Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, March 30, 2011

Bhagavad Gita Kannada Chapter-03 Shloka 17-20


ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ।
ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ    ॥೧೭॥

ಯಃ ತು ಆತ್ಮ ರತಿಃ ಏವ ಸ್ಯಾತ್ ಆತ್ಮ  ತೃಪ್ತಃ ಚ  ಮಾನವಃ
ಆತ್ಮನಿ ಏವ ಚ ಸಂತುಷ್ಟ ತಸ್ಯ ಕಾರ್ಯಮ್  ನ ವಿದ್ಯತೇ- ಪರಮಾತ್ಮನನ್ನು ಕಂಡು (ಪರಮಾತ್ಮನ ಕರುಣೆಯಿಂದ) ಸುಖವುಂಡವನು, ಪರಮಾತ್ಮನ ಕಾಣ್ಕೆಯಿಂದ(ಕರುಣೆಯಿಂದ) ಕೃತಕೃತ್ಯನಾದವನು, ಬೇರಾವುದೂ ಬೇಡವನಿಸಿ ಪರಮಾತ್ಮನಲ್ಲೆ ಆನಂದವಾಗಿರುವ ಸಮಾಧಿಮಗ್ನನು(ತೃಪ್ತನಾಗುವ ಮುಕ್ತನು) ಮಾತ್ರವೇ ಮಾಡಬೇಕಾದ್ದೇನೂ ಇರುವುದಿಲ್ಲ.

ಭಗವಂತನನ್ನು ಅಂತರಂಗದಲ್ಲಿ ಕಂಡು ಪಡುವ ಆನಂದ 'ಆತ್ಮರತಿ'.  ಈ ಸ್ಥಿತಿಯನ್ನು ಸಮಾಧಿ ಸ್ಥಿತಿಯಲ್ಲಿ ತಲುಪಬಹುದು. ನಿಜವಾದ ಸಮಾಧಿ ಸ್ಥಿತಿಯಲ್ಲಿ ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಕೆಲಸ ಮಾಡುವುದಿಲ್ಲ. ಜ್ಞಾನ ಸ್ವರೂಪವಾದ 'ಜೀವಸ್ವರೂಪ' ನೇರವಾಗಿ ಭಗವಂತನನ್ನು ಕಾಣುವ ಸ್ಥಿತಿ ಸಮಾಧಿಸ್ಥಿತಿ. ಈ ಸ್ಥಿತಿಯಲ್ಲಿ ಭಗವಂತನೊಡನೆ ನೇರ ಸಂಪರ್ಕ ಸಾಧ್ಯ. ಇಂತಹ ಸ್ಥಿತಿಯಲ್ಲಿರುವವನಿಗೆ ಯಾವುದೇ ಕರ್ಮದ ಲೇಪವಿಲ್ಲ. ದೇವರನ್ನು ಕಂಡ ಮೇಲೆ ಆತನಿಗೆ ಈ ಲೌಕಿಕ ಪ್ರಪಂಚ ತೃಪ್ತಿಯಾಗಿ ಅದು ಬೇಡವೆನಿಸುತ್ತದೆ.  ಕೇವಲ ಭಗವಂತನ ಸಾಕ್ಷಾತ್ಕಾರದ ಆನಂದ ಸಾಗರದಲ್ಲಿ ಆತ ಮುಳುಗಿರುತ್ತಾನೆ. ಈ ಸ್ಥಿತಿಯಲ್ಲಿ ಆತನಿಗೆ ಯಾವುದೇ ಕರ್ತವ್ಯ ಕರ್ಮವಿಲ್ಲ, ಆತ ವಿಧಿ ನಿಷೇಧಗಳಿಂದ ಅತೀತನಾಗಿರುತ್ತಾನೆ.

ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ ।
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ ॥೧೮॥

ನ ಏವ ತಸ್ಯ ಕೃತೇನ ಅರ್ಥಃ ನ ಅಕೃತೇನ ಇಹ ಕಶ್ಚನ
ನ ಚ ಅಸ್ಯ ಸರ್ವಭೂತೇಷು ಕಶ್ಚಿತ್ ಅರ್ಥ ವ್ಯಪಾಶ್ರಯಃ -ಅಂಥವನು ಏನನ್ನಾದರೂ ಮಾಡುವುದರಿಂದ ಹೆಚ್ಚಿನ ಸಾಧಕವಾಗಲಿ, ಮಾಡದೆ ಇರುವುದರಿಂದ ಯಾವುದೇ ಬಾದಕವಾಗಲಿ ಇಲ್ಲ. ಸಮಸ್ತ ಜೀವಿಗಳಲ್ಲಿ ಅವನಿಗೆ ಯಾವುದೇ ಫಲದ ಹಂಗಿಲ್ಲ.

ಸಮಾಧಿ ಸ್ಥಿತಿಯಲ್ಲಿ ಅವನಿಗೆ ಹಸಿವು, ಬಾಯಾರಿಕೆ ಇಲ್ಲ. ಆತನಿಗೆ ಹೊರ ಪ್ರಪಂಚದ ಅರಿವೇ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿರುವಾಗ ಇನ್ಯಾವುದೋ ಸಾಧನೆ ಮಾಡುವುದರಿಂದ ಉದ್ಧಾರವಾಗಲಿ, ಕರ್ತವ್ಯ ಕರ್ಮ ಮಾಡದೆ ಇರುವ ದೋಷವಾಗಲಿ ಇರುವುದಿಲ್ಲ. ಪಂಚಭೂತಗಳ, ಪಂಚಕೋಶಗಳ ಆಸರೆ ಕೂಡಾ ಅವನಿಗೆ ಬೇಕಾಗಿರುವುದಿಲ್ಲ. ಸಮಸ್ತ ಜನಾಂಗ, ಪರಿವಾರ ಎನ್ನುವ ಮಮಕಾರ ಈ ಸ್ಥಿತಿಯಲ್ಲಿ ಇರುವುದಿಲ್ಲ. ಆತನಿಗೆ ಹೊರ ಪ್ರಪಂಚದ ಹಂಗಿಲ್ಲ. ಈ ರೀತಿ ಸಮಾಧಿ ಸ್ಥಿತಿಯಿಂದ ದೇವರನ್ನು ಕಾಣುತ್ತಿರುವವನು ಕರ್ತವ್ಯ ಕರ್ಮದಿಂದ ಆಚೆಗಿರುತ್ತಾನೆ.

ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ ।
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ   ॥೧೯॥

ತಸ್ಮಾತ್ ಅಸಕ್ತಃ ಸತತಂ ಕಾರ್ಯಮ್  ಕರ್ಮ ಸಮಾಚರ ।
ಅಸಕ್ತಃ ಹಿ ಆಚರನ್ ಕರ್ಮ ಪರಮ್ ಆಪ್ನೋತಿ ಪೂರುಷಃ –ಆದ್ದರಿಂದ  ಫಲದ ನಂಟು ತೊರೆದು ಸದಾ ಕರ್ತವ್ಯ ಕರ್ಮವನ್ನು ಮಾಡುತ್ತಿರು. ನಂಟು ತೊರೆದು ಕರ್ತವ್ಯದಲ್ಲಿ ತೊಡಗುವುದರಿಂದಲೇ ಸಾಧಕ ಭಗವಂತನನ್ನು ಸೇರುವುದು ಸಾಧ್ಯ.

ಈ ಎಲ್ಲಾ ಕಾರಣದಿಂದ ನಾವು ನಮ್ಮ ಕರ್ತವ್ಯ ಕರ್ಮವನ್ನು ಮಾಡಬೇಕು. "ಎಲ್ಲವನ್ನು ಮಾಡು ಆದರೆ ಯಾವುದನ್ನೂ ಅಂಟಿಸಿಕೊಳ್ಳದೇ ಮಾಡು. ಏನು ಮಾಡಬೇಕೋ  ಅದನ್ನು ಫಲದ ಬಗ್ಗೆ ಯೋಚಿಸದೆ(ಅಧಿಕಾರ ಸಾಧಿಸದೇ) ಮಾಡು. ಹೀಗೆ ಕರ್ಮ ಮಾಡಿದರೆ ಅದು ನಿನ್ನನ್ನು ಭಗವಂತನಡೆಗೆ ಕೊಂಡೊಯ್ಯುತ್ತದೆ. ಅದು ಎಂದೂ ನಿನ್ನನ್ನು ಮತ್ತೆ ಕರ್ಮ ಬಂಧನಕ್ಕೆ ತಳ್ಳುವುದಿಲ್ಲ. ಈ ರೀತಿ ಮಾಡುವುದರಿಂದ ಭಗವಂತನನ್ನು ಸೇರುವುದು ಸಾಧ್ಯ ಹೊರತು ಕರ್ಮ ತ್ಯಾಗದಿಂದಲ್ಲ "ಎನ್ನುತ್ತಾನೆ ಕೃಷ್ಣ.

ಇಲ್ಲಿ "ಪೂರುಷಃ" ಎನ್ನುವ ಪದ ಬಳಕೆಯಾಗಿದೆ. ಪುರದಲ್ಲಿ(ಪೂರ್ಣವಾದ ಶರೀರದಲ್ಲಿ) ಇರುವವ ಪುರುಷ. ಪುರವನ್ನು ಪೂರ್ಣ  ಪ್ರಮಾಣದಲ್ಲಿ ಉಪಯೋಗಿಸುವ ಸಾಧಕ-ಪೂರುಷಃ. ಸಾಧನಾ ಶರೀರದಲ್ಲಿದ್ದು ಸಾಧನೆಯಲ್ಲಿ ತೊಡಗಿರುವ ಜೀವ ಪೂರುಷಃ.
ಈ ರೀತಿ ಕರ್ಮ ಸಿದ್ಧಾಂತವನ್ನು ವಿವರಿಸಿದ ಕೃಷ್ಣ ಅದಕ್ಕೆ ಪೂರಕವಾದ ನಿದರ್ಶನವನ್ನು ಮುಂದಿನ ಶ್ಲೋಕದಲ್ಲಿ ಕೊಡುತ್ತಾನೆ.

ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ ।
ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ ॥೨೦॥

ಕರ್ಮಣಾ ಏವ ಹಿ ಸಂಸಿದ್ಧಿಮ್ ಅಸ್ಥಿತಾಃ  ಜನಕ ಅದಯಃ
ಲೋಕಸಂಗ್ರಹಮ್ ಏವ ಅಪಿ ಸಂಪಶ್ಯನ್ ಕರ್ತುಮ್ ಅರ್ಹಸಿ -ಕರ್ಮದಿಂದಲೆ ಸಾಧಿಸಿ ಜನಕ ಮೊದಲಾದವರು ಗುರಿ ಮುಟ್ಟಿದರು. ಜನತೆಯನ್ನು ತಿದ್ದುವ ಹೊಣೆಯನ್ನರಿತಾದರೂ ನೀನು ಕರ್ಮ ಮಾಡಬೇಕಾಗಿದೆ.

ಹಿಂದಿನ ಅನೇಕ ರಾಜರ್ಷಿಗಳು ಈ ಮಾರ್ಗದಲ್ಲಿ ನಡೆದು ಮೋಕ್ಷ ಪಡೆದಿದ್ದಾರೆ. ಅವರ್ಯಾರೂ ಎಲ್ಲವನ್ನು ತ್ಯಜಿಸಿ ಕಾಡಿಗೆ ಹೋಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಜನಕ ಮಹಾರಾಜ. ಈತ ಎಲ್ಲಾ ರಾಜ್ಯ ವೈಭೋಗದೊಂದಿಗೆ ರಾಜ್ಯಭಾರ ಮಾಡಿದ ವ್ಯಕ್ತಿ. ಆದರೆ ಅವನಷ್ಟು ದೊಡ್ಡ ಜ್ಞಾನಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ಅಂಥಹ ಮಹಾ ರಾಜರ್ಷಿ ಆತ.  ಶುಖಾಚಾರ್ಯರು  ವೈರಾಗ್ಯದ ಬಗ್ಗೆ ಸರಿಯಾದ ತಿಳುವಳಿಕೆಗಾಗಿ ಜನಕನಲ್ಲಿಗೆ ಬಂದಿದ್ದರು!  ಇದು ನಿಜವಾದ ಸಾಧಕನ ಬದುಕು. ಜನಕ ಎಲ್ಲಾ ಅಧಿಕಾರದ ಭೋಗದ ನಡುವೆ ಇದ್ದು, ವಿರಕ್ತನಾಗಿ ಬದುಕಿದವ. ಆದ್ದರಿಂದ ಕೃಷ್ಣ ಇಲ್ಲಿ ಜನಕನ ಹೆಸರನ್ನು ಪ್ರಸ್ತಾಪಿಸುತ್ತಾನೆ. ಕೃಷ್ಣ ಹೇಳುತ್ತಾನೆ: "ಜನಕ ಮುಂತಾದ ರಾಜರ್ಷಿಗಳು ಕರ್ಮಯೋಗದಿಂದಲೇ ಜ್ಞಾನ ಪಡೆದು, ಕರ್ಮ ಮಾಡುತ್ತಾ ಎತ್ತರಕ್ಕೇರಿದರೇ ಹೊರತು, ಕರ್ಮ ತ್ಯಾಗದಿಂದಲ್ಲ" ಎಂದು. ಈ ರೀತಿ ಸಮಾಜಕ್ಕೆ ಮಾರ್ಗದರ್ಶಿಯಾದ ನೀನು ಸಮಾಜಕ್ಕೋಸ್ಕರ ಯುದ್ಧ ಮಾಡು ಎಂದು ಹೇಳುತ್ತಿದ್ದಾನೆ ಕೃಷ್ಣ". 
ಕರ್ತವ್ಯ ಕರ್ಮದ ಬಗ್ಗೆ ವಿವರವಾಗಿ ವಿವರಿಸಿದ ಕೃಷ್ಣ, ಈಗ ತಪ್ಪು ದಾರಿಯಲ್ಲಿ ಮುಂದಾಳು ನಡೆದಾಗ ಸಮಾಜದ ಮೇಲಾಗುವ ಪರಿಣಾಮದ ಬಗ್ಗೆ ಸ್ವತಃ ತನ್ನನ್ನೇ ಉದಾಹರಣೆಯಾಗಿಟ್ಟುಕೊಂಡು ಮುಂದಿನ ಶ್ಲೋಕಗಳಲ್ಲಿ ವಿವರಿಸುತ್ತಾನೆ.

No comments:

Post a Comment