Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Friday, October 3, 2014

Bhagavad Gita Kannada Chapter-01 Shloka-03


ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ                        

ದುರ್ಯೋಧನ ತನ್ನ ಸೇನಾಧಿಪತಿ ಭೀಷ್ಮರ ಬಳಿ ಹೋಗದೆ, ದ್ರೋಣಾಚಾರ್ಯರ ಬಳಿ ಹೋಗಿ, ಭೀಷ್ಮಾಚಾರ್ಯರಿಗೆ ಕೇಳುವಂತೆ, ಆಚಾರ್ಯ ದ್ರೋಣರಲ್ಲಿ ನಂಜಿನ ಮಾತನ್ನಾಡುತ್ತಾನೆ[ಇಲ್ಲಿ ಆಚಾರ್ಯ ಎನ್ನುವಲ್ಲಿ ಏಕವಚನ ಬಳಕೆಯಾಗಿದೆ. ಸಂಸ್ಕೃತದಲ್ಲಿ ಕನ್ನಡದಂತೆ ಏಕ ವ್ಯಕ್ತಿಗೆ ಬಹುವಚನ ಪ್ರಯೋಗಿಸುವುದಿಲ್ಲಾ. ಅಂದರೆ ಏಕ ವ್ಯಕ್ತಿಯಾಗಿದ್ದರೆ ಅಲ್ಲಿ ‘ನೀವು’ ಎಂದು ಸಂಬೋಧಿಸುವುದಿಲ್ಲಾ. ಬಹು ಮಂದಿ ಇದ್ದಾಗ ಮಾತ್ರ ‘ನೀವು’ ಎನ್ನುವ ಪ್ರಯೋಗ. ಗುರುಗಳ ಮಟ್ಟಿಗೆ ಬಹುವಚನ ಪ್ರಯೋಗ ಮಾಡಬಹುದಾದರೂ ಕೂಡಾ, ಪ್ರಾಚೀನ ಸಂಸ್ಕೃತದಲ್ಲಿ ಇಂಥಹ ಪ್ರಯೋಗ ಕಾಣಸಿಗುವುದಿಲ್ಲಾ. ಗೌರವ ಸೂಚಕವಾಗಿ ತ್ವಮ್  ಬದಲು ಭವಾನ್ ಬಳಕೆಯನ್ನು ನಾವು ಕಾಣುತ್ತೇವೆ].
ಇಲ್ಲಿ ದುರ್ಯೋಧನ “ಪಾಂಡುಪುತ್ರಾಣಾಮಾಚಾರ್ಯ” ಎಂದು ಸಂಬೋಧಿಸಿದ್ದಾನೆ. ಈ ಶಬ್ದ ಪ್ರಯೋಗದ ಹಿಂದೆ ಅನೇಕ ಅರ್ಥ ಅಡಗಿದೆ. ಇದು ದುರ್ಯೋಧನನ ವ್ಯಂಗ್ಯವಾದ ಮಾತು. ನಮಗೆ ತಿಳಿದಂತೆ ಪಾಂಡವರು ಹುಟ್ಟಿದ್ದು ಕಾಡಿನಲ್ಲಿ. ಪಾಂಡು ರಾಜ ಸತ್ತ ನಂತರ ಕುಂತಿ ತನ್ನ ಮಕ್ಕಳನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಬರುತ್ತಾಳೆ. ಹೀಗೆ ಬಂದಿರುವ ಕುಂತಿ ಮತ್ತು ಆಕೆಯ ಮಕ್ಕಳನ್ನು ಧೃತರಾಷ್ಟ್ರ ಮತ್ತು ಭೀಷ್ಮಾಚಾರ್ಯರು ಸ್ವೀಕಾರ ಮಾಡುವಾಗ ದುರ್ಯೋಧನ ವಿರೋಧಿಸುತ್ತಾನೆ. “ಇವರು ಕುಂತಿಯ ಪುತ್ರರಿರಬಹುದು, ಆದರೆ ಪಾಂಡುವಿಗೆ ‘ಸ್ತ್ರೀ ಸಂಗ ಮಾಡಿದ ತಕ್ಷಣ ಮರಣ’ ಎನ್ನುವ ಶಾಪವಿದ್ದದ್ದರಿಂದ ಇವರು ಪಾಂಡುವಿನ ಸಂತತಿ ಅಲ್ಲಾ,  ಇವರನ್ನು ತಿರಸ್ಕರಿಸಿ” ಎಂದು ಆತ ವಾದಿಸುತ್ತಾನೆ. ನಿಯೋಗ ಪದ್ದತಿಯಲ್ಲಿ ಹುಟ್ಟಿದ ಪಾಂಡವರು ನಮ್ಮ ವಂಶದ ತಳಿ ಅಲ್ಲಾ ಎನ್ನುವುದು ಆತನ ವಾದವಾಗಿತ್ತು. ಆದರೆ ಈ ರೀತಿ ಯೋಚಿಸುತ್ತಿದ್ದ ದುರ್ಯೋಧನನಿಗೆ ತನ್ನ ತಂದೆ ಧೃತರಾಷ್ಟ್ರ ಕೂಡಾ ನಿಯೋಗ ಪದ್ದತಿಯಲ್ಲಿ ವೇದವ್ಯಾಸರಿಂದ ಹುಟ್ಟಿದ್ದು ಎನ್ನುವ ವಿಷಯ ಮರೆತು ಹೋಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಆತ  ಇಲ್ಲಿ “ಪಾಂಡುವಿನ ಮಕ್ಕಳು” ಎಂದು ಒತ್ತಿ ಹೇಳುತ್ತಿದ್ದಾನೆ. “ನನ್ನ ವಿರೋಧವನ್ನು ಲೆಕ್ಕಿಸದೇ ಅಂದು ನೀವು    ‘ಪಾಂಡುವಿನ ಮಕ್ಕಳು’ ಎಂದು ಮುದ್ದಾಡಿದಿರಲ್ಲಾ ಅವರ ಸೈನ್ಯವನ್ನು ನೋಡಿ” ಎಂದು ದುರಾಭಿಮಾನದ ನಂಜಿನ ಮಾತನ್ನಾಡುತ್ತಾನೆ ದುರ್ಯೋಧನ. ಇಷ್ಟೇ ಅಲ್ಲದೇ ದ್ರೋಣಾಚಾರ್ಯರನ್ನು ದುರ್ಯೋಧನ "ಪಾಂಡವರ ಆಚಾರ್ಯ" ಎಂದು ಚುಚ್ಚಿ ಸಂಬೋಧಿಸುತ್ತಾನೆ. “ತನ್ನ ಪ್ರೀತಿಯ ಶಿಷ್ಯರು ಎಂದು ಉದಾರ ತೋರಬೇಡಿ” ಎನ್ನುವುದು ಆತನ ಈ ಮಾತಿನ ಅರ್ಥ.
ಪಾಂಡವರ ಸೇನಾಧಿಪತ್ಯವನ್ನು ದ್ರುಪದ ಪುತ್ರನಾದ ದೃಷ್ಟಧ್ಯುಮ್ನ ವಹಿಸಿರುತ್ತಾನೆ. ದ್ರುಪದ ಮತ್ತು ದ್ರೋಣರು ಬಾಲ್ಯದ ಸಹಪಾಠಿ ಸ್ನೇಹಿತರು. ಕೆಲಕಾಲಾನಂತರ ದ್ರುಪದ ಸಿಂಹಾಸನವೇರುತ್ತಾನೆ. ದ್ರೋಣಾಚಾರ್ಯರು ಬಡತನದಲ್ಲೇ ಜೀವನ ಸಾಗಿಸುತ್ತಿರುತ್ತಾರೆ. ದ್ರೋಣರಲ್ಲಿ ತಮ್ಮ ಮಗುವಿಗೆ ಹಾಲುಣಿಸಲು ಬೇಕಾದ ಒಂದು ಹಸು ಕೂಡಾ ಇರುವುದಿಲ್ಲಾ. ಇಂಥಹ ಸಮಯದಲ್ಲಿ ಅವರ ಪತ್ನಿ “ಸ್ನೇಹಿತ ದ್ರುಪದನನ್ನು ಭೇಟಿ ಮಾಡಿ ಆತನಿಂದ ಒಂದು ಹಸುವನ್ನಾದರೂ ಪಡೆದುಕೊಂಡು ಬನ್ನಿ” ಎಂದು ಕೇಳಿಕೊಳ್ಳುತ್ತಾಳೆ. ಬಡ ಬ್ರಾಹ್ಮಣನಾದ ದ್ರೋಣ ತನ್ನ ಹೆಂಡತಿಯ ಒತ್ತಾಯದಂತೆ “ಮಗನಿಗೆ ಹಾಲು ಕುಡಿಸಲು ಒಂದು ಹಸುವನ್ನು ಕೊಡು” ಎಂದು ದ್ರುಪದನನ್ನು ಬಾಲ್ಯದ ಸಲಿಗೆಯಲ್ಲಿ ಕೇಳಿಕೊಂಡು ಬರುತ್ತಾನೆ. ಆದರೆ ಆಗ ರಾಜನಾಗಿದ್ದ ದ್ರುಪದ ಅಹಂಕಾರದಿಂದ ಮಾತನಾಡುತ್ತಾನೆ.  