Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, October 5, 2014

Bhagavad Gita Kannada Chapter-01 Shloka-09-11


ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ              

ಮೇಲ್ನೋಟಕ್ಕೆ ಈ ಶ್ಲೋಕವನ್ನು ನೋಡಿದರೆ ತನಗೋಸ್ಕರ ಜೀವದ ಹಂಗು ತೊರೆದು  ಬಂದಿರುವ ತನ್ನ ಕಡೆಯ ವೀರರ ಬಗ್ಗೆ ದುರ್ಯೋಧನ ಹೇಳುತ್ತಿರುವಂತೆ ಕಂಡರೂ ಕೂಡಾ, ಇಲ್ಲಿ ಆತ ಹೇಳುತ್ತಿರುವ ವಿಷಯವೇ ಬೇರೆ. ಇಲ್ಲಿ ಮದರ್ಥೇತ್ಯಕ್ತಜೀವಿತಾಃ ಎನ್ನುವಲ್ಲಿನ ಧ್ವನಿ ಬಹಳ ಮುಖ್ಯ. ಈ ಹಿಂದಿನ ಶ್ಲೋಕಗಳ ವಿವರಣೆಯೊಂದಿಗೆ ಸಾಂದರ್ಭಿಕವಾಗಿ ಈ ಶ್ಲೋಕವನ್ನು ನೋಡಿದಾಗ ಆತನ ಮಾತಿನ ಹಿಂದಿರುವ  ಧ್ವನಿ ನಮಗೆ ಅರ್ಥವಾಗುತ್ತದೆ. “ನಮ್ಮ ಕಡೆಯೂ ಇದ್ದಾರೆ-  ಅನೇಕ ಮಂದಿ  ಶೂರರು. ಆದರೆ ಅವರೆಲ್ಲರೂ  ನನಗೋಸ್ಕರ ತಮ್ಮ ಪ್ರಾಣ ಕೊಡ ಬಂದವರು” ಎನ್ನುವ ವ್ಯಂಗ್ಯ ಇಲ್ಲಿರುವ ಒಳಾರ್ಥ.  “ಅವರೆಲ್ಲರೂ ವಿವಿಧ ಶಸ್ತ್ರಗಳನ್ನು ಪ್ರಯೋಗಿಸಿ ಯುದ್ಧ ಮಾಡಬಲ್ಲವರು  ಆದರೆ ತನ್ನ ಪಾಲಿಗೆ ಯಾರೂ ಇಲ್ಲಾ. ನಾನು ಅಸಾಹಯಕ” ಎನ್ನುವ ಭಾವನೆ ಆತನ ಸುಪ್ತಪ್ರಜ್ಞೆಯಲ್ಲಿ ಬಂದಿರುವುದು ಆತನ ಈ ಮಾತಿನಲ್ಲಿ ವ್ಯಕ್ತವಾಗಿದೆ.
 
