Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, October 4, 2014

Bhagavad Gita Kannada Chapter-01 Shloka-04-08(Continued)


ಇಲ್ಲಿ ದುರ್ಯೋಧನ ಬಳಸಿರುವ ಕೆಲವು ವಿಶೇಷಣಗಳನ್ನು ನಾವು ಗಮನಿಸಬೇಕು. ಮಹಾರಥಿ, ವೀರ್ಯವಾನ್, ವಿಕ್ರಾಂತ ಮತ್ತು  ನರಪುಂಗವ ಇವು ಆತ ಪಾಂಡವರ ಕಡೆಯವರಿಗೆ ಬಳಸಿದ ವಿಶೇಷಣಗಳು.  ಮಹಾರಥಿ ಎಂದರೇನು ಎನ್ನುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇನ್ನು ವೀರ್ಯವಾನ್. ವೀರ್ಯ ಎಂದರೆ ಶಕ್ತಿ. ಅಪಾರವಾದ ಶಕ್ತಿಯ ಅಭಿವ್ಯಕ್ತಿ ಮಾಡುವವನು ವೀರ್ಯವಾನ್. ಒಳಗಿರುವ ಪೌರುಷ ನೋಡುವಾಗಲೇ ವ್ಯಕ್ತವಾದರೆ ಅಂಥವರನ್ನು ನರಪುಂಗವ ಅಥವಾ ಗೂಳಿಯಂಯಂಥಹ ಮನುಷ್ಯ ಎನ್ನುತ್ತಾರೆ. (ಹಿಂದಿನ ಕಾಲದಲ್ಲಿ ಪೌರುಷದ ಸಂಕೇತವಾಗಿರುವ ಗೂಳಿ, ಹುಲಿ ಮತ್ತು ಸಿಂಹವನ್ನು ಮನುಷ್ಯರಿಗೆ ಉಪಮಾನವಾಗಿ ಬಳಸುತ್ತಿದ್ದರು. ಉದಾಹರಣೆಗೆ: ಪುರುಷವೃಷಭ, ಪುರುಷವ್ಯಾಘ್ರ, ಪುರುಷಸಿಂಹ ಇತ್ಯಾದಿ). ನಡೆಗೆಯಲ್ಲೇ ಪೌರುಷದ ಅಭಿವ್ಯಕ್ತಿ ಇದ್ದಲ್ಲಿ ಅವರನ್ನು ವಿಕ್ರಾಂತರು ಎನ್ನುತ್ತಾರೆ. ಅವರ ನಡಿಗೆ ಹಾಗೂ ನೋಟ ವೈರಿಯ ಎದೆ ನಡುಗಿಸಬಲ್ಲುದು.
ಧೃಷ್ಟಕೇತು, ಚೇಕಿತಾನ ಮತ್ತು ಕಾಶೀರಾಜ: ಈ ಮೂವರನ್ನು ದುರ್ಯೋಧನ ವೀರ್ಯವಾನ್ ಎಂದು ಸಂಬೋಧಿಸಿದ್ದಾನೆ. ಈ ಹಿಂದೆ ಹೇಳಿದಂತೆ: ಈ ವ್ಯಕ್ತಿಗಳ ಹೆಸರನ್ನು ಹೆಕ್ಕಿ ಹೇಳುತ್ತಿರುವ ದುರ್ಯೋಧನನ ಮನಃಸ್ಥಿತಿಯನ್ನು ತಿಳಿಯಬೇಕಾದರೆ ನಾವು ಆ ವ್ಯಕ್ತಿಗಳ ಹಿಂದಿರುವ ಇತಿಹಾಸವನ್ನು ತಿಳಿಯಬೇಕು. 
ಧೃಷ್ಟಕೇತು: ಈತ ಶಿಶುಪಾಲನ ಮಗ. ಶಿಶುಪಾಲ ಭೀಮಾರ್ಜುನರನ್ನು ತಣ್ಣಗಾಗಿಸುವುದಕ್ಕಾಗಿ ತನ್ನ ಮಗಳನ್ನು ಧರ್ಮರಾಯನಿಗೆ ಕೊಟ್ಟು ಸಂಬಂಧ ಬೆಳೆಸಿದ್ದ. ಆದರೆ ಆತನ ಈ ಯುದ್ಧ ತಂತ್ರಗಾರಿಕೆ ಫಲಿಸುವುದಿಲ್ಲಾ ಮತ್ತು  ಧರ್ಮರಾಯನ ರಾಜಸೂಯ ಯಜ್ಞ ಕಾಲದಲ್ಲಿ ಅಸಹ್ಯವಾಗಿ ವರ್ತಿಸಿದ ಶಿಶುಪಾಲನನ್ನು ಶ್ರೀಕೃಷ್ಣ ಪಾಂಡವರ ಸಭೆಯಲ್ಲೇ ಶಿರಚ್ಛೇದ ಮಾಡಿದ್ದ. ಇಂಥಹ ಶಿಶುಪಾಲನ ಮಗ ಇಂದು ಪಾಂಡವರ ಪಕ್ಷದಲ್ಲಿ! “ಯಾರ ರಾಜಸಭೆಯಲ್ಲಿ ತನ್ನ ತಂದೆಯ ಕೊಲೆ ನಡೆಯಿತೋ ಅಂಥವರ ಪರ ಮಗ ವಹಿಸುವುದೇ?” ಇದು ದುರ್ಯೋಧನನ ಸಂಕಟ.
ಚೇಕಿತಾನ: ಈ ಹಿಂದೆ ಹೇಳಿದಂತೆ ಈತ ಸಾತ್ಯಕಿಯಂತೆ ಒಬ್ಬ ಯಾದವ ವೀರ. ಬಲರಾಮನ ಅನುಪಸ್ಥಿತಿಯಿಂದಾಗಿ ಈತ ಪಾಂಡವ ಪಾಳಯ ಸೇರಿದ್ದ.
