Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, March 20, 2011

Bhagavad Gita Kannada Chapter-03_Shloka_1-2

ಅಧ್ಯಾಯ ಮೂರು

ಎರಡನೆ ಅಧ್ಯಾಯದಲ್ಲಿ ಭಗವಂತನ ಅರಿವು, ಆ ಅರಿವನ್ನು ಪಡೆಯುವ ಉಪಾಯವನ್ನು ಕೃಷ್ಣ ವಿವರಿಸಿದ.  ಈ ಉಪದೇಶದಲ್ಲಿ ಒಂದು ಕಡೆ ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠ, ಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ ಕೃಷ್ಣ. ಇನ್ನೊಂದು ಕಡೆ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಎನ್ನುತ್ತಾನೆ! ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಏಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ  ಯುದ್ಧ? ಮೂರನೇ ಅಧ್ಯಾಯ ಅರ್ಜುನನ ಈ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.
ಅರ್ಜುನ ಉವಾಚ ।
ಜ್ಯಾಯಸೀ  ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ  
ತತ್  ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ           ॥೧॥

ಅರ್ಜುನ ಉವಾಚ- ಅರ್ಜುನ ಹೇಳಿದನು:
ಜ್ಯಾಯಸೀ  ಚೇತ್ ಕರ್ಮಣಃ ತೇ  ಮತಾ ಬುದ್ಧಿಃ ಜನಾರ್ದನ
ತತ್  ಕಿಂ ಕರ್ಮಣಿ ಘೋರೇ ಮಾಮ್  ನಿಯೋಜಯಸಿ ಕೇಶವ - ಓ ಜನಾರ್ದನ, ಕಾಯಕಕ್ಕಿಂತ ಅರಿವೇ ಹಿರಿದು ಎಂದು ನಿನ್ನ ಆಶಯವಾದರೆ, ಮತ್ತೇಕೆ ನನ್ನನ್ನು ಈ ಕೊಲ್ಲುವ ಕಾಯಕದಲ್ಲಿ ತೊಡಗಿಸುತ್ತಿರುವೆ ಕೇಶವ?

ಕೃಷ್ಣ ಜ್ಞಾನ ಮತ್ತು ಕರ್ಮದ ಬಗ್ಗೆ ಕೊಟ್ಟ ವಿವರಣೆಯಿಂದ ಅರ್ಜುನನಿಗೆ ಗೊಂದಲವಾಗುತ್ತದೆ.  ತನಗೆ ಯಾವ ಮಾರ್ಗ ಉಚಿತ ಎನ್ನುವ ಪ್ರಶ್ನೆ ಆತನನ್ನು ಕಾಡುತ್ತದೆ.  ಕೃಷ್ಣ ಒಮ್ಮೆ ಜ್ಞಾನ ಮಾರ್ಗದಲ್ಲಿ ಸಾಗು-ಅದು ಶ್ರೇಷ್ಠ ಎನ್ನುತ್ತಾನೆ, ಇನ್ನೊಮ್ಮೆ  ಯುದ್ಧ ಮಾಡು ಅನ್ನುತ್ತಾನೆ! ತಾನೇಕೆ ಶ್ರೇಷ್ಠವಾದ ಜ್ಞಾನ ಮಾರ್ಗದಲ್ಲಿ ಸಾಗಬಾರದು, ಯುದ್ಧವನ್ನೇಕೆ ಮಾಡಬೇಕು ಎನ್ನುವ ಗೊಂದಲ ಅರ್ಜುನನದು. ಈ ಗೊಂದಲದಲ್ಲಿ  ಅರ್ಜುನ  ಕೃಷ್ಣನಲ್ಲಿ ಕೇಳುತ್ತಾನೆ: ಓ ಜನಾರ್ದನ, ಕರ್ಮಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಎನ್ನುವುದು ನಿನ್ನ ಅಭಿಮತವಾದರೆ, ನನ್ನ ಹತ್ತಿರ ಕರ್ಮ ಮಾಡು ಎಂದು ಏಕೆ ಹೇಳುತ್ತಿದ್ದೀಯ? ಯುದ್ಧ ಎನ್ನುವುದು ಘೋರ ರಾಗ-ದ್ವೇಷಗಳಿಂದ ತುಂಬಿದ ತಾಮಸಕಾರ್ಯ. ಅದು ಅಧ್ಯಾತ್ಮ ಸಾಧನೆಗೆ ತೀರ ವಿರುದ್ಧವಾದ ಕರ್ಮ. ಹೀಗಿರುವಾಗ ನನ್ನನ್ನೇಕೆ  ಈ ಕಾರ್ಯದಲ್ಲಿ ತೊಡಗಿಸುತ್ತಿರುವೆ ಕೇಶವ? ಎಂದು.
ಈ ಶ್ಲೋಕದಲ್ಲಿ ‘ಜನಾರ್ದನ’ ಮತ್ತು ‘ಕೇಶವ’ ಎನ್ನುವ ಎರಡು ನಾಮ ವಿಶೇಷಣವನ್ನು ಬಳಸಿದ್ದಾರೆ. ಈ ವಿಶೇಷಣದಲ್ಲಿ-ಪ್ರಶ್ನೆ ಮಾಡುತ್ತಿರುವ ಅರ್ಜುನನ ಭಾವ ಅಡಗಿದೆ.  ಜನ+ಅರ್ಧನ ಅಂದರೆ ಜನರನ್ನು ನಾಶ ಮಾಡುವವ!  ಇಲ್ಲಿ ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. “ದುಷ್ಟ ನಿಗ್ರಹಕ್ಕಾಗಿ ಅವತರಿಸಿದ ನೀನು, ನನ್ನಿಂದ ಈ ಕಾರ್ಯವನ್ನು ಮಾಡಿಸುತ್ತಿದ್ದೀಯ. ಆದರೆ ಇಲ್ಲಿ ಸೇರಿರುವರೆಲ್ಲ ದುರ್ಜನರಲ್ಲ. ಹೀಗಿರುವಾಗ ಅವರನ್ನು ಕೊಲ್ಲುವ ಕರ್ಮ ಶ್ರೇಷ್ಠ ಹೇಗಾದೀತು? ಜನನ ಮುಕ್ತಗೊಳಿಸಿ ಮೋಕ್ಷವನ್ನು ಕರುಣಿಸುವ ನೀನು, ನನ್ನಿಂದ ಗುರು ಹಿರಿಯರನ್ನು ಕೊಲ್ಲುವ ಈ ಘೋರ ಕರ್ಮವನ್ನು ಏಕೆ ಮಾಡಿಸುತ್ತಿರುವೆ?”. ಎನ್ನುವುದು ಅರ್ಜುನನ ಪ್ರಶ್ನೆ. ಶ್ಲೋಕದ ಕೊನೆಯಲ್ಲಿ ‘ಕೇಶವ’ ಎನ್ನುವ ನಾಮವಿಶೇಷಣ ಅರ್ಜುನನ ಶರಣಾಗತಿಯನ್ನು ಸೂಚಿಸುತ್ತದೆ. ಕಾ+ಈಶ+ವ-ಕೇಶವ; ಇಲ್ಲಿ ’ಕಾ’ ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ ; ಈಶ ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ. ಕೇಶವ ಅಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯನ್ನೊಳಗೊಂಡ ಪರಶಕ್ತಿ. “ಸೃಷ್ಠಿ-ಸ್ಥಿತಿ-ಸಂಹಾರ-ಮೊಕ್ಷಗಳಿಗೆ ಕಾರಣನಾದ ನೀನು ನನ್ನನ್ನು ಈ ಗೊಂದಲದಿಂದ ಪಾರು ಮಾಡು” ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಶರಣಾಗಿ ಬೇಡುತ್ತಾನೆ.

