Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Friday, October 3, 2014

Bhagavad Gita Kannada Chapter-01 Shloka-04-08

ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ                                   

ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್
ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ                                     

ಯುಧಾಮನ್ಯುಶ್ಚ  ವಿಕ್ರಾಂತ  ಉತ್ತಮೌಜಾಶ್ಚ ವೀರ್ಯವಾನ್
ಸೌಭದ್ರೋ  ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ                               

ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ 
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ                      

ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ 
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ                                             


ಪಾಂಡವರ ಸೈನ್ಯವನ್ನು ನೋಡಿ ಮಾನಸಿಕವಾಗಿ ತಳಮಳಗೊಂಡಿದ್ದ  ದುರ್ಯೋಧನ,  ದ್ರೋಣಾಚಾರ್ಯರ ಬಳಿ  ಹೋಗಿ, ಪಾಂಡವ ಸೇನೆಯ ಬಗ್ಗೆ, ಅಲ್ಲಿರುವ ವೀರರ ಬಗ್ಗೆ ಮಾತನಾಡುತ್ತಾನೆ. ಸಾಮಾನ್ಯವಾಗಿ ನಮಗೆ ಯಾರ ಬಗ್ಗೆ ಭಯವಿದೆಯೋ ಅವರೇ ಎಲ್ಲಾ ಕಡೆ ಕಂಡಂತೆ ಭಾಸವಾಗುತ್ತದೆ. ರಾಮಃ ಪುರಸ್ತಾತ್ ಪರತೋಪಿ ರಾಮೋ ರಾಮಃ ಪರಂ ದಿಕ್ಷು ವಿದಿಕ್ಷು ರಾಮಃ . ರಾವಣನಿಗೆ  ಎಲ್ಲಿ ನೋಡಿದರೂ ರಾಮನೇ ಕಾಣುತ್ತಿದ್ದನಂತೆ. ಕಂಸನಿಗೆ ಕನಸಿನಲ್ಲೂ ಕೂಡಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದನಂತೆ. ಹಾವಿನ ಭಯ ಇದ್ದವರಿಗೆ ಹಗ್ಗವೇ ಹಾವಾಗಿ ಕಾಣುತ್ತದಂತೆ. ಇದು ಮನಃಶಾಸ್ತ್ರ. ಈ ರೀತಿ ಅನುಭವವಾಗುವುದು ಭಯ ಮತ್ತು ದ್ವೇಷವಿದ್ದಾಗ ಮಾತ್ರ. ಇದನ್ನೇ ಭಾಗವತದಲ್ಲಿ ನಾರದರು ಹೀಗೆ ಹೇಳುತ್ತಾರೆ: ಯಥಾ ವೈರಾನುಬಂಧೇನ ಮರ್ತ್ಯ ಸ್ತನ್ಮಯತಾಮಿಯಾತ್ ನ ತಥಾ ಭಕ್ತಿಯೋಗೇನ ಇತಿ ಮೇ ನಿಶ್ಚಿತಾ ಮತಿಃ  ೭-೧-೨೮  ಯಾವುದೇ ಒಂದು ವಸ್ತುವಿನ ಮೇಲೆ ನಮ್ಮ ಮನಸ್ಸು ಹೆಚ್ಚು ಏಕಾಗ್ರವಾಗುವುದು ಆ ವಸ್ತುವಿನ ಮೇಲೆ ನಮಗೆ ಭಯ ಅಥವಾ ದ್ವೇಷವಿದ್ದಾಗ. ಪ್ರೀತಿಯಲ್ಲಿ ಇಷ್ಟೊಂದು ಏಕಾಗ್ರತೆ ಬರಲು ಸಾಧ್ಯವಿಲ್ಲಾ. ಇದು ಬಹಳ ವಿಚಿತ್ರ. ದೇವರನ್ನು ನಂಬುವ ಆಸ್ತಿಕರಿಗಿಂತ ದೇವರನ್ನು ನಂಬದ ನಾಸ್ತಿಕರೇ ದೇವರನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ. ಯಾವುದನ್ನು ನಾವು ದ್ವೇಷಿಸುತ್ತೇವೋ ಅದು ನಮ್ಮ ಮನಸ್ಸಿನಲ್ಲಿ ಗಾಢವಾಗಿ ಬಂದು ಕುಳಿತುಬಿಡುತ್ತದೆ. ಇಲ್ಲಿ ದುರ್ಯೋಧನನಿಗೂ ಕೂಡಾ ಇದೇ ಸಮಸ್ಯೆಯಾಗುತ್ತಿದೆ. ಆತನಿಗೆ ಭೀಮಾರ್ಜುನರ ಮೇಲೆ ಅಸಹ್ಯವಾದ  ದ್ವೇಷವಿದೆ ಮತ್ತು ಅಸಾಧಾರಣವಾದ ಭಯವಿದೆ. ಹೀಗಾಗಿ ಪಾಂಡವರ ಕಡೆಯಲ್ಲಿ ಯಾರನ್ನು ನೋಡಿದರೂ ಕೂಡಾ ಅವರು ಶೂರರೂ, ಮಹೇಷ್ವಾಸರೂ ಆಗಿ ಆತನಿಗೆ ಕಾಣಿಸುತ್ತಿದ್ದಾರೆ. ಶೂರರು ಎಂದರೆ ದೇಹಬಲವನ್ನು ಇನ್ನೊಬ್ಬರ ಮುಂದೆ ಪ್ರದರ್ಶಿಸಬಲ್ಲವರು; ಮಹೇಷ್ವಾಸರು ಎಂದರೆ ಮಹಾಧನುಸ್ಸಿನಿಂದ ಹೋರಾಡಬಲ್ಲ ಬಿಲ್ಲುಗಾರರು. ನಮಗೆ ತಿಳಿದಂತೆ ಆ ಕಾಲದ ಮಹಾಧನುಸ್ಸು ಎಂದರೆ ಗಾಂಢೀವ. ಮಹಾಭಾರತದಲ್ಲಿ ಹೇಳುವಂತೆ: ನಧಿಜ್ಜ್ಯಂ ಅಪಿ ಯಚ್ ಛಕ್ಯಂ ಕರ್ತುಂ ಅನ್ಯೇನ  ಗಾಂಢೀವಮ್   ಅನ್ಯತ್ರ ಭೀಮಪಾರ್ಥಾಭ್ಯಾಂ ಭವತಶ್ಚ ಜನಾರ್ಧನ ೩-೧೩-೬೯  ಗಾಂಢೀವ ಹಿಡಿದು ಯುದ್ಧ  ಮಾಡಬಲ್ಲವರೆಂದರೆ ಅರ್ಜುನ-ಭೀಮ ಮತ್ತು ಶ್ರೀಕೃಷ್ಣ.(ಭೀಮ ಎಲ್ಲಿಯೂ ಗಾಂಢೀವ ಹಿಡಿದು ಯುದ್ಧ ಮಾಡುವುದು ಕಾಣಸಿಗದಿದ್ದರೂ ಕೂಡಾ, ಆತ ಗಾಂಢೀವ ಹಿಡಿದು ಯುದ್ಧ ಮಾಡಬಲ್ಲ ಶೂರನಾಗಿದ್ದ ಎಂದು ಮಹಾಭಾರತದ ಅನೇಕ ಕಡೆ ಉಲ್ಲೇಖಿಸಲಾಗಿದೆ).    ಈ ಸಂದರ್ಭದಲ್ಲಿ  ದುರ್ಯೋಧನನಿಗೆ  ಪಾಂಡವರ ಪಡೆಯಲ್ಲಿನ  ವೀರರೆಲ್ಲರೂ  ಭೀಮಾರ್ಜುನರಿಗೆ ಸಮನಾದ ಬಿಲ್ಗಾರರಾಗಿ ಕಾಣುತ್ತಿದ್ದಾರೆ. ಇದು ದುರ್ಯೋಧನನ  ಮನಃಸ್ಥಿತಿಯನ್ನು ಹೇಳುತ್ತದೆ.