ಕಾಶೀರಾಜ: ಇಲ್ಲಿ ಕಾಶಿರಾಜ ಎಂದಾಗ ನಮಗೆ ಇಬ್ಬರು ಕಾಶೀರಾಜರು ನೆನಪಿಗೆ ಬರುತ್ತಾರೆ. ಒಂದು ಕಡೆ ಸಂಗಮವಾಗಿರುವ ಎರಡು ನದಿಗಳು ಕಾಶಿ ನಗರವನ್ನು 'ವರಣ' ಮತ್ತು 'ಅಸಿ' ಎನ್ನುವ ಎರಡು ವಿಭಾಗಗಳಾಗಿ ವಿಂಗಡಿಸಿವೆ(ಅದೇ ಇಂದಿನ ವಾರಣಾಸಿ). ಈ ಎರಡು ಭಾಗದ ಇಬ್ಬರೂ ರಾಜರನ್ನು ಕಾಶೀರಾಜರೆಂದು ಕರೆಯುತ್ತಾರೆ. ಒಬ್ಬ ದುರ್ಯೋಧನನಿಗೆ ಹೆಣ್ಣುಕೊಟ್ಟ  ಮಾವ ಹಾಗೂ ಇನ್ನೊಬ್ಬ ಭೀಮಸೇನನಿಗೆ ಕಾಳಿಯನ್ನು ಕೊಟ್ಟು ಮದುವೆ ಮಾಡಿದ ರಾಜ. ಪ್ರಾಯಃ ಇಲ್ಲಿ ದುರ್ಯೋಧನ ಹೇಳುತ್ತಿರುವ ಕಾಶೀರಾಜ ಭೀಮಸೇನನ ಮಾವನಿರಬೇಕು. ಇದು ಏಕೆ ಎಂದು ತಿಳಿಯಲು ನಾವು ಇತಿಹಾಸವನ್ನು ನೋಡಬೇಕಾಗುತ್ತದೆ. ಯಾದವ ಕುಲದ ಇನ್ನೊಂದು ಕವಲಿನಲ್ಲಿ ಐದು ಮಂದಿ ರಾಜರಿದ್ದರು. ಅವರೆಂದರೆ: ೧. ಅಂಗ, ೨. ವಂಗ, ೩. ಕಳಿಂಗ, ೪. ಪುಂಡ್ರ  ಮತ್ತು ೫. ಸುಕಮಾ. ಅನು ವಂಶದಿಂದ ಬಂದ ಈ ಐವರು ರಾಜರ ಹೆಸರಿನಲ್ಲಿ ಐದು ರಾಜ್ಯಗಳಿದ್ದವು. ಈ ಐದು ರಾಜ್ಯಗಳಲ್ಲಿ ಪೌಂಡ್ರದೇಶ ಕೂಡಾ ಒಂದು ಮತ್ತು ಇದು  ಕಾಶೀರಾಜ್ಯದ ಪಕ್ಕದಲ್ಲಿತ್ತು. ಪೌಂಡ್ರ ದೇಶದ ರಾಜನಿಗೆ ಗಂಡು ಮಕ್ಕಳಿರಲಿಲ್ಲಾ. ಆದ್ದರಿಂದ ಆತ ತನ್ನ ಮಗಳು ಮತ್ತು ವಸುದೇವನಿಂದ ಪಡೆದ ಸಂತಾನಕ್ಕೆ ದೇಶದ ಅಧಿಪತ್ಯವನ್ನು ನೀಡುತ್ತಾನೆ. ಅವನೇ ಪೌಂಡ್ರಕ ವಾಸುದೇವ. ಈ ಪೌಂಡ್ರಕ ವಾಸುದೇವ ಒಮ್ಮೆ ತನ್ನ ಮಿತ್ರನಾದ ಕಾಶೀರಾಜನೊಂದಿಗೆ ಸೇರಿ ಶ್ರೀಕೃಷ್ಣನ ಮೇಲೆ ದಾಳಿ ಮಾಡುತ್ತಾನೆ. ಈ ಯುದ್ಧದಲ್ಲಿ  ಕಾಶೀರಾಜ ಮತ್ತು ಪೌಂಡ್ರಕ ಇಬ್ಬರೂ ಹತರಾಗುತ್ತಾರೆ. ಆಗ ಕಾಶೀರಾಜನ ಮಗ ಸುದಕ್ಷಣ ಶ್ರೀಕೃಷ್ಣನ ಮೇಲೆ  ಕೃತ್ರಿಮ ಪ್ರಯೋಗ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ಚಕ್ರ ಪ್ರಯೋಗ ಮಾಡುತ್ತಾನೆ. ಆಗ ಕೃತ್ರಿಮ ಹಿಂತಿರುಗಿ ಬಂದು ಇಡೀ ಕಾಶೀರಾಜ್ಯವನ್ನು ಸುಟ್ಟಿತು ಮತ್ತು ಸುದಕ್ಷಣ ಕೂಡಾ ಈ ಯುದ್ಧದಲ್ಲಿ ಹತನಾದ ಎಂದು ಪುರಾಣಗಳಲ್ಲಿ ಹೇಳುತ್ತಾರೆ. ಈ ಸುದಕ್ಷಣನ ಸಹೋದರಿ, ಕಾಶೀರಾಜನ ಪುತ್ರಿ, ಭಾನುಮತಿ ದುರ್ಯೋಧನನ ಪತ್ನಿ(ಈಕೆಯನ್ನು ಭಾನುಮತಿ ಎಂದು ಕವಿಗಳು ಕರೆಯುತ್ತಾರೆ. ನಿಜವಾದ ಹೆಸರು ಏನು ಎನ್ನುವುದು ಸ್ಪಷ್ಟವಿಲ್ಲ). ಈ ಹಿನ್ನೆಲೆಯಲ್ಲಿ ಇಲ್ಲಿ ನಾವು ಸೂಕ್ಷ್ಮವಾಗಿ ನೋಡಿದಾಗ ದುರ್ಯೋಧನ ಏಕೆ ಕಾಶೀರಾಜನ ಹೆಸರು ಹೇಳಿದ ಎನ್ನುವುದು ತಿಳಿಯುತ್ತದೆ. "ಅಯ್ಯೋ, ಕಾಶೀರಾಜನೂ ಕೂಡಾ ಪಾಂಡವರ ಪರವಾಗಿ ಹೋರಾಟ ಮಾಡುತ್ತಿದ್ದಾನೆ.  ನನ್ನ ಮಾವನಾದ ಕಾಶೀರಾಜ ಇಂದು ನನ್ನೊಂದಿಗಿಲ್ಲವಲ್ಲಾ" ಎನ್ನುವ ಕಳವಳ ದುರ್ಯೋಧನನನ್ನು ಕಾಡುತ್ತಿದೆ.