ವ್ಯಾಮಿಶ್ರೇಣ್ಯೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ          ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್           ॥೨॥

ವ್ಯಾಮಿಶ್ರೇಣ ಇವ  ವಾಕ್ಯೇನ ಬುದ್ಧಿಮ್  ಮೋಹಯಸಿ ಇವ ಮೇ
ತತ್  ಏಕಮ್ ವದ ನಿಶ್ಚಿತ್ಯ ಯೇನ ಶ್ರೇಯಃ ಅಹಮ್ ಅಪ್ನುಯಾಮ್-ಇಬ್ಬಗೆಯ ಮಾತಿನಿಂದ ನನ್ನ ನಿರ್ಧಾರಶಕ್ತಿಯನ್ನು ಗೊಂದಲಕ್ಕೀಡುಮಾಡುವಂತಿದೆ. ಆದ್ದರಿಂದ, ಒಂದನ್ನು ನಿರ್ಧರಿಸಿ ಹೇಳು: ಯಾವುದರಿಂದ ನಾನು ಒಳಿತನ್ನು ಪಡೆದೇನು?

ಇಲ್ಲಿ 'ವ್ಯಾಮಿಶ್ರೇಣ' ಎಂದರೆ ಸಂದಿಗ್ದಾರ್ಥ (Contradicting, Confusing). “ಈ  ರೀತಿ ಇಬ್ಬಗೆಯ ಮಾತಿನಿಂದ ನನಗೆ ಯಾವುದು ಸರಿ-ಯಾವುದು ತಪ್ಪು ಎನ್ನುವ ತೀರ್ಮಾನ ಬರುತ್ತಿಲ್ಲ, ಹಾಗು ಆ ಶಕ್ತಿ  ನನ್ನಲ್ಲಿಲ್ಲ. ನಿನ್ನ ಅಭಿಪ್ರಾಯವನ್ನು ನಾನು ಗ್ರಹಿಸಲಾರೆ. ಯಾವ ದಾರಿಯಲ್ಲಿ ನಡೆದರೆ ನಾನು ಶ್ರೇಯಸ್ಸನ್ನು ಪಡೆದೇನು? ನನ್ನ ಬದುಕು ಸಾರ್ಥಕವಾಗುವ ನಿಶ್ಚಿತ ದಾರಿಯನ್ನು ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.

No comments:

Post a Comment