ನು ಬೆಳೆಸಿಕೊಳ್ಳುವುದು ಒಂದು ತಪಸ್ಸು. ಇದರಿಂದ ನಮ್ಮ ಬದುಕು ಪವಿತ್ರವಾಗುತ್ತದೆ. ಹೀಗೆ ರಾಗ-ದ್ವೇಷದ ಕೊಳೆಯಿಂದ ಮುಕ್ತರಾದವರು ನನ್ನನ್ನು ಸೇರುತ್ತಾರೆ  ಎನ್ನುತ್ತಾನೆ ಕೃಷ್ಣ. ನಾವು ನಮ್ಮ ರಾಗ ದ್ವೇಷ-ಕ್ರೋಧದಲ್ಲಿ ಕೂಡಾ ಭಗವಂತನನ್ನು ಕುಳ್ಳಿರಿಸಿಕೊಳ್ಳಬೇಕು!  ನಮ್ಮ ಆಸೆ-ಭಗವಂತನನ್ನು ಕಾಣವ ಆಸೆಯಾಗಿರಬೇಕು; ಭಯ-'ತಪ್ಪು ಮಾಡಿದರೆ ಭಗವಂತ ನನ್ನನ್ನು ಕ್ಷಮಿಸಲಾರ' ಎನ್ನುವ ಭಯವಾಗಿಬೇಕು; ನಮ್ಮ ಇಲ್ಲ ಸಲ್ಲದ ಇಂದ್ರಿಯಾಕಾಂಕ್ಷೆಗಳ  ಮೇಲೆ ನಮ್ಮ ಕೊಪವಿರಬೇಕು. ಹೀಗೆ ಈ ಮೂರು ಶತ್ರುಗಳನ್ನು ನಾವು ಭಗವಂತನ ಪರಗೊಳಿಸಿದಾಗ ಭಗವಂತನನ್ನು ಕಾಣಲು ಸಾಧ್ಯ.

ಯೇ ಯಥಾ ಮಾಂ ಪ್ರಪದ್ಯಂತೇ   ತಾಂಸ್ತಥೈವ ಭಜಾಮ್ಯಹಮ್ ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ    ॥೧೧॥

ಯೇ ಯಥಾ ಮಾಮ್  ಪ್ರಪದ್ಯಂತೇ   ತಾನ್ ತಥಾ ಏವ ಭಜಾಮಿ ಅಹಮ್ ।
ಮಮ ವರ್ತ್ಮಾ ಅನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ -ಯಾರು ಹೇಗೆ ನನ್ನನು ಸೇವಿಸುತ್ತಾರೆ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಓ ಪಾರ್ಥ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕಡೆಗೆ ನನ್ನೆಡೆಗೆಯೇ ಬರುತ್ತಾರೆ.

ದೇವರ ಉಪಾಸನೆಗೆ ಸರಿಯಾದ ದಾರಿ ಯಾವುದು? ಒಬ್ಬಬ್ಬರು ಒಂದೊಂದು ರೀತಿ ಉಪಾಸನೆ ಮಾಡುತ್ತಾರೆ. ಅದರಿಂದ ಗೊಂದಲ, ಆವೇಶ. ಯಾರು ಯಾವ ರೀತಿ ಉಪಾಸನೆ ಮಾಡುತ್ತಾರೋ ಭಗವಂತ ಹಾಗೆಯೇ ಅನುಗ್ರಹಿಸುತ್ತಾನೆ. ನಾವು ಯಾವ ರೂಪದಿಂದ ಉಪಾಸನೆ ಮಾಡಿದರೂ ಅದು ವಿಶ್ವರೂಪನಾದ ಭಗವಂತನನ್ನು  ಸೇರುತ್ತದೆ. ಅದಕ್ಕಾಗಿ ನಾವು ನಮ್ಮ ಪೂಜೆಯನ್ನು ಭಗವಂತನ ವಿಶೇಷ ವಿಭೂತಿ ಇರುವ ತುಳಸಿ, ಅಶ್ವತ್ಥವೃಕ್ಷ, ಗೋವು ಇತ್ಯಾದಿ ರೂಪದಲ್ಲಿ ಪೂಜಿಸುತ್ತೇವೆ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ತುಳಸಿ ಗಿಡವನ್ನೇ ಭಗವಂತನೆಂದು ನಂಬಿ ಪೂಜಿಸದೇ, ತುಳಸಿಯಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ ಎಂದು ಪೂಜಿಸುವುದು ಮುಖ್ಯ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿ ನಮಗೆ ಭಗವಂತನ ಎಚ್ಚರ ಮತ್ತು ಜ್ಞಾನ ಅಗತ್ಯ.ಯಾವ ಹೆಸರಿನಿಂದ ಭಗವಂತನನ್ನು  ಕರೆದರೂ ಅದು ಸರ್ವಶಬ್ದ ವಾಚ್ಯ ಭಗವಂತನ ನಾಮ ಎನ್ನುವ ಎಚ್ಚರ ಅಗತ್ಯ. ಏಲ್ಲಿ ಕುಳಿತು ಪೂರ್ಣ ಅರ್ಪಣಾಭಾವದಿಂದ ಭಗವಂತನನ್ನು ನೆನೆದರೂ  ಅದು ವಿಶ್ವರೂಪಿ ವಿಶ್ವಂಭರನನ್ನು ಸೇರುತ್ತದೆ. ಆತ ಸದಾ ನಮ್ಮ ರಕ್ಷಣೆ ಮಾಡುತ್ತಾನೆ.

