Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, November 8, 2014

Bhagavad Gita Kannada Chapter-01 Shloka 24-25


ಸಂಜಯ ಉವಾಚ
ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್           ೨೪

ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ 
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ                 ೨೫

ಇಂದ್ರಿಯದ ದೊರೆಯಾದ ಶ್ರೀಕೃಷ್ಣನು ಏನೂ ಮಾತನಾಡದೇ, ರಥವನ್ನು ಎರಡೂ ಸೈನ್ಯದ ಮಧ್ಯೆ ನಿಲ್ಲಿಸಿದ. ಇಲ್ಲಿಂದ ಮುಂದೆ ನಾವು ಶ್ರೀಕೃಷ್ಣನ ಪ್ರತಿಯೊಂದು ನಡೆಯಲ್ಲಿ ಮನಃಶಾಸ್ತ್ರೀಯ ಚಿಕಿತ್ಸಾ ಪದ್ಧತಿಯನ್ನು(Psychotherapy) ಕಾಣಬಹುದು. ಅಹಂಕಾರವೆನ್ನುವುದು ಒಂದು ಮಾನಸಿಕ ಸ್ಥಿತಿ. ನಾವು ಅಂತಹ ಸ್ಥಿತಿಯಿಂದ ಹೊರಬರಬೇಕಾದರೆ ನಮಗೆ ಮಾನಸಿಕ ಚಿಕಿತ್ಸೆ ಬೇಕು. ಅದನ್ನೇ ಶ್ರೀಕೃಷ್ಣ ಇಲ್ಲಿ ಮಾಡಿ ತೋರಿಸಿದ್ದಾನೆ. ಇಂತಹ ಶ್ರೀಕೃಷ್ಣನನ್ನು ನಾವು ಮನಃಶಾಸ್ತ್ರದ ಪಿತಾಮಹ(Father of Psychology) ಎಂದು ಕರೆದರೆ ತಪ್ಪಾಗದು.
ಈ ಶ್ಲೋಕದಲ್ಲಿ ಶ್ರೀಕೃಷ್ಣನನ್ನು ‘ಹೃಷೀಕೇಶ’ ಎಂದೂ ಅರ್ಜುನನನ್ನು ‘ಗುಡಾಕೇಶ’ನೆಂದೂ ಸಂಬೋಧಿಸಿದ್ದಾರೆ. ಹೃಷೀಕೇಶ ಶಬ್ದದ ಅರ್ಥವನ್ನು ಇಂದ್ರಿಯಗಳ ಒಡೆಯ, ಮನಸ್ಸಿನ ಒಡೆಯ ಎಂದು ನಾವು ಈಗಾಗಲೇ ವಿಶ್ಲೇಶಿಸಿದ್ದೇವೆ. ಅರ್ಜುನನ ಮನದಾಳದಲ್ಲಿ ಸುಪ್ತವಾಗಿದ್ದ ಹಲವು ಗೊಂದಲಗಳನ್ನು ಹೊರಬರಿಸಿ, ಅದಕ್ಕೆ ಚಿಕಿತ್ಸೆ ನೀಡಿದ ಮನೋಜ್ಞ ಶ್ರೀಕೃಷ್ಣನಿಗೆ ಈ ಸಂದರ್ಭದಲ್ಲಿ ಹೃಷೀಕೇಶ ಎನ್ನುವ ಸಂಬೋಧನೆ ತುಂಬಾ ಔಚಿತ್ಯಪೂರ್ಣವಾಗಿದೆ.  ಇನ್ನು  ಗುಡಾಕೇಶ ಎನ್ನುವ ವಿಶೇಷಣಕ್ಕೆ ಶಾಸ್ತ್ರಕಾರರು ಅನೇಕ ಅರ್ಥಗಳನ್ನು ಹೇಳುವುದನ್ನು ನಾವು ಕಾಣುತ್ತೇವೆ.  