ಪಾಂಡವ ಸೈನ್ಯದ  ಪುಟ್ಟ ತುಕಡಿಯನ್ನು ನೋಡಿ ಗೊಂದಲಕ್ಕೊಳಗಾದ ದುರ್ಯೋಧನ ಇಲ್ಲಿ ಆ ಕಡೆಯ ವೀರರ ಪಟ್ಟಿ ಮಾಡಿ ಹೇಳುತ್ತಿರುವುದನ್ನು ಕಾಣುತ್ತೇವೆ:   ೧. ಯುಯುಧಾನ, ೨. ವಿರಾಟ, ೩. ದ್ರುಪದ ೪. ಧೃಷ್ಟಕೇತು, ೫. ಚೇಕಿತಾನ, ೬. ಕಾಶೀರಾಜ, ೭. ಪುರುಜಿತ್, ೮. ಕುಂತಿಭೋಜ, ೯. ಶೈಭ್ಯ, ೧೦. ಯುಧಾಮನ್ಯು   ಮತ್ತು ೧೧. ಉತ್ತಮೌಜ ಹೀಗೆ ಪಾಂಡವರ ಕಡೆಯ ಹನ್ನೊಂದು ಮಂದಿಯನ್ನು ಹೆಸರಿಸಿದ ಆತ ಆನಂತರ ತನ್ನ ಕಡೆಯ ವೀರರ ಹೆಸರನ್ನು ಹೇಳುತ್ತಾನೆ: ೧. ದ್ರೋಣಾ, ೨. ಭೀಷ್ಮ, ೩. ಕರ್ಣ, ೪. ಕೃಪಾ, ೫. ಅಶ್ವತ್ಥಾಮ, ೬. ವಿಕರ್ಣ ಮತ್ತು ೭. ಸೌಮದತ್ತ. ಇಲ್ಲಿ ದುರ್ಯೋಧನ ಹೇಳಿರುವ ಹೆಸರಿನಿಂದ ಆತನ ಅಂತರಂಗ ಸ್ಥಿತಿ ವ್ಯಕ್ತವಾಗುತ್ತದೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೇನೆ ಇದ್ದರೂ ಕೂಡಾ ಆತ ಪಾಂಡವರ ಕಡೆಗಿನ ಹನ್ನೊಂದು ವೀರರ ಹೆಸರನ್ನು ಪಟ್ಟಿಮಾಡಿ ತನ್ನ ಕಡೆಯ ಕೇವಲ ಏಳು ವೀರರ ಹೆಸರನ್ನಷ್ಟೇ ಹೇಳುತ್ತಿದ್ದಾನೆ. ಇಷ್ಟೇ ಅಲ್ಲದೇ  ತನ್ನ ತೊಂಬತ್ತೊಂಬತ್ತು ಮಂದಿ ತಮ್ಮಂದಿರರಲ್ಲಿ ವಿಕರ್ಣನ ಹೆಸರನ್ನಷ್ಟೇ ಹೇಳಿದ ದುರ್ಯೋಧನ, ಮುಂದುವರಿದು ಪಾಂಡವರ ಕಡಗೆ ನೋಡಿ ಅಲ್ಲಿರುವ ಐದು ಮಂದಿ ದ್ರೌಪದಿ ಪುತ್ರರು ಮತ್ತು  ಅಭಿಮನ್ಯು ಎಲ್ಲರೂ ಮಹಾರಥರು ಎನ್ನುತ್ತಾನೆ.  ಒಟ್ಟಿನಲ್ಲಿ ಆತ ಪಾಂಡವರ ಕಡೆಗಿನ ಹದಿನೇಳು ಮಂದಿ ವೀರರು ಮತ್ತು ಅವರ ಸೇನಾ ನಾಯಕ ದೃಷ್ಟಧ್ಯುಮ್ನ ಸೇರಿ ಹದಿನೆಂಟು ಮಂದಿಯ ಹೆಸರನ್ನು ಉಲ್ಲೇಖಿಸಿ ಮಾತನಾಡುತ್ತಾನೆ ಮತ್ತು ಹೇಳುತ್ತಾನೆ: “ಅವರೆಲ್ಲರೂ ಭೀಮಾರ್ಜುನರಿಗೆ ಸಮಾನರು” ಎಂದು.  ಸಂಖ್ಯಾ ಶಾಸ್ತ್ರದಲ್ಲಿ ಹದಿನೆಂಟು ಜಯದ ಸಂಕೇತ. ಇಲ್ಲಿ ಹದಿನೆಂಟು ಮಂದಿ ಪಾಂಡವ ವೀರರ ಹೆಸರನ್ನು ಪಟ್ಟಿ ಮಾಡಿದ ದುರ್ಯೋಧನ ಇನ್ನೇನು ಪಾಂಡವರಿಗೆ ಜಯ ಸಿಕ್ಕಿಯೇ ಬಿಟ್ಟಿತು ಎನ್ನುವಂತೆ ಮಾತನಾಡುತ್ತಿದ್ದಾನೆ. ಯುದ್ಧಭೂಮಿಗೆ ಬರುವ ಮೊದಲು “ಪಾಂಡವರ ಕಡೆಯಲ್ಲಿ ಕೇವಲ ಅವರಿಗೆ ಹೆಣ್ಣುಕೊಟ್ಟ ಸಂಬಂಧಿಗಳಷ್ಟೇ ಇದ್ದಾರೆ” ಎಂದು ಗರ್ವದಿಂದ ಹೇಳಿದ್ದ ದುರ್ಯೋಧನ ಈಗ ಮಾತನಾಡುತ್ತಿರುವುದನ್ನು ಗಮನಿಸಿ. ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲೇ ಆತ ಮಾನಸಿಕವಾಗಿ ಕುಸಿದು ಹೋಗಿದ್ದ.