ಕಾಂಕ್ಷಂತಃ  ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ          ॥೧೨॥

ಕಾಂಕ್ಷಂತಃ  ಕರ್ಮಣಾಮ್  ಸಿದ್ಧಿಮ್  ಯಜಂತೇ  ಇಹ ದೇವತಾಃ ।
ಕ್ಷಿಪ್ರಮ್  ಹಿ ಮಾನುಷೇ ಲೋಕೇ ಸಿದ್ಧಿಃ ಭವತಿ ಕರ್ಮಜಾ -ಕರ್ಮಗಳ ಮೂಲಕ ಫಲವನ್ನು ಬಯಸುವವರು ಇಲ್ಲಿ ದೇವತೆಗಳನ್ನು ಪೂಜಿಸುತ್ತಾರೆ. ಈ ಭೂಮಿಯಲ್ಲಿ ಕರ್ಮದಿಂದ ಫಲ ಸಿದ್ಧಿ ಒಡನೆ ಕೈಗೂಡುತ್ತದೆಯಲ್ಲವೇ ?

ನಮ್ಮಲ್ಲಿ ಕೆಲವರು ದೇವತೆಗಳಿಗು ಮತ್ತು ಭಗವಂತನಿಗು ವ್ಯತ್ಯಾಸ ತಿಳಿಯದೆ, ದೇವತಗಳನ್ನೇ ಭಗವಂತನೆಂದು ಪೂಜಿಸುತ್ತಾರೆ. ಇದು  ದೇವತೆಗಳ ಬಗ್ಗೆ ನಮ್ಮಲ್ಲಿರುವ ಒಂದು ತಪ್ಪು ಕಲ್ಪನೆ. ದೇವರು ಅನೇಕ ಅಲ್ಲ ಆತ ಒಬ್ಬನೆ; ಆದರೆ ಭಗವಂತನ ಅಧೀನವಾಗಿರುವ  ದೇವತೆಗಳು ಅನೇಕ.  ನಾವು ತಕ್ಷಣ ಫಲ ಪಡೆಯುವ  ಅಪೇಕ್ಷೆಯಿಂದ ಭಗವಂತನನ್ನು ಮರೆತು ದೇವತೆಗಳ ಸಮೂಹವನ್ನು ಪೂಜಿಸುವ ಸಂಪ್ರದಾಯವನ್ನು ಬೆಳೆಸಿಕೊಂಡುಬಿಟ್ಟಿದ್ದೇವೆ.  ಈ ರೀತಿ ಮಾಡುವುದರಿಂದ ಫಲ ಸಿಗಬಹುದು- ಆದರೆ ಅದು ಅಲ್ಪಕಾಲದ್ದು.  ಐಹಿಕ ಸುಖವನ್ನು ಬಯಸಿ ವಿವಿಧ ದೇವತೆಗಳನ್ನು ವಿವಿಧ ಫಲಕ್ಕಾಗಿ ಪೂಜಿಸುವುದು ನಮ್ಮನ್ನು  ಶಾಶ್ವತವಾದ  ಮೋಕ್ಷ ಮಾರ್ಗದತ್ತ ಕೊಂಡೊಯ್ಯಲಾರದು. ಇಂದ್ರಿಯ ಭೋಗಕ್ಕಾಗಿ ಮಾಡುವ ಪೂಜೆ- ಪೂಜೆ ಎನಿಸಲಾರದು. ದೇವತೆಗಳು  ಮೋಕ್ಷ ಮಾರ್ಗದಲ್ಲಿ ನಮಗೆ ಸಹಾಯ ಮಾಡಬಲ್ಲರು, ಆದರೆ ಸರ್ವಶಕ್ತ ಭಗವಂತನ ಎಚ್ಚರ ಬಹಳ ಮುಖ್ಯ.
