Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, March 13, 2011

Bhagavad Gita Kannada Chapter-02_Shloka_59-64

ವಿಷಯಾ ವಿನಿವರ್ತಂತೇ  ನಿರಾಹಾರಸ್ಯ ದೇಹಿನಃ         
ರಸವರ್ಜಂ ರಸೋSಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ    ॥೫೯॥

ವಿಷಯಾಃ  ವಿನಿವರ್ತಂತೇ  ನಿರಾಹಾರಸ್ಯ ದೇಹಿನಃ
ರಸವರ್ಜಮ್ ರಸಃ ಅಪಿ ಅಸ್ಯ ಪರಮ್  ದೃಷ್ಟ್ವಾ ನಿವರ್ತತೇ- -ಆಹಾರ ತೊರೆದ ಜೀವಿಗೆ ವಿಷಯ ಭೋಗದ ಕಸುವಷ್ಟೇ ಕುಂದುತ್ತದೆ-ನಾಲಗೆಯ ಕಸು ಮತ್ತು ಭೋಗದ ಬಯಕೆಯನ್ನು ಬಿಟ್ಟು. ಅಂಥ ಕಸುವು-ಬಯಕೆ ಕೂಡಾ ಭಗವಂತನನ್ನು ಕಂಡಾಗ ಇಲ್ಲವಾಗುತ್ತದೆ.

ನಾವು ಸ್ಥಿತಪ್ರಜ್ಞರಾಗಬೇಕೆಂದರೆ ಇಂದ್ರಿಯಗಳನ್ನು ಅಂತರ್ಮುಖಗೊಳಿಸಬೇಕು ಎನ್ನುವ ವಿಷಯವನ್ನು ನೋಡಿದೆವು. ಆದರೆ ಅದು  ಅಷ್ಟು ಸುಲಭದ ವಿಷಯವಲ್ಲ. ಸಾಧನಾ ಶರೀರದಲ್ಲಿರುವ ಸಾಧಕ, ಇಂದ್ರಿಯಗಳನ್ನು ಹೊರಗಿನ ವಿಷಯಗಳ ಜೊತೆಗೆ ಸಂಪರ್ಕ ಆಗದಂತೆ ತಡೆದರೆ(ಏಕಾಂತದ ಅಭ್ಯಾಸ), ನೋಡುವ, ಕೇಳುವ ಎಲ್ಲಾ ಆಸೆಗಳು ಹೊರಟು ಹೋಗಬಹುದು. ಆದರೆ  ರುಚಿ(ನಾಲಿಗೆಯ ಚಪಲ) ಮತ್ತು ಶೃಂಗಾರ(ಲೈಂಗಿಕ ಬಯಕೆ)ವನ್ನು ನಿವಾರಿಸುವುದು ಬಹಳ ಕಷ್ಟ.  ಈ ಕಾರಣಕ್ಕಾಗಿ ನಾವು ಬ್ರಹ್ಮಚರ್ಯ ಪಾಲನೆ ಮಾಡಬೇಕೆಂದಿದ್ದರೆ ಒಮ್ಮೆ ಶೃಂಗಾರ ಭೋಗವನ್ನು ಅನುಭವಿಸಿ, ದಾಂಪತ್ಯವೆಂದರೆ ಏನು ಎಂದು ಅರಿತು, ಆನಂತರ ಬ್ರಹ್ಮಚರ್ಯಕ್ಕೆ ಕಾಲಿಟ್ಟರೆ ಸಾಧನೆ ಸುಲಭ.  ನಿಯಮಿತ  ಆಹಾರ, ಉಪವಾಸ- ಅಧ್ಯಾತ್ಮಕ್ಕೆ ಪೂರಕ.  ಅತಿ ಆಹಾರ, ತಾಮಸ ಹಾಗು ರಾಜಸ ಆಹಾರ (ಉದಾ: ತೊಗರಿ ಬೇಳೆ, ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಇತ್ಯಾದಿ) ಅಧ್ಯಾತ್ಮ ಸಾಧನೆಗೆ ತೀರಾ ವಿರುದ್ಧ (ಈ ಕಾರಣಕ್ಕಾಗಿ ಯಾರೇ ಅತಿಥಿ ಬಂದಾಗ ಅವರಿಗೆ ಒತ್ತಾಯ ಪೂರ್ವಕವಾಗಿ ಆಹಾರ ನೀಡಬಾರದು; ಮಾಡಿದ ಅಡಿಗೆ ಮಿಕ್ಕಿದಾಗ ಹಾಳಾಗುತ್ತಲ್ಲಾ ಅಂತ ತಿನ್ನುವುದರಿಂದ ಆಹಾರವೂ ಹಾಳು ದೇಹವೂ ಹಾಳು! ). ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಏಕಾಂತ ಹಾಗು ಆಹಾರ ನಿಯಂತ್ರಣ  ಸಾಧನೆಗೆ ಪೂರಕ . ಇದರಿಂದ ನಮ್ಮ ನಾಲಿಗೆಯ ಮತ್ತು ಭೋಗದ ಚಪಲ ಸಂಪೂರ್ಣ ನಿಗ್ರಹ ಆಗದಿದ್ದರೂ ಕೂಡಾ ಅವು ಭಗವಂತನಲ್ಲಿ ಸಂಪೂರ್ಣ ಶರಣಾದಾಗ ಇಲ್ಲವಾಗುತ್ತವೆ.

ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ     
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೬೦॥

ಯತತಃ ಹಿ ಅಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಮ್  ಮನಃ -- ಸಾಧಕ ಸಾಕಷ್ಟು ತಿಳಿದುಕೊಂಡರೂ, ಸಾಕಷ್ಟು ಪ್ರಯತ್ನಿಸಿದರೂ ಕೂಡಾ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕಲಕಿ ಸೆಳೆದುಬಿಡುತ್ತವೆ.

ನಾವು ಎಷ್ಟು ಓದಿ , ಕೇಳಿ ತಿಳಿದುಕೊಂಡರೂ  ಕೂಡಾ, ಸಾಧನೆಯ ಈ ದಾರಿ ಅಷ್ಟು ಸುಲಭದ್ದಲ್ಲ. ಪ್ರಯತ್ನದ ಛಲವಿಲ್ಲದೆ ಇದು ಅಸಾಧ್ಯ. ಅಧ್ಯಾತ್ಮದ ದಾರಿಯಲ್ಲಿ ಸಾಗಲು ಮನಸ್ಸು ಗಟ್ಟಿಯಾಗಿರಬೇಕು. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಮನಸ್ಸು ಗಟ್ಟಿಯಾದಾಗ ಇಂದ್ರಿಯಗಳು ಸಡಿಲವಾಗುತ್ತವೆ. ರಾಗ ದ್ವೇಷ ಮಾಡಬಾರದು, ಕಾಮ ಕ್ರೋಧಗಳಿಗೆ ಒಳಗಾಗಬಾರದು, ಬಯಕೆಯ ಮೇಲೆ ಕಡಿವಾಣವಿರಬೇಕು ಎಂದು ಗಟ್ಟಿ ಮನಸ್ಸಿನಲ್ಲಿ ತೀರ್ಮಾನ ಮಾಡಿ ಕುಳಿತಾಗ, ಇಂದ್ರಿಯಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ. ಶಾಸ್ತ್ರವನ್ನು ಓದಿ ಪರೋಕ್ಷವಾಗಿ ಸತ್ಯವನ್ನು ಕಂಡವನನ್ನೂ ಸಹ ಈ ಸಮಸ್ಯೆ ಕಾಡದೆ ಬಿಡದು. ಬಲಾತ್ಕಾರವಾಗಿ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುತ್ತವೆ. ಇದರಿಂದಾಗಿ ಮೊದಲು ನಂಬಿದ್ದನ್ನು ನಂಬಬೇಕೋ ಬಿಡಬೇಕೋ ಅನ್ನುವ ಸಂಶಯ ಹುಟ್ಟಿಕೊಳ್ಳುತ್ತದೆ. ಇದು ಪ್ರತಿಯೊಬ್ಬ ಸಾಧಕ  ಜೀವನಿಗೆ ಅನುಭವಕ್ಕೆ ಬರುವ ಸಂಗತಿ. ಈ ಸಮಸ್ಯೆ ಗಂಭೀರವಾಗಿ ಕಂಡರೂ ಕೂಡಾ ಕೃಷ್ಣ ಮುಂದಿನ ಶ್ಲೋಕದಲ್ಲಿ ಇದಕ್ಕೆಸರಳ ಪರಿಹಾರ ಸೂಚಿಸುತ್ತಾನೆ.

ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ ಪರಃ   
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ   ॥೬೧॥

ತಾನಿ ಸರ್ವಾಣಿ ಸಂಯಮ್ಯ ಯುಕ್ತಃ  ಆಸೀತ ಮತ್ ಪರಃ
ವಶೇ ಹಿ ಯಸ್ಯ ಇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ--ಅವುಗಳನ್ನೆಲ್ಲ ತಡೆಹಿಡಿದು, ನನ್ನನ್ನೇ ಪರತತ್ವವೆಂದು ನಂಬಿ ನನ್ನಲ್ಲೇ ಮನವಿಟ್ಟು ಕೂಡಬೇಕು. ಹೀಗೆ ಇಂದ್ರಿಯಗಳನ್ನು ಗೆದ್ದವನ ಅರಿವು ಗಟ್ಟಿಗೊಂಡಿರುತ್ತದೆ.

ಇಂದ್ರಿಯಗಳಿಂದ ಮನಸ್ಸು ಕದಲುವುದು ಅಥವಾ ಮನಸ್ಸಿನಿಂದ ಇಂದ್ರಿಯ ಬೇಡದ ಕಾರ್ಯದಲ್ಲಿ ತೊಡಗುವುದು. ಈ ಸಮಸ್ಯೆಯಿಂದ ಈಚೆ ಬರಬೇಕಾದರೆ ನಾವು ಇಂದ್ರಿಯಗಳೆಂಬ   ಕುದುರೆಗಳನ್ನು ಪಳಗಿಸಿ, ಮನಸ್ಸೆಂಬ ಕಡಿವಾಣದಲ್ಲಿ ಅವುಗಳನ್ನು ಬಿಗಿದು, ಅದು ಸಡಿಲವಾಗದಂತೆ ಬಿಗಿ ಹಿಡಿಯಬೇಕು.  ಈ ಕಾರ್ಯವನ್ನು ಯಶಸ್ಸಾಗಿ ಮಾಡಬೇಕಾದರೆ ಮೊದಲು ನಾವು ಭಗವಂತನಲ್ಲಿ ಶರಣಾಗಬೇಕು. "ಈ ಜವಾಬ್ದಾರಿಯನ್ನು ನನಗೊಪ್ಪಿಸು" ಎನ್ನುತ್ತಾನೆ ಕೃಷ್ಣ. ಎಂಥಹ ಭರವಸೆ?  "ನನ್ನ ಇಂದ್ರಿಯಗಳು ದಾರಿತಪ್ಪದಂತೆ ನನ್ನೊಳಗಿದ್ದು ಪ್ರೇರೇಪಿಸು ಭಗವಂತ, ನಿನ್ನ ಚಿಂತನೆಯ ಶಕ್ತಿ ನಿರಂತರ ನನ್ನ ಮನಸ್ಸಿನಲ್ಲಿ ಉಳಿಯುವಂತೆ ಮಾಡು" ಎಂದು ಭಗವಂತನನ್ನು ಪ್ರಾರ್ಥಿಸಬೇಕು. ಭಗವಂತನಲ್ಲಿ ಶರಣಾಗತಿಯನ್ನು ಪಡೆಯದೆ ಎಲ್ಲವನ್ನು ಸ್ವಪ್ರಯತ್ನದಿಂದ ಮಾಡುತ್ತೇನೆ ಎಂದರೆ ಅದು ಅಸಾಧ್ಯ. ಪ್ರಯತ್ನ ಮಾಡಬೇಕು, ಪ್ರಯತ್ನದಲ್ಲಿ ಜಯ ದೊರೆಯುವಂತೆ ಭಗವಂತನಲ್ಲಿ ಬೇಡಿ, ಆತನಲ್ಲಿ ಶರಣಾದಾಗ, ಒಂದಲ್ಲ ಒಂದು ದಿನ ಅನುಭೂತಿಯ ಅನುಗ್ರಹವಾಗುತ್ತದೆ. ಆಗ ಸಂಪೂರ್ಣ ಇಂದ್ರಿಯ ನಿಗ್ರಹ ಸಾಧ್ಯ. ಈ ಸಾಧನೆ ಅನೇಕ ಜನ್ಮದ್ದು. ಹತ್ತು ದಿನ ಸಾಧನೆ ಮಾಡಿ ನಿರಾಶೆಯಾಗಿ ನಾಸ್ತಿಕನಾಗದೆ, ನಿರಂತರ ಸಾಧನೆ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ.  