ಪುರುಜಿತ್ ಮತ್ತು  ಕುಂತೀಭೋಜ: ಇವರಿಬ್ಬರೂ ಕುಂತೀದೇಶದವರು. ಮೂಲತಃ ಕುಂತಿ ಯಾದವ ವಂಶದವಳು. ವಸುದೇವನ ತಂಗಿ. ವಸುದೇವನ ತಂದೆ ಶೂರಸೇನನಿಗೆ ಹತ್ತು ಮಂದಿ ಗಂಡು ಮಕ್ಕಳು ಮತ್ತು ಐದು ಮಂದಿ ಹೆಣ್ಣುಮಕ್ಕಳು. ಈ ಐವರು ಹೆಣ್ಣು ಮಕ್ಕಳಲ್ಲಿ ಕುಂತಿ ಮೊದಲನೆಯವಳು.  ಆಕೆಯ ಮೂಲ ಹೆಸರು 'ಪ್ರಥು'. ಆಕೆಯನ್ನು ಕುಂತೀದೇಶದ ರಾಜ ದತ್ತು ಪಡೆದಿದ್ದರಿಂದ ಆಕೆ ‘ಕುಂತಿ’ ಎನ್ನುವ ಹೆಸರು ಪಡೆದಳು.  “ದತ್ತು ಸಂಬಂಧದಿಂದಾಗಿ ನಮ್ಮ ಕಡೆ ಬರಬೇಕಾಗಿದ್ದ ಪುರುಜಿತ್ ಮತ್ತು   ಕುಂತೀಭೋಜ ಪಾಂಡವರ ಪರ ಸೇರಿಕೊಂಡಿದ್ದಾರೆ” ಎನ್ನುವುದು ದುರ್ಯೋಧನನ ಅಳಲು.
ಶ್ಯಭ್ಯ: ಈತ ಶಿಭಿ ದೇಶದ ರಾಜ.  ಈತನಿಗೊಬ್ಬ ಮಗನಿದ್ದ. ಆತನಿಗೂ ಜಯದ್ರತನಿಗೂ ಸ್ನೇಹವಿತ್ತು. ಒಮ್ಮೆ ಇವರಿಬ್ಬರು ಯಾವುದೋ ಸ್ವಯಂವರಕ್ಕೆಂದು ಒಟ್ಟಿಗೆ ಕಾಡಿನಲ್ಲಿ ಪ್ರಯಾಣಿಸುತ್ತಿದ್ದಾಗ  ಅಲ್ಲಿ ವಾನಪ್ರಸ್ಥದಲ್ಲಿದ್ದ ದ್ರೌಪದಿ ಅವರ ಕಣ್ಣಿಗೆ ಬೀಳುತ್ತಾಳೆ. ಆಗ ಶೈಭ್ಯನ ಮಗ ಜಯದ್ರತನನ್ನು ಪ್ರಚೋದಿಸುತ್ತಾ ಹೇಳುತ್ತಾನೆ: “ನಾವು ಹೋಗುತ್ತಿರುವ ಸ್ವಯಂವರದಲ್ಲಿ ನಮಗೆ ಮಾಲೆ ಸಿಗುತ್ತದೆ ಎನ್ನುವ ಭರವಸೆ ಇಲ್ಲಾ.  ಇಲ್ಲಿ ಇಷ್ಟು ಸುಂದರಿಯಾದ ಹುಡುಗಿ ಇರುವಾಗ ನಾವೇಕೆ ಅಂಥಹ ಸ್ವಯಂವರಕ್ಕೆ ಹೋಗಬೇಕು? ಈಕೆಯನ್ನೇ ಅಪಹರಿಸೋಣ” ಎಂದು. ಹೀಗೆ ಅವರಿಬ್ಬರೂ ಸೇರಿ ದ್ರೌಪದಿಯನ್ನು ಅಪಹರಿಸುತ್ತಾರೆ. ಆಗ ಅಲ್ಲಿದ್ದ ದೌಮ್ಯ ಋಷಿ ಕೂಗಿಕೊಳ್ಳುತ್ತಾನೆ ಮತ್ತು ಪಾಂಡವರು ಬಂದು ದ್ರೌಪದಿಯನ್ನು ರಕ್ಷಿಸುತ್ತಾರೆ. ಈ ಘಟನೆಯಲ್ಲಿ ಶೈಭ್ಯನ ಮಗ ಭೀಮನಿಂದ ಹತನಾಗುತ್ತಾನೆ.  “ಮಗನನ್ನೇ ಕೊಂದ ಪಾಂಡವರ ಪಕ್ಷವನ್ನು ಶೈಭ್ಯ ವಹಿಸಿರುವುದು ಎಂಥಹ ವಿಪರ್ಯಾಸ” ಎನ್ನುವುದು ಇಲ್ಲಿ ದುರ್ಯೋಧನನ ಮನದಾಳದ ಅಳಲು.
ಯುಧಾಮನ್ಯು ಹಾಗೂ ಉತ್ತಮೌಜ: ಪಾಂಡವ ಸೇನೆಯನ್ನು ಕಂಡು ಅಂತರಂಗದಲ್ಲಿ ಗಾಬರಿಗೊಂಡ ದುರ್ಯೋಧನ, ಒಂದೇ  ಮನೆಯಿಂದ ಬಂದ ವ್ಯಕ್ತಿಗಳ  ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಾನೆ. ಯುಧಾಮನ್ಯು ಹಾಗೂ ಉತ್ತಮೌಜ ಇವರು ದ್ರುಪದನ ಇನ್ನಿಬ್ಬರು ಮಕ್ಕಳು. ದುರ್ಯೋಧನ ಅದೆಷ್ಟು ಗಾಬರಿಗೊಂಡಿದ್ದ ಎನ್ನುವುದು ಆತ ಪಟ್ಟಿ ಮಾಡಿರುವ ಪಾಂಡವ ಸೇನೆಯ ವೀರರ ಹೆಸರುಗಳಿಂದ ನಮಗೆ ತಿಳಿಯುತ್ತದೆ. ಇಲ್ಲಿ  ಮಾನಸಿಕ ತುಮುಲಕ್ಕೊಳಪಟ್ಟ ಒಬ್ಬ ವ್ಯಕ್ತಿ ತನ್ನ  ಹಿಂದಿನ ಘಟನೆಗಳನ್ನು ಮೆಲುಕು ಹಾಕಿಕೊಂಡು ಹೇಗೆ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ಅದರಿಂದಾಗಿ ಹೇಗೆ ತನ್ನ ನಿಜವಾದ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇದೊಂದು ಅದ್ಭುತ ಮನಃಶಾಸ್ತ್ರ. ಇಂತಹ ಸ್ಥಿತಿಯಲ್ಲಿ ಯಾರೂ ಕೂಡಾ ಜಯವನ್ನು ಕಾಣಲಾರರು.
ಇಷ್ಟೇ ಅಲ್ಲ, ತನ್ನ ಕಡೆಯ ಒಂದೇ ಒಂದು ಸಂತಾನದ   ಹೆಸರನ್ನೂ ಹೇಳದ ದುರ್ಯೋಧನ, ಪಾಂಡವರ ಮಕ್ಕಳನ್ನು ಭೀಮಾರ್ಜುನರಿಗೆ ಸಮನಾದ ವೀರರು ಎಂದು ಬಣ್ಣಿಸುತ್ತಾನೆ. ಆತ  ಸುಭದ್ರೆಯ ಮಗ ಅಭಿಮನ್ಯು ಹಾಗೂ ಇನ್ನೂ  ಪ್ರಾಯಪ್ರಭುದ್ದರಲ್ಲದ  ಸುಮಾರು  ಹದಿಮೂರರಿಂದ  ಹದಿನೆಂಟು ವರ್ಷ ಪ್ರಾಯದ ಐದು ಮಂದಿ ದ್ರೌಪದಿಯ ಮಕ್ಕಳನ್ನು[ಪ್ರತಿವಿಂಧ್ಯ (ಯುಧಿಷ್ಥಿರ ಪುತ್ರ); ಶೃತಸೋಮ (ಭೀಮ ಪುತ್ರ); ಶೃತಕೀರ್ತಿ (ಅರ್ಜುನ ಪುತ್ರ); ಶತಾನೀಕ (ನಕುಲ ಪುತ್ರ); ಶೃತಕರ್ಮಾ (ಸಹದೇವ ಪುತ್ರ)]  ಮಹಾರಥರು  ಎಂದು ಸಂಬೋಧಿಸುತ್ತಾನೆ!
ಇಲ್ಲಿ   ಸ್ಪಷ್ಟವಾಗಿ ನಾವು ಕಂಡುಕೊಳ್ಳಬೇಕಾದ ವಿಷಯವೇನೆಂದರೆ: ಒಮ್ಮೆ ನಾವು ಭಯಕ್ಕೊಳಪಟ್ಟರೆ ನಮಗೆ ಹಗ್ಗ ಕೂಡಾ ಹಾವಿನಂತೆ ಕಾಣಲಾರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ ಕೂಡಾ ವ್ಯರ್ಥವಾಗುತ್ತದೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿಟ್ಟುಕೊಂಡು, ಯುದ್ಧಕ್ಕೆ ಮೊದಲು ತನ್ನ ಸೈನ್ಯವನ್ನು ಹುರಿದುಂಬಿಸುವುದನ್ನು ಬಿಟ್ಟು ಪಾಂಡವ ಸೈನ್ಯದ ವೀರರ ಬಗ್ಗೆ ಮಾತನಾಡುತ್ತಿದ್ದಾನೆ ದುರ್ಯೋಧನ. ಇದು ಸ್ಪಷ್ಟವಾಗಿ ಆತನ  ಮನಃಸ್ಥಿತಿಯನ್ನು ಸೂಚಿಸುತ್ತದೆ. ಭಗವಂತನಿಂದ ದೂರ ನಿಂತ  ಅಧರ್ಮಿಯಾದ    ಪ್ರತಿಯೊಬ್ಬರ  ಪಾಡೂ ಇಷ್ಟೇ.  ಅವರು ಎಂದೆಂದೂ ಅಂತರಂಗದ ಭಯದಲ್ಲೇ  ಬದುಕುತ್ತಾರೆ ಹಾಗೂ ಆ ಭಯವನ್ನು ಮುಚ್ಚಿಡಲು ಇಲ್ಲ ಸಲ್ಲದ ಮಾತನ್ನಾಡುತ್ತಾರೆ. ಒಬ್ಬ ದುಷ್ಟ ಕೆಟ್ಟದಾಗಿ ಗೌರವವಿಲ್ಲದೆ  ಮಾತನಾಡುತ್ತಿದ್ದಾನೆ ಎಂದರೆ ಆತ ಅಂತರಂಗದಲ್ಲಿ ತುಂಬಾ ಭಯಭೀತನಾಗಿದ್ದಾನೆ ಎಂದರ್ಥ.  ಅಂತಹವರಲ್ಲಿ ಎಷ್ಟೇ ಶಕ್ತಿ ಇದ್ದರೂ ಕೂಡಾ  ಅದು ಎಂದೂ ಅವರ ರಕ್ಷಣೆ ಮಾಡಲಾರದು. ಏಕೆಂದರೆ ಅವರಿಗೆ ತಮ್ಮ ಶಕ್ತಿಯ ಬಗ್ಗೆ ಆತ್ಮವಿಶ್ವಾಸವಿರುವುದಿಲ್ಲ.  ಇದು ನಾವಿಲ್ಲಿ ಕಂಡುಕೊಳ್ಳಬೇಕಾದ ಮನಃಶಾಸ್ತ್ರ.
ಒಬ್ಬ  ವೀರನಾದವನು ತನ್ನ ಶಕ್ತಿ-ಸಾಮರ್ಥ್ಯ ಕಡಿಮೆ ಇದ್ದರೂ ಕೂಡಾ ಯುದ್ಧಕಾಲದಲ್ಲಿ ಯುಕ್ತಿಯಿಂದ ಕಾರ್ಯ ನಿರ್ವಹಿಸುತ್ತಾನೆ. ಮುಂದಾಳುವಾದವನು ತನ್ನ ಸೈನ್ಯವನ್ನು, ತನ್ನ ಹಿಂಬಾಲಕರನ್ನು ಹುರಿದುಂಬಿಸುತ್ತಾನೆ. ತಾವು ಶತ್ರು ಸೈನ್ಯಕ್ಕಿಂತ ಶಕ್ತರು ಎನ್ನುವ ಆತ್ಮವಿಶ್ವಾಸವನ್ನು ತನ್ನ ಸೈನ್ಯದಲ್ಲಿ ತುಂಬುತ್ತಾನೆ. ಆದರೆ ಇಲ್ಲಿ ದುರ್ಯೋಧನ ತನ್ನ ಸೇನಾಧಿಪತಿ ಭೀಷ್ಮರಲ್ಲಿ ಪರಾಮರ್ಷೆ ಮಾಡುವುದನ್ನು ಬಿಟ್ಟು, ಆಚಾರ್ಯ ದ್ರೋಣರಲ್ಲಿ ಶತ್ರು ಸೈನ್ಯದ ವೀರರ ಬಗ್ಗೆ ವಿಶಿಷ್ಟವಾಗಿ ಮಾತನಾಡಿ, 'ನಿಮ್ಮ ಸಂಜ್ಞೆಗೆಂದು ನಮ್ಮ ಸೈನ್ಯದ ಮುಂದಾಳುಗಳ ಬಗ್ಗೆ ಹೇಳುತ್ತೇನೆ' ಎನ್ನುತ್ತಾನೆ!