ಭಗವಂತನನ್ನು ಯಾವ ರೂಪದಲ್ಲೇ ಪೂಜಿಸದರೂ ಐಹಿಕ ಭೋಗಕ್ಕಾಗಿ ಪೂಜಿಸದೆ, ಆ ಸರ್ವಾಂತರ್ಯಾಮಿ ಭಗವಂತನನ್ನು ಸೇರುವ ಅನುಸಂಧಾನದಿಂದ ಪೂಜಿಸುವುದು ಅಧ್ಯಾತ್ಮ ಸಾಧನೆಯಲ್ಲಿ  ಅತಿ  ಮುಖ್ಯ ವಿಚಾರ. ನೀನು ನಿನ್ನ ದೇವರನ್ನು ಕೃಷ್ಣ ಎಂದರೂ ಸರಿ, ಅಲ್ಲಾಹು ಎಂದರೂ ಸರಿ. ಆದರೆ ನಮ್ಮೆಲ್ಲರನ್ನು ಕಾಪಾಡಿ ಪೋಷಿಸುವ ಶಕ್ತಿ ಒಂದೇ ಎನ್ನುವ ನಿಜ ತಿಳಿದಿರಲಿ. ಭಗವಂತನನ್ನು ವಿವಿಧ ರೂಪದಲ್ಲಿ ಪೂಜಿಸಬಹುದು. ಆದರೆ ವಿವಿಧ ಭೋಗಕ್ಕಾಗಿ ವಿವಿಧ ದೇವತೆಗಳನ್ನು ದೇವರೆಂದು ಪೂಜಿಸುವುದು ಅಧ್ಯಾತ್ಮ ಸಾಧನೆಯಾಗಲಾರದು.  ದೇವತೆಗಳ ಮುಖೇನ ಅಥವಾ ದೇವತೆಗಳಲ್ಲಿ ಭಗವಂತನನ್ನು ಕಾಣುವುದು ತಪ್ಪಲ್ಲ. ಏಕೆಂದರೆ ಭಗವಂತ ಸರ್ವಾಂತರ್ಯಾಮಿ, ಆತನಿರದ ಸ್ಥಳವಿಲ್ಲ. ಇದನ್ನು ಬಿಟ್ಟು ದೇವತೆಗಳನ್ನೇ ಭಗವಂತ ಎಂದು ಪೂಜಿಸಿದರೆ ಅದನ್ನು ದೇವತೆಗಳೂ ಮೆಚ್ಚಲಾರರು.
ತನ್ನ ಅವತಾರದ ಉದ್ದೇಶ ಮತ್ತು ರಹಸ್ಯವನ್ನು ತಿಳಿಹೇಳಿದ ಕೃಷ್ಣ,  ಅಂತಹ ಜ್ಞಾನದಿಂದ ಸಿದ್ಧಿ ಪಡೆದ ಉದಾಹರಣೆ ನೀಡಿದ. ಬಹುದೇವತಾ ವಾದವನ್ನು ತೊಡೆದು ಹಾಕಿ ದೇವರು ಒಬ್ಬನೇ, ದೇವತೆಗಳು ಹಲವು ಎನ್ನುವುದನ್ನು ಸ್ಪಷ್ಟಪಡಿಸಿದ ಹಾಗು ಉಪಾಸನೆ ಹೇಗಿರಬೇಕು ಎನ್ನುವುದನ್ನೂ ಸ್ಪಷ್ಟವಾಗಿ ಹೇಳಿದ. ಈ ಸಂದರ್ಭದಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಮನುಕುಲದ ಸೃಷ್ಟಿ ಈ ಭೂಮಿಯ ಮೇಲೆ ಭಗವಂತನಿಂದಾಯಿತು. ಆದರೆ ಒಬ್ಬ ಮಾನವ ಇನ್ನೊಬ್ಬನಂತಿಲ್ಲ. ಸ್ವಭಾವ ವೈವಿಧ್ಯತೆಯ ಮೂಲವೇನು?  ಭಗವಂತ ಒಬ್ಬಬ್ಬರನ್ನು ಒಂದೊಂದು ರೀತಿ ಏಕೆ ಸೃಷ್ಟಿ ಮಾಡಿದ್ದಾನೆ? ಈ ಪ್ರಶ್ನೆಗೆ ಮುಂದಿನ ಶ್ಲೋಕದಲ್ಲಿ ಕೃಷ್ಣ ಉತ್ತರಿಸುತ್ತಾನೆ.

No comments:

Post a Comment