Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Wednesday, October 1, 2014

Bhagavad Gita Kannada Chapter-01 Shloka-02


ಸಂಜಯ ಉವಾಚ
ದೃಷ್ಟ್ವಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್                      


ಈ ಶ್ಲೋಕದಲ್ಲಿ ಕಣ್ಣಿಲ್ಲದ ದುರ್ಯೋಧನನಿಗೆ ಒಳಗಣ್ಣು ತೆರೆದಿರುವ ಸಂಜಯ ಸತ್ಯವನ್ನು ತೆರೆದು ತೋರಿಸುತ್ತಿರುವುದುದನ್ನು ಕಾಣಬಹುದು. ಭಗವದ್ಗೀತೆ ಓದುವಾಗ ಅಲ್ಲಿನ ಒಂದೊಂದು ಅಕ್ಷರವನ್ನೂ ನಾವು ಗಮನವಿಟ್ಟು ನೋಡಬೇಕು. ಈ ಶ್ಲೋಕವನ್ನು ವಿಶ್ಲೇಷಿಸುವ ಮೊದಲು ಇಲ್ಲಿ ಬಂದಿರುವ 'ಅನೀಕ' ಎನ್ನುವ ಪದದ ಅರ್ಥವನ್ನು ಸ್ವಲ್ಪ ತಿಳಿದುಕೊಳ್ಳೋಣ.  ನಿಮಗೆ ತಿಳಿದಂತೆ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ. ಅದರಲ್ಲಿ ಏಳು ಅಕ್ಷೋಹಿಣಿ ಪಾಂಡವರ ಕಡೆ ನಿಂತಿದ್ದರೆ, ಉಳಿದ ಹನ್ನೊಂದು ಅಕ್ಷೋಹಿಣಿ ಸೈನ್ಯ ಕೌರವರ ಕಡೆಯಲ್ಲಿತ್ತು. ಅಕ್ಷೋಹಿಣಿ ಎನ್ನುವುದು ಸೇನೆಯ ಅತಿದೊಡ್ಡ ವಿಭಾಗ. ಹಿಂದಿನ ಕಾಲದಲ್ಲಿ ಸೇನೆಯನ್ನು ಒಂಬತ್ತು ವಿಭಾಗಗಳಾಗಿ ವಿಂಗಡಿಸುತ್ತಿದ್ದರು. ಅವುಗಳೆಂದರೆ:
(೧) ಪತ್ತಿ: ಒಂದು ಆನೆ; ಒಂದು ರಥ; ಮೂರು ಕುದುರೆ ಹಾಗೂ ಐದು ಕಾಲಾಳುಗಳ ಒಂದು ತುಕಡಿ.
(೨) ಸೇನಾಮುಖ: ಮೂರು ಪತ್ತಿ
(೩) ಗುಲ್ಮ: ಮೂರು ಸೇನಾ ಮುಖ
(೪) ಗಣ : ಮೂರು ಗುಲ್ಮ
(೫) ವಾಹಿನಿ : ಮೂರು ಗಣ
(೬) ಪೃತನಾ: ಮೂರು ವಾಹಿನಿ
(೭) ಚಮೂ: ಮೂರು ಪೃತನಾ
(೮) ಅನೀಕಿನಿ: ಮೂರು ಚಮೂ
(೯) ಅಕ್ಷೋಹಿಣಿ: ಹತ್ತು ಅನೀಕಿನಿ- ಅಂದರೆ 21870 ಆನೆಗಳು, 21870 ರಥ, 65610 ಕುದುರೆಗಳು, 1,09,350 ಕಾಲಾಳುಗಳು. (ಇಲ್ಲಿರುವ ಸಂಖ್ಯಾ ಚಮತ್ಕಾರವನ್ನು ಗಮನಿಸಿ: 2+1+8+7+0=18; 6+5+6+1+0=18; 1+0+9+3+5+0=18).
ಈ ಮೇಲಿನ ಲೆಕ್ಕಾಚಾರದಂತೆ ಒಂದು ಅನೀಕಿನಿ ಎಂದರೆ ಹತ್ತನೇ ಒಂದು ಅಕ್ಷೋಹಿಣಿ. ಅಂದರೆ 2187 ಆನೆಗಳು,  2187 ರಥ, 6561 ಕುದುರೆಗಳು, 10,935 ಕಾಲಾಳುಗಳು. ಇದು ಪಾಂಡವ ಸೇನೆಯ ಎಪ್ಪತ್ತನೇ ಒಂದು ಭಾಗ. “ಕುರುಕ್ಷೇತ್ರದಲ್ಲಿ ಹದಿನೆಂಟು ಅಕ್ಷೋಹಿಣಿ ಸೇನೆ ನಿಲ್ಲುವಷ್ಟು ಸ್ಥಳವಿತ್ತೇ” ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ಈ ವಿಷಯ ನಮಗೆ ಅರ್ಥವಾಗಬೇಕಾದರೆ ಆ ಕಾಲದ ಯುದ್ಧ ನೀತಿ ತಿಳಿದಿರಬೇಕು. ಆಗಿನ ಯುದ್ಧ ನೀತಿ ಇಂದಿನ ರೀತಿಯಂತಿರಲಿಲ್ಲಾ. ಆಗ ಸೇನಾ ಜಮಾವಣೆ ಎಷ್ಟೇ ಇದ್ದರೂ ಕೂಡಾ,  ಯುದ್ಧ ಮಾಡುವಾಗ ಎಲ್ಲಾ ಸೇನೆ  ಒಮ್ಮೆಗೇ ಸೇರಿ ಯುದ್ಧ ಮಾಡುತ್ತಿರಲಿಲ್ಲಾ. ಒಂದು ತುಕಡಿ ಒಮ್ಮೆಗೆ ಒಂದು ನಿರ್ಧಿಷ್ಟ ವ್ಯೂಹ ರಚಿಸಿ ಹೋರಾಟ ಮಾಡುತ್ತಿದ್ದರು. ಹೀಗಾಗಿ ಮಹಾಭಾರತ ಯುದ್ಧದಲ್ಲಿ ಸೇನಾ ಜಮಾವಣೆ ಅನೇಕ ಯೋಜನಗಳಷ್ಟಿದ್ದಿದ್ದರೂ ಕೂಡಾ ಯುದ್ಧಭೂಮಿ ಕುರುಕ್ಷೇತ್ರದಲ್ಲಿ ಒಮ್ಮೆಗೆ ಒಂದು ನಿರ್ದಿಷ್ಟ ಸಂಖ್ಯೆಯ ತುಕಡಿಯಷ್ಟೇ ಸೇರಿ ಯುದ್ಧ ಮಾಡುತ್ತಿತ್ತು. ಈ ರೀತಿ ವಿಶಿಷ್ಟವಾದ ವಿನ್ಯಾಸದಿಂದ(ವ್ಯೂಢಂ) ಶಿಸ್ತುಬದ್ಧವಾಗಿ ಸಜ್ಜಾಗಿ ನಿಂತ ಪಾಂಡವ ಸೇನೆಯ ಒಂದು 'ಅನೀಕ' ವನ್ನು ಕಂಡಾಕ್ಷಣವೇ  ದುರ್ಯೋಧನನ ದುಗುಡ ಹೆಚ್ಚುತ್ತದೆ. ಇದು ಮಾನಸಿಕವಾಗಿ ಆತನಿಗಾಗುತ್ತಿರುವ ಮೊದಲ ಆಘಾತ. ಈ ಸ್ಥಿತಿಯಲ್ಲಿ ಆತ ಆಚಾರ್ಯರ ಬಳಿ ಹೋಗುತ್ತಾನೆ.
ಈ ಶ್ಲೋಕದಲ್ಲಿ “ದುರ್ಯೋಧನ ಆಚಾರ್ಯರ ಬಳಿ ಹೋದ” ಎಂದಿದ್ದಾರೆ. ಇಲ್ಲಿ ನಮಗೆ ಯಾವ ಆಚಾರ್ಯರು ಎನ್ನುವ ಪ್ರಶ್ನೆ ಬರುತ್ತದೆ. ಒಬ್ಬರಿಗಿಂತ ಹೆಚ್ಚು ಆಚಾರ್ಯರಿರುವಲ್ಲಿ ಹೆಸರನ್ನು ಉಲ್ಲೇಖಿಸದೆ ಕೇವಲ ‘ಆಚಾರ್ಯ’ ಎಂದು ಸಂಬೋಧಿಸಿದರೆ ಅದನ್ನು ನಾವು  ಅಲ್ಲಿರುವ ಆಚಾರ್ಯರಲ್ಲಿ ಪ್ರಧಾನ ಆಚಾರ್ಯರ ಕುರಿತು ಹೇಳಿರುವುದಾಗಿ ತಿಳಿಯಬೇಕು. ಮಹಾಭಾರತ ಯುದ್ಧಭೂಮಿಯಲ್ಲಿ ನಾವು ಮೂರು ಜನ ಆಚಾರ್ಯರನ್ನು ಕಾಣುತ್ತೇವೆ. ೧. ದ್ರೋಣಾ, ೨.ಕೃಪಾ, ೩. ಅಶ್ವತ್ಥಾಮ. ಇವರಲ್ಲದೆ ಸಾಮಾನ್ಯವಾಗಿ ಭೀಷ್ಮರನ್ನೂ ಕೂಡಾ ಆಚಾರ್ಯ  ಎಂದು ಸೋಬೋಧಿಸುವುದನ್ನು ನಾವು ಕಾಣುತ್ತೇವೆ. ಆದರೆ ಭೀಷ್ಮರು ಕ್ಷತ್ರೀಯರಾಗಿದ್ದು ಮೂಲತಃ ಆಚಾರ್ಯ ಶಬ್ದ ವಾಚ್ಯರಲ್ಲ. ಆಚಾರ್ಯ ಎಂದರೆ ಕ್ಷತ್ರೀಯರಿಗೂ ಕೂಡಾ ಪಾಠ ಹೇಳುವ, ತಮ್ಮ ನಡೆಯಿಂದ ಸಮಾಜವನ್ನು