ಯಯೋರೆೄವ ಸಮಂ ವಿತ್ತಂ  ಯಯೋರೆೄವ ಸಮಂ ಕುಲಮ್ |  ತಯೋಃ ಸಖ್ಯಂ ವಿವಾಹಾಶ್ಚ ನ ತು ಪುಷ್ಟವಿಪುಷ್ಟಯೋಃ ಮಹಾಭಾರತ:೧-೧೨೨-೮ "ನನಗೂ ನಿನಗೂ ಸ್ನೇಹವಿರುವುದು ಸಾಧ್ಯವಿಲ್ಲಾ. ಏಕೆಂದರೆ: ಯಾರು ಆರ್ಥಿಕವಾಗಿ ಮತ್ತು ವಯಸ್ಸಿನಲ್ಲಿ ಸಮಾನರೋ ಅವರು ಮಾತ್ರ ಸ್ನೇಹಿತರಾಗಬಹುದು ಅಥವಾ ವಿವಾಹ ಸಂಬಂಧ ಬೆಳೆಸಬಹುದು. ನೀನೊಬ್ಬ ಬಡ ಬ್ರಾಹ್ಮಣ, ನಾನು ರಾಜ. ನಿನಗೂ ನನಗೂ ಎಲ್ಲಿಯ ಸ್ನೇಹ” ಎಂದು ಹೇಳಿ ದ್ರೋಣಾಚಾರ್ಯರನ್ನು ಅವಮಾನಗೊಳಿಸುತ್ತಾನೆ ದ್ರುಪದ. 
ದ್ರೋಣ-ದ್ರುಪದರ ಮೇಲಿನ ಸಂಭಾಷಣೆ ಕೇಳಿದಾಗ ನಮಗೆ ನೆನಪಿಗೆ ಬರುವುದು ಶ್ರೀಕೃಷ್ಣ. ಇಂಥಹ ಸಂದರ್ಭಗಳಲ್ಲಿ ಶ್ರೀಕೃಷ್ಣ ಆದರ್ಶ ಪುರುಷನಾಗಿ ನಿಲ್ಲುತ್ತಾನೆ. ಶ್ರೀಕೃಷ್ಣ ಬಾಲ್ಯದಲ್ಲಿ ಸಾಂದೀಪನಿ ಮುನಿಯ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಲ್ಲಿ ಅವನಿಗೆ ಶ್ರೀಧಾಮ ಎನ್ನುವ ಸಹಪಾಠಿ ಸ್ನೇಹಿತನಾಗಿದ್ದ. (ಶ್ರಿಧಾಮನನ್ನು ಸುಧಾಮ, ಕುಚೇಲ ಇತ್ಯಾದಿಯಾಗಿ ಜನ ಕರೆಯುತ್ತಾರೆ. ಕುಚೇಲ ಎನ್ನುವುದು ಆತನ ಬಡತನದಿಂದಾಗಿ ಬಂದ ಅಡ್ಡ ಹೆಸರೇ ಹೊರತು ನಿಜ ನಾಮಧೇಯವಲ್ಲಾ). ವಿದ್ಯಾಭ್ಯಾಸ ಮುಗಿದ ಬಳಿಕ ಶ್ರಿಧಾಮ ತನ್ನೂರಿಗೆ ಹೊರಟು ಹೋಗುತ್ತಾನೆ. ಆನಂತರ ಆತನ ಮದುವೆಯಾಗುತ್ತದೆ, ಆತನಿಗೆ ಮಕ್ಕಳಾಗುತ್ತಾರೆ. ಆದರೂ ಆತನ ಬಡತನ ಮಾತ್ರ  ಹೋಗುವುದಿಲ್ಲಾ. ಇಂಥಹ ಸಂದರ್ಭದಲ್ಲಿ ಶ್ರಿಧಾಮನ ಹೆಂಡತಿ ಶ್ರೀಕೃಷ್ಣನನ್ನು ನೆನಪಿಸಿ ಹೇಳುತ್ತಾಳೆ: “ಜಗತ್ತಿನ ಸಮಸ್ತ ರಾಜಾಧಿರಾಜರೂ ಕೂಡಾ ಇಂದು ಶ್ರೀಕೃಷ್ಣನ ಪಾದದ ಬುಡದಲ್ಲಿದ್ದಾರೆ. ಅಂಥಹ ಶ್ರೀಕೃಷ್ಣ ನಿಮ್ಮ ಸ್ನೇಹಿತ ಎನ್ನುತ್ತೀರಿ.  ಹೀಗಿರುವಾಗ ನೀವು ಅವನ ಬಳಿ ಹೋಗಿದ್ದರೆ ಆತ ನಮಗೆ ಸಹಾಯ ಮಾಡುತ್ತಿದ್ದ ಮತ್ತು ನಮ್ಮ ಬಡತನ ನೀಗುತ್ತಿತ್ತು” ಎಂದು. ಸುಧಾಮನಿಗೆ ಈ ವಿಚಾರವಾಗಿ ಶ್ರೀಕೃಷ್ಣನನ್ನು ಭೇಟಿ ಮಾಡಲು ಇಷ್ಟವಿರದಿದ್ದರೂ ಕೂಡಾ, ಹೆಂಡತಿಯ ಒತ್ತಾಯಕ್ಕೆ ಮಣಿದು ಅಂಜಿಕೆಯಿಂದಲೇ ಶ್ರೀಕೃಷ್ಣನಿರುವಲ್ಲಿಗೆ ಹೋಗುತ್ತಾನೆ. ದ್ವಾರಪಾಲಕರಿಂದ ಬಾಲ್ಯ ಸ್ನೇಹಿತ ಸುಧಾಮನ ಆಗಮನದ  ಸುದ್ದಿ ತಿಳಿದ ಶ್ರೀಕೃಷ್ಣ ತಕ್ಷಣ ಎದ್ದು ಬಂದು ಸುಧಾಮನನ್ನು ಸ್ವಾಗತಿಸುತ್ತಾನೆ. ಆತನ ಪಾದ ಪೂಜೆ ಮಾಡುತ್ತಾನೆ. ರುಕ್ಮಿಣಿ ಸತ್ಯಭಾಮೆಯರು ಗಾಳಿ ಬೀಸಿ ಆತನ ಉಪಚಾರ ಮಾಡುತ್ತಾರೆ. ಶ್ರೀಕೃಷ್ಣ ಬಾಲ್ಯದಲ್ಲಿ  ಅವರಿಬ್ಬರು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಾಗ ನಡೆದ ಘಟನೆಗಳನ್ನು ನೆನಪಿಸಿಕೊಂಡು ಮಾತನಾಡುತ್ತಾನೆ. ಇದರಿಂದ ಸುಧಾಮ ಕರಗಿ ಹೋಗುತ್ತಾನೆ. ಇದು ದೊಡ್ಡವರ ಲಕ್ಷಣ. ಆದರೆ ಇಲ್ಲಿ ದ್ರುಪದ ಸಿಂಹಾಸನವೇರಿದವನು ತನ್ನ ಬಾಲ್ಯದ ಸಹಪಾಠಿ ಮಿತ್ರ  ದ್ರೋಣನನ್ನು ಮರೆತು ಅಹಂಕಾರದಿಂದ ಮಾತನಾಡಿ ಅವಮಾನಿಸುತ್ತಾನೆ. ಮಹಾಭಾರತ ಯುದ್ದಕ್ಕೆ ಬೀಜಕ್ಷೇಪ ಇಲ್ಲಿಯೇ ಆಯಿತು ಎನ್ನಬಹುದು. ಏಕೆಂದರೆ  ಇದೇ ಸೇಡಿನಿಂದಾಗಿ ದ್ರೋಣಾಚಾರ್ಯರು ಪಾಂಡವರ ಗುರುಗಳಾಗಿ  ಅರಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು, ಅವರಿಗೆ ವಿದ್ಯಾಭ್ಯಾಸ ಮಾಡಿಸಿ, ಅವರಿಂದ ದ್ರುಪದನನ್ನು ಸೆರೆ ಹಿಡಿದು, ಆತನ ಅರ್ಧ ರಾಜ್ಯವನ್ನು ಕಸಿದುಕೊಳ್ಳುತ್ತಾರೆ ಮತ್ತು ಹೇಳುತ್ತಾರೆ: “ನಾನೀಗ ನಿನಗೆ ಸಮಾನ. ಇನ್ನಾದರೂ ನಾನು ನಿನ್ನ ಸ್ನೇಹಿತ ಎಂದು ನೀನು ಒಪ್ಪಬಹುದಲ್ಲಾ”  ಎಂದು.  ಇದರಿಂದ ಅವಮಾನಿತನಾದ ದ್ರುಪದ ತಪಸ್ಸನ್ನು ಮಾಡಿ, ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ವರವಾಗಿ ಪಡೆದು, ಆತನನ್ನು ದ್ರೋಣಾಚಾರ್ಯರಲ್ಲೇ ವಿದ್ಯಾಭ್ಯಾಸ ಮಾಡಿಸಿ, ತನ್ನ ಸೇಡನ್ನು ತೀರಿಸಿಕೊಳ್ಳಲು ಕಾಯುತ್ತಿರುತ್ತಾನೆ. ಆತನೇ ಪಾಂಡವ ಸೇನಾಧಿಪತಿಯಾದ  ದೃಷ್ಟಧ್ಯುಮ್ನ. ಇದನ್ನೇ ಇಲ್ಲಿ ದುರ್ಯೋಧನ “ದ್ರುಪದಪುತ್ರೇಣ  ಎಂದು  ನೆನಪಿಸುತ್ತಾನೆ. “ನಿಮ್ಮನ್ನು ಕೊಲ್ಲುವ ವರಪಡೆದಿರುವ ದ್ರುಪದಪುತ್ರ ರಚಿಸಿರುವ ವ್ಯೂಹವನ್ನು ನೊಡಿ” ಎನ್ನುವ ನಂಜಿನ ಮಾತಿದು. 