ಯಾರ ಇಂದ್ರಿಯಗಳು ಅವನ ವಶಕ್ಕೆ ಬಂದವೋ, ಅವನ ಅರಿವು ಗಟ್ಟಿಯಾಗುತ್ತದೆ. ಆತ ಜೀವನದಲ್ಲಿ, ಸಾಧನೆಯ ಹಾದಿಯಲ್ಲಿ ಗೆಲ್ಲುತ್ತಾನೆ.
ನಮ್ಮ ಅಧಃಪತನಕ್ಕೆ  ನಮ್ಮ  ಮನಸ್ಸು ಹೇಗೆ ಕಾರಣವಾಗುತ್ತದೆ ಎನ್ನುವುದನ್ನು  ಕೃಷ್ಣ  ಮುಂದಿನ  ಎರಡು ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಮನುಷ್ಯನ  ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎನ್ನುವ ಒಂದು ಅಪೂರ್ವ ಮಾನಸಿಕ ಚಿತ್ರಣ ಇಲ್ಲಿದೆ.

ಧ್ಯಾಯತೋ ವಿಷಯಾನ್ ಪುಂಸಃ  ಸಂಗಸ್ತೇಷೂಪಜಾಯತೇ   
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ    ॥೬೨॥

ಧ್ಯಾಯತಃ  ವಿಷಯಾನ್ ಪುಂಸಃ  ಸಂಗಃ ತೇಷು ಉಪಜಾಯತೇ
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧಃ ಅಭಿಜಾಯತೇ -- ವಿಷಯಗಳನ್ನೆ ನೆನೆಯುತ್ತಿರುವ ಮನುಷ್ಯನಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.

ಕ್ರೋಧಾದ್  ಭವತಿ  ಸಮ್ಮೋಹಃ ಸಮ್ಮೋಹಾತ್  ಸ್ಮೃತಿವಿಭ್ರಮಃ   
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ     ೬೩॥

ಕ್ರೋಧಾತ್   ಭವತಿ  ಸಮ್ಮೋಹಃ ಸಮ್ಮೋಹಾತ್  ಸ್ಮೃತಿ ವಿಭ್ರಮಃ 
ಸ್ಮೃತಿಭ್ರಂಶಾದ್ ಬುದ್ಧಿನಾಶಃ  ಬುದ್ಧಿನಾಶಾತ್  ವಿನಶ್ಯತಿ --ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂಥ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ!