ದುರ್ಯೋಧನ ಪಟ್ಟಿ ಮಾಡಿರುವ ಹನ್ನೊಂದು ಮಂದಿ ವೀರರಲ್ಲಿ ಮೊದಲಿನ ಮೂವರು: ಯುಯುಧಾನ, ವಿರಾಟ ಮತ್ತು  ದ್ರುಪದ. ಇಲ್ಲಿ  ಈ ಮೂರು ಹೆಸರು ಬರಲು ವಿಶೇಷ ಕಾರಣವಿದೆ. ಈ ಮೂವರೂ ಕೂಡಾ ಕೌರವರ ಕಡೆಗೆ ಬರಬೇಕಾಗಿತ್ತು.  ಯುಯುಧಾನ ಎನ್ನುವುದು ಸಾತ್ಯಕಿಯ ಹೆಸರು. ಆತ ಸತ್ಯಕನ ಮಗನಾಗಿದ್ದುದರಿಂದ ಆತನನ್ನು ಸಾತ್ಯಕಿ ಎಂದು ಕರೆಯುತ್ತಾರೆ. ಇಲ್ಲಿ ದುರ್ಯೋಧನ ಸಾತ್ಯಕಿಯ ಹೆಸರನ್ನು ಹೇಳುವುದಕ್ಕೊಂದು ಕಾರಣವಿದೆ. ಭೀಮಾರ್ಜುನರಿಗೆ ಸುಮಾರು ಹದಿನೆಂಟು ವರ್ಷ ವಯಸ್ಸಾಗಿದ್ದಾಗ ಶ್ರೀಕೃಷ್ಣ ಪಾಂಡವರನ್ನು ಮಥುರೆಗೆ ಕರೆದುಕೊಂಡು ಬಂದಿದ್ದ. ಅಲ್ಲಿ ಅರ್ಜುನ ಮತ್ತು ಸಾತ್ಯಕಿ ಶ್ರೀಕೃಷ್ಣನಿಂದ ಶಸ್ತ್ರಾಭ್ಯಾಸ ಮಾಡಿದ್ದರು. ಇದೇ ಸಮಯದಲ್ಲಿ ಭೀಮ ಬಲರಾಮನಿಂದ ಗಧಾಯುದ್ಧವನ್ನೂ ಕಲಿತಿದ್ದ.