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್    ೧೦

ಇಲ್ಲಿ ದುರ್ಯೋಧನನ ಮಾತಿನ ಪರ್ಯಾವಸಾನ(Conclusion)ವಿದೆ. ಆತ ಹೇಳುತ್ತಾನೆ: “ಆ ನಮ್ಮ ಸೈನ್ಯವಿದೆಯಲ್ಲ, ಭೀಷ್ಮಾಚಾರ್ಯರ  ಮುಂದಾಳತ್ವದಲ್ಲಿನ  ಸೈನ್ಯ, ಅದು  ಭೀಮನ  ಕಣ್ಗಾವಲಿನ ಈ ಸೈನ್ಯದ ಮುಂದೆ ಸಜ್ಜಾಗಿರುವುದು ಸಾಲದು” ಎಂದು. ಈ ಮಾತನ್ನ ಸೂಕ್ಷ್ಮವಾಗಿ ನೋಡಿದರೆ ಭೀಷ್ಮಾಚಾರ್ಯರು ಕೌರವ ಸೇನಾಧಿಪತಿ. ಆದರೆ ಭೀಮ ಪಾಂಡವ ಸೇನಾಧಿಪತಿ ಅಲ್ಲ.  ದುರ್ಯೋಧನನಿಗೆ ಭೀಮನ ಮೇಲೆ ದ್ವೇಷವಿದೆ ಹಾಗೂ ಭಯವಿದೆ. ಆ ಕಾರಣದಿಂದ ಆತ ದೃಷ್ಟದ್ಯುಮ್ನನ ಬದಲು ಭೀಮನ ಕಣ್ಗಾವಲಿನ ಪಾಂಡವ ಸೇನೆ ಎಂದು ಸಂಬೋಧಿಸಿದ್ದಾನೆ(ಎಲ್ಲರೂ ಭೀಮರ್ಜುನರಿಗೆ ಸಮಾನರು ಎಂದು ಆತ ಈ ಹಿಂದೆ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು). ಇನ್ನೂ ಸೂಕ್ಷ್ಮವಾಗಿ ನೋಡಿದರೆ- ದುರ್ಯೋಧನ ಯುದ್ಧ ಭೂಮಿಯಲ್ಲಿ ತನ್ನ ಸೇನೆಯ ಮುಂಚೂಣಿಯಲ್ಲಿ ನಿಂತಿದ್ದಾನೆ. ಪಾಂಡವ ಸೇನೆ ಆತನಿಂದ ದೂರದಲ್ಲಿದೆ. ಆದರೆ ಮಾತನಾಡುವಾಗ ಆತ "ಈ ಪಾಂಡವ ಸೇನೆ" ಹಾಗೂ "ಆ ನಮ್ಮ ಸೇನೆ"  ಎಂದು ಸಂಬೋಧಿಸುತ್ತಾನೆ.  ಪಾಂಡವ  ಸೇನೆ ಈಗಾಗಲೇ ತನ್ನ ಹತ್ತಿರ ಬಂದು ನಿಂತಿದೆ ಹಾಗೂ ತನ್ನ ಸೇನೆ ತನ್ನಿಂದ ಬಲು ದೂರದಲ್ಲಿದೆ ಎನ್ನುವಂತೆ ಆತ ಮಾತನಾಡುತ್ತಿದ್ದಾನೆ.
ಈ ಶ್ಲೋಕಕ್ಕೆ ಹೆಚ್ಚಿನ ಕಡೆ ತಪ್ಪು ಅರ್ಥವನ್ನೇ ಬರೆದಿರುವುದನ್ನು ನಾವಿಂದು ನೋಡುತ್ತೇವೆ. ಇಂಗ್ಲೀಷಿನ ಪ್ರಭಾವದಿಂದಾಗಿ ಈ ರೀತಿಯ ಪ್ರಮಾದವಾಗುತ್ತಿದೆ ಎನಿಸುತ್ತದೆ. ಇಲ್ಲಿ ‘ಅಪರ್ಯಾಪ್ತಂ’ ಎಂದರೆ  ‘ಅಪರಿಮಿತ’ ಮತ್ತು ‘ಪರ್ಯಾಪ್ತಂ’ ಎಂದರೆ ‘ಸೀಮಿತ’  ಎನ್ನುವ ಕೋಶದ ಅರ್ಥ ಬಳಸಿ ಅನೇಕರು ಭಾಷ್ಯ ಬರೆದಿದ್ದಾರೆ. ಆದರೆ ಇದು ಸರಿಯಲ್ಲಾ. ಈ ಶ್ಲೋಕಕ್ಕೆ ಅರ್ಥ ಬರೆಯುವ ಮುನ್ನ ಇಲ್ಲಿ ದುರ್ಯೋಧನನ ಮನಃಸ್ಥಿತಿ ಹೇಗಿತ್ತು ಮತ್ತು ಈ ಹಿಂದೆ ಆತ ಏನೇನು ಮಾತನ್ನಾಡಿದ್ದಾನೆ ಎನ್ನುವುದನ್ನು ನಾವು ಸಾಂದರ್ಭಿಕವಾಗಿ ನೋಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಮಾತ್ರ ಈ ಶ್ಲೋಕದ ಹಿಂದಿನ ಧ್ವನಿ  ನಮಗರ್ಥವಾಗುತ್ತದೆ.  “ನಮ್ಮ ಕಡೆ  ಹನ್ನೊಂದು ಅಕ್ಷೋಹಿಣಿ ಸೇನೆ ಇದ್ದರೂ ಕೂಡಾ ನಮ್ಮ ಸಜ್ಜು ಸಾಲದು. ಭೀಷ್ಮಾಚಾರ್ಯರ ನೇತೃತ್ವ  ಇದ್ದೂ ಕೂಡಾ ಭೀಮಸೇನನ  ಮುಂದಾಳತ್ವದಲ್ಲಿನ ಪಾಂಡವರ ಏಳು ಅಕ್ಷೋಹಿಣಿ ಸೇನೆಯನ್ನು ಗೆಲ್ಲುವ ಸಜ್ಜು, ಒಗ್ಗಟ್ಟು  ನಮ್ಮಲ್ಲಿಲ್ಲಾ (ಅಪರ್ಯಾಪ್ತಂ/insufficient/inefficient). ಪಾಂಡವರ ಸೇನೆ ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ಒಗ್ಗಟ್ಟಿನಲ್ಲಿ, ಸಂಯೋಜನೆಯಲ್ಲಿ ಸುಭದ್ರವಾಗಿದೆ(ಪರ್ಯಾಪ್ತಂ/sufficient/efficient).” ಎನ್ನುವುದು ದುರ್ಯೋಧನನ ಮಾತಿನ ಒಟ್ಟು ತಾತ್ಪರ್ಯ.
ಇಲ್ಲಿ ಮಾನಸಿಕವಾಗಿ ದುರ್ಯೋಧನ ಎಷ್ಟು ಬೆಂದಿದ್ದ ಎನ್ನುವುದನ್ನು ಗಮನಿಸಿ. ಭೀಷ್ಮ-ದ್ರೋಣ-ಕೃಪಾಚಾರ್ಯರು ಯುದ್ಧವನ್ನು ಬಯಸುತ್ತಿರಲಿಲ್ಲಾ. ಅವರಿಗೆ ಪಾಂಡವರ ಮೇಲೆ ಪ್ರೀತಿ ಇತ್ತು. ಕರ್ಣನಿಗೆ ಯುದ್ಧ ಮಾಡಬೇಕು ಎನ್ನುವ ಬಯಕೆ ಇದ್ದಿದ್ದರೂ ಕೂಡಾ ಇಂದು ಆತ ಯುದ್ಧ ಮಾಡುವುದಿಲ್ಲಾ ಎಂದು ಪ್ರತಿಜ್ಞೆ ಮಾಡಿ ಕುಳಿತಿದ್ದಾನೆ. ಮಾದ್ರಿಯ ಅಣ್ಣ, ನಕುಲ-ಸಹದೇವರ ಸಹೋದರ ಮಾವ  ಪಾಂಡವರ ಕಡೆಯಲ್ಲಿರಬೇಕಾದವನು ಆಕಸ್ಮಿಕವಾಗಿ ದುರ್ಯೋಧನನ ಆತಿಥ್ಯಕ್ಕೆ ಸಿಕ್ಕಿಬಿದ್ದು ಮನಸ್ಸಿಲ್ಲದ ಮನಸ್ಸಿನಿಂದ ದುರ್ಯೋಧನ ಕಡೆ ನಿಂತಿದ್ದಾನೆ. ಹೀಗೆ ಪ್ರತಿಯೊಬ್ಬರೂ ಪಾಂಡವರ ಯೋಗಕ್ಷೇಮದ ಚಿಂತನೆ ಮಾಡುತ್ತಾ ಕೌರವರ ಕಡೆ ನಿಂತಿದ್ದಾರೆ!  ಹೀಗಿರುವಾಗ ಗೆಲ್ಲುವುದು ಹೇಗೆ?