ದುರ್ಯೋಧನ ದ್ರೋಣಾಚಾರ್ಯರಲ್ಲಿ: "ನಿಮ್ಮ ಶಿಷ್ಯ, ದ್ರುಪದ ಪುತ್ರ ಅತೀ ಹತ್ತಿರದಲ್ಲಿ, ಶಿಸ್ತುಬದ್ಧವಾಗಿ ನಿರ್ಮಿಸಿರುವ ಸೇನಾ ವ್ಯೂಹವನ್ನು(ಚಮೂ) ನೋಡಿರಿ" ಎಂದು ಹೇಳಿದ್ದಾನೆ. ಹೀಗೆ ಹೇಳುವಾಗ ಆತ ‘ಏತಾಂ’ ಎನ್ನುವ ಪದ ಪ್ರಯೋಗ ಮಾಡಿರುವುದನ್ನು ನಾವು ಗಮನಿಸಬೇಕು. ಸಂಸ್ಕೃತದಲ್ಲಿ ‘ಇದಂ’ ಎಂದರೆ ಕಣ್ಣಳತೆಯಲ್ಲಿರುವಂಥಹದ್ದು. ಆದರೆ 'ಏತಾಂ’  ಎಂದರೆ ಕೈಯಳತೆಗೆ ಸಿಗುವಂಥಹದ್ದು. ಇಲ್ಲಿ ದುರ್ಯೋಧನ ನಿಂತಿರುವುದು ತನ್ನ ಸೇನೆಯ ಸಮೀಪ. ಆದರೆ  ಅವನು ಹೇಳುತ್ತಿರುವುದು ಕೈಯಳತೆಯಲ್ಲಿ ಪಾಂಡವ ಸೇನೆ ಇದೆ ಎಂದು! ಪಾಂಡವ ಸೇನೆ ತನ್ನ ಮೇಲೆರಗಿದೆ ಎನ್ನುವಂತೆ ಮಾತನಾಡುತ್ತಿದ್ದಾನೆ ದುರ್ಯೋಧನ.

ಹೀಗೆ ಅಂತರಂಗದಲ್ಲಿ ಭಯಗೊಂಡ ದುರ್ಯೋಧನ ಕ್ಷಣಕ್ಷಣಕ್ಕೂ ತಪ್ಪನ್ನು ಮಾಡುವುದನ್ನು ನಾವಿಲ್ಲಿ ಕಾಣುತ್ತೇವೆ. ತಾನೇ ರಾಜನಾಗಬೇಕೆಂಬ ಆಸೆ, ಅದರಿಂದ ದ್ವೇಷ, ಅದರಿಂದ ಅಸೂಯೆ, ಅದರಿಂದ ಮಾನಸಿಕ ಸ್ಥಿಮಿತ ತಪ್ಪುವಿಕೆ, ಅದರಿಂದ ಮಾಡಬಾರದ್ದನ್ನು ಮಾಡುವುದು. ಇದು ನಾವು ದೈನಂದಿನ ಜೀವನದಲ್ಲಿ ಕಾಣುವ ಅತಿಸಾಮಾನ್ಯ ವಿಚಾರ. ಮನುಷ್ಯ ದಾರಿತಪ್ಪುವ ವಿವಿಧ ಹಂತಗಳಿವು.

No comments:

Post a Comment