ಒಂದು ವಸ್ತುವಿನ ನಿರಂತರ ಸಂಪರ್ಕದಿಂದ ನಮಗೆ ಅದರ ಮೇಲೆ ಮೋಹ ಬೆಳೆಯುತ್ತದೆ. ಮೊದಲು ಪರಿಚಯ, ಪರಿಚಯದಿಂದ ಸ್ನೇಹ, ನಂತರ ಆ ಸ್ನೇಹವನ್ನು ಹಚ್ಚಿಕೊಳ್ಳುವುದು(Attachment).ನಂತರ ಅವರು ನನ್ನವರಾಗಬೇಕು ಎನ್ನುವ ಆಸೆ. ನಾವು ಆಸೆ ಪಟ್ಟಂತೆ ನೆರವೇರದಾಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ!  ಕೋಪಕ್ಕೆ ಮೂಲ ಕಾರಣ ಕಾಮನೆ. ನಮಗೆ ಕೋಪ ಬಾರದಂತೆ ತಡೆಯಬೇಕಾದರೆ ಮೊದಲು ಕಾಮನೆಯನ್ನು ತೊರೆಯಬೇಕು. ಆಸೆ ಕಡಿಮೆಯಾದಂತೆ ಸಿಟ್ಟು ಕಡಿಮೆಯಾಗುತ್ತದೆ. ಅಂಟಿಸಿಕೊಳ್ಳುವುದು  ಅಥವಾ ಹಚ್ಚಿಕೊಳ್ಳುವುದರಿಂದ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ. ಅದು ಈಡೇರದಿದ್ದಾಗ ಕೋಪ. ಕೋಪದಿಂದ ಸಮ್ಮೋಹ. ಅಂದರೆ ಅಸಂಗತವಾದ ವಿಚಾರಗಳು ತಲೆಯಲ್ಲಿ ಬಂದು ಮಾಡಬಾರದ್ದನ್ನು ಮಾಡುವ ಬಯಕೆ. ಇದರಿಂದ ಯುಕ್ತಾಯುಕ್ತಗಳನ್ನು ವಿಶ್ಲೇಷಣೆ ಮಾಡುವ ಶಕ್ತಿ ಹೊರಟು ಹೋಗಿ, ತಪ್ಪನ್ನೇ ಸರಿ ಎಂದು ಸಮರ್ಥನೆ ಮಾಡುವ  ಮಟ್ಟಕ್ಕೆ ನಾವು ಇಳಿಯುತ್ತೇವೆ. ಪಲಿತಾಂಶ: ಪ್ರತಿಕಾರ ಮಾಡಬೇಕು ಎನ್ನುವ ಹಠ. ಅದರಿಂದ ಪೂರ್ತಿ ತಿಳಿಗೇಡಿತನ ಮತ್ತು ಕೊನೆಗೆ ಆತ್ಮದ ಅಧಃಪತನ- ವಿನಾಶ-ಸರ್ವನಾಶ!
ಬುದ್ಧಿ ನಾಶವಾದಾಗ ಮನಸ್ಸು ಸತ್ತಂತೆ. ಅದರಿಂದ ಜೀವ ನರಕದ ದಾರಿಯಲ್ಲಿ ಹೋಗುವಂತಾಗುತ್ತದೆ. ಇದು ಅಧಃಪತನದ ದಾರಿ. ನಾವು ಎತ್ತರಕ್ಕೇರಬೇಕೆಂದರೆ   ಪರಮಾತ್ಮನ ಮಹತ್ವವನ್ನು ಅರಿತು ಅವನಿಗೆ ಶರಣಾಗಬೇಕು. ಒಳ್ಳೆಯ ದಾರಿಯಲ್ಲಿ ಮನಸ್ಸು ಚಿಂತನೆ ಮಾಡಿದಾಗ ಆತ್ಮ ಎತ್ತರಕ್ಕೇರಲು ಸಾಧ್ಯ. ಇದಕ್ಕೆ ಮೊದಲು ನಾವು ಹಚ್ಚಿಕೊಳ್ಳುವುದನ್ನು(Over attachment) ಕಡಿಮೆ ಮಾಡಬೇಕು. ಇದರರ್ಥ ಯಾರನ್ನೂ ಪ್ರೀತಿಸಬಾರದು, ಸ್ನೇಹ ಬೆಳೆಸಬಾರದು ಎಂದರ್ಥವಲ್ಲ.  ಪ್ರೀತಿ ಇರಲಿ, ಸ್ನೇಹವಿರಲಿ, ಆದರೆ ಮೋಹ ಬೇಡ.  ಬಂದಿದ್ದು ಬರಲಿ ಎನ್ನುವ ದೃಢ ನಿರ್ಧಾರವಿರಲಿ. ಹೀಗೇ ಆಗಬೇಕು-ಹಾಗೇ ಆಗಬೇಕು ಎನ್ನುವ ಅತಿಮೋಹ ದುಃಖಕ್ಕೆ ಕಾರಣ. ಎಲ್ಲವುದರ ಜೊತೆಗಿದ್ದು, ಎಲ್ಲರನ್ನೂ ಪ್ರೀತಿಸುವುದು-ಆದರೆ  ಹಚ್ಚಿಕೊಳ್ಳದೇ ಇರುವುದು(Detached attachment). ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ.
ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಪ್ರಸನ್ನತೆ ಇಲ್ಲದಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಎಂಥಹ ಪ್ರಸಂಗದಲ್ಲೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಪ್ರಸನ್ನತೆ. ಇದನ್ನು ಗಳಿಸುವುದು ಹೇಗೆ ಎನ್ನುವ ಚಿತ್ರಣ ಮುಂದಿನ ಶ್ಲೋಕ.

