Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, January 16, 2011

Bhagavad Gita Kannada Chapter-01-Shloka-37-39

ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ ಸ್ವಬಾಂಧವಾನ್
ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ    ೩೭

ತಸ್ಮಾತ್  ನ ಅರ್ಹಾ ವಯಮ್  ಹಂತುಮ್  ಧಾರ್ತರಾಷ್ಟ್ರಾನ್ ಸ್ವ ಬಾಂಧವಾನ್
ಸ್ವ ಜನಮ್  ಹಿ ಕಥಮ್  ಹತ್ವಾ ಸುಖಿನಃ ಸ್ಯಾಮ ಮಾಧವ-ಆದ್ದರಿಂದ ನಮ್ಮ ಅನುಬಂಧಿಗಳಾದ ಧಾರ್ತರಾಷ್ಟ್ರರನ್ನು ನಾವು ಕೊಲ್ಲುವುದು ತರವಲ್ಲ. ನಮ್ಮ ಮಂದಿಯನ್ನು ಕೊಂದು ನಾವು ಹೇಗೆ  ಸುಖಿಗಳಾದೇವು ಮಾಧವ ?

ಧಾರ್ತರಾಷ್ಟ್ರರು ನಮ್ಮ ಸಹೋದರರು. ಅವರನ್ನು ಕೊಲ್ಲುವುದು ತರವಲ್ಲ. ನಮ್ಮ ಮಂದಿಯನ್ನೇ  ನಾವು ಕೊಂದು ಹೇಗೆ ನಾವು ಸುಖಿಗಳಾದೇವು? ಇದು ಅರ್ಜುನನ ಪ್ರಶ್ನೆ. ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ  ಅರ್ಜುನ ತಾನು ಪ್ರಜಾಪಾಲಕ, ಧರ್ಮವನ್ನು ರಕ್ಷಿಸುವುದು ನನ್ನ ಕರ್ತವ್ಯ ಎನ್ನುವುದನ್ನು ಪೂರ್ಣ ಮರೆತು ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. 
ಇಲ್ಲಿ ಅರ್ಜುನ ಕೃಷ್ಣನನ್ನು 'ಮಾಧವ' ಎಂದು ಸಂಬೋಧಿಸುತ್ತಾನೆ. 'ಮಾ' ಅಂದರೆ ಮಾತೆ ಲಕ್ಷ್ಮಿ. ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ. ಇನ್ನು 'ಮಾ' ಅಂದರೆ ಜ್ಞಾನ ಕೂಡ ಹೌದು. ಭಗವಂತ ಜ್ಞಾನದ ಒಡೆಯ, ಅದ್ದರಿಂದ ಆತ ಮಾಧವ. ಶ್ರೀ ಕೃಷ್ಣ  ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದೂ ಕರೆಯುತ್ತಾರೆ. ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಗ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಸಮಸ್ತ ವೈದಿಕ ವಾಙ್ಮಯ ಪ್ರತಿಪಾದ್ಯನಾದ ಭಗವಂತ ಮಾಧವ. ಅರ್ಜುನ  ಶ್ರೀಕೃಷ್ಣನನ್ನು ಈ ರೀತಿ ಸಂಬೋಧಿಸಲು ಕಾರಣವಿದೆ. ಕೃಷ್ಣ ಬರಿಯ ಸೋದರಮಾವನ ಮಗನಲ್ಲ, ಇನ್ಯಾವುದೋ  ಅತಿಮಾನುಷ ಶಕ್ತಿ ಎನ್ನುವ ಎಚ್ಚರ ಆತನಲ್ಲಿತ್ತು. ಆ ಕಾರಣದಿಂದ ಆತ ಒಂದೊಂದು ಕಡೆ ಒಂದೊಂದು ರೀತಿ ಭಗವಂತನ ಆ ಅತಿಮಾನುಷ ಶಕ್ತಿಯನ್ನು ನೆನಪಿಸಿಕೊಂಡಿದ್ದಾನೆ. "ನೀನು ಈ ಜಗತ್ತಿನ ಆದಿಶಕ್ತಿಯೆಂದು ನನಗೆ ತಿಳಿದಿದೆ. ಆದರೂ ಕೂಡಾ ಈ ಒಡಂಬಡಿಕೆಯಲ್ಲಿ ಏಕೆ ಮೂಕ ಪ್ರೇಕ್ಷಕನಾಗಿ ಕುಳಿತಿದ್ದೀಯ”- ಎನ್ನುವುದು ಆತನ ಈ ಸಂಬೋಧನೆಯ ತಾತ್ಪರ್ಯ.
ಇದು ಎಷ್ಟು ವಿಚಿತ್ರ. ಭಗವಂತನ ಜೊತೆಗಿದ್ದು, ಕೃಷ್ಣನನ್ನು ಅತಿಮಾನುಷ ಶಕ್ತಿ ಎಂದು ತಿಳಿದ ಮಹಾಜ್ಞಾನಿ ಅರ್ಜುನ, ಪ್ರತಿ ಕ್ಷಣದಲ್ಲಿ ಗೊಂದಲಕ್ಕೊಳಗಾಗುತ್ತಾನೆ. ಹೀಗಿರುವಾಗ ನಮ್ಮ ನಿಮ್ಮ ಪಾಡೇನು? ಇದು ವಿಚಿತ್ರ ಮಾಯೆ. ಮಣ್ಣು ತಿಂದ ಶ್ರೀಕೃಷ್ಣನ ಬಾಯಿಯಲ್ಲಿ ಭಗವಂತನ ವಿಶ್ವರೂಪವನ್ನು ಕಂಡ ಮೇಲೂ ಯಶೋದೆ, ಕೃಷ್ಣನನ್ನು ಶಿಕ್ಷಿಸಲು ಮುಂದಾಗುತ್ತಾಳೆ. ಇದು 'ನನ್ನ ಮಗು’ ಎನ್ನುವ ಮಮತೆಯ ಮಾಯೆಯಲ್ಲಿರುತ್ತಾಳೆ. ಇಲ್ಲಿ ಅರ್ಜುನನ ಸ್ಥಿತಿ  ಕೂಡಾ ಇದೇ.

ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ     
ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್  ೩೮

ಯದಿ ಅಪಿ ಏತೇ  ನ ಪಶ್ಯಂತಿ ಲೋಭ ಉಪಹತ ಚೇತಸಃ
 ಕುಲಕ್ಷಯ ಕೃತಮ್  ದೋಷಮ್  ಮಿತ್ರದ್ರೋಹೇ  ಚ ಪಾತಕಮ್-  -ಇವರೆಲ್ಲರ ಹೃದಯ ಲೋಭದ ವಶವಾಗಿದೆ. ಕುಲದ ಅಳಿವಿನಿಂದಾಗುವ ಮತ್ತು ಮಿತ್ರ ದ್ರೋಹದಿಂದಾಗುವ ಪಾತಕವನ್ನು ಇವರು ಕಾಣುತ್ತಿಲ್ಲ.

ದುಡ್ಡಿನ ಆಸೆಯಿಂದ, ಲೋಭದಿಂದ ಕುರುಡಾಗಿ ಅವರ ಮನಸ್ಸು ಯೋಚಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಇದರಿಂದ ಕುಲಕ್ಷಯವಾಗುತ್ತದೆ. ಇಡೀ ಭರತವಂಶ ನಿರ್ವಂಶವಾಗುತ್ತದೆ. ಬಂಧುಗಳಾದ ನಾವು ಒಬ್ಬರಿಗೊಬ್ಬರು ಮಿತ್ರರಂತೆ ಆತ್ಮೀಯತೆಯಿಂದ ಬದುಕಬೇಕಿತ್ತು. ಆದರೆ ಒಬ್ಬರನೊಬ್ಬರು ದ್ವೇಷಿಸುತ್ತಿದ್ದೇವೆ. ಇದು ದ್ರೋಹ.
ಇಲ್ಲಿ   'ಮಿತ್ರ' ಎನ್ನುವ ಪದ ಬಳಕೆಯಾಗಿದೆ. ಯಾರು ನಿಜವಾದ ಮಿತ್ರ? ನಮಗೆ ಯಾವಾಗ ಆಪತ್ತು ಬಂದೀತು ಎಂದು ನಮಗಿಂತ ಮೊದಲೇ ಊಹಿಸಿ, ಪೂರ್ವಭಾವಿಯಾಗಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ, ಜೀವಕ್ಕೆ ಜೀವ ಕೊಡುವವನು 'ಮಿತ್ರ'.  

ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್         
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ  ೩೯

ಕಥಮ್   ನ ಜ್ಞೇಯಮ್ ಅಸ್ಮಾಭಿಃ ಪಾಪಾತ್ ಅಸ್ಮಾತ್ ನಿವರ್ತಿತುಮ್ 
ಕುಲಕ್ಷಯ ಕೃತಮ್ ದೋಷಮ್ ಪ್ರಪಶ್ಯದ್ಭಿ ಜನಾರ್ದನ- ಓ ಜನಾರ್ದನ, ಕುಲದ ಅಳಿವಿನಿಂದಾಗುವ ಕೇಡನ್ನು ಮುಂಗಾಣಬಲ್ಲ ನಾವು ಇಂಥ ತಪ್ಪಿನಿಂದ ದೂರವಿರಬೇಕು ಎಂದರಿಯದಿದ್ದರೆ ಹೇಗೆ?

ಇಂಥಹ ಮಹಾಪಾಪವನ್ನು ಮಾಡಬಾರದು ಎಂದು ನಾವು ತಿಳಿದುಕೊಳ್ಳದಿದ್ದರೆ, ದುರ್ಯೋಧನನಿಗೂ ನಮಗೂ ಇರುವ ವೆತ್ಯಾಸವಾದರೂ ಏನು? ಹುಟ್ಟು ಸಾವುಗಳ ಬಂಧದಿಂದ ಪಾರುಮಾಡುವ ಓ ಜನಾರ್ದನನೇ, ಒಂದು ಕುಲವನ್ನು ನಾಶ ಮಾಡುವಂತಹ ದೋಷ ಸ್ಪಷ್ಟವಾಗಿ ನನ್ನ ಕಣ್ಣಿಗೆ ಕಾಣುತ್ತಿದೆ. ಯುದ್ಧೋತ್ತರ ಭಾರತದ ಚಿತ್ರ ನನ್ನ ಕಣ್ಣಿಗೆ ಕಟ್ಟುತ್ತಿದೆ. ಯುದ್ಧದಿಂದಾಗುವ ಅನಿಷ್ಟ ಗೊತ್ತಿದ್ದೂ ಕೂಡಾ, ಯುದ್ಧಕ್ಕೆ ಕಾಲು ಕೆದಕುವ ಬುದ್ಧಿಯನ್ನು ನಾವು ತೋರಿಸಿದರೆ ದುರ್ಯೋಧನನಂತೆ ನಾವು ಕೀಳು ಮಟ್ಟಕ್ಕಿಳಿದಂತಾಗುವುದಿಲ್ಲವೇ? ಇದು ಅರ್ಜುನನ ಪ್ರಶ್ನೆ.

1 comment:

  1. Bhagavad Gita In Kannada: Bhagavad Gita Kannada Chapter-01-Shloka-37-39 >>>>> Download Now

    >>>>> Download Full

    Bhagavad Gita In Kannada: Bhagavad Gita Kannada Chapter-01-Shloka-37-39 >>>>> Download LINK

    >>>>> Download Now

    Bhagavad Gita In Kannada: Bhagavad Gita Kannada Chapter-01-Shloka-37-39 >>>>> Download Full

    >>>>> Download LINK vh

    ReplyDelete