ಆದರೆ ಸಾಂದರ್ಭಿಕವಾಗಿ ನೋಡಿದರೆ ಇಲ್ಲಿ ಗುಡಾಕಾ+ಈಶ ಎನ್ನುವ ಪದವಿಭಾಗ ಹೆಚ್ಚು ಔಚಿತ್ಯಪೂರ್ಣವಾಗಿದೆ. “ನಿದ್ರಾ ಗುಡಾಕಾ ಸಂಪ್ರೋಕ್ತಾ”. ಗುಡಾಕಾ ಎಂದರೆ ನಿದ್ರೆ. ಹೀಗಾಗಿ ಗುಡಾಕೇಶ ಎಂದರೆ ನಿದ್ರೆಯನ್ನು  ಗೆದ್ದ ವೀರ ಎಂದರ್ಥ. ನಿದ್ರೆಯನ್ನು ಗೆದ್ದು  ಹಗಲೂ-ರಾತ್ರಿ ಎಷ್ಟು ದಿನ ಬೇಕಾದರೂ ಹೋರಾಡಬಲ್ಲ ವೀರ ಅರ್ಜುನನಾಗಿದ್ದ ಎನ್ನುವ ಧ್ವನಿ ಈ ಮೇಲಿನ ಸಂಬೋಧನೆಯಲ್ಲಿದೆ. [ಇದಲ್ಲದೆ ಬಾಹ್ಯವಾಗಿ ನೋಡಿದರೆ ‘ಗುಡಾ’ ಎಂದರೆ ಒಂದು ರೀತಿಯ ಪೊದರು ಕಳ್ಳಿಯ ಗಿಡ. ಗುಡದಂತೆ ಪೊದರು-ಪೊದುರಾದ ಸುಂದರವಾದ ಕೇಶವಿದ್ದ ಅರ್ಜುನನನ್ನು ಗುಡಾಕೇಶ ಎಂದು ಕರೆಯುತ್ತಾರೆ ಎನ್ನುವುದು ಇನ್ನೊಂದು ಅರ್ಥ.  ಆದರೆ ಸಾಂದರ್ಭಿಕವಾಗಿ ಈ ಅರ್ಥ  ಇಲ್ಲಿ  ಅಷ್ಟೊಂದು ಹೊಂದಿಕೆಯಾಗುವುದಿಲ್ಲ].  
ಇಲ್ಲಿ ಸಂಜಯ ಧೃತರಾಷ್ಟ್ರನನ್ನು ‘ಭಾರತ’ ಎಂದು ಸಂಬೋಧಿಸಿದ್ದಾನೆ.  ಹಿಂದಿನ ಕಾಲದ ರಾಜರು ತಮ್ಮ ಬಾಲ್ಯ ಸ್ನೇಹಿತರನ್ನೇ ಸಾರಥಿಯಾಗಿ ಮತ್ತು  ದೇಶದ ಅರ್ಥಮಂತ್ರಿಯನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಅದೇ ರೀತಿ ಇಲ್ಲಿ ಸಂಜಯ ಧೃತರಾಷ್ಟ್ರನ ಬಾಲ್ಯ ಸ್ನೇಹಿತ, ಸಾರಥಿ ಹಾಗೂ ಆತನ ಅರ್ಥಮಂತ್ರಿಯೂ ಆಗಿದ್ದ. ಹೀಗಾಗಿ ಆತ ಒಮ್ಮೊಮ್ಮೆ ಧೃತರಾಷ್ಟ್ರನನ್ನು ಪ್ರೀತಿಯಿಂದ ಮಾತನಾಡಿಸಿದರೆ ಇನ್ನು ಕೆಲವೊಮ್ಮೆ ಧೃತರಾಷ್ಟ್ರ  ತಪ್ಪು ಮಾಡಿದಾಗ ಬಯ್ಯುತ್ತಾನೆ ಕೂಡಾ. ಅಷ್ಟು ಸಲಿಗೆ ಆತನಿಗಿತ್ತು.  “ಭರತ ವಂಶದ ದೊರೆಯಾಗಿ ಅದೇ ವಂಶದ ನಾಶಕ್ಕೆ ನೀನು ಕಾರಣನಾಗುತ್ತಿರುವೆ” ಎನ್ನುವ ವೇದನೆಯ ಧ್ವನಿ  ಇಲ್ಲಿ ಸಂಜಯನ   ‘ಭಾರತ’ ಎನ್ನುವ ಸಂಬೋಧನೆಯಲ್ಲಿ ವ್ಯಕ್ತವಾಗಿದೆ.