ಇನ್ನೊಂದು ಕಡೆ ನೋಡಿದರೆ ಶಿಸ್ತುಬದ್ದವಾಗಿ ಒಗ್ಗಟ್ಟಿನಿಂದ ನಿಂತಿರುವ ಪಾಂಡವ ಸೇನೆ. ಅಲ್ಲಿ ಮಾರ್ಗದರ್ಶಕನಾಗಿ ಜಗತ್ತಿನ ಸರ್ವಶ್ರೇಷ್ಠ ವೀರ ಭೀಮಸೇನ ನಿಂತಿದ್ದಾನೆ.  ಭೀಮನ ಪರಾಕ್ರಮದ ಬಗ್ಗೆ ದುಯೋಧನನೇ ಹೇಳಿರುವುದನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ. ಕೀಚಕ ಸತ್ತ ಎನ್ನುವ ಸುದ್ದಿ ಬಂದಾಗ  ದುರ್ಯೋಧನ ಹೇಳುತ್ತಾನೆ: “ಶೂರಾಣಾಂ ಶಾಸ್ತ್ರ ವಿದುಷಾಂ ಕೃತೀಣಾಂ ತತ್ತ್ವ ನಿರ್ಣಯೇ ಬಾಹುಬಲೇ ಸ್ಥೈರ್ಯೇ ಶಾರೀರ ಸಂಭವೇ ಸಾಮ್ಪ್ರತಂ ಮನುಷ್ಯೇ ಲೋಕೇ ಸದೈತ್ಯ ನರರಾಕ್ಷಸೇ ಚತ್ವಾರಃ ಪ್ರಾಣಿನಾಮ್ ಶ್ರೇಷ್ಠಾಃ ಪಂಚಮಂ ನಾನುಶುಶ್ರುಮಃ :  ಇಂದು ನಮ್ಮ ಸಮಕಾಲೀನವಾಗಿರತಕ್ಕಂತಹ ಈ ಪ್ರಪಂಚದಲ್ಲಿ, ಇಡೀ ಭೂಮಿಯಲ್ಲಿ, ಮನುಷ್ಯಮಾತ್ರರಷ್ಟೇ ಅಲ್ಲಾ, ದೈತ್ಯರು, ರಾಕ್ಷಸರು,  ಪ್ರಾಣಿಗಳು, ಹೀಗೆ ಯಾವುದನ್ನು ತೆಗೆದುಕೊಂಡರೂ ಕೂಡಾ  ಎಲ್ಲರಿಗಿಂತಲೂ ಬಲಿಷ್ಠ ಸ್ಥಾನದಲ್ಲಿರುವವರು ನಾಲ್ಕೇ ಮಂದಿ. ಭೀಮಶ್ಚ ಬಲಭದ್ರಶ್ಚ ಮದ್ರರಾಜಶ್ಚ ವೀರ್ಯವಾನ್ ಚತುರ್ಥಃ ಕೀಚಕಸ್ತೇಷಾಂ ಪಂಚಮಂ ನಾನುಶುಶ್ರುಮಃ  ಎಲ್ಲರಿಗಿಂತ ಸರ್ವಶ್ರೇಷ್ಠ ಸ್ಥಾನದಲ್ಲಿ ಭೀಮನಿದ್ದಾನೆ. ಆನಂತರ ಎರಡನೇ ಸ್ಥಾನದಲ್ಲಿ ಬಲರಾಮ, ನಂತರ ಶಲ್ಯ, ಆನಂತರ ನಾಲ್ಕನೇ ಸ್ಥಾನದಲ್ಲಿ ಕೀಚಕ. ಇದರಾಚೆಗೆ ಐದನೆಯವನು ಇಲ್ಲಾ”.  ಇದು ದುರ್ಯೋಧನನೇ ಭೀಮನ ಬಗ್ಗೆ ಆಡಿದ್ದ ಮಾತು. ಈ ಭಯದಿಂದಲೇ ಆತ  ಇಲ್ಲಿ ಪಾಂಡವ ಸೇನೆಯನ್ನು “ಭೀಮಾಭಿರಕ್ಷಿತಮ್” ಎಂದಿರುವುದು. ಈ ಎಲ್ಲಾ ಕಾರಣಗಳಿಂದ ಯುದ್ಧರಂಗಕ್ಕೆ ಗೆದ್ದೇ ಗೆಲ್ಲುತ್ತೇನೆ ಎಂದು ಬಂದಿದ್ದ ದುರ್ಯೋಧನ ಗೊಂದಲಕ್ಕೊಳಗಾಗುತ್ತಾನೆ.

ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ                ೧೧


ಮುಂದುವರಿದು ದುರ್ಯೋಧನ ಹೇಳುತ್ತಾನೆ: “ಆಯಕಟ್ಟಿನ  ಎಲ್ಲೆಡೆಗಳಲ್ಲೂ ತಕ್ಕಂತೆ ಹಂಚಿಕೊಂಡು ಕಾವಲು ನಿಂತು ನೀವೆಲ್ಲರೂ ಭೀಷ್ಮರನ್ನು ಕಾಯುತ್ತಿರಬೇಕು” ಎಂದು.  ಇಲ್ಲಿ " ಪಾಂಡವ ಪಕ್ಷಪಾತಿಯಾದ ನಮ್ಮ ಮುದುಕ ಸೇನಾಧಿಪತಿ  ಭೀಷ್ಮಾಚಾರ್ಯರನ್ನು ಸ್ವಲ್ಪ ನೋಡಿಕೊಳ್ಳಿ" ಎನ್ನುವಂತಿದೆ ಆತನ ಮಾತು. ಆತನಿಗೆ  ತನ್ನ ಸೇನಾಧಿಪತಿಯ ಮೇಲೇ ನಂಬಿಕೆ ಇಲ್ಲ! 

ಈ ಮಾತನ್ನು ಕೇಳಿ ಭೀಷ್ಮಾಚಾರ್ಯರಿಗೆ ಅದೆಷ್ಟು ನೋವಾಗಿರಬೇಕು. ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ, ತಾನು ಹುಟ್ಟಿಬಂದ ಮನೆತನದ ರಾಜಾಜ್ಞೆಗೆ ಬದ್ಧನಾಗಿ, ತನ್ನ ಅಂತರಂಗದ ಇಚ್ಛೆಗೆ ವಿರುದ್ಧವಾಗಿ, ತಾನು ಪ್ರೀತಿಸಿದ ತನ್ನ ಮೊಮ್ಮಕ್ಕಳ ವಿರುದ್ಧ ಹೋರಾಟಕ್ಕೆ ಪ್ರಾಮಾಣಿಕವಾಗಿ ನಿಂತಾಗ, ಭರವಸೆ ಕಳೆದುಕೊಂಡು ಮಾತನಾಡುತ್ತಿರುವ ದುರ್ಯೋಧನನ ಕುಹಕ ನುಡಿ ಅವರಿಗೆ ಎಷ್ಟೊಂದು ನೋವನ್ನುಂಟುಮಾಡಿರಬಹುದು. ಇದನ್ನು ನಾವು ಊಹಿಸುವುದೂ ಕಷ್ಟ. ಇಂಥಹ ಸಮಯದಲ್ಲಿ ಭೀಷ್ಮಾಚಾರ್ಯರು ತನ್ನ ನೋವನ್ನು ನುಂಗಿ ಮೊಮ್ಮೊಗನ ನೋವನ್ನು ಪರಿಹಾರ ಮಾಡಲು ಪ್ರಯತ್ನಿಸುತ್ತಾರೆ.

No comments:

Post a Comment