ತಿದ್ದುವ ಅಧ್ಯಾಪಕರು ಅಥವಾ ಋಷಿಗಳು ಎಂದರ್ಥ. ಈ ಹಿನ್ನೆಲೆಯಲ್ಲಿ ಮೇಲಿನ ಶ್ಲೋಕವನ್ನು ನೋಡಿದರೆ ಆಚಾರ್ಯ ಎಂದರೆ ಗುರುಗಳಲ್ಲಿ ಹಿರಿಯರಾದ ದ್ರೋಣಾಚಾರ್ಯರು. ರಣರಂಗದಲ್ಲಿ ಪಾಂಡವರ ಎದುರಾಳಿಯಾಗಿ ನಿಂತಿರುವ ದುರ್ಯೋಧನ ದ್ರೋಣಾಚಾರ್ಯರ ಬಳಿ ಹೋಗಿ ಅವರಿಗೆ ನಮಸ್ಕರಿಸುತ್ತಾನೆ.
ಈ ಶ್ಲೋಕದಲ್ಲಿ “ರಾಜಾ ವಚನಮಬ್ರವೀತ್” ಎಂದಿದ್ದಾನೆ ಸಂಜಯ. ಇಲ್ಲಿ  ‘ವಚನಮಬ್ರವೀತ್’ ಎಂದರೆ “ಮಾತನ್ನು ಮಾತನಾಡಿದ” ಎನ್ನುವ ಅರ್ಥವಾಗುತ್ತದೆ! ಇದಲ್ಲದೆ ಮೊದಲು ದುರ್ಯೋಧನ ಎಂದು ಸಂಬೋಧಿಸಿ ಪುನಃ ‘ರಾಜಾ’ ಎನ್ನುವ ಸಂಬೋಧನೆ ಮಾಡಲಾಗಿದೆ. ಈ ಎಲ್ಲಾ ಪದ ಬಳಕೆಯ ಹಿಂದೆ ವ್ಯಕ್ತಿತ್ತ್ವದ ವರ್ಣನೆ ಅಡಗಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ನಮಗೆ ತಿಳಿದಂತೆ ದುರ್ಯೋಧನ ರಾಜನಲ್ಲಾ, ಆತ ಕೇವಲ ಯುವರಾಜ. ಹೀಗಿರುವಾಗ ಆತ ಆಚಾರ್ಯ ದ್ರೋಣರ ಮುಂದೆ ಶಿಷ್ಯನ ರೀತಿ ವರ್ತಿಸದೇ, ತಾನೇ ರಾಜ ಎನ್ನುವಂತೆ ಅಹಂಕಾರದಿಂದ ಆಡಬಾರದ ರೀತಿ ಮಾತನಾಡಿದ್ದಾನೆ. ಸಂಸ್ಕೃತದಲ್ಲಿ ವಚನ ಎಂದರೆ ಹೇಳಬೇಕಾಗಿರುವ ಮಾತೂ ಹೌದು, ಹೇಳಬಾರದ ಮಾತೂ ಹೌದು. ಇಲ್ಲಿ ದುರ್ಯೋಧನ ಆಡಿರುವುದು ಆಡಬಾರದ ಮಾತನ್ನು.
ಈ ಶ್ಲೋಕದಲ್ಲಿ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ. ಯುದ್ಧ ಭೂಮಿಗೆ "ತಾನು ಗೆದ್ದೇ ಗೆಲ್ಲುತ್ತೇನೆ” ಎಂದು ಬಂದಿದ್ದ ದುರ್ಯೋಧನ, ಪಾಂಡವರ ಒಂದು ಪುಟ್ಟ ಅನೀಕವನ್ನು ನೋಡಿದಾಕ್ಷಣ ಮಾನಸಿಕ ಅಸಮತೋಲನಕ್ಕೊಳಗಾಗುತ್ತಾನೆ. ಅದರಿಂದ ಆತ  ಹೇಗೆ ತಳಮಳಗೊಂಡ ಎನ್ನುವುದನ್ನು  ಈ ಶ್ಲೋಕದಲ್ಲಿ 'ದೃಷ್ಟ್ವಾತು(ನೋಡಿದ ಮೇಲಂತೂ)' ಎನ್ನುವಲ್ಲಿ ಒತ್ತಿ ಹೇಳಿದ್ದಾರೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯ ಇದ್ದಾಗ್ಯೂ, ಪಾಂಡವರ ಒಂದು ಪುಟ್ಟ ಅನೀಕವನ್ನು ಕಂಡು ಮಾನಸಿಕವಾಗಿ ವಿಪ್ಲವನಾದ ದುರ್ಯೋಧನ, ಆಚಾರ್ಯ ದ್ರೋಣರ  ಬಳಿ ಹೇಗೆ ಮಾತನಾಡಿದ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.

No comments:

Post a Comment