ಶ್ರೀಕೃಷ್ಣನು  ಅರ್ಜುನನ ಕೇಳಿಕೆಯಂತೆ ರಥವನ್ನು ಎರಡೂ ಸೈನ್ಯದ ಮಧ್ಯದಲ್ಲಿ, ಅದರಲ್ಲೂ  ಭೀಷ್ಮ-ದ್ರೋಣರು ಮತ್ತು  ಮುಂಚೂಣಿಯಲ್ಲಿದ್ದ ಆತ್ಮೀಯ ಅರಸರು ನೇರವಾಗಿ ಕಣ್ಣಿಗೆ ಕಾಣುವಲ್ಲಿ ತಂದು ನಿಲ್ಲಿಸಿ, ಬಾಂಧವ್ಯವನ್ನು ಬಡಿದೇಳಿಸುವ ಧ್ವನಿಯಲ್ಲಿ ಹೇಳುತ್ತಾನೆ:   "ಹೇ ಪಾರ್ಥ, ಇಲ್ಲಿ ಸೇರಿರುವ ‘ನಿನ್ನ ಕುರುಗಳನ್ನು’ ನೋಡು" ಎಂದು. ಇದು  ಶ್ರೀಕೃಷ್ಣನ ಅದ್ಭುತ ಮನಃಶಾಸ್ತ್ರೀಯ ಚಿಕಿತ್ಸೆ(Psycho therapy) ಮತ್ತು ಇದೇ ಗೀತೆಯ ಆವಿಷ್ಕಾರಕ್ಕೆ ಶ್ರೀಕೃಷ್ಣ ಹಾಕಿದ ಪಂಚಾಂಗ. ಇಲ್ಲಿ ಅರ್ಜುನನ ಮನಃಸ್ಥಿತಿಯ ಪರೀಕ್ಷೆ ನಡೆಯುತ್ತಿದೆ. ಅರ್ಜುನ ಒಬ್ಬ ರಾಜ. ಆತನ ಮೂಲ ಕರ್ತವ್ಯ ಧರ್ಮದ ಪರ ಹೋರಾಟ ಮಾಡುವುದು ಹಾಗೂ ಪ್ರಜಾಪಾಲನೆ ಮಾಡುವುದು. ಹೀಗೆ ತನ್ನ ಕರ್ತವ್ಯಪಾಲನೆ ಮಾಡುತ್ತಿರುವಾಗ ಧರ್ಮದ ವಿರುದ್ಧ ನಿಂತವರು ಯಾರೇ ಆಗಿರಲಿ, ಅವರನ್ನು ಶಿಕ್ಷಿಸುವುದು ಆತನ ಕರ್ತವ್ಯ. ಇಲ್ಲಿ ನನ್ನ ಕುಟುಂಬದವರು, ನನ್ನ ಬಂಧುಗಳು, ನನ್ನ ಸ್ನೇಹಿತರು ಎನ್ನುವ ತಾರತಮ್ಯ ಸಲ್ಲದು. ಇಂತಹ ಜವಾಬ್ಧಾರಿಯುತ ಕಾರ್ಯದಲ್ಲಿ ತೊಡಗಿದ ಅರ್ಜುನ, ತನ್ನ ಸಮೀಪಬಂಧುಗಳನ್ನು, ಗುರುಗಳನ್ನು ಕಂಡಾಗ ಏನು ಮಾಡಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

4 comments:

 1. Hello sir,i have read this Bhagavadgita book,up to 1st chapter,it was wrtiten very beautifully,and meaningfully,but cannot read it more than a hour with the electronic displays,we request you please bring out the book as soon as possible we are waiting for it.it is one of the best i've ever read.

  ReplyDelete
 2. Thank you
  e-book is online to download and print.
  still the content here is very crisp.
  same content with more details book printed and chapter 1 and 2 already available.
  bhagavad gita by bannanje govindacharya

  ReplyDelete
 3. Thank you
  e-book is online to download and print.
  still the content here is very crisp.
  same content with more details book printed and chapter 1 and 2 already available.
  bhagavad gita by bannanje govindacharya

  ReplyDelete
 4. This comment has been removed by a blog administrator.

  ReplyDelete