ಪಾಂಡವ ಸೇನೆಯಲ್ಲಿನ ಸೇನಾಧಿಪತಿ, ಹನ್ನೊಂದು ಮಂದಿ ಮಹಾ ವೀರರು ಹಾಗೂ ಪಾಂಡವರ ಆರು ಮಂದಿ ಮಕ್ಕಳ ವೀರತ್ವವನ್ನು ವಿವರಿಸಿದ ದುರ್ಯೋಧನನಿಗೆ ತನ್ನ ಕಡೆಯಲ್ಲಿರುವ ವೀರರು ಕಾಣಿಸುವುದೇ  ಇಲ್ಲ! ಆತನ ಕಡೆಯಲ್ಲಿ ಶಲ್ಯಾ, ಭಗದತ್ತರಂತಹ ವೀರಾಧಿ ವೀರರಿದ್ದರು. ಹನ್ನೊಂದು ಅಕ್ಷೋಹಿಣಿ ಸೇನೆಯ ಮುಂದಾಳಾಗಿ ಹನ್ನೊಂದು ಮಂದಿ ವೀರರು ನಿಂತಿದ್ದರು. ಆತನ ತಮ್ಮಂದಿರರು ಆತನ ಜೊತೆಗಿದ್ದರು.  ಆದರೆ ಆತ ಅವರ್‍ಯಾರನ್ನೂ ಇಲ್ಲಿ ನೆನಪಿಸುವುದಿಲ್ಲಾ.  ಬದಲಿಗೆ ಕುಹಕವಾಗಿ  ತನಗೆ ಅಪನಂಬಿಕೆ ಇರುವ ತನ್ನ ಕಡೆಯ ಏಳು  ಮಂದಿ  ವೀರರ  ಹೆಸರನ್ನು  ಹೇಳುತ್ತಾನೆ.
ದ್ರೋಣ ಮತ್ತು ಕೃಪಾ: ದ್ರೋಣಾಚಾರ್ಯರು ಪ್ರಾಮಾಣಿಕವಾಗಿ ಯುದ್ಧಕ್ಕೆ ನಿಂತಿದ್ದಿರೂ ಕೂಡಾ  ಕ್ಷತ್ರಿಯರಲ್ಲದ ಅವರ ರಕ್ತಗತವಾದ ಸ್ವಭಾವ ಯುದ್ಧ ಆಗಿರಲಿಲ್ಲಾ. ಅದೇ ರೀತಿ ಕೃಪಾಚಾರ್ಯರು.  ಇವರು  ಕೇವಲ ಅರಮನೆಯ ಅನ್ನದ ಋಣ ತೀರಿಸುವುದಕ್ಕೋಸ್ಕರ ಅನಿವಾರ್ಯವಾಗಿ ದುರ್ಯೋಧನನ ಕಡೆ ಯುದ್ಧಕ್ಕೆ ನಿಂತವರು.
ಭೀಷ್ಮ: ಈ ಹಿಂದೆ ಹೇಳಿದಂತೆ ದುರ್ಯೋಧನನಿಗೆ ಭೀಷ್ಮಾಚಾರ್ಯರ ಮೇಲೆ ನಂಬಿಕೆಯೇ ಇರಲಿಲ್ಲಾ. ಅದಕ್ಕಾಗಿಯೇ ಆತ ತನ್ನ ಸೇನಾಧಿಪತಿಯಾದ ಅವರ ಬಳಿ ಹೋಗದೇ ದ್ರೋಣರ ಬಳಿ ಬಂದು ಮಾತನ್ನಾಡುತ್ತಿದ್ದಾನೆ. ಆತನ ಈ ಅನುಮಾನ ತಪ್ಪಾಗಿರಲಿಲ್ಲಾ. ಇದಕ್ಕೆ ಸಾಕ್ಷಿ ಯುದ್ಧ ಪ್ರಾರಂಭವಾಗುವ ಮೊದಲು ನಡೆದ ಒಂದು ಘಟನೆ. ಎರಡೂ ಸೇನೆ ಎದುರುಬದುರಾಗಿ ನಿಂತು ಇನ್ನೇನು ಯುದ್ಧ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಧರ್ಮರಾಜ ಕೈ ಎತ್ತಿಕೊಂಡು ಕೌರವರತ್ತ ಬರಲಾರಂಭಿಸುತ್ತಾನೆ. (ಕೈ ಎತ್ತುವುದು ಶಾಂತಿಯ ಸಂಕೇತ).  ಇದನ್ನು ನೋಡಿ ಕೌರವರಿಗೆ ಸಂತೋಷವೋ ಸಂತೋಷ. ಯುದ್ಧ ಪ್ರಾರಂಭವಾಗುವ ಮೊದಲೇ ಪಾಂಡವರು ಶರಣಾದರು ಎನ್ನುವುದು ಅವರ ಭಾವನೆ. ಇತ್ತ ಪಾಂಡವರಿಗೆ ಧರ್ಮರಾಯನ ನಡೆಯನ್ನು ನೋಡಿ ಗಾಬರಿ. ಆದರೆ ಧರ್ಮರಾಜ ನೇರವಾಗಿ ಭೀಷ್ಮ-ದ್ರೋಣರ ಬಳಿ ಹೋಗಿ ಅವರಿಗೆ ನಮಸ್ಕರಿಸಿ ಹೇಳುತ್ತಾನೆ: “ಹಿರಿಯರ ಜೊತೆಗೆ ಯುದ್ಧ ಮಾಡುವುದು ನನಗೆ ಬೇಕಿಲ್ಲಾ. ನಾನು ಅದನ್ನು ಬಯಸಲೂ ಇಲ್ಲಾ. ಆದರೆ  ಹಿರಿಯರ ವಿರುದ್ಧ ಕಿರಿಯರು ಯುದ್ಧ ಮಾಡುವಂತೆ ನೀವು ವ್ಯವಸ್ಥೆ ಮಾಡಿದಿರಿ. ನಿಮ್ಮ ಒತ್ತಡದಿಂದಾಗಿ ನಾನು ಯುದ್ಧಕ್ಕೆ ಸಿದ್ಧನಾಗಿದ್ದೇನೆ. ನನಗೆ ಆಶೀರ್ವಾದ ಮಾಡಿ” ಎಂದು. ಆಗ ಭೀಷ್ಮಾಚಾರ್ಯರು ಹೇಳುತ್ತಾರೆ: ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯಚಿತ್  ಮಹಾಭಾರತ ೬-೪೧-೩೬ ಎಂದು. “ದುಡ್ಡಿನ ಒಡೆಯರು ನಾವು ಅಂದುಕೊಂಡಿದ್ದೆವು.  ಆದರೆ ದುಡ್ಡೇ ನಮ್ಮ ಒಡೆಯ ಹಾಗೂ ನಾವದರ ದಾಸರು ಎನ್ನುವುದು ನನಗೀಗ ಅರ್ಥವಾಗಿದೆ. ಈ ಅರಮನೆಯ ಸಂಪತ್ತಿನ ದಾಸನಾಗಿರುವ ನಾನು ಆ ಋಣಕ್ಕಾಗಿ ದುರ್ಯೋಧನನ ಪರ ಯುದ್ಧಕ್ಕೆ ನಿಂತಿದ್ದೇನೆ. ಒಂಒಂದು ವೇಳೆ ನೀನು ಈ ರೀತಿ ಬಂದು ಆಶೀರ್ವಾದ ಬೇಡದೇ ಇದ್ದಿದ್ದರೆ-  ‘ನಾನು ತೊಡೆಯಲ್ಲಿ ಬೆಳೆಸಿದ ಮಗು ನಿರ್ಧಯವಾಗಿ  ಯುದ್ಧ ಮಾಡಿತು’ ಎನ್ನುವ ನೋವು ನನಗಾಗುತ್ತಿತ್ತು. ಆದರೆ ಈಗ ನಿನ್ನ ಮೇಲೆ ಬೇಸರಿಸುವ ಪ್ರಶ್ನೆಯೇ ಇಲ್ಲಾ. ನಿನಗೆ ನನ್ನ ಆಶೀರ್ವಾದವಿದೆ. ಹೋಗು, ಯುದ್ಧ ಮಾಡು. ದೇವರು ನಿನಗೆ ಜಯವನ್ನು ಕೊಡಲಿ” ಎನ್ನುತ್ತಾರೆ ಭೀಷ್ಮಾಚಾರ್ಯರು. ಎಂಥಹ ವಿಪರ್ಯಾಸ? ಎದುರಾಳಿ ಪಕ್ಷದ ಸೇನಾಧಿಪತಿಯಿಂದ ಪಾಂಡವರಿಗೆ ವಿಜಯದ ಆಶೀರ್ವಾದ! ಇದರಿಂದಾಗಿಯೇ ದುರ್ಯೋಧನ ಭೀಷ್ಮಾಚಾರ್ಯರನ್ನು ನಂಬುತ್ತಿರಲಿಲ್ಲಾ. ಅವರು ಪಾಂಡವರ ಹಿತಚಿಂತಕರು ಎನ್ನುವುದು ಆತನ ಅನುಮಾನವಾಗಿತ್ತು.
ಕರ್ಣ:  ಇಲ್ಲಿ ದುರ್ಯೋಧನ ಕರ್ಣನ ಹೆಸರನ್ನು ಹೇಳಲು ಒಂದು ಮುಖ್ಯವಾದ ಕಾರಣವಿದೆ. ದುರ್ಯೋಧನ ತನ್ನ ಜೀವಮಾನದಲ್ಲಿ ಸ್ವಲ್ಪ ನಂಬಿಕೆ ಅಂತ ಒಬ್ಬರ ಮೇಲೆ ಇಟ್ಟಿದ್ದಿದ್ದರೆ ಅದು ಕರ್ಣನ ಮೇಲೆ. ಆತ ಕರ್ಣನ ಮಾತನ್ನು ಪ್ರಾಮಾಣಿಕವಾಗಿ ನಂಬುತ್ತಿದ್ದ. ದುರ್ಯೋಧನನನ್ನು ಪ್ರಾರಂಭದಿಂದಲೂ ಹೆಜ್ಜೆಹೆಜ್ಜೆಗೆ ಬೆಂಬಲಿಸಿದವನು ಕರ್ಣ. ದುರ್ಯೋಧನನಿಗೆ ಮಾರ್ಗದರ್ಶಕನಾಗಿ ನಿಂತವನು ಕರ್ಣ. ಯುದ್ಧದ ತೀರ್ಮಾನದ ತನಕವೂ ಸಲಹೆ ಕೊಟ್ಟವನು ಕರ್ಣ. ಒಮ್ಮೆ ದುರ್ಯೋಧನ ಯುದ್ಧ ಮಾಡುವುದಿಲ್ಲಾ ಎಂದು ಹೇಳಿದಾಗ “ಅರ್ಜುನನನ್ನು ಸೋಲಿಸುವ ಜವಾಬ್ಧಾರಿಯನ್ನು ನನಗೆ ಬಿಡು; ಆತನನ್ನು ಸೋಲಿಸುವ ತನಕ ನಾನು ಸೇವಕಿಯರಿಂದ ಕಾಲನ್ನು ತೊಳೆಸಿಕೊಳ್ಳುವುದಿಲ್ಲಾ” ಎನ್ನುವ ವಿಚಿತ್ರ ಪ್ರತಿಜ್ಞೆ ಮಾಡಿದ್ದ ಕರ್ಣ!   