ರಾಗದ್ವೇಷವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್   
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ    ॥೬೪॥

ರಾಗ ದ್ವೇಷ ವಿಮುಕ್ತೈ: ತು  ವಿಷಯಾನ್ ಇಂದ್ರಿಯೈ: ಚರನ್
ಆತ್ಮವಶ್ಯೈ: ವಿಧೇಯ ಆತ್ಮಾ  ಪ್ರಸಾದಮ್ ಅಧಿಗಚ್ಛತಿ   --ಒಲವು ಹಗೆತನಗಳಿಂದ ಪಾರಾಗಿ ತನ್ನ ಹಿಡಿತದಲ್ಲಿರುವ ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುವಾಗಲೂ, ಅಂಕೆ ತಪ್ಪದವನ  ಮನಸ್ಸು ತಿಳಿಗೊಳ್ಳುತ್ತದೆ.

ಇಂದ್ರಿಯ ನಿಗ್ರಹ ಅಥವಾ ಹಚ್ಚಿಕೊಳ್ಳದೆ ಇರುವುದು ಅಂದರೆ ಎಲ್ಲಾ ವಿಷಯ ಭೋಗಗಳನ್ನು ತೊರೆದು ಪ್ರಾಪಂಚಿಕ ವ್ಯವಹಾರದಿಂದ ದೂರಸರಿದು ಕಣ್ಮುಚ್ಚಿ ಕುಳಿತುಕೊಳ್ಳುವುದಲ್ಲ. ಇಂದ್ರಿಯದಿಂದ ವಿಷಯ ಗ್ರಹಿಸು, ಅದು ನಿರಂತರ.  ಆದರೆ ಅದರಿಂದ ಪ್ರಭಾವಿತನಾಗಿ ಅದರ ದಾಸನಾಗಬೇಡ ಎನ್ನುತ್ತಾನೆ ಕೃಷ್ಣ. ವಿಷಯಗಳನ್ನು ಇಂದ್ರಿಯಗಳಿಂದ ಅನುಭವಿಸು, ಆದರೆ ವಿಷಯಗಳಿಗೆ ರಾಗ-ದ್ವೇಷಗಳ ಹವ್ಯಾಸವನ್ನು ಅಂಟಿಸಬೇಡ. ಏನು ಬಂತೋ ಹಾಗೇ ಅನುಭವಿಸು. ಇಂತಹ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಇಂದ್ರಿಯ ಯಾವ ವಿಷಯವನ್ನು ಗ್ರಹಿಸಿದರೂ ಅಪಾಯವಿಲ್ಲ. ತಟಸ್ಥ ಮನಸ್ಸಿನಿಂದ ಯಾವ ವಿಷಯ ಕೇಳುವುದರಿಂದ, ನೋಡುವುದರಿಂದ ಯಾವ ಅಪಾಯವೂ ಇಲ್ಲ. ಇಲ್ಲಿ ತಟಸ್ಥ ಮನಸ್ಸು ಅನ್ನುವುದಕ್ಕೆ ಉದಾಹರಣೆ ಎಂದರೆ, ಕೆಲವೊಮ್ಮೆ, ನಾವು ನಮ್ಮ ಸ್ನೇಹಿತರನ್ನು ದಾರಿ ಮಧ್ಯದಲ್ಲಿ ಭೇಟಿಯಾಗುತ್ತೇವೆ. ನಾವು ಅಲ್ಲಿ ಕುಳಿತು ಸಂಭಾಷಣೆ ಮಾಡುತ್ತೇವೆ. ಆದರೆ ನಂತರ ಯಾರಾದರೂ ಬಂದು ನಿನ್ನ ಸ್ನೇಹಿತ ಯಾವ ಬಣ್ಣದ ಬಟ್ಟೆ ಧರಿಸಿದ್ದ ಎಂದು ಕೇಳಿದರೆ  ನಮಗೆ ಗೊತ್ತಿರುವುದಿಲ್ಲ. ನಾವು ನೋಡಿರುತ್ತೇವೆ, ಆದರೆ ಗಮನಿಸಿರುವುದಿಲ್ಲ. ಏಕೆಂದರೆ ಅದರ ಅಗತ್ಯವಿರುವುದಿಲ್ಲ. ಇದೇ ರೀತಿ ಮನಸ್ಸನ್ನು ತಟಸ್ಥವಾಗಿಟ್ಟು ಯಾವ ವಿಷಯ ಗ್ರಹಿಸಿದರೂ ಅಪಾಯವಿಲ್ಲ. ಇದರಿಂದ ಇಂದ್ರಿಯಗಳು ಅಧೀನವಾಗಿರುತ್ತವೆ. ಮನಸ್ಸು ವಿಧೇಯವಾಗಿರುತ್ತದೆ. ಒಳಗಿನಿಂದ  ನಿರ್ಲಿಪ್ತತೆಯನ್ನು ಬೆಳೆಸಿಕೊಂಡಾಗ ಎಲ್ಲರ ಜೊತೆಗಿದ್ದು ಏಕಾಂತತೆಯನ್ನು ಗಳಿಸಬಹುದು. ಎಲ್ಲರ ಜೊತೆ ಬೆರೆತು ಬೇರೆಯಾಗಿರಬಹುದು. ಅಂತರಂಗದ ಪ್ರಪಂಚದಲ್ಲಿ ಬೇರೆಯಾಗಿರುವ ಸ್ಥಿತಿ ಇದು. ಈ ರೀತಿ ಬದುಕಲು ಕಲಿತಾಗ ಮನಸ್ಸು ತಿಳಿಗೊಳ್ಳುತ್ತದೆ. ಯಾವಾಗಲೂ ಸಂತೋಷ ಉಕ್ಕಿ ಹೊರಬರುತ್ತಿರುತ್ತದೆ. ಸಾಧನೆ ಸುಗಮವಾಗುತ್ತದೆ.

No comments:

Post a Comment