ಒಮ್ಮೆ ಶಮಂತಕಮಣಿ ವಿಷಯದಲ್ಲಿ ಶ್ರೀಕೃಷ್ಣನಿಗೂ ಬಲರಾಮನಿಗೂ ಒಂದು ಚಿಕ್ಕ ಅಭಿಪ್ರಾಯ ಭೇದ ಬರುತ್ತದೆ. ಮಣಿಯನ್ನು ಅಕ್ರೂರ ಅಡಗಿಸಿಟ್ಟಿರುತ್ತಾನೆ ಮತ್ತು ಕೃಷ್ಣನಿಗೂ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲಾ. ಆದರೆ ಕೃಷ್ಣನ ಕೈಯಲ್ಲಿರಬೇಕಾದ ಮಣಿ ಇಲ್ಲದ್ದು ನೋಡಿ ಬಲರಾಮ ಸಂಶಯ ಪಡುತ್ತಾನೆ. ಒಂದು ವೇಳೆ ತನ್ನಲ್ಲಿದ್ದರೆ ಅಣ್ಣನಿಗೆ ಕೊಡಬೇಕಾಗುತ್ತದೆ ಎಂದು ಕೃಷ್ಣನೇ ಇದನ್ನು ಅಡಗಿಸಿಟ್ಟಿದ್ದಾನೆ ಎನ್ನುವ ಸಂಶಯದಲ್ಲಿ  ಆತ ಮಿಥಿಲೆಗೆ(ಇಂದಿನ ನೇಪಾಳ) ಹೊರಟು ಹೋಗುತ್ತಾನೆ. ಇದನ್ನೇ ಸಕಾಲವಾಗಿ ಬಳಸಿಕೊಂಡ ದುರ್ಯೋಧನ ತಾನೂ ಮಿಥಿಲೆಗೆ ಹೋಗಿ, ಬಲರಾಮನ ಮನಸ್ಸನ್ನು ಗೆದ್ದು, ಆತನಲ್ಲಿ ಗಧಾಯುದ್ಧ ಕಲಿಸಿಕೊಡುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಬಲರಾಮ ಒಪ್ಪುತ್ತಾನೆ ಹಾಗೂ ದುರ್ಯೋಧನ ಆತನಿಂದ ಗಧಾಯುದ್ಧವನ್ನು ಕಲಿಯುತ್ತಾನೆ. ಹೀಗೆ ಕಲಿತು ಹಿಂದಿರುಗುವಾಗ ದುರ್ಯೋಧನ ಬಲರಾಮನ ತಂಗಿ ಸುಭದ್ರೆಯನ್ನು ತನಗೆ ಮದುವೆಮಾಡಿ ಕೊಡಬೇಕೆಂದು ಕೇಳಿಕೊಳ್ಳುತ್ತಾನೆ. ಇದಕ್ಕೊಪ್ಪಿದ ಬಲರಾಮ ಸುಭದ್ರೆಯನ್ನೂ ಕೇಳದೇ ದುರ್ಯೋಧನನಿಗೆ ಮಾತು ಕೊಡುತ್ತಾನೆ. ಆದರೆ ಆನಂತರ ಶ್ರೀಕೃಷ್ಣ ಸುಭದ್ರೆಯನ್ನು ಆಕೆ ಬಯಸಿದ ಅರ್ಜುನನ ಜೊತೆಗೆ ಕಳುಹಿಸಿ ಕೊಟ್ಟಿರುವ ವಿಷಯ ನಮಗೆ ತಿಳಿದಿದೆ. ಇದರಿಂದಾಗಿ ಯಾದವರ ಜೊತೆಗೆ ಸಂಬಂಧ ಬಳಸುವಲ್ಲಿ ದುರ್ಯೋಧನ ವಿಫಲನಾಗಿದ್ದ. ಆದರೂ ಕೂಡಾ ಕೃಷ್ಣನ ಮಗ ಸಾಂಬ ದುರ್ಯೋಧನನ ಮಗಳು ಲಕ್ಷಣೆಯನ್ನು ಮದುವೆಯಾಗಿದ್ದಳು. ಈ ರೀತಿ ಸಂಬಂಧದ ಒಂದು ಕೊಂಡಿ ಅಲ್ಲಿತ್ತು. ಇಷ್ಟೇ ಅಲ್ಲದೇ ಮಹಾಭಾರತ ಯುದ್ಧಕ್ಕೂ ಮೊದಲು ದುರ್ಯೋಧನ ಬಲರಾಮನಲ್ಲಿ ತನಗೆ ಸಹಾಯ ಕೊಡಬೇಕೆಂದು ಕೇಳಲು ಹೋಗಿದ್ದ. ಹೀಗೆ ಕೇಳಿದಾಗ ಬಲರಾಮ “ನಾನು ಯಾವುದಕ್ಕೂ ಇಲ್ಲಾ. ಯಾರಿಗೆ ಏನನಿಸುತ್ತದೋ ಹಾಗೆ ಮಾಡಿ” ಎಂದು ಹೇಳಿ ತೀರ್ಥಯಾತ್ರೆಗೆ ಹೊರಟು ಹೋಗುತ್ತಾನೆ. ಈ ರೀತಿ ಬಲರಾಮ ತಟಸ್ಥನಾಗಿ ಕುಳಿತುದ್ದುದರಿಂದ ಸಾತ್ಯಕಿ ಪಾಂಡವರ ಕಡೆ ನಿಲ್ಲುತ್ತಾನೆ.   ಜರಾಸಂಧನ ಮರಣಾನಂತರ ಆ ಕಾಲದಲ್ಲಿದ್ದ ಎರಡು ಸರ್ವಶ್ರೇಷ್ಠ ಮನೆತನ ಎಂದರೆ ಯಾದವರು ಮತ್ತು ಕುರುವಂಶ. ಇಂಥಹ ಯಾದವ ವಂಶದ ಅತ್ಯಂತ ಪ್ರಮುಖ ಯೋಧ ಸಾತ್ಯಕಿ ಇಂದು ಪಾಂಡವರ ಕಡೆಗಿದ್ದಾನೆ. “ಒಂದು ವೇಳೆ ಬಲರಾಮ ಇದ್ದಿದ್ದರೆ ಸಾತ್ಯಕಿ ಇಂದು ನನ್ನ ಕಡೆಯಲ್ಲಿರುತ್ತಿದ್ದ” ಎನ್ನುವುದು ದುರ್ಯೋಧನನ ಅಳಲು.
ದುರ್ಯೋಧನ ಹೇಳುವ ಎರಡನೇ ಹೆಸರು ವಿರಾಟ. ವಿರಾಟನ ಹೆಂಡತಿ ಸುದೀಷ್ನೇ ಕೀಚಕನ ತಂಗಿ. ಕೀಚಕ ಬಹಳ ಬಲಿಷ್ಠನಾಗಿದ್ದ. ಮೂಲತಃ ಕೀಚಕ ಕ್ಷತ್ರಿಯನಲ್ಲಾ. ಆತನ ತಂದೆ ರಾಜನ ಸಾರಥಿಯಾಗಿ ಕೆಲಸ ಮಾಡುತ್ತಿದ್ದವನು ಆ ರಾಜನನ್ನು ಪದಚ್ಯುತಗೊಳಿಸಿ ರಾಜ್ಯವನ್ನು ಅತಿಕ್ರಮಣ ಮಾಡಿದ್ದ. ಇಂಥಹ ಹಿನ್ನೆಲೆಯುಳ್ಳ ಕೀಚಕ ತನ್ನನ್ನೂ ಕೂಡಾ ಪದಚ್ಯುತಗೊಳಿಸಬಹುದು ಎನ್ನುವ ಭಯ ವಿರಾಟನಿಗಿತ್ತು. ಅದಕ್ಕಾಗಿ ಆತ ಕೀಚಕ ಹೇಳಿದಂತೆ ಕೇಳಿಕೊಂಡಿದ್ದ. ಆದರೆ ಅಜ್ಞಾತವಾಸದ ಕಾಲದಲ್ಲಿ ಭೀಮ ಕೀಚಕನನ್ನು ಕೊಂದ. ನಂತರ ವಿರಾಟ ತನ್ನ ಮಗಳನ್ನು ಅಭಿಮನ್ಯುವಿಗೆ ಕೊಟ್ಟು ಪಾಂಡವರ ಸಂಬಂಧ ಬೆಳೆಸಿದ್ದರಿಂದ ಇಂದು ವಿರಾಟ ಸೈನ್ಯ ಪಾಂಡವರ ಕಡೆ ನಿಂತಿತು. “ಇಂದು ಕೀಚಕನಿರುತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲಾ” ಎನ್ನುವುದು ದುರ್ಯೋಧನನ ಅಂತರಾಳದ ಶೋಕ.