ಇಷ್ಟೆಲ್ಲಾ ಇದ್ದರೂ ಕೂಡಾ ದುರ್ಯೋಧನನ  ದುರ್ದೈವದಿಂದ ಯುದ್ಧಕ್ಕೆ ಮೊದಲು ಒಂದು ಘಟನೆ ನಡೆಯುತ್ತದೆ. ಯುದ್ಧಕ್ಕೆ ಮೊದಲು ಹಿರಿತನದ ಆದಾರದ ಮೇಲೆ ಭೀಷ್ಮಾಚಾರ್ಯರು ಸೇನಾಧಿಪತಿಯಾಗಿ ಆಯ್ಕೆಯಾಗುತ್ತಾರೆ.  ಸೇನಾಧಿಪತ್ಯದ ಪದವಿ ಸ್ವೀಕರಿಸಿದ ಭೀಷ್ಮಾಚಾರ್ಯರು ಅಲ್ಲಿ ನೆರದ ವೀರರನ್ನು ಉದ್ದೇಶಿಸಿ ಮಾತನ್ನಾಡುತ್ತಾರೆ. ಹೀಗೆ ಮಾತನಾಡುವಾಗ ಅವರು ಎಲ್ಲಾ ವೀರರ ಹೆಸರನ್ನು ಹೇಳಿ ಕೇವಲ ಕರ್ಣನ ಹೆಸರನ್ನು ಉಲ್ಲೇಖಿಸದೇ ಬಿಡುತ್ತಾರೆ. ಆಗ ಕರ್ಣ ಎದ್ದು ನಿಂತು “ನಾನೂ ಕೂಡಾ ದುರ್ಯೋಧನನ ಪರವಾಗಿ ನಿಂತಿದ್ದೇನೆ, ನೀವು ನನ್ನನ್ನು ಮರೆತಿರಬೇಕು” ಎಂದು ಅವರಿಗೆ ನೆನಪಿಸುತ್ತಾನೆ. ಇದಕ್ಕೆ ಉತ್ತರಿಸಿದ ಭೀಷ್ಮಾಚಾರ್ಯರು: “ನೀನಿರುವುದು ನನಗೆ ತಿಳಿದಿದೆ. ‘ಅಯತಕಾಲದಲ್ಲಿ ನೀನು ಕಲಿತ ವಿದ್ಯೆ ನಿನಗೆ ಫಲಿಸದೇ ಹೋಗಲಿ’ ಎಂದು ಗುರು ಪರಶುರಾಮನಿಂದ ಶಾಪಗ್ರಸ್ಥನಾದ ನಿನ್ನನ್ನು ನಾನು ಒಬ್ಬ ವೀರ ಎಂದು ಲೆಕ್ಕಕ್ಕೆ ತೆಗೆದುಕೊಂಡಿಲ್ಲಾ” ಎನ್ನುತ್ತಾರೆ.  ನಿಜವಾಗಿಯೂ ಮಹಾವೀರನಾಗಿದ್ದ ಕರ್ಣನಿಗೆ ಇದರಿಂದ ಅವಮಾನವಾಗುತ್ತದೆ. “ಈ ಭೀಷ್ಮ ಯುದ್ಧರಂಗದಲ್ಲಿರುವ ತನಕ ನಾನು ಯುದ್ಧ ಮಾಡುವುದಿಲ್ಲಾ” ಎಂದು ಕರ್ಣ ಪ್ರತಿಜ್ಞೆ ಮಾಡುತ್ತಾನೆ. ಹೀಗಾಗಿ ಇಂದು ಕರ್ಣನಿದ್ದೂ ದುರ್ಯೋಧನನ ಪಾಲಿಗೆ ಇಲ್ಲವಾಗಿದ್ದಾನೆ!  ಇದು ಇಲ್ಲಿ ಕರ್ಣನ ಹೆಸರನ್ನು ಹೇಳುತ್ತಿರುವ ದುರ್ಯೋಧನನ ನೋವು.  
ದ್ರೋಣ-ಭೀಷ್ಮ-ಕೃಪಾ ಮತ್ತು ಕರ್ಣನನ್ನು ದುರ್ಯೋಧನ ಸಮಿತಿಂಜಯರು ಎಂದು ಸಂಬೋಧಿಸಿದ್ದಾನೆ. ಸಮಿತಿ ಎಂದರೆ ಯುದ್ಧ. ಆದ್ದರಿಂದ  ಸಮಿತಿಂಜಯ ಎಂದರೆ ಯುದ್ಧವನ್ನು ಗೆಲ್ಲುವವರು ಎಂದರ್ಥ. ಕ್ಷತ್ರಿಯರಲ್ಲದ ಇಬ್ಬರು ಆಚಾರ್ಯರು; ಎದುರು ಪಕ್ಷಕ್ಕೆ ಜಯವಾಗಲಿ ಎಂದು ಆಶೀರ್ವಾದ ಮಾಡುವ ಭೀಷ್ಮರು; ಯುದ್ಧ ಮಾಡುವುದಿಲ್ಲಾ ಎಂದು ಪ್ರತಿಜ್ಞೆ ಮಾಡಿ ಕುಳಿತ ಕರ್ಣ. “ಇವರೆಲ್ಲರೂ ಯುದ್ಧವನ್ನು ಗೆಲ್ಲಲು ನಮ್ಮೊಂದಿಗೆ ನಿಂತವರು” ಎನ್ನುವುದು ದುರ್ಯೋಧನನ ಅಂತರಂಗದ ತುಡಿತ.