ಮೂರನೆಯದಾಗಿ ದ್ರುಪದ. ಜರಾಸಂಧನೊಡನಿದ್ದು, ಕೃಷ್ಣನ  ವಿರುದ್ಧ ಹೋರಾಡಿದ ದ್ರುಪದನನ್ನು ಹಿಂದೆ ಪಾಂಡವರು ಬಂಧಿಸಿ, ಅವನ ಅರ್ಧರಾಜ್ಯವನ್ನು ಕಿತ್ತುಕೊಂಡು ದ್ರೋಣನಿಗೆ ಕೊಟ್ಟ ವಿಷಯ ಈ ಹಿಂದೆ ನೋಡಿದ್ದೇವೆ. ಆದರೆ ಪಾಂಡವರಿಗೆ ದ್ರೌಪದಿಯನ್ನು ಕೊಟ್ಟು ಸಂಬಂಧ  ಬೆಳೆಸಿದ ದ್ರುಪದ ಇಂದು ಪಾಂಡವರ ಪರ ಯುದ್ಧಕ್ಕೆ ನಿಂತಿದ್ದಾನೆ. ಜರಾಸಂಧನಿರುತ್ತಿದ್ದರೆ ದ್ರುಪದ ನಮ್ಮ ಕಡೆಯಲ್ಲಿರುತ್ತಿದ್ದ ಎನ್ನುವುದು  ದುರ್ಯೋಧನನ ಯೋಚನೆ. ಈ ರೀತಿ ತನ್ನ ಕಡೆ ಇರಬೇಕಾಗಿದ್ದ ಈ ಮಹಾರಥರು ಕೈತಪ್ಪಿ ಪಾಂಡವರ ಕಡೆಯಾದರಲ್ಲಾ ಎಂದು ಚಿಂತಿಸುತ್ತಾನೆ ದುರ್ಯೋಧನ.
ಯುಯುಧಾನ, ವಿರಾಟ ಮತ್ತು  ದ್ರುಪದ ಈ ಮೂರು ಮಂದಿಯನ್ನು ದುರ್ಯೋಧನ  ಮಹಾರಥರು ಎಂದು ಸಂಬೋಧಿಸಿದ್ದಾನೆ. ಮಹಾರಥರು ಎಂದರೆ ರಥದಲ್ಲಿ ಕುಳಿತು ಯುದ್ಧ ಮಾಡಬಲ್ಲವರಲ್ಲಿ ಶ್ರೇಷ್ಟರು ಎಂದರ್ಥ. ಯಾರು ಏಕಾಕಿಯಾಗಿ ರಥದಲ್ಲಿ ಕುಳಿತು ಹತ್ತು ಸಾವಿರ ಮಂದಿ ಯೋಧರನ್ನು ಒಬ್ಬನೇ ಎದುರಿಸಬಲ್ಲನೋ ಆತನನ್ನು ಮಹಾರಥಿ ಎನ್ನುತ್ತಾರೆ. ಆದರೆ ಇದು ನಮಗೆ ತಿಳುವಳಿಕೆಗಾಗಿ ಹೇಳುವ ವಿವರಣೆ ಅಷ್ಟೇ. ಈ ಮೂರು ಮಂದಿ ಅಂದಿನ ರಥಿಗಳಲ್ಲಿ ಅಗ್ರಮಾನ್ಯರಾಗಿದ್ದರು. ಅಂಥವರು ಪಾಂಡವರ ಕಡೆ ಸೇರಿದರಲ್ಲಾ ಎನ್ನುವುದು ದುರ್ಯೋಧನನ ವಿಷಾದ.

ಹೀಗೆ ಈ ಪ್ರತಿಯೊಂದು ಹೆಸರನ್ನು ತೆಗೆದು ಹೇಳುತ್ತಿರುವ  ದುರ್ಯೋಧನನಿಗೆ ಅಂತರಂಗದಲ್ಲಿ “ಅಯ್ಯೋ ನನ್ನ ಕಡೆ ಇರಬೇಕಾದ ಈ ಮಹಾರಥರು  ಪಾಂಡವರ ಪಕ್ಷದಲ್ಲಿದ್ದಾರಲ್ಲ” ಎನ್ನುವ ನೋವಿದೆ. ಇದು ದುರ್ಯೋಧನನ ವಿಷಾದ! ಆತ ತನ್ನ ಯುದ್ಧತಂತ್ರವನ್ನು ರೂಪಿಸುವುದನ್ನು ಬಿಟ್ಟು, ಇಲ್ಲಿ ತನ್ನ ಕಡೆಗೆ ಬರಬೇಕಾಗಿದ್ದವರು ಪಾಂಡವರ ಕಡೆ ಸೇರಿದ್ದಾರಲ್ಲಾ ಎಂದು ವಿಷಾದಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದಾನೆ.  

No comments:

Post a Comment