ಅಶ್ವತ್ಥಾಮ: ಈತನ ವ್ಯಕ್ತಿತ್ತ್ವ ಬಹಳ ವಿಚಿತ್ರ. ದ್ರೋಣಾಚಾರ್ಯರಿಗೂ ಕೂಡಾ ಒಮ್ಮೊಮ್ಮೆ  ತನ್ನ ಮಗನ ಸ್ವಭಾವ ಹಿಡಿಸುತ್ತಿರಲಿಲ್ಲಾ. ಮಹಾಭಾರತದಲ್ಲಿ ಈತ ಯಾವುದೇ ಒಂದು ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಿರುವುದನ್ನು ನಾವು ಕಾಣುವುದಿಲ್ಲಾ. ಯುದ್ಧಾ ನಂತರ ಶಿಬಿರಕ್ಕೆ ಬೆಂಕಿ ಇಟ್ಟು ಅಲ್ಲಿ ಮಲಗಿದ್ದವರನ್ನು ಜೀವಂತ ಸುಟ್ಟಿರುವುದು, ಬ್ರೂಣದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ, ಇತ್ಯಾದಿ ಉದಾಹರಣೆಯಿಂದ ನಮಗೆ ಆತನ ವ್ಯಕ್ತಿತ್ವ ಎಂತಹದ್ದು ಎನ್ನುವುದು ತಿಳಿಯುತ್ತದೆ. ಹೀಗಾಗಿ ದ್ರೋಣಾಚಾರ್ಯರು ಅರ್ಜುನನಿಗೆ ಹೇಳಿಕೊಟ್ಟಷ್ಟು ಯುದ್ಧತಂತ್ರವನ್ನು ತನ್ನ ಮಗನಿಗೆ ಹೇಳಿರಲಿಲ್ಲಾ.  ಒಮ್ಮೆ ದ್ವಾರಕೆಗೆ ಹೋದ ಅಶ್ವತ್ಥಾಮ: “ನಾನು ನಿನಗೆ ಬ್ರಹ್ಮಾಸ್ತ್ರವನ್ನು ಕೊಡುತ್ತೇನೆ, ನೀನು ನನಗೆ ಸುದರ್ಶನವನ್ನು ಕೊಡು” ಎಂದು ಶ್ರೀಕೃಷ್ಣನಲ್ಲಿ ಕೇಳುತ್ತಾನೆ. ಆಗ ಶ್ರೀಕೃಷ್ಣ: “ನಿನಗೇಕೆ ಸುದರ್ಶನ” ಎಂದು ಕೇಳುತ್ತಾನೆ. ಇದಕ್ಕೆ ಉತ್ತರವಾಗಿ ಅಶ್ವತ್ಥಾಮ ಹೇಳುತ್ತಾನೆ: “ನನಗೆ ನಿನ್ನ ಮೇಲೆ ದ್ವೇಷವಿದೆ. ನಾನು ನಿನ್ನನ್ನು ಮೀರಿಸಬೇಕು. ಅದಕ್ಕಾಗಿ ನನಗೆ ಸುದರ್ಶನ ಬೇಕು” ಎಂದು! ಇದಕ್ಕೆ ಶ್ರೀಕೃಷ್ಣ ಹೇಳುತ್ತಾನೆ: “ನಾನು ನನ್ನ ಚಕ್ರವನ್ನು ಕೈಯಾರ ದಾನ ಮಾಡುವ ಸಂಪ್ರದಾಯವಿಲ್ಲಾ. ನಿನಗೆ ಬೇಕಿದ್ದರೆ  ತೆಗೆದುಕೊಂಡು ಹೋಗು” ಎಂದು. ಆಗ ಅಶ್ವತ್ಥಾಮ ಸುದರ್ಶನವನ್ನು ಎತ್ತವ ವಿಫಲ ಯತ್ನ ಮಾಡಿ ಹಿಂದಿರುಗುತ್ತಾನೆ.  ಅನೇಕ ಬಾರಿ “ಯುದ್ಧ ಬೇಡ ನಾನು ರಾಜಿ ಮಾಡಿಸುತ್ತೇನೆ” ಎಂದಿದ್ದಾನೆ ಅಶ್ವತ್ಥಾಮ. ಧನಂಜಯಃ ಸ್ಥಾಸ್ಯತಿ ವಾರಿತೋ ಮಯಾ; ಜನಾರ್ದನೋ ನೈವ ವಿರೋಧಮಿಚ್ಛತಿ ಮಹಾಭಾರತ ೮-೬೪-೨೨  ಹೀಗೆ ಈತ ಯಾವಾಗ ಯಾರ ಕಡೆಗಿರುತ್ತಾನೆ, ಏನನ್ನು ಯೋಚಿಸುತ್ತಾನೆ ಎನ್ನುವುದು ಯಾರಿಗೂ ತಿಳಿಯುತ್ತಿರಲಿಲ್ಲಾ. ಇಂಥಹ ವಿಕ್ಷಿಪ್ತ ಮನಸ್ಸಿನ ಅಶ್ವತ್ಥಾಮ ಇಂದು ದುರ್ಯೋಧನನ ಕಡೆಗಿನ ಸಮಿತಿಂಜಯರಲ್ಲಿ ಒಬ್ಬ! ಇದು ದುರ್ಯೋಧನನ ನೋವು.
ವಿಕರ್ಣ: ತನ್ನ ತೊಂಬತ್ತೊಂಬತ್ತು ತಮ್ಮಂದಿರರಲ್ಲಿ ಬೇರೆ ಯಾರ ಹೆಸರನ್ನೂ ತೆಗೆಯದ ದುರ್ಯೋಧನ ಇಲ್ಲಿ ತಮ್ಮನಾದ ವಿಕರ್ಣನ ಹೆಸರನ್ನು ಹೇಳುತ್ತಾನೆ. ಈತ ಸಭೆಯಲ್ಲಿ ದ್ರೌಪದಿಯ ಮಾನಭಂಗವನ್ನು ಖಂಡಿಸಿದ ಕೌರವರ ಕಡೆಯ ಏಕಮಾತ್ರ ವ್ಯಕ್ತಿ.

ಭೂರಿಶ್ರವ: ಈತ ಭೀಷ್ಮಾಚಾರ್ಯರ  ತಂದೆ-ಶಂತನುವಿನ  ಅಣ್ಣನ  ಮಗನಾದ ಸೋಮದತ್ತನ  ಮಗ. ಸೋಮದತ್ತ ಬಾಲ್ಹೀಕ(ಈಗಿನ ಪಂಜಾಬ್) ದೇಶದವನು. ಅವನಿಗೆ ಭೀಷ್ಮಾಚಾರ್ಯರ ಮೇಲೆ ಅಪಾರವಾದ ಗೌರವ ಇತ್ತು. ಇದಕ್ಕಾಗಿ ಆತ ತನ್ನ ಮಗನನ್ನು ಭೀಷ್ಮಾಚಾರ್ಯರ ಕಡೆಯಿಂದ ಹೋರಾಟಕ್ಕೆ ಕಳುಹಿಸಿದ್ದ.  ಹೀಗೆ ಬಂದಿರುವ ಭೂರಿಶ್ರವ ಮಹಾವೀರನಾಗಿದ್ದರೂ ಸಹ ಭೀಷ್ಮಾಚಾರ್ಯರಿಗಾಗಿ ಬಂದಿದ್ದನೇ ಹೊರತು ದುರ್ಯೋಧನನಿಗೆ ಸಹಾಯ ಮಾಡಬೇಕೆಂದು ಬಂದಿರಲಿಲ್ಲಾ. ಇದು ದುರ್ಯೋಧನನ ಸಮಸ್ಯೆ. ಹೀಗೆ ಇಲ್ಲಿ ದುರ್ಯೋಧನ ಹೇಳಿರುವ ಎಲ್ಲಾ ಹೆಸರಿನಲ್ಲೂ ಆತನ  ಹತಾಶೆಯನ್ನು ನಾವು ಗುರುತಿಸಬಹುದು.

